ಬಿಜೆಪಿಯದ್ದು ಉಜ್ವಲ ಯೋಜನೆಯಲ್ಲ, ಸೌದೆ ಒಲೆ ಯೋಜನೆ: ಡಿಕೆಶಿ ವ್ಯಂಗ್ಯ
x

ಬಿಜೆಪಿಯದ್ದು 'ಉಜ್ವಲ' ಯೋಜನೆಯಲ್ಲ, 'ಸೌದೆ ಒಲೆ' ಯೋಜನೆ: ಡಿಕೆಶಿ ವ್ಯಂಗ್ಯ

ಏ.1 ರಿಂದ ವಿವಿಧ ವಸ್ತುಗಳ ಬೆಲೆ ಏರಿಕೆ ಜಾರಿಯಾಗಲಿದ್ದು, ಸಾಮಾನ್ಯ ಜನರ ಜೀವನದ ಮೇಲೆ ದೊಡ್ಡ ಹೊಡೆತ ನೀಡಲಿವೆ. ಬಿಜೆಪಿ ನೇತೃತ್ವದ ಸರ್ಕಾರ ಬೆಲೆ ಏರಿಕೆ ನೀತಿಯ ವಿರುದ್ಧ ಕಾಂಗ್ರೆಸ್‌ ಮುಖಂಡರು ಆಕ್ರೋಶ ವ್ಯಕ್ತಪಡಿಸಿದ್ದಾರೆ.


Click the Play button to hear this message in audio format

ಏಪ್ರಿಲ್‌ 1 ರಿಂದ ಅಗತ್ಯ ವಸ್ತುಗಳು ಸೇರಿದಂತೆ ಇತರೆ ವಸ್ತುಗಳ ಬೆಲೆ ಏರಿಕೆಯಾಗಲಿದ್ದು, ಜನಸಾಮಾನ್ಯರ ಬದುಕಿನ ಮೇಲೆ ದೊಡ್ಡ ಹೊಡೆತ ಬೀಳಲಿದೆ. ಬೆಲೆ ಏರಿಕೆ ಮೂಲಕವೇ ಜನಸಾಮಾನ್ಯರನ್ನು ನೋಯಿಸಿ ಬಿಜೆಪಿ ಸಂಭ್ರಮಿಸಲು ಸಜ್ಜಾಗಿದ್ದು, ಏ.1ನೇ ತಾರೀಖು ಕೇಂದ್ರ ಸರ್ಕಾರದ ಪಾಲಿಗೆ ಜನರನ್ನು ಲೂಟಿ, ಸುಲಿಗೆ ಮಾಡುವ ದಿನವಾಗಲಿದೆ ಎಂದು ಕಾಂಗ್ರೆಸ್‌ ಟೀಕಿಸಿದೆ.

