
ದಾವಣಗೆರೆ, ಬಾಗಲಕೋಟೆ ಉಪಚುನಾವಣೆ: ಕಾಂಗ್ರೆಸ್ ಟಿಕೆಟ್ ಕಗ್ಗಂಟು, ಇಂದು ಸುರ್ಜೇವಾಲ ನೇತೃತ್ವದಲ್ಲಿ ಸಭೆ
ನಾಮಪತ್ರ ಸಲ್ಲಿಕೆಗೆ ಮುಂಬರುವ ಮಂಗಳವಾರ ಕಡೆಯ ದಿನವಾಗಿರುವುದರಿಂದ, ಗುರುವಾರದ ಸಭೆಯಲ್ಲೇ 2 ಕ್ಷೇತ್ರಗಳ ಅಭ್ಯರ್ಥಿಗಳ ಹೆಸರನ್ನು ಅಂತಿಮಗೊಳಿಸುವ ಅನಿವಾರ್ಯತೆ ಪಕ್ಷಕ್ಕಿದೆ.
ದಾವಣಗೆರೆ ಮತ್ತು ಬಾಗಲಕೋಟೆ ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆ ಸಮೀಪಿಸುತ್ತಿರುವಂತೆಯೇ ಆಡಳಿತರೂಢ ಕಾಂಗ್ರೆಸ್ ಪಕ್ಷದಲ್ಲಿ ಟಿಕೆಟ್ ಹಂಚಿಕೆ ಬಿಕ್ಕಟ್ಟು ತೀವ್ರ ಸ್ವರೂಪ ಪಡೆದುಕೊಂಡಿದೆ. ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪ ಹಾಗೂ ದಿವಂಗತ ಎಚ್. ವೈ. ಮೇಟಿ ಅವರ ಕ್ಷೇತ್ರಗಳಲ್ಲಿ ಅಭ್ಯರ್ಥಿಗಳ ಆಯ್ಕೆ ಕಗ್ಗಂಟಾಗಿ ಪರಿಣಮಿಸಿದ್ದು, ಈ ಗೊಂದಲಗಳಿಗೆ ತೆರೆ ಎಳೆಯಲು ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ನೇತೃತ್ವದಲ್ಲಿ ಗುರುವಾರ ಮಹತ್ವದ ಸಭೆ ನಡೆಯಲಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್ ಸೇರಿದಂತೆ ಪಕ್ಷದ ಪ್ರಮುಖ ನಾಯಕರು ಈ ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ.
ನಾಮಪತ್ರ ಸಲ್ಲಿಕೆಗೆ ಮುಂಬರುವ ಮಂಗಳವಾರ ಕಡೆಯ ದಿನವಾಗಿರುವುದರಿಂದ, ಗುರುವಾರದ ಸಭೆಯಲ್ಲೇ 2 ಕ್ಷೇತ್ರಗಳ ಅಭ್ಯರ್ಥಿಗಳ ಹೆಸರನ್ನು ಅಂತಿಮಗೊಳಿಸುವ ಅನಿವಾರ್ಯತೆ ಪಕ್ಷಕ್ಕಿದೆ. ಸಭೆಯಲ್ಲಿ ದಾವಣಗೆರೆ ಹಾಗೂ ಬಾಗಲಕೋಟೆ ಕ್ಷೇತ್ರಗಳ ಪ್ರಸ್ತುತ ರಾಜಕೀಯ ಪರಿಸ್ಥಿತಿ ಮತ್ತು ಬಂಡಾಯದ ಸಾಧ್ಯತೆಗಳ ಕುರಿತು ವಿಸ್ತೃತವಾಗಿ ಚರ್ಚೆ ನಡೆಸಲಾಗುವುದು. ಎಲ್ಲಾ ಆಯಾಮಗಳನ್ನು ಪರಿಶೀಲಿಸಿದ ಬಳಿಕ ಒಮ್ಮತದ ಅಭ್ಯರ್ಥಿಗಳನ್ನು ಅಂತಿಮಗೊಳಿಸಿ, ಆ ಹೆಸರುಗಳನ್ನು ಪಕ್ಷದ ಹೈಕಮಾಂಡ್ ಅನುಮೋದನೆಗೆ ರವಾನಿಸಲು ರಾಜ್ಯ ನಾಯಕರು ನಿರ್ಧರಿಸಿದ್ದಾರೆ.
