ಸಿದ್ದರಾಮಯ್ಯನವರೇ ನಿಮ್ಮನ್ನು ಸಾಲದ ರಾಮಯ್ಯ ಎನ್ನಬಾರದೇಕೆ: ಸಿ.ಟಿ. ರವಿ
x

ಸಿಎಂ ಸಿದ್ದರಾಮಯ್ಯ ಹಾಗೂ ವಿಧಾನಪರಿಷತ್‌ ಸದಸ್ಯ ಸಿ.ಟಿ.ರವಿ

ಸಿದ್ದರಾಮಯ್ಯನವರೇ ನಿಮ್ಮನ್ನು 'ಸಾಲದ ರಾಮಯ್ಯ' ಎನ್ನಬಾರದೇಕೆ: ಸಿ.ಟಿ. ರವಿ

ಸಿಎಂ ಸಿದ್ದರಾಮಯ್ಯ ಮತ್ತು ಸಚಿವರು ತಾವು ಮಾಡಿದ ಅಭಿವೃದ್ಧಿ ಕಾರ್ಯವನ್ನು ಮತದಾರರ ಮುಂದೆ ಬಹಿರಂಗಡಿಸಲಿ. ಉಪ ಚುನಾವಣೆ ಬರದೇ ಇದ್ದರೆ ಬಾಗಲಕೋಟೆಯಲ್ಲಿ ಮೆಡಿಕಲ್ ಕಾಲೇಜಿಗೆ ಅಡಿಗಲ್ಲೂ ಬೀಳುತ್ತಿರಲಿಲ್ಲ ಎಂದು ಸಿ.ಟಿ. ರವಿ ತಿಳಿಸಿದರು.


Click the Play button to hear this message in audio format

ರಾಜ್ಯದ ಒಟ್ಟು ಸಾಲ 8. 32 ಲಕ್ಷ ಕೋಟಿ ರೂ.ಗೆ ತಲುಪಿದ್ದು, ಸಿಎಂ ಸಿದ್ದರಾಮಯ್ಯ ಒಬ್ಬರೇ 5 ಲಕ್ಷ ಕೋಟಿ ರೂ. ಗೂ ಹೆಚ್ಚು ಸಾಲ ಮಾಡಿದ್ದು, ನಿಮ್ಮನ್ನು "ಸಾಲದ ರಾಮಯ್ಯ" ಎಂದು ಕರೆಯುವುದು ಸೂಕ್ತವಲ್ಲವೇ ಎಂದು ವಿಧಾನಪರಿಷತ್‌ ಸದಸ್ಯ ಸಿ.ಟಿ. ರವಿ ಪ್ರಶ್ನಿಸಿದ್ದಾರೆ.

ಶನಿವಾರ(ಏ.4) ಬಾಗಲಕೋಟೆಯಲ್ಲಿ ಮಾತನಾಡಿದ ಅವರು, 2023- 24ರಲ್ಲಿ 90,280 ಕೋಟಿ ರೂ. 2024- 25ರಲ್ಲಿ 1.7 ಲಕ್ಷ ಕೋಟಿ ರೂ. 2025- 26ರಲ್ಲಿ 1. 16 ಲಕ್ಷ ರೂಪಾಯಿ, 2026 - 27ರಲ್ಲಿ 1. 32 ಲಕ್ಷ ಕೋಟಿ ರೂ. ಸಾಲ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.

