ದಾವಣಗೆರೆ ದಕ್ಷಿಣ ಉಪಚುನಾವಣೆ: ಮುನಿಸು ಮರೆತು ಒಂದಾದ ಸಚಿವರಾದ ಮಲ್ಲಿಕಾರ್ಜುನ್‌- ಜಮೀರ್‌ ಅಹ್ಮದ್‌
x

ದಾವಣಗೆರೆ ದಕ್ಷಿಣ ಉಪಚುನಾವಣೆ: ಮುನಿಸು ಮರೆತು ಒಂದಾದ ಸಚಿವರಾದ ಮಲ್ಲಿಕಾರ್ಜುನ್‌- ಜಮೀರ್‌ ಅಹ್ಮದ್‌

ಕೇರಳ ವಿಧಾನಸಭಾ ಚುನಾವಣೆಯ ಸ್ಟಾರ್ ಪ್ರಚಾರಕರಾಗಿರುವ ಸಚಿವ ಜಮೀರ್ ಅಹ್ಮದ್ ಖಾನ್, ಅಲ್ಲಿನ 10 ಜಿಲ್ಲೆಗಳ ಉಸ್ತುವಾರಿ ಹೊತ್ತು ಮಾರ್ಚ್ 26ರಿಂದ ಪ್ರಚಾರದಲ್ಲಿ ನಿರತರಾಗಿದ್ದರು. ಇದೀಗ ದಾವಣಗೆರೆಗೆ ಬಂದಿದ್ದಾರೆ.


Click the Play button to hear this message in audio format

ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯ ಟಿಕೆಟ್ ಹಂಚಿಕೆ ವಿಚಾರವಾಗಿ ತಲೆದೋರಿದ್ದ ಅಸಮಾಧಾನಗಳು ಕೊನೆಗೆ ಎಲ್ಲವೂ ಶಮನವಾಗಿದೆ. ಟಿಕೆಟ್ ವಿಚಾರದಲ್ಲಿ ಮುನಿಸಿಕೊಂಡಿದ್ದ ವಸತಿ ಸಚಿವ ಜಮೀರ್ ಅಹ್ಮದ್ ಖಾನ್ ಹಾಗೂ ಗಣಿ ಮತ್ತು ಭೂವಿಜ್ಞಾನ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಅವರು ಭಿನ್ನಾಭಿಪ್ರಾಯಗಳನ್ನು ಮರೆತು ಭಾನುವಾರ ಒಗ್ಗಟ್ಟು ಪ್ರದರ್ಶಿಸಿದ್ದಾರೆ. ಅಷ್ಟೇ ಅಲ್ಲದೆ, ಕಾಂಗ್ರೆಸ್ ಅಭ್ಯರ್ಥಿ ಸಮರ್ಥ್ ಶಾಮನೂರು ಪರವಾಗಿ ಇಬ್ಬರೂ ನಾಯಕರು ಜಂಟಿಯಾಗಿ ಮತಯಾಚನೆ ಮಾಡಿದರು.

ಕೇರಳ ವಿಧಾನಸಭಾ ಚುನಾವಣೆಯ ಸ್ಟಾರ್ ಪ್ರಚಾರಕರಾಗಿರುವ ಸಚಿವ ಜಮೀರ್ ಅಹ್ಮದ್ ಖಾನ್, ಅಲ್ಲಿನ 10 ಜಿಲ್ಲೆಗಳ ಉಸ್ತುವಾರಿ ಹೊತ್ತು ಮಾರ್ಚ್ 26ರಿಂದ ಪ್ರಚಾರದಲ್ಲಿ ನಿರತರಾಗಿದ್ದರು. ಇದೀಗ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸೂಚನೆ ಮೇರೆಗೆ ಕೇರಳದಿಂದ ನೇರವಾಗಿ ದಾವಣಗೆರೆಗೆ ಆಗಮಿಸಿದ ಅವರು, ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಅವರ ನಿವಾಸಕ್ಕೆ ಭೇಟಿ ನೀಡಿದರು. ಬಳಿಕ ಜಂಟಿ ಪತ್ರಿಕಾಗೋಷ್ಠಿ ನಡೆಸಿದ ಸಚಿವದ್ವಯರು, "ವಿಷ ಗಳಿಗೆಯಲ್ಲಿ ಉಂಟಾಗಿದ್ದ ಮುನಿಸನ್ನು ಮರೆತಿದ್ದೇವೆ. ಪಕ್ಷದ ಹಿತದೃಷ್ಟಿಯಿಂದ ನಾವೆಲ್ಲರೂ ಒಗ್ಗೂಡಿ ಕೆಲಸ ಮಾಡಲಿದ್ದೇವೆ" ಎಂದು ಘೋಷಿಸುವ ಮೂಲಕ ಕಾರ್ಯಕರ್ತರಲ್ಲಿ ಉತ್ಸಾಹ ತುಂಬಿದರು.