ಬೆಂಗಳೂರಿನಲ್ಲಿ ಕೆಪಿಸಿಸಿ ಅಧ್ಯಕ್ಷ ಮತ್ತು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಹಾಗೂ ರಾಜ್ಯ ಕಾಂಗ್ರೆಸ್‌ ಉಸ್ತುವಾರಿ ರಣದೀಪ್‌ ಸಿಂಗ್‌ ಸುರ್ಜೆವಾಲಾ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಏ.1 ರಿಂದ ಜಾರಿಗೆ ಬರಲಿರುವ ವಿವಿಧ ಬೆಲೆ ಏರಿಕೆಗಳು ಬಿಜೆಪಿ ಪಕ್ಷದ ಬೆಲೆ ಏರಿಕೆಗಳಾಗಿವೆ. ಇವು ಜನಸಾಮಾನ್ಯರಿಗೆ ಶಾಪವಾಗಿ ಪರಿಣಮಿಸಲಿವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕೇಂದ್ರ ಸರ್ಕಾರವು ಟೋಲ್ ಸುಂಕವನ್ನು ಪದೇ ಪದೇ ಹೆಚ್ಚಿಸುವ ಮೂಲಕ ಜನಸಾಮಾನ್ಯರ ಜೇಬಿಗೆ ಕತ್ತರಿ ಹಾಕುತ್ತಿದೆ. 2019-20 ರಿಂದ ಈವರೆಗೆ ರಾಜ್ಯದ ಜನತೆಯಿಂದ ಕೇಂದ್ರ ಸರ್ಕಾರವು ಸುಮಾರು 23 ಸಾವಿರ ಕೋಟಿ ರೂ. ಟೋಲ್ ಶುಲ್ಕದ ರೂಪದಲ್ಲಿ ವಸೂಲಿ ಮಾಡಿದೆ. 2019-20ರಲ್ಲಿ 1,882 ಕೋಟಿ ರೂ., 2020-21 ರಲ್ಲಿ 1,866 ಕೋಟಿ ರೂ., 2021-22ರಲ್ಲಿ 2,351 ಕೋಟಿ ರೂ., 2022-23ರಲ್ಲಿ 3,517 ಕೋಟಿ ರೂ., 2023-24ರಲ್ಲಿ 4,086 ಕೋಟಿ ರೂ., 2024-25ರಲ್ಲಿ 4,320 ಕೋಟಿ ರೂ., 2025-26 ರಲ್ಲಿ 4,600 ಕೋಟಿ ರೂ. ವಸೂಲಿ ಮಾಡಿದೆ.

ಏ. 1 ರಿಂದ ಟೋಲ್ ದರವನ್ನು ಶೇ. 5 ರಷ್ಟು ಹೆಚ್ಚಿಸಲಾಗುತ್ತಿದ್ದು, ಇದರಿಂದ ರಾಜ್ಯದ ಜನರ ಮೇಲೆ ಹೆಚ್ಚುವರಿಯಾಗಿ 250 ಕೋಟಿ ರೂ. ಹೊರೆ ಬೀಳಲಿದೆ. ಅದರಲ್ಲೂ ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇ ಒಂದರಿಂದಲೇ 2023 ರಿಂದ ಈವರೆಗೆ 900 ಕೋಟಿ ರೂ. ಸಂಗ್ರಹಿಸಲಾಗಿದೆ ಎಂದು ಅಂಕಿ ಅಂಶಗಳ ಸಹಿತ ವಾಗ್ದಾಳಿ ನಡೆಸಿದರು.

ರೋಗಿಗಳಿಗೆ 'ನೋವಿನ ಮಾತ್ರೆ'

ರಾಷ್ಟ್ರೀಯ ಔಷಧ ಬೆಲೆ ನಿಗದಿ ಪ್ರಾಧಿಕಾರ (ಎನ್‌ಪಿಪಿಎ) ಮೂಲಕ ಏ.1 ರಿಂದ ಸುಮಾರು 900ಕ್ಕೂ ಹೆಚ್ಚು ಅಗತ್ಯ ಔಷಧಗಳ ಬೆಲೆಯನ್ನು ಹೆಚ್ಚಿಸಲು ಕೇಂದ್ರ ಸರ್ಕಾರ ಮುಂದಾಗಿದೆ. ಇದರಲ್ಲಿ ಮಧುಮೇಹ, ರಕ್ತದೊತ್ತಡ ಮತ್ತು ಸೋಂಕು ನಿವಾರಕ ಔಷಧಿಗಳು ಸೇರಿವೆ. ಐಸಿಯುನಲ್ಲಿ ಬಳಸುವ ಆ್ಯಂಟಿಬಯೋಟಿಕ್ ಆಗಿರುವ 'ಮೆರೋಪೆನಮ್' ಬೆಲೆ ಏರಿಕೆಯಾಗಿದೆ. ಹೃದ್ರೋಗಿಗಳಿಗೆ ಬೇಕಾದ 'ಕೊರೊನರಿ ಸ್ಟೆಂಟ್' ಬೆಲೆ ಕೂಡ ಹೆಚ್ಚಾಗಿದೆ.