ಒಟ್ಟು 8 ವರ್ಷದಲ್ಲಿ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿ ಮಾಡಿದ ಸಾಲ ಶೇ. 60ರಷ್ಟಿದೆ. ಕಳೆದ 30 ವರ್ಷಗಳಲ್ಲಿ ಜೆ.ಎಚ್. ಪಟೇಲ್, ಎಸ್.ಎಂ.ಕೃಷ್ಣ, ಧರ್ಮಸಿಂಗ್, ಎಚ್.ಡಿ.ಕುಮಾರಸ್ವಾಮಿ, ಬಿ.ಎಸ್‌. ಯಡಿಯೂರಪ್ಪ, ಡಿ.ವಿ. ಸದಾನಂದ ಗೌಡ, ಜಗದೀಶ ಶೆಟ್ಟರ್, ಬಸವರಾಜ ಬೊಮ್ಮಾಯಿ ಹೀಗೆ ಎಷ್ಟು ಜನ ಮುಖ್ಯಮಂತ್ರಿಗಳಿದ್ದರೋ ಅವರೆಲ್ಲ ಮಾಡಿದ ಸಾಲ ಶೇ. 40 ಆಗಿತ್ತು. ಆದರೆ, ಸಿಎಂ ಸಿದ್ದರಾಮಯ್ಯ ಅವರೊಬ್ಬರೇ ಮಾಡಿದ ಸಾಲ ಶೇ. 60ರಷ್ಟಿದೆ ಎಂದರು.

ಅಬಕಾರಿ ಹಗರಣ 6 ಸಾವಿರ ಕೋಟಿ ರೂ.

ರಾಜ್ಯದಲ್ಲಿ ಭ್ರಷ್ಟಾಚಾರ ಮತ್ತು ಆಡಳಿತ ವೈಫಲ್ಯ ತಾಂಡವವಾಡುತ್ತಿದೆ. ಬಾಗಲಕೋಟೆಯ ಆರ್.ಬಿ. ತಿಮ್ಮಾಪುರ ಅವರಿಗೆ ಸಂಬಂಧಿಸಿದ ಎನ್ನಲಾದ 6 ಸಾವಿರ ಕೋಟಿ ರೂಪಾಯಿಯ ಅಬಕಾರಿ ಹಗರಣ, ಮುಡಾ ಹಗರಣ ಹಾಗೂ ಡ್ರಗ್ಸ್ ಮಾಫಿಯಾಗಳಿಂದಾಗಿ ರಾಜ್ಯವು ದೇಶಾದ್ಯಂತ ಸುದ್ದಿಯಲ್ಲಿದೆ. ಇದು ಹೆಮ್ಮೆಯ ವಿಷಯವೇ? ರೈತರ ಆತ್ಮಹತ್ಯೆಯಲ್ಲಿ ಇಂದು ಕರ್ನಾಟಕ ಎರಡನೇ ಸ್ಥಾನದಲ್ಲಿದೆ. ಕೇವಲ ರೈತರಷ್ಟೇ ಅಲ್ಲ, ಸರ್ಕಾರದ ಕಿರುಕುಳಕ್ಕೆ ಬೇಸತ್ತು ಪ್ರಾಮಾಣಿಕ ಅಧಿಕಾರಿಗಳು ಮತ್ತು ಸರ್ಕಾರಿ ನೌಕರರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಶಾಸಕರ ಭ್ರಷ್ಟಾಚಾರಕ್ಕೆ ಬೇಸತ್ತು ಸಬ್ ಇನ್ಸ್‌ಪೆಕ್ಟರ್ ಪ್ರಾಣ ಕಳೆದುಕೊಂಡರೆ, ಸಂಬಳವಿಲ್ಲದೆ ನೊಂದ ವಾಟರ್‌ಮನ್ ಡೆತ್‌ನೋಟ್ ಬರೆದಿಟ್ಟು ಸಾವನ್ನಪ್ಪಿದ್ದಾರೆ. ಇನ್ನೊಂದೆಡೆ, ಸರ್ಕಾರಿ ಆಸ್ಪತ್ರೆಗಳಲ್ಲಿ ಔಷಧಿಗಳ ಕೊರತೆಯಿಂದಾಗಿ ಬಾಣಂತಿಯರು ಮತ್ತು ಹಸುಗೂಸುಗಳ ಸರಣಿ ಸಾವುಗಳು ಸಂಭವಿಸುತ್ತಿವೆ. ಈ ಸರ್ಕಾರ ಜನಸಾಮಾನ್ಯರ ಜೀವದೊಂದಿಗೆ ಚೆಲ್ಲಾಟವಾಡುತ್ತಿದೆ."

