
Karnataka By-Election| ದಾವಣಗೆರೆ ದಕ್ಷಿಣ: ‘ಕೈ’ ಕೊಟ್ಟ ಅಲ್ಪಸಂಖ್ಯಾತರು? ಮರುಕಳಿಸಿದ 1983ರ ಇತಿಹಾಸ?
1983ರಲ್ಲಿ ದಾವಣಗೆರೆ ಕ್ಷೇತ್ರದಿಂದ ಕಾಂಗ್ರೆಸ್‌ನ ನಾಗಮ್ಮ ಕೇಶವಮೂರ್ತಿ ವಿರುದ್ಧ ಮುಸ್ಲಿಂ ಸಮುದಾಯ ಸಿಡಿದೆದ್ದಿತ್ತು. ಮುಸ್ಲಿಮರ ಸಿಟ್ಟಿನಿಂದ ಕಾಂಗ್ರೆಸ್ ಹೀನಾಯ ಸೋಲನುಭವಿಸಿತ್ತು.
ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರಕ್ಕೆ ಪ್ರತಿಷ್ಠೆಯ ಸಮರವಾಗಿ ಮಾರ್ಪಟ್ಟಿದೆ. ದಶಕಗಳಿಂದ ʼಕೈʼ ಪಾಳಯದ ಕಾಯಂ ಮತಬ್ಯಾಂಕ್ ಆಗುತ್ತಿದ್ದ ಮುಸ್ಲಿಂ ಸಮುದಾಯ ಇದೀಗ ಟಿಕೆಟ್ ವಂಚಿತವಾಗಿ ಪಕ್ಷದ ವಿರುದ್ಧವೇ ಬಂಡಾಯ ಸಾರಿದೆ.
ಇದು 1983ರಲ್ಲಿ ದಾವಣಗೆರೆ ಚುನಾವಣಾ ಇತಿಹಾಸದಲ್ಲಿ ನಡೆದ ಘಟನೆಯನ್ನು ಮರುಕಳಿಸುವುದೇ ಎಂಬ ಚಿಂತೆ ಕಾಂಗ್ರೆಸ್‌ಗೆ ಎದುರಾಗಿದೆ.
ಅಂದು ಕ್ಷೇತ್ರ ಪುನರ್ವಿಂಗಡಣೆಗಿಂತ ಮುಂಚಿನ ದಾವಣಗೆರೆ ಕ್ಷೇತ್ರದಿಂದ ಕಾಂಗ್ರೆಸ್‌ನ ನಾಗಮ್ಮ ಕೇಶವಮೂರ್ತಿ ವಿರುದ್ಧ ಮುಸ್ಲಿಂ ಸಮುದಾಯ ಸಿಡಿದೆದ್ದಿತ್ತು. ಆಗಲೂ ಮುಸ್ಲಿಂ ಬಾಹುಳ್ಯವಿದ್ದ ಕ್ಷೇತ್ರದಿಂದ ಮುಸ್ಲಿಮ್ ಅಭ್ಯರ್ಥಿಗೆ ಅವಕಾಶ ಕೊಡಬೇಕೆಂಬ ಒತ್ತಾಯವಿತ್ತು. ಆದರೆ, ಕಾಂಗ್ರೆಸ್ ನಾಗಮ್ಮ ಅವರನ್ನು ಆಯ್ಕೆ ಮಾಡಿದಾಗ ಮುಸ್ಲಿಂ ನಾಯಕರು ಬಂಡೆದ್ದು, ಅವರೆದುರು ಸ್ಪರ್ಧಿಸಿದ್ದರು.