ಟಿಕೆಟ್ ಗೊಂದಲದ ಬಗ್ಗೆ ಜಮೀರ್ ಸ್ಪಷ್ಟನೆ

"ಕೆಲ ತಿಂಗಳ ಹಿಂದೆ ನಾನು ದಾವಣಗೆರೆಗೆ ಭೇಟಿ ನೀಡಿದ್ದಾಗ, ಉಪಚುನಾವಣೆ ಟಿಕೆಟ್ ನೀಡುವಂತೆ ಮುಸ್ಲಿಂ ಸಮುದಾಯ ಬೇಡಿಕೆ ಇಟ್ಟಿತ್ತು. ಆ ಬೇಡಿಕೆಯನ್ನು ಹೈಕಮಾಂಡ್ ಗಮನಕ್ಕೆ ತರುವುದಾಗಿ ಭರವಸೆ ನೀಡಿದ್ದೆ. ಇದರಿಂದಾಗಿ ಗೊಂದಲ ಸೃಷ್ಟಿಯಾಗಿದ್ದು ಹಾಗೂ ಟಿಕೆಟ್ ಕೈತಪ್ಪಿದ್ದರಿಂದ ಕೆಲವರು ಅಸಮಾಧಾನಗೊಂಡಿರುವುದು ನಿಜ. ಆದರೆ, ಹಾಲಿ ಜನಪ್ರತಿನಿಧಿಯೊಬ್ಬರು ನಿಧನರಾದಾಗ ಅವರ ಕುಟುಂಬದವರಿಗೆ ಅನುಕಂಪದ ಆಧಾರದ ಮೇಲೆ ಟಿಕೆಟ್ ನೀಡುವುದು ಪಕ್ಷದ ನೀತಿಯಾಗಿದೆ. ಹೀಗಾಗಿ ಸಮರ್ಥ್ ಶಾಮನೂರು ಅವರಿಗೆ ಟಿಕೆಟ್ ಒಲಿದಿದೆ. 2028ರ ಸಾರ್ವತ್ರಿಕ ಚುನಾವಣೆಯಲ್ಲಾದರೂ ಸಮುದಾಯಕ್ಕೆ ಅವಕಾಶ ನೀಡುವಂತೆ ಮನವಿ ಮಾಡಲಾಗಿದೆ" ಎಂದು ಜಮೀರ್ ಅಹ್ಮದ್ ವಿವರಿಸಿದರು.

ಅಸಮಾಧಾನಿತರ ಮನವೊಲಿಕೆಗೆ ಯತ್ನ

ಇದೇ ವೇಳೆ, ಟಿಕೆಟ್ ಕೈತಪ್ಪಿದ್ದರಿಂದ ಬೇಸರಗೊಂಡಿರುವ ವಿಧಾನಪರಿಷತ್ ಸದಸ್ಯ ಅಬ್ದುಲ್ ಜಬ್ಬಾರ್ ಅವರ ಮನವೊಲಿಸುವ ಪ್ರಯತ್ನ ಮಾಡುವುದಾಗಿ ಜಮೀರ್ ತಿಳಿಸಿದರು. "2023ರ ಚುನಾವಣೆಯಲ್ಲಿ ಎಸ್‌ಡಿಪಿಐ, ಜೆಡಿಎಸ್‌ ಹಾಗೂ ಪಕ್ಷೇತರರು ಸೇರಿ 13 ಮಂದಿ ಮುಸ್ಲಿಂ ಅಭ್ಯರ್ಥಿಗಳು ಕಣದಲ್ಲಿದ್ದರೂ, ಅವರೆಲ್ಲರೂ ಸೇರಿ 3,000 ಮತಗಳನ್ನೂ ಪಡೆದಿರಲಿಲ್ಲ. ಆದರೂ ಕಣದಲ್ಲಿರುವ ಮುಸ್ಲಿಂ ಅಭ್ಯರ್ಥಿಗಳ ಮನವೊಲಿಸುತ್ತೇವೆ. ದಾವಣಗೆರೆ ದಕ್ಷಿಣ ಕಾಂಗ್ರೆಸ್‌ನ ಭದ್ರಕೋಟೆಯಾಗಿದ್ದು, ಸಮರ್ಥ್ ಶಾಮನೂರು ಅವರ ಗೆಲುವು ನಿಶ್ಚಿತ" ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

ನಮ್ಮ ನಡುವೆ ಗೊಂದಲವಿಲ್ಲ; ಮಲ್ಲಿಕಾರ್ಜುನ್

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್, "ನಾನು ಹಾಗೂ ಜಮೀರ್ ಅಹ್ಮದ್ ಬಹಳ ಹಿಂದಿನಿಂದಲೂ ಆಪ್ತ ಸ್ನೇಹಿತರು. ನಾವಿಬ್ಬರೂ ಏಕವಚನದಲ್ಲೇ ಮಾತನಾಡಿಕೊಳ್ಳುವಷ್ಟು ಸಲುಗೆ ಹೊಂದಿದ್ದೇವೆ. ನಮ್ಮಿಬ್ಬರ ನಡುವೆ ಯಾವುದೇ ಗೊಂದಲಗಳಿಲ್ಲ" ಎಂದು ಸ್ಪಷ್ಟಪಡಿಸುವ ಮೂಲಕ ಎಲ್ಲಾ ವದಂತಿಗಳಿಗೆ ತೆರೆ ಎಳೆದರು.

Read More
Next Story