Let new people come to the cabinet, Mahadevappa is our high command: DKSH hits back at CM faction
x

ಡಿಸಿಎಂ ಡಿ.ಕೆ. ಶಿವಕುಮಾರ್‌ ಹಾಗೂ ಸಚಿವ ಹೆಚ್‌.ಸಿ. ಮಹದೇವಪ್ಪ 

ಸಂಪುಟಕ್ಕೆ ಹೊಸಬರು ಬರಲಿ, ಮಹದೇವಪ್ಪ ನಮ್ಮ ಹೈಕಮಾಂಡ್: ಸಿಎಂ ಬಣಕ್ಕೆ ಡಿಕೆಶಿ ತಿರುಗೇಟು

ಸಚಿವರು ಹಾಗೂ ಶಾಸಕರನ್ನು ನಿಯಂತ್ರಣ ಮಾಡಬೇಕಿರುವುದು ಮುಖ್ಯಮಂತ್ರಿಗಳು. ಪಕ್ಷದ ವಿಚಾರವಾಗಿ ದೆಹಲಿಗೆ ಮಾಹಿತಿ ನೀಡುವ ವಿಚಾರ ನಾನು ಮಾಡುತ್ತಿದ್ದೇನೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್‌ ತಿಳಿಸಿದರು.


Click the Play button to hear this message in audio format

ಅಧಿಕಾರ ಹಸ್ತಾಂತರ ಹಾಗೂ ನಾಯಕತ್ವ ಬದಲಾವಣೆ ವಿಚಾರದಲ್ಲಿ ಸಿಎಂ ಹಾಗೂ ಡಿಸಿಎಂ ಬಣಗಳ ನಡುವಿನ ಮುಸುಕಿನ ಗುದ್ದಾಟ ಮುಂದುವರಿದಿದ್ದು, "ಸಚಿವ ಎಚ್‌.ಸಿ. ಮಹದೇವಪ್ಪ ಅವರೇ ನಮ್ಮ ಹೈಕಮಾಂಡ್‌" ಎನ್ನುವ ಮೂಲಕ ಸಿಎಂ ಸಿದ್ದರಾಮಯ್ಯ ಆಪ್ತನಿಗೆ ಡಿಸಿಎಂ ಡಿ.ಕೆ. ಶಿವಕುಮಾರ್‌ ತಿರುಗೇಟು ನೀಡಿದ್ದಾರೆ.

ಮಂಗಳವಾರ (ಫೆ. 24) ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, "ಸಿಎಂ ಬದಲಾವಣೆ ವಿಚಾರದ ಬಗ್ಗೆ ನನಗೆ ಯಾವುದೇ ಮಾಹಿತಿ ಇಲ್ಲ. ಸಚಿವ ಎಚ್‌.ಸಿ. ಮಹದೇವಪ್ಪ ಅವರೇ ಹೈಕಮಾಂಡ್‌ ಆಗಿರುವುದರಿಂದ ಅವರಿಗೆ ಹೆಚ್ಚಿನ ಮಾಹಿತಿ ತಿಳಿದಿರಬೇಕು. ಹೀಗಾಗಿ ಅವರು ದಲಿತ ಸಿಎಂ ವಿಚಾರವನ್ನು ಪ್ರಸ್ತಾಪ ಮಾಡಿದ್ದಾರೆ," ಎಂದರು.

