ಬಾಲಕೃಷ್ಣ ಹುಟ್ಟುಹಬ್ಬದ ನೆಪ, ಡಿಕೆಶಿ ಬಣದಿಂದ ಶಕ್ತಿಪ್ರದರ್ಶನ?: 18 ಶಾಸಕರ ಫೋಟೋ ವೈರಲ್
x

ಬಾಲಕೃಷ್ಣ ಹುಟ್ಟುಹಬ್ಬದ ನೆಪ, ಡಿಕೆಶಿ ಬಣದಿಂದ ಶಕ್ತಿಪ್ರದರ್ಶನ?: 18 ಶಾಸಕರ ಫೋಟೋ ವೈರಲ್

ಎಲ್ಲಾ 18 ಶಾಸಕರು ಒಟ್ಟಿಗಿರುವ ಫೋಟೋವೊಂದನ್ನು ಡಿಕೆಶಿ ಬೆಂಬಲಿಗರು ಉದ್ದೇಶಪೂರ್ವಕವಾಗಿಯೇ ಸಾಮಾಜಿಕ ಜಾಲತಾಣಗಳು ಹಾಗೂ ಮಾಧ್ಯಮಗಳಿಗೆ ಬಿಡುಗಡೆ ಮಾಡಿದ್ದಾರೆ.


Click the Play button to hear this message in audio format

ರಾಜ್ಯ ಕಾಂಗ್ರೆಸ್‌ನ ಆಂತರಿಕ ರಾಜಕೀಯದಲ್ಲಿ ಮತ್ತೆ ಶೀತಲ ಸಮರದ ವಾತಾವರಣ ಗರಿಗೆದರಿದ ಲಕ್ಷಣಗಳು ಗೋಚರಿಸುತ್ತಿವೆ. ಮಾಗಡಿ ಶಾಸಕ ಎಚ್.ಸಿ. ಬಾಲಕೃಷ್ಣ ಅವರ ಹುಟ್ಟುಹಬ್ಬದ ನೆಪದಲ್ಲಿ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಬೆಂಬಲಿಗ ಶಾಸಕರು ಭಾರಿ ಶಕ್ತಿಪ್ರದರ್ಶನ ಮಾಡಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಬಣದ ನಾಯಕರು ಹಾಗೂ ಸಚಿವರು ನಿರಂತರವಾಗಿ ಸಭೆ, ಔತಣಕೂಟಗಳನ್ನು ನಡೆಸುತ್ತಿರುವ ಬೆನ್ನಲ್ಲೇ, ಡಿಕೆಶಿ ಬಣವೂ ತಮ್ಮ ಒಗ್ಗಟ್ಟು ಪ್ರದರ್ಶಿಸುವ ಮೂಲಕ ರಾಜ್ಯ ರಾಜಕೀಯದಲ್ಲಿ ಹೊಸ ಸಂಚಲನ ಮೂಡಿಸಿದೆ.

18 ಶಾಸಕರು ಭಾಗಿ, ಫೋಟೋ ಬಿಡುಗಡೆ

ಶಾಸಕ ಎಚ್.ಸಿ. ಬಾಲಕೃಷ್ಣ ಅವರ ಜನ್ಮದಿನದ ಅಂಗವಾಗಿ ಆಯೋಜಿಸಲಾಗಿದ್ದ ವಿಶೇಷ ಔತಣಕೂಟದಲ್ಲಿ ಬರೋಬ್ಬರಿ 18 ಮಂದಿ ಕಾಂಗ್ರೆಸ್ ಶಾಸಕರು ಭಾಗವಹಿಸಿದ್ದರು. ವಿಶೇಷವೆಂದರೆ, ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಎಲ್ಲ ಶಾಸಕರು ಡಿಕೆಶಿ ಅವರ ಕಟ್ಟಾ ಬೆಂಬಲಿಗರು ಎಂದೇ ಗುರುತಿಸಿಕೊಂಡವರಾಗಿದ್ದಾರೆ. ಹುಟ್ಟುಹಬ್ಬದ ಸಂಭ್ರಮಾಚರಣೆಯ ಬಳಿಕ, ಈ ಎಲ್ಲಾ 18 ಶಾಸಕರು ಒಟ್ಟಿಗಿರುವ ಫೋಟೋವೊಂದನ್ನು ಡಿಕೆಶಿ ಬೆಂಬಲಿಗರು ಉದ್ದೇಶಪೂರ್ವಕವಾಗಿಯೇ ಸಾಮಾಜಿಕ ಜಾಲತಾಣಗಳು ಹಾಗೂ ಮಾಧ್ಯಮಗಳಿಗೆ ಬಿಡುಗಡೆ ಮಾಡಿದ್ದಾರೆ. ಈ ಫೋಟೋ ಇದೀಗ ರಾಜ್ಯ ರಾಜಕೀಯ ವಲಯದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ.