ಅಗತ್ಯ ಔಷಧಿಗಳ ಮೇಲೆ ಕೇಂದ್ರ ಸರ್ಕಾರ ಶೇ. 12 ರಷ್ಟು ಜಿಎಸ್ಟಿ ವಿಧಿಸುತ್ತಿರುವುದು ಜನರ ಸಂಕಷ್ಟವನ್ನು ಮತ್ತಷ್ಟು ಹೆಚ್ಚಿಸಿದೆ. ಅಲ್ಲದೇ, ಅಗತ್ಯ ವಸ್ತುಗಳ ಬೆಲೆಯಲ್ಲಿ ಭಾರಿ ಏರಿಕೆಯಾಗಲಿದ್ದು, ಕಟ್ಟಡ ನಿರ್ಮಾಣ ಮತ್ತು ದೈನಂದಿನ ಬಳಕೆಯ ವಸ್ತುಗಳ ಬೆಲೆಗಳು ಗಗನಕ್ಕೇರಿವೆ. ಮಾರ್ಚ್‌ನಲ್ಲಿ ಪ್ಲಾಸ್ಟಿಕ್ ವಸ್ತುಗಳ ಬೆಲೆ ಶೇ. 50 ರಷ್ಟು ಹೆಚ್ಚಾಗಿದೆ. ಪಿವಿಸಿ ಪೈಪ್‌ಗಳ ಬೆಲೆ ಪ್ರತಿ ಟನ್‌ಗೆ 6 ಸಾವಿರ ರೂ. ಏರಿಕೆಯಾಗಿದೆ.

ಏಪ್ರಿಲ್‌ನಿಂದ ಸಿಮೆಂಟ್ ಬೆಲೆ ಪ್ರತಿ ಚೀಲಕ್ಕೆ 50 ರಿಂದ 100 ರೂ.ವರೆಗೆ ಹೆಚ್ಚಾಗುವ ಸಾಧ್ಯತೆಯಿದೆ. ಉಕ್ಕು ಬೆಲೆ ಪ್ರತಿ ಟನ್‌ಗೆ 47,615 ರಿಂದ 59,800 ರೂ.ಗೆ ಏರಿಕೆಯಾಗಿದೆ. ಡಾಂಬರು ಬೆಲೆ ಶೇ. 30-50 ರಷ್ಟು ಏರಿಕೆಯಾಗಿದ್ದು, ರಸ್ತೆ ನಿರ್ಮಾಣ ಕಾರ್ಯಗಳ ಮೇಲೆ ಪ್ರಭಾವ ಬೀರಲಿದೆ. ಗೃಹೋಪಯೋಗಿ ವಸ್ತುಗಳಾದ ಏರ್ ಕಂಡಿಷನರ್, ಫ್ರಿಡ್ಜ್ ಮತ್ತು ವಾಟರ್ ಕೂಲರ್ ಬೆಲೆಗಳು ಶೇ. 5 ರಿಂದ ಶೇ. 15 ರಷ್ಟು ಏರಿಕೆಯಾಗಲಿವೆ ಎಂದು ಮಾಹಿತಿ ನೀಡಿದರು.

ವಿಮಾನ ಪ್ರಯಾಣ ದರವು ಶೇ. 10-15 ರಷ್ಟು ಏರಿಕೆಯಾಗಿದ್ದು, ಸಾಮಾನ್ಯ ಪ್ರಯಾಣಿಕರಿಗೆ ಹೊರೆಯಾಗಿದೆ. ಗೃಹಬಳಕೆಯ ಸಿಲಿಂಡರ್ ಬೆಲೆ ಅಧಿಕೃತವಾಗಿ 913 ರೂ. ಇದ್ದರೂ, ಮಾರುಕಟ್ಟೆಯಲ್ಲಿ ತೀವ್ರ ಕೊರತೆಯಿಂದಾಗಿ ಜನರು 2 ಸಾವಿರ ರೂ.ಗಿಂತ ಹೆಚ್ಚು ಹಣ ನೀಡಬೇಕಾದ ಪರಿಸ್ಥಿತಿ ಇದೆ. ವಾಣಿಜ್ಯ ಸಿಲಿಂಡರ್ ಬೆಲೆ 1,958 ರೂ. ಇದ್ದು, 4 ಸಾವಿರ ರೂ.ಗೆ ಮಾರಾಟವಾಗುತ್ತಿದೆ. ನಾಯರಾ ಎನರ್ಜಿ ಪೆಟ್ರೋಲ್ ಮೇಲೆ 5.30 ರೂ. ಮತ್ತು ಡೀಸೆಲ್ ಮೇಲೆ 3 ರೂ. ಹೆಚ್ಚಳ ಮಾಡಿದೆ.