ಇಲಾಖೆ ವಿಚಾರವಾಗಿ ದೆಹಲಿಗೆ ಪ್ರಯಾಣ

"ಹೈಕಮಾಂಡ್ ನಾಯಕರಿಂದ ನನಗೆ ಯಾವುದೇ ಕರೆ ಬಂದಿಲ್ಲ. ನಮ್ಮ ಇಲಾಖೆಗೆ ಸಂಬಂಧಿಸಿದ ಕೆಲಸಗಳ ಉದ್ದೇಶದಿಂದ ನಾನು ದೆಹಲಿಗೆ ಹೋಗಬೇಕಾಗಿದೆ. ನಗರಾಭಿವೃದ್ಧಿ ಇಲಾಖೆಯ ಯೋಜನೆಗಳಿಗೆ ಸಂಬಂಧಿಸಿದಂತೆ 1 ಲಕ್ಷ ಕೋಟಿ ರೂ. ನೀಡಲಾಗುತ್ತಿದ್ದು, ದೊಡ್ಡ ನಗರಗಳಿಗೆ ಅನುದಾನ ನೀಡುವುದಿಲ್ಲ ಎನ್ನುತ್ತಿದ್ದಾರೆ. ಈ ಬಗ್ಗೆ ನಮ್ಮ ನಗರಾಭಿವೃದ್ಧಿ ಸಚಿವರ ಬಳಿ ಚರ್ಚೆ ಮಾಡಿ, 2 ಹಾಗೂ 3ನೇ ಹಂತದ ನಗರಗಳ ಅಭಿವೃದ್ಧಿಗೆ ಪ್ರಸ್ತಾವನೆ ಸಿದ್ಧಪಡಿಸಲು ಮನವಿ ಮಾಡುತ್ತೇನೆ," ಎಂದು ತಿಳಿಸಿದರು.

ಸಚಿವರು, ಶಾಸಕರನ್ನು ನಿಯಂತ್ರಿಸಬೇಕಿರುವುದು ಸಿಎಂ

'ಕೆಪಿಸಿಸಿ ಅಧ್ಯಕ್ಷರಾಗಿದ್ದರೂ ಸಚಿವರ ಹೇಳಿಕೆಗಳ ಬಗ್ಗೆ ನೀವು ಮೌನವಾಗಿದ್ದೀರಿ' ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, “ಸಚಿವರು ಹಾಗೂ ಶಾಸಕರನ್ನು ನಿಯಂತ್ರಣ ಮಾಡಬೇಕಿರುವುದು ಮುಖ್ಯಮಂತ್ರಿಗಳು. ಪಕ್ಷದ ವಿಚಾರವಾಗಿ ದೆಹಲಿಗೆ ಮಾಹಿತಿ ನೀಡುವ ಕೆಲಸವನ್ನು ನಾನು ಮಾಡುತ್ತಿದ್ದೇನೆ. ಗೃಹ ಸಚಿವ ಡಾ. ಜಿ. ಪರಮೇಶ್ವರ್‌ಗೆ ಮೊದಲು ಕೂಲಿ ಕೊಡಲಿ ಎಂದು ಶಾಸಕ ಕೆ.ಎನ್‌‌. ರಾಜಣ್ಣ ಹೇಳಿಕೆ ನೀಡಿದ್ದಾರಲ್ಲ, ಅವರು ದೊಡ್ಡವರು ಬಿಡಿ,” ಎಂದು ವ್ಯಂಗ್ಯವಾಡಿದರು.

ನಾನು, ಸತೀಶ್‌ ಜಾರಕಿಹೊಳಿ ಸಮಾನ ಮನಸ್ಕರು

"ಸಚಿವ ಸತೀಶ್‌ ಜಾರಕಿಹೊಳಿ ಪಕ್ಷದ ಹಿರಿಯ ನಾಯಕರು. ಅವರು ನನ್ನ ಜತೆ ಕಾರ್ಯಾಧ್ಯಕ್ಷರಾಗಿ ಕೆಲಸ ಮಾಡಿದ್ದಾರೆ. ನಾವು ವಾರಕ್ಕೊಮ್ಮೆಯಾದರೂ ಮಾತನಾಡುತ್ತಿರುತ್ತೇವೆ. ನಾವಿಬ್ಬರೂ ಸಮಾನ ಮನಸ್ಕರು. ಅವರಿಗೂ ಪಕ್ಷದ ಬಗ್ಗೆ ಅಪಾರವಾದ ಕಾಳಜಿ ಮತ್ತು ಚಿಂತನೆ ಇದೆ. ನಮ್ಮ ಸರ್ಕಾರವನ್ನು ಮತ್ತೆ ಅಧಿಕಾರಕ್ಕೆ ತರಲು ನಾವೆಲ್ಲ ಸೇರಿ ಯೋಜನೆ ತಯಾರು ಮಾಡುತ್ತಿದ್ದೇವೆ," ಎಂದರು.