ಒಟ್ಟು ಒಂಬತ್ತು ಅಭ್ಯರ್ಥಿಗಳಲ್ಲಿ ಮೂವರು ಮುಸ್ಲಿಮರಿದ್ದರು. ಮೊಹಮ್ಮದ್ ಇಕ್ಬಾಲ್ ಅವರು ಶೇ 23.67ರಷ್ಟು ಮತಗಳನ್ನು ಪಡೆದಿದ್ದರಿಂದ ಕಾಂಗ್ರೆಸ್ ಮೂರನೇ ಸ್ಥಾನಕ್ಕೆ ತೃಪ್ತಿ ಪಡಬೇಕಾಯಿತು. ಆ ಕಾರಣಕ್ಕಾಗಿ ಅಂದು ಸಿಪಿಐ (ಕಮ್ಯುನಿಸ್ಟ್ ಪಕ್ಷ) ಅನಾಯಾಸವಾಗಿ ಗೆಲುವು ಸಾಧಿಸಿತ್ತು. ಈಗಲೂ ಅಂತಹದ್ದೇ ಪರಿಸ್ಥಿತಿ ನಿರ್ಮಾಣವಾಗುವ ಆತಂಕ ಕಾಂಗ್ರೆಸ್‌ಗೆ ಎದುರಾಗಿದೆ..
ಕರ್ನಾಟಕದ ಇಂದಿರಾಗಾಂಧಿ ಎಂಬ ಖ್ಯಾತಿ ಪಡೆದಿದ್ದ ನಾಗಮ್ಮ ಕೇಶವಮೂರ್ತಿ
ಶಾಮನೂರು ಶಿವಶಂಕರಪ್ಪ 2023 ರ ಚುನಾವಣೆಯಲ್ಲಿ (ಕ್ಷೇತ್ರ ಮರುವಿಂಗಡಣೆ ಬಳಿಕ ದಾವಣಗೆರೆ ದಕ್ಷಿಣ ಕ್ಷೇತ್ರದಿಂದ) 84800 ಮತಗಳನ್ನು ಪಡೆದು 27888 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದರು. ಬಿಜೆಪಿ ಅಭ್ಯರ್ಥಿ ಎ.ಜಿ.ಅಜಯ್ ಕುಮಾರ್ ಸುಮಾರು 56 ಸಾವಿರ ಮತಗಳನ್ನು ಪಡೆದಿದ್ದರು. ಮತಗಳ ಲೆಕ್ಕಾಚಾರದಲ್ಲಿ ಈಗ ಕಾಂಗ್ರೆಸ್ ಗೆ 1983 ರ ಇತಿಹಾಸದ ಆತಂಕ ಶುರುವಾಗಿರುವುದಕ್ಕೆ ಕಾರಣ- ಮುಸ್ಲಿಂ ಮತಗಳು! ಒಂದು ವೇಳೆ ಮುಸ್ಲಿಂ ಸಮುದಾಯದ ಕನಿಷ್ಟ 30 ಸಾವಿರ ಮತಗಳು ಕಾಂಗ್ರೆಸ್ ಪಾಲಾಗದಿದ್ದರೆ ಚುನಾವಣಾ ಫಲಿತಾಂಶ ಕಾಂಗ್ರೆಸ್ ಮೇಲೆ ಪರಿಣಾಮ ಬೀರಲಿದೆ ಎನ್ನುವ ಆತಂಕ.
ಇದರ ಜತೆಗೆ ಶಾಮನೂರು ಶಿವಶಂಕರಪ್ಪ ಇದ್ದಾಗ ಕೊನೆಯ ಚುನಾವಣೆ ಎಂಬ ಅನುಕಂಪ ಎಂಬ ಭಾವನೆ ಮತದಾರರಲ್ಲಿತ್ತು. ಆದರೆ ಈಗ ಮುಸ್ಲಿಂನ ಇಬ್ಬರು ಪ್ರಮಖರು ಕಣದಲ್ಲಿರುವುದರಿಂದ ಏನಾಗಲಿದೆ ಎಂಬ ಆತಂಕ ಕಾಂಗ್ರೆಸ್ ನಲ್ಲಿದೆ. ಹಾಗಾಗಿ ಶಾಮನೂರು ಕುಟುಂಬ ಹಾಗೂ ಕಾಂಗ್ರೆಸ್ ಪಕ್ಷದ ಭದ್ರಕೋಟೆಯಂತಿದ್ದ ದಾವಣಗೆರೆ ದಕ್ಷಿಣ ಕ್ಷೇತ್ರವನ್ನು ಮತ್ತೆ ʼಕೈʼ ವಶ ಮಾಡಿಕೊಳ್ಳಲು ಇಡೀ ಸರ್ಕಾರವೇ ಬೆಣ್ಣೆ ನಗರಿಯಲ್ಲಿ ಮೊಕ್ಕಾಂ ಹೂಡಲು ತಯಾರಿ ನಡೆಸಿದೆ.