ಸಿಎಂ ಬಣಕ್ಕೆ ತಿರುಗೇಟು ನೀಡುವ ಯತ್ನ?

ಇತ್ತೀಚಿನ ದಿನಗಳಲ್ಲಿ ಸಿಎಂ ಸಿದ್ದರಾಮಯ್ಯ ಆಪ್ತ ವಲಯದ ಸಚಿವರಾದ ಸತೀಶ್ ಜಾರಕಿಹೊಳಿ, ಡಾ. ಎಚ್.ಸಿ. ಮಹಾದೇವಪ್ಪ ಸೇರಿದಂತೆ ಹಲವು ನಾಯಕರು ಆಗಾಗ ಪ್ರತ್ಯೇಕವಾಗಿ ಸಭೆ ಸೇರುತ್ತಿದ್ದು, ಇದು ಡಿಕೆಶಿ ಬಣದ ಅಸಮಾಧಾನಕ್ಕೆ ಕಾರಣವಾಗಿತ್ತು. ಸಿಎಂ ಆಪ್ತರ ಈ ನಡೆಗೆ ಪ್ರತಿಯಾಗಿ ಹಾಗೂ ಪಕ್ಷದಲ್ಲಿ ತಮ್ಮ ಬಣದ ಶಾಸಕರ ಸಂಖ್ಯೆ ಮತ್ತು ಶಕ್ತಿಯನ್ನು ತೋರಿಸುವ ಉದ್ದೇಶದಿಂದಲೇ ಬಾಲಕೃಷ್ಣ ಅವರ ಹುಟ್ಟುಹಬ್ಬವನ್ನು ವೇದಿಕೆಯಾಗಿ ಬಳಸಿಕೊಳ್ಳಲಾಗಿದೆ ಎಂದು ರಾಜಕೀಯ ಪಂಡಿತರು ವಿಶ್ಲೇಷಿಸುತ್ತಿದ್ದಾರೆ. ಕೇವಲ ಹುಟ್ಟುಹಬ್ಬದ ಶುಭಾಶಯ ಕೋರುವುದಷ್ಟೇ ಅಲ್ಲದೆ, ಪ್ರಸ್ತುತ ರಾಜಕೀಯ ವಿದ್ಯಮಾನಗಳ ಕುರಿತಾಗಿಯೂ ಈ ಶಾಸಕರು ಗಂಭೀರ ಚರ್ಚೆ ನಡೆಸಿದ್ದಾರೆ ಎನ್ನಲಾಗಿದೆ. ಒಟ್ಟಾರೆಯಾಗಿ, ಈ ಫೋಟೋ ಬಿಡುಗಡೆಯ ಮೂಲಕ ರಾಜ್ಯ ಕಾಂಗ್ರೆಸ್‌ನಲ್ಲಿ 'ಸಿದ್ದು ವರ್ಸಸ್ ಡಿಕೆಶಿ' ಬಣ ರಾಜಕೀಯ ಮತ್ತೆ ಮುನ್ನೆಲೆಗೆ ಬಂದಂತಾಗಿದೆ.

Read More
Next Story