ಹೊಸ ಪೀಳಿಗೆಗೆ ಅವಕಾಶ ಸಿಗಲಿ

"ಕನಿಷ್ಠ 5 ಮಂತ್ರಿ ಸ್ಥಾನಗಳನ್ನು ಹೊಸಬರಿಗೆ ನೀಡಬೇಕು ಎಂದು ನೂತನ ಶಾಸಕರು ಹೈಕಮಾಂಡ್‌ಗೆ ಪತ್ರ ಬರೆದಿರುವ ಬಗ್ಗೆ ಮಾಧ್ಯಮಗಳಲ್ಲಿ ಓದಿದ್ದೇನೆ. ನನಗೆ ಅವರ ಪತ್ರ ತಲುಪಿಲ್ಲ. ಎಲ್ಲರಿಗೂ ಮಂತ್ರಿಯಾಗುವ ಆಸೆ ಇದ್ದೇ ಇರುತ್ತದೆ. ಮೋದಿ ಅವರು ಒಮ್ಮೆಯೂ ಶಾಸಕರಾಗದಿದ್ದರೂ ನೇರವಾಗಿ ಸಿಎಂ ಆಗಲಿಲ್ಲವೇ? ಹಾಗಾಗಿ ಅವರು ಕೇಳುವುದರಲ್ಲಿ ತಪ್ಪೇನಿಲ್ಲ. ಮೊದಲ ಬಾರಿಗೆ ಶಾಸಕರಾದಾಗಲೇ ಮಂತ್ರಿಯಾದವರಲ್ಲಿ ನಾನೂ ಒಬ್ಬ. ಹೊಸ ಪೀಳಿಗೆ ಬೆಳೆಯಬೇಕು. ನಾವೇ ಎಷ್ಟು ದಿನ ಗೂಟ ಹೊಡೆದುಕೊಂಡು ಕೂರಲು ಸಾಧ್ಯ? ನಾನು ಸಚಿವನಾಗಿ 36 ವರ್ಷಗಳಾಗಿವೆ. ಹೊಸ ಪೀಳಿಗೆ ಹಾಗೂ ಹೊಸ ಆಲೋಚನೆಗಳು ಬರಬೇಕು. ಹೊಸಬರು ಸಂಪುಟಕ್ಕೆ ಬರಬೇಕು ಎಂದು ಬೆಂಬಲಿಸುವವರಲ್ಲಿ ನಾನೂ ಇದ್ದೇನೆ. ಹೊಸಬರನ್ನು ನಾವು ಬೆಳೆಸಬೇಕಿದೆ. ಆದರೆ, ಈ ಬಗ್ಗೆ ಪಕ್ಷ ಅಂತಿಮ ತೀರ್ಮಾನ ಮಾಡುತ್ತದೆ,” ಎಂದು ಸ್ಪಷ್ಟಪಡಿಸಿದರು.

ಬೀದಿ ವ್ಯಾಪಾರಿಗಳಿಗೆ ವಾಹನ

"ಬೆಂಗಳೂರಿನ ರಸ್ತೆ ಅಭಿವೃದ್ಧಿಗೆ ನಮ್ಮ ಸರ್ಕಾರ 5,065 ಕೋಟಿ ರೂ. ವೆಚ್ಚ ಮಾಡುತ್ತಿದ್ದು, ಇದಕ್ಕಾಗಿ ಸಿಎಂ 2 ಸಾವಿರ ಕೋಟಿ ರೂ. ಅನುದಾನ ನೀಡಿದ್ದಾರೆ. ಶೇ. 75ರಷ್ಟು ಕಾಮಗಾರಿಗಳು ಮುಕ್ತಾಯವಾಗಿದ್ದು, ಏಪ್ರಿಲ್ ಅಂತ್ಯದ ವೇಳೆಗೆ ಎಲ್ಲವೂ ಪೂರ್ಣಗೊಳ್ಳಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. ಕಾಮಗಾರಿಯ ಗುಣಮಟ್ಟದಲ್ಲಿ ಯಾವುದೇ ಕಾರಣಕ್ಕೂ ರಾಜಿಯಾಗಬಾರದು ಎಂದು ಕಟ್ಟುನಿಟ್ಟಾಗಿ ಹೇಳಿದ್ದೇನೆ. ಶೀಘ್ರವೇ 10 ಲಕ್ಷ ಇ-ಖಾತಾ ದಾಖಲೆ ವಿತರಣೆ ಕಾರ್ಯಕ್ರಮ ಮಾಡಲಾಗುವುದು. ಇನ್ನು, 30 ಸಾವಿರ ಬೀದಿ ವ್ಯಾಪಾರಿಗಳು ನೋಂದಣಿ ಮಾಡಿಕೊಂಡಿದ್ದು, ಅವರ ವ್ಯಾಪಾರಕ್ಕೆ ಅನುಕೂಲವಾಗುವಂತೆ ವಾಹನ ನೀಡುವ ಕಲ್ಯಾಣ ಯೋಜನೆಗಳನ್ನು ಜಾರಿ ಮಾಡಲಾಗುವುದು," ಎಂದರು.