ವಿಫಲವಾದ ಸಿದ್ದರಾಮಯ್ಯ ಮಾಸ್ಟರ್ ಪ್ಲಾನ್!
ಬೆಂಗಳೂರಿನಲ್ಲಿ ಬುಧವಾರ ರಾತ್ರಿ ನಡೆದ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯಲ್ಲಿ ದಾವಣಗೆರೆ ದಕ್ಷಿಣ ಕ್ಷೇತ್ರದಲ್ಲಿ ಬಂಡಾಯ ತಣಿಸಲು ಸಿಎಂ ರೂಪಿಸಿದ ಮಾಸ್ಟರ್ ಪ್ಲಾನ್ ಕೂಡ ಗುರುವಾರ ವಿಫಲವಾಗಿದೆ. ನಾಮಪತ್ರ ಹಿಂಪಡೆಯಲು ಕೊನೆಯ ದಿನವಾಗಿದ್ದ ಇಂದು(ಮಾ.26) ಮುಸ್ಲಿಂ ಸಮುದಾಯದ ಬಂಡಾಯ ಅಭ್ಯರ್ಥಿ ಸಾದಿಕ್ ಪೈಲ್ವಾನ್ ಸೇರಿದಂತೆ ಯಾರೊಬ್ಬರನ್ನೂ ಮನವೊಲಿಸುವಲ್ಲಿ ರಾಜ್ಯ ನಾಯಕರು ವಿಫಲವಾಗಿದ್ದಾರೆ. ಆ ಮೂಲಕ ಬಂಡಾಯ ಅಭ್ಯರ್ಥಿ ಸೇರಿದಂತೆ ಒಟ್ಟು 14 ಮಂದಿ ಮುಸ್ಲಿಂ ಅಭ್ಯರ್ಥಿಗಳ ಸ್ಪರ್ಧೆ ನಿಶ್ಚಯವಾಗಿದ್ದು, ಮತ ವಿಭಜನೆ ಸಾಧ್ಯತೆಗಳು ನಿಚ್ಚಳವಾಗಿವೆ.
ಮುಸ್ಲಿಂ ನಾಯಕರನ್ನು ಮನವೊಲಿಸಲು ನಡೆಸಿದ ಸಿದ್ದರಾಮಯ್ಯ ಸಭೆ
ಶಾಸಕರಿಗೆ ಗ್ರಾಮ ಪಂಚಾಯ್ತಿ ಮಟ್ಟದಲ್ಲಿ ಹೊಣೆ
ದಾವಣಗೆರೆ ದಕ್ಷಿಣ ಕ್ಷೇತ್ರದಲ್ಲಿ ಅಲ್ಪಸಂಖ್ಯಾತ ಸಮುದಾಯ ಬಂಡಾಯದಿಂದ ಆತಂಕಗೊಂಡಿರುವ ಸಿಎಂ ಸಿದ್ದರಾಮಯ್ಯ ಅವರು ಪ್ರತಿ ಪಂಚಾಯ್ತಿಗೆ ಮೂವರು ಶಾಸಕರಿಗೆ ಹೊಣೆ ನಿಗದಪಡಿಸಿದ್ದಾರೆ.