ಏಪ್ರಿಲ್‌ನಲ್ಲಿ ಚುನಾವಣೆ ಮುಗಿದ ನಂತರ ಕೇಂದ್ರ ಸರ್ಕಾರ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯನ್ನು ಮತ್ತಷ್ಟು ಹೆಚ್ಚಿಸುವ ಸಾಧ್ಯತೆ ಇದೆ. ಅದಲ್ಲದೇ, ಸಾಮಾನ್ಯ ಜನರು ಬಳಸುವ ಸ್ಪೀಡ್ ಪೋಸ್ಟ್ ದರವನ್ನು ಶೇ. 34 ರಷ್ಟು ಹೆಚ್ಚಿಸಲಾಗಿದೆ. ಇದರಿಂದ ಪತ್ರ ಅಥವಾ ದಾಖಲೆಗಳನ್ನು ಕಳುಹಿಸುವುದು ಕೂಡ ದುಬಾರಿಯಾಗಿದೆ ಎಂದು ಆರೋಪಿಸಿದರು.

ಸೌದೆ ಒಲೆ ಯೋಜನೆ

ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಮಾತನಾಡಿ, ಕೇಂದ್ರ ಬಿಜೆಪಿ ಸರ್ಕಾರ ಜನರಿಗೆ ಉಜ್ವಲ ಯೋಜನೆ ಬದಲಾಗಿ ಸೌದೆ ಒಲೆ ಯೋಜನೆ ನೀಡಿದೆ. ಅಚ್ಛೇದಿನ ಏನಾಯ್ತು? ಈಗ ಇರುವುದನ್ನು ಕಚ್ಚಾ ದಿನ ಎಂದು ಹೇಳಬೇಕಾ? ಎಂದು ಬಿಜೆಪಿ ನಾಯಕರನ್ನು ಕೇಳಬಯಸುತ್ತೇನೆ. ಪಂಚರಾಜ್ಯ ಚುನಾವಣೆ ನಡೆಯುತ್ತಿದೆ. ಜನರು ಪರದಾಡುತ್ತಿದ್ದು, ಹೊಟೇಲ್‌ಗಳು ಬಂದ್ ಆಗುತ್ತಿವೆ. ಜನ ವಿದ್ಯುತ್ ಒಲೆ ಬಳಸುವ ಅನಿವಾರ್ಯತೆ ಎದುರಾಗಿದೆ. ಕಳೆದ ಹದಿನೈದು ದಿನಗಳಿಂದ ರಾಜ್ಯದಲ್ಲಿ ವಿದ್ಯುತ್ ಬಳಕೆ ಪ್ರಮಾಣ ಶೇ.10 ರಷ್ಟು ಏರಿಕೆಯಾಗಿದೆ. ಕೇಂದ್ರ ಸರ್ಕಾರ ಜನರಿಗೆ ಸೌದೆ ಭಾಗ್ಯ ನೀಡಿದ್ದು, ಎಲ್ಲಿಂದ ಸೌದೆ ಒದಗಿಸುವುದು? ಎಂದು ವ್ಯಂಗ್ಯವಾಡಿದರು.