ಭ್ರಷ್ಟಾಚಾರ, ಬೆಲೆ ಏರಿಕೆ

ಕಾಂಗ್ರೆಸ್ ಸರ್ಕಾರದ ಮಿತಿಮೀರಿದ ಭ್ರಷ್ಟಾಚಾರ ಮತ್ತು ಬೆಲೆ ಏರಿಕೆಯಿಂದಾಗಿ ಇಂದು ಸಾರ್ವಜನಿಕರು ತತ್ತರಿಸಿ ಹೋಗಿದ್ದಾರೆ. ಆಡಳಿತ ವೈಫಲ್ಯ ಎಷ್ಟು ತಲುಪಿದೆ ಎಂದರೆ, ಐಪಿಎಲ್ ಪಂದ್ಯದಲ್ಲಿ ಆರ್‌ಸಿಬಿ ತಂಡದ ವಿಜಯೋತ್ಸವವನ್ನು ತಾವೇ ಗೆದ್ದವರಂತೆ ಆಚರಿಸಲು ಹೋದ ಇವರ ಬೇಜವಾಬ್ದಾರಿಯಿಂದಾಗಿ ಕಾಲ್ತುಳಿತ ಸಂಭವಿಸಿತು. ಈ ದುರಂತದಲ್ಲಿ 11 ಅಮಾಯಕರು ಪ್ರಾಣ ಕಳೆದುಕೊಂಡಿದ್ದು, ಈ ಸಾವುಗಳಿಗೆ ನೇರವಾಗಿ ಸರ್ಕಾರವೇ ಹೊಣೆ ಎಂದು ಅವರು ಗಂಭೀರವಾಗಿ ಆರೋಪಿಸಿದರು.

ಬಾಗಲಕೋಟೆಗೆ ಸರ್ಕಾರದ ಕೊಡುಗೆ ಏನು ?

ಬಾಗಲಕೋಟೆ ಜಿಲ್ಲೆಗೆ ಈ ಸರ್ಕಾರದ ಕೊಡುಗೆಯಾದರೂ ಏನು? ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮತ್ತು ಅವರ ಸಚಿವರು ತಾವು ಮಾಡಿದ ಅಭಿವೃದ್ಧಿ ಕಾರ್ಯಗಳ ಪಟ್ಟಿಯನ್ನು ಮತದಾರರ ಮುಂದೆ ಧೈರ್ಯವಿದ್ದರೆ ಬಹಿರಂಗಪಡಿಸಲಿ. ಈ ಉಪಚುನಾವಣೆ ಎಂಬುದು ಬರದೇ ಇದ್ದಿದ್ದರೆ, ಇಲ್ಲಿನ ಮೆಡಿಕಲ್ ಕಾಲೇಜಿಗೆ ಅಡಿಗಲ್ಲು ಕೂಡ ಬೀಳುತ್ತಿರಲಿಲ್ಲ. ನೀವು 2014ರ ಚುನಾವಣೆಯಲ್ಲೇ ಬಾಗಲಕೋಟೆಗೆ ಮೆಡಿಕಲ್ ಕಾಲೇಜು ಮಂಜೂರು ಮಾಡುವುದಾಗಿ ಭಾಷಣ ಬಿಗಿದು ಹೋಗಿದ್ದೀರಿ. ಆದರೆ, ದಶಕದ ನಂತರ ಈಗ ಕೇವಲ ಶಂಕುಸ್ಥಾಪನೆ ಮಾಡುವ ಮೂಲಕ ಜನರನ್ನು ಮರುಳು ಮಾಡುತ್ತಿದ್ದೀರಿ ಎಂದು ಅವರು ವ್ಯಂಗ್ಯವಾಡಿದರು.

Read More
Next Story