ಪಂಚಾಯ್ತಿ ಮಟ್ಟದಲ್ಲಿ ಠಿಕಾಣಿ ಹೂಡಿ ಮತದಾರರನ್ನು ಸೆಳೆಯಬೇಕು. ಜವಾಬ್ದಾರಿ ನೀಡಿದ ಶಾಸಕರು ಚುನಾವಣೆ ಮುಗಿಯುವವರೆಗೂ ಕ್ಷೇತ್ರ ಬಿಟ್ಟು ಬಾರದಂತೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ. ಯಾವುದೇ ಕಾರಣಕ್ಕೂ ಉಪಚುನಾವಣೆಯಲ್ಲಿ ಅಲ್ಪಸಂಖ್ಯಾತ ಸಮುದಾಯದ ಮತಗಳು ಚದುರದಂತೆ ನೋಡಿಕೊಳ್ಳಬೇಕು.ಮುಸ್ಲಿಂ ಮತಗಳು ತಟಸ್ಥವಾಗದೇ ಪಕ್ಷದ ಅಭ್ಯರ್ಥಿಗಳಿಗೆ ಬರುವಂತೆ ನೋಡಿಕೊಳ್ಳಬೇಕೆಂದು ಸಿಎಂ ಸೂಚಿಸಿದ್ದಾರೆ.
ಫಲ ಕೊಡದ ಸಂಧಾನ; ಗೋಬ್ಯಾಕ್ ಅಭಿಯಾನ
ಬಂಡಾಯ ಅಭ್ಯರ್ಥಿ ಸಾದಿಕ್ ಪೈಲ್ವಾನ್ ಅವರನ್ನು ಮನವೊಲಿಸಿ ನಾಮಪತ್ರ ವಾಪಸ್ ಪಡೆಯುವಂತೆ ರಾಜ್ಯ ಕಾಂಗ್ರೆಸ್ ನಾಯಕರು ಗುರುವಾರ ನಡೆಸಿದ ಸಂಧಾನ ಮಾತುಕತೆ ವಿಫಲವಾಗಿದೆ.
ಸಂಧಾನಕ್ಕೆ ಆಗಮಿಸಿದ ಕಾಂಗ್ರೆಸ್ ನಾಯಕರಾದ ರಿಜ್ವಾನ್ ಅರ್ಷದ್ ಹಾಗೂ ಸಲೀಂ ಅಹಮದ್ ವಿರುದ್ಧ ಪೈಲ್ವಾನ್ ಬೆಂಬಲಿಗರು ಹಾಗೂ ಮುಸ್ಲಿಂ ಕಾರ್ಯಕರ್ತರು ಗೋಬ್ಯಾಕ್ ಎಂದು ಘೋಷಣೆ ಕೂಗಿದರು. ಯಾವುದೇ ಕಾರಣಕ್ಕೂ ಸ್ಪರ್ಧೆಯಿಂದ ಹಿಂದೆ ಸರಿಯುವ ಮಾತೇ ಇಲ್ಲ ಎಂದು ಸಾದಿಕ್ ಪೈಲ್ವಾನ್ ಕಡ್ಡಿಮುರಿದಂತೆ ಹೇಳಿದ ಬಳಿಕ ಸಂಧಾನಕ್ಕೆ ತೆರಳಿದ್ದ ನಾಯಕರು ಬರಿಗೈಲಿ ವಾಪಸಾದರು.
ಕಾಂಗ್ರೆಸ್ ಅಭ್ಯರ್ಥಿಗೆ ಹೆಚ್ಚಿದ ಸಂಕಷ್ಟ
ದಾವಣಗೆರೆ ದಕ್ಷಿಣ ಕ್ಷೇತ್ರದಲ್ಲಿ ಒಟ್ಟು 2.13 ಲಕ್ಷ ಮತದಾರರಿದ್ದಾರೆ. ಇವರಲ್ಲಿ ಮುಸ್ಲಿಂ ಸಮುದಾಯದ ಮತಗಳ ಪ್ರಮಾಣ 88 ಸಾವಿರ ಇದ್ದರೆ, ಲಿಂಗಾಯತರ ಮತಗಳು ಅಂದಾಜು 25 ಸಾವಿರ, ಕುರುವ ಮತಗಳು 20 ಸಾವಿರ ಇವೆ. ಚುನಾವಣೆಯಲ್ಲಿ ಮುಸ್ಲಿಂ ಮತಗಳೇ ಬಹುತೇಕ ನಿರ್ಣಾಯಕ ಮತಗಳಾಗಿವೆ. ಉಪಚುನಾವಣೆ ಟಿಕೆಟ್ ಕೈ ತಪ್ಪಿದ್ದರಿಂದ ಅಸಮಾಧಾನಗೊಂಡಿರುವ ಮುಸ್ಲಿಂ ಮುಖಂಡರು ಎಸ್‌ಡಿಪಿಐ ಅಭ್ಯರ್ಥಿ ಸೇರಿ 21ಮಂದಿಯನ್ನು ಕಣಕ್ಕಿಳಿಸಿದ್ದರು. ಈ ಪೈಕಿ 14 ಅಭ್ಯರ್ಥಿಗಳ ನಾಮಪತ್ರ ಸಿಂಧುವಾಗಿದ್ದು, ಸ್ಪರ್ಧೆ ಖಚಿತವಾಗಿದೆ. ಇದರಿಂದ ಮುಸ್ಲಿಂ ಮತಗಳು ವಿಭಜನೆಯಾಗಲಿದ್ದು, ಕಾಂಗ್ರೆಸ್ ಅಭ್ಯರ್ಥಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ.