ಯುದ್ಧಗಳ ನೆಪ, ಕೇಂದ್ರ ಸರ್ಕಾರದ ತಪ್ಪು ನಿರ್ಧಾರ, ನೀತಿಗಳಿಂದಾಗಿ ಇಂದು ದೇಶದ ಜನ ಬೆಲೆ ಏರಿಕೆಯಿಂದ ನರಳುತ್ತಿದ್ದಾರೆ. ಅಡುಗೆ ಅನಿಲ ಸಿಲಿಂಡರ್ ಬೆಲೆ ಏರಿಕೆ ಮಾತ್ರವಲ್ಲ, ಟೋಲ್ ಶುಲ್ಕ, ರೈಲ್ವೇ ಟಿಕೆಟ್ ದರ ಎಲ್ಲವೂ ಹೆಚ್ಚಾಗಿದೆ. ಕೆಲವು ಅನಿವಾರ್ಯ ಪರಿಸ್ಥಿತಿಯಲ್ಲಿ ರಾಜ್ಯ ಸರ್ಕಾರ ಬೆಲೆ ಏರಿಕೆ ತೀರ್ಮಾನ ಮಾಡಿದಾಗ ಯಾವ ರೀತಿ ಟೀಕೆ ಟಿಪ್ಪಣಿ ಬಂದಿವೆ ಎಂದು ಎಲ್ಲರಿಗೂ ಗೊತ್ತಿದೆ. ಸಾಮಾನ್ಯ ಜನರ ಮೇಲೆ ಕೇಂದ್ರ ಸರ್ಕಾರ ಬೆಲೆ ಏರಿಕೆ ಯುದ್ಧ ಮಾಡುತ್ತಿದೆ ಎಂದು ಕಿಡಿಕಾರಿದರು.

ಗ್ಯಾರಂಟಿ ಯೋಜನೆಯಂತೆ ಪರ್ಯಾಯ ವ್ಯವಸ್ಥೆ ಮಾಡಲಿ

ಜನರ ಆರ್ಥಿಕ ಪರಿಸ್ಥಿತಿ ಸುಧಾರಿಸಲು ನಮ್ಮ ಸರ್ಕಾರ ಐದು ಗ್ಯಾರಂಟಿ ಯೋಜನೆ ನೀಡಿ ಶಕ್ತಿ ತುಂಬಿದ್ದೇವೆ. ಈಗ ನಮ್ಮ ಗ್ಯಾರಂಟಿ ಯೋಜನೆಗಳು ಜನರಿಗೆ ಆರ್ಥಿಕವಾಗಿ ರಕ್ಷಣೆ ನೀಡಿವೆ. ಶೇ.34 ರಷ್ಟು ಪೋಸ್ಟಲ್ ಹಾಗೂ ಪಾರ್ಸಲ್ ಚಾರ್ಜ್ ಹೆಚ್ಚಳ ಮಾಡಿದ್ದಾರೆ. ಹೀಗಾದರೆ ಸಾಮಾನ್ಯ ಜನ ಹೇಗೆ ಬದುಕಬೇಕು. ಅಚ್ಚೇದಿನ ಏನಾಯಿತು‌. ಹೀಗೆ ಮುಂದುವರೆದರೆ ಜನಸಮಾನ್ಯರು ಹೇಗೆ ಬದುಕಬೇಕು. ನಾವು ಗ್ಯಾರಂಟಿ ನೀಡಿದ ಕಾರಣಕ್ಕೆ ಜನ ಸ್ವಲ್ಪ ಉಸಿರಾಡುತ್ತಿದ್ದಾರೆ. ಇದೇ ರೀತಿ ಕೇಂದ್ರ ಸರ್ಕಾರ ಪರ್ಯಾಯ ವ್ಯವಸ್ಥೆ ಮಾಡಬೇಕು.‌ ಜನಸಾಮಾನ್ಯರ ಬವಣೆಯ ಜತೆ ಕೇಂದ್ರ ನಿಲ್ಲುತ್ತಿಲ್ಲ. ಬೆಲೆ ಏರಿಕೆಯಿಂದ ತತ್ತರಿಸುತ್ತಿರುವ ಜನರಿಗೆ ಕೇಂದ್ರ ಸರ್ಕಾರ ನೆರವಾಗಬೇಕು ಎಂದು ಆಗ್ರಹಿಸಿದರು.

Read More
Next Story