ಬಜೆಟ್ ಗೌಪ್ಯವಾಗಿರಬೇಕು

"ಸಿಎಂ ಆಗಲಿ ಅಥವಾ ಮಂತ್ರಿಗಳಾಗಲಿ ಬಜೆಟ್ ಯಾವ ರೀತಿ ಇರುತ್ತದೆ ಎಂದು ಮುಂಚಿತವಾಗಿ ಮುನ್ಸೂಚನೆ ನೀಡಲು ಆಗುವುದಿಲ್ಲ. ಅದೇ ಬಜೆಟ್‌ನ ಮಹತ್ವ. ಅದರಲ್ಲಿ ಗೌಪ್ಯತೆ ಇರಬೇಕು. ಇದೇ ಕಾರಣಕ್ಕೆ ಸಿಎಂ ಬಜೆಟ್ ಮಂಡನೆಗೂ ಮುನ್ನ ಸಚಿವ ಸಂಪುಟದಲ್ಲಿ ಅನುಮೋದನೆ ಪಡೆಯುತ್ತಾರೆ. ರಾಜ್ಯದ ಹಿತದೃಷ್ಟಿಯಿಂದ ನಮ್ಮ ಮುಂದೆ ಸಾಕಷ್ಟು ಸವಾಲುಗಳಿವೆ. ಕೇಂದ್ರ ಸರ್ಕಾರ ನಮಗೆ ಸೂಕ್ತ ಸಹಕಾರ ನೀಡಿಲ್ಲ. ಈ ಮಧ್ಯೆ ಮುಖ್ಯಮಂತ್ರಿಗಳೇ ಹಣಕಾಸು ಸಚಿವರಾಗಿರುವುದರಿಂದ, ಅವರು ಯಾವ ರೀತಿ ಬಜೆಟ್ ಮಂಡಿಸುತ್ತಾರೆ ಎಂಬುದನ್ನು ಕಾದು ನೋಡೋಣ,” ಎಂದರು.

"ಬಿಜೆಪಿ ಅಧಿಕಾರದಲ್ಲಿದ್ದಾಗ ಖಾಲಿ ಹುದ್ದೆಗಳನ್ನು ಭರ್ತಿ ಮಾಡಿರಲಿಲ್ಲ. ಆದರೆ, ಶೀಘ್ರದಲ್ಲೇ ನಮ್ಮ ರಾಜ್ಯ ಸರ್ಕಾರ ಖಾಲಿ ಹುದ್ದೆಗಳ ಭರ್ತಿಗೆ ನೇಮಕಾತಿ ಅಧಿಸೂಚನೆ ಹೊರಡಿಸಲಿದೆ. ನಿರುದ್ಯೋಗಿ ಯುವಕರಿಗೆ ತೊಂದರೆಯಾಗಬಾರದು ಎಂಬ ಉದ್ದೇಶದಿಂದಲೇ ಯುವನಿಧಿ ಯೋಜನೆ ಜಾರಿಗೊಳಿಸಲಾಗಿದೆ. ಒಳ ಮೀಸಲಾತಿ ಸೇರಿದಂತೆ ಅನೇಕ ತಾಂತ್ರಿಕ ವಿಚಾರಗಳಿಂದಾಗಿ ನೇಮಕಾತಿ ಅಧಿಸೂಚನೆ ವಿಳಂಬವಾಗಿದೆ," ಎಂದು ಅವರು ವಿವರಿಸಿದರು. ಕೊಡಬೇಕೆ?

Read More
Next Story