ಮುಸ್ಲಿಂ ಸಮುದಾಯದ ಮುಖಂಡರ ಮನವೊಲಿಕೆ ಜವಾಬ್ದಾರಿಯನ್ನು ಸಚಿವ ಜಮೀರ್ ಅಹಮದ್ ಖಾನ್ ಅವರಿಗೆ ನೀಡಿದ್ದರೂ ಕೊನೆಯ ಕ್ಷಣದಲ್ಲಿ ಜಮೀರ್ ಬದಲಿಗೆ ಸಲೀಂ ಅಹಮದ್, ರಿಜ್ವಾನ್ ಅರ್ಷದ್ ಅವರನ್ನು ಕಳುಹಿಸಲಾಗಿದೆ. ಇನ್ನು ಮೊದಲಿನಿಂದಲೂ ಸಮುದಾಯದವರಿಗೇ ಟಿಕೆಟ್ ನೀಡಬೇಕೆಂದು ಪಟ್ಟು ಹಿಡಿದಿದ್ದ ಜಮೀರ್ ಅಹಮದ್ ಬಂಡಾಯ ಶಮನದ ಬಗ್ಗೆ ನಿರಾಸಕ್ತಿ ಹೊಂದಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಪಕ್ಷೇತರ ಅಭ್ಯರ್ಥಿ ಸಾದಿಕ್ ಪೈಲ್ವಾನ್, ಎಸ್‌ಡಿಪಿಐ ಅಭ್ಯರ್ಥಿ ಅಫ್ಸರ್ ಕೂಡ್ಲಿಪೇಟೆ ಹಾಗೂ ಇತರೆ ಮುಸ್ಲಿಂ ಅಭ್ಯರ್ಥಿಗಳಿಗೆ ಧರ್ಮಗುರುಗಳು ಸಾಥ್ ನೀಡಿರುವುದರಿಂದ ಕಾಂಗ್ರೆಸ್ ಅಭ್ಯರ್ಥಿ ಸಮರ್ಥ್ ಶಾಮನೂರುಗೆ ಹಿನ್ನೆಡೆಯಾಗುವ ಸಾಧ್ಯತೆ ಇದೆ.
ಟಿಕೆಟ್ ನೀಡದ್ದರಿಂದ ಅಸಮಾಧಾನ ಸ್ಫೋಟ
ಕ್ಷೇತ್ರದಲ್ಲಿ ಅತಿ ಹೆಚ್ಚು ಮತದಾರರಿರುವ ಮುಸ್ಲಿಮರು ಈ ಬಾರಿ ತಮ್ಮ ಸಮುದಾಯದ ನಾಯಕರಿಗೆ ಟಿಕೆಟ್ ನೀಡಬೇಕೆಂದು ಪಟ್ಟು ಹಿಡಿದಿದ್ದರು. ಕಳೆದ ಚುನಾವಣೆಯಲ್ಲಿ ಸ್ವತಃ ಶಾಮನೂರು ಶಿವಶಂಕರಪ್ಪ ಅವರೇ ಟಿಕೆಟ್ ಭರವಸೆ ನೀಡಿದ್ದರು. ಈಗ ಅವರ ನಿಧನದ ನಂತರ ತೆರವಾಗಿರುವ ಸ್ಥಾನಕ್ಕೆ ಮುಸ್ಲಿಂ ನಾಯಕರಿಗೆ ಟಿಕೆಟ್ ನೀಡಬೇಕೆಂಬ ಬೇಡಿಕೆ ಮುಂದಿಟ್ಟಿದ್ದರು. ಆದರೆ, ಕಾಂಗ್ರೆಸ್ ಹೈಕಮಾಂಡ್ ಅನುಕಂಪದ ಅಲೆಯ ಮೇಲೆ ಗೆಲುವು ಸಾಧ್ಯವಾಗಲಿದೆ ಎಂದು ಅರಿತು ಶಾಮನೂರು ಕುಟುಂಬದ ಸಮರ್ಥ್ ಅವರಿಗೆ ಮಣೆ ಹಾಕಿತ್ತು. ಇದು ಮುಸ್ಲಿಂ ಸಮುದಾಯದ ಮುಖಂಡರ ಕೆಂಗಣ್ಣಿಗೆ ಗುರಿಯಾಗಿತ್ತು. ಮುಸ್ಲಿಂ ಸಮುದಾಯವು ಕಾಂಗ್ರೆಸ್ ಪಕ್ಷಕ್ಕೆ ಕೇವಲ ಮತಬ್ಯಾಂಕ್ ಆಗಿರಲು ಇಷ್ಟಪಡಲ್ಲ, ಅಧಿಕಾರದಲ್ಲೂ ಪಾಲು ಬೇಕು ಎಂದು ಆಗ್ರಹಿಸಿ ಇದೀಗ ಬಂಡಾಯ ಸಾರಲಾಗಿದೆ.
ಕಾಂಗ್ರೆಸ್‌ಗೆ ಡಬಲ್ ಆತಂಕ
ಕಾಂಗ್ರೆಸ್ ಪಕ್ಷದ ವಿರುದ್ಧ ಒಂದೆಡೆ ಮುಸ್ಲಿಂ ಸಮುದಾಯ ಬಂಡಾಯ ಸಾರಿದರೆ, ಮತ್ತೊಂದೆಡೆ ಒಳ ಮೀಸಲಾತಿ ಜಾರಿಗಾಗಿ ಹೋರಾಟ ನಡೆಸುತ್ತಿರುವ ಪರಿಶಿಷ್ಟ ಜಾತಿ ಎಡಗೈ ಸಮುದಾಯ ಕೂಡ ಕಾಂಗ್ರೆಸ್‌ಗೆ ಚುನಾವಣೆಯಲ್ಲಿ ಪಾಠ ಕಲಿಸಲು ನಿರ್ಧರಿಸಿದೆ.
ಬಾಗಲಕೋಟೆ ಹಾಗೂ ದಾವಣಗೆರೆ ದಕ್ಷಿಣ ಕ್ಷೇತ್ರದಲ್ಲಿ ʼಕೈʼ ಅಭ್ಯರ್ಥಿಗಳ ವಿರುದ್ಧವಾಗಿ ಪ್ರಚಾರ ನಡೆಸಲು ಈಗಾಗಲೇ ಒಳ ಮೀಸಲಾತಿ ಹೋರಾಟ ಸಮಿತಿ ನಿರ್ಣಯ ಕೈಗೊಂಡಿದೆ. ದಾವಣಗೆರೆ ದಕ್ಷಿಣ ಕ್ಷೇತ್ರದಲ್ಲಿ ಪರಿಶಿಷ್ಟ ಜಾತಿಯ ಅಂದಾಜು 29,740 ಮತಗಳಿವೆ. ಇಲ್ಲೂ ಕೂಡ ಮತ ವಿಭಜನೆಯಾಗುವ ಆತಂಕ ಎದುರಾಗಿದ್ದು, ಇದು ರಾಜ್ಯ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಿದೆ.