ದಾವಣಗೆರೆಯಲ್ಲಿ ಅಲ್ಪಸಂಖ್ಯಾತರ ಪಟ್ಟು
ದಾವಣಗೆರೆ ಕ್ಷೇತ್ರದಲ್ಲಿ ಶಾಮನೂರು ಶಿವಶಂಕರಪ್ಪ ಅವರ ಮೊಮ್ಮಗ ಸಮರ್ಥ್ ಅವರು ಟಿಕೆಟ್ ಪಡೆಯಲು ಪ್ರಬಲ ಆಕಾಂಕ್ಷಿಯಾಗಿದ್ದಾರೆ. ಆದರೆ, ಇದಕ್ಕೆ ಪ್ರತಿಯಾಗಿ ಅಲ್ಪಸಂಖ್ಯಾತ ಮತ್ತು ಅಹಿಂದ ವರ್ಗದ ಮುಖಂಡರು ಹಾಗೂ ಯುವ ಕಾರ್ಯಕರ್ತರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ದಾವಣಗೆರೆಯಲ್ಲಿ ಅಲ್ಪಸಂಖ್ಯಾತರು ಕಾಂಗ್ರೆಸ್ ಪಕ್ಷದ ಬೆನ್ನೆಲುಬಾಗಿ ನಿಂತಿದ್ದು, ಪ್ರತಿ ಬಾರಿಯೂ ಕೇವಲ ಭರವಸೆಗಳನ್ನು ನೀಡಿ ಕೈಬಿಡಲಾಗುತ್ತಿದೆ ಎಂಬ ಅಸಮಾಧಾನ ಭುಗಿಲೆದ್ದಿದೆ. ಈ ಬಾರಿ ಅಲ್ಪಸಂಖ್ಯಾತ ಅಥವಾ ಅಹಿಂದ ವರ್ಗದ ಅಭ್ಯರ್ಥಿಗೆ ಕಡ್ಡಾಯವಾಗಿ ಅವಕಾಶ ನೀಡಲೇಬೇಕು ಎಂದು ಪಟ್ಟು ಹಿಡಿದಿರುವುದು ನಾಯಕರಿಗೆ ದೊಡ್ಡ ತಲೆನೋವಾಗಿದೆ.
ಮೇಟಿ ಕುಟುಂಬದಲ್ಲಿ ಒಗ್ಗಟ್ಟಿನ ಕೊರತೆ
ಇತ್ತ ಬಾಗಲಕೋಟೆಯಲ್ಲಿ ದಿವಂಗತ ಎಚ್. ವೈ. ಮೇಟಿ ಅವರ ಕುಟುಂಬದಲ್ಲಿನ ಆಂತರಿಕ ಭಿನ್ನಾಭಿಪ್ರಾಯಗಳು ಕಾಂಗ್ರೆಸ್ ನಾಯಕರನ್ನು ಇಕ್ಕಟ್ಟಿಗೆ ಸಿಲುಕಿಸಿವೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ಖುದ್ದಾಗಿ ಬೆಂಗಳೂರಿನಲ್ಲಿ ಸಭೆ ನಡೆಸಿ, ಕುಟುಂಬದಲ್ಲಿ ಒಮ್ಮತ ಮೂಡಿಸುವಂತೆ ಸೂಚನೆ ನೀಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಮೇಟಿ ಅವರ ಪುತ್ರರಾದ ಮಲ್ಲಿಕಾರ್ಜುನ ಮೇಟಿ ಮತ್ತು ಉಮೇಶ್ ಮೇಟಿ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿದೆ. ತಾವಿಬ್ಬರೂ ಒಗ್ಗಟ್ಟಿನಿಂದ ಕೆಲಸ ಮಾಡುವುದಾಗಿ ಸಹೋದರರು ಹೇಳಿಕೊಂಡಿದ್ದರೂ, ಕಿರಿಯ ಪುತ್ರಿ ಮಹಾದೇವಿ ಮೇಟಿ ಅವರು ಈ ನಿರ್ಧಾರವನ್ನು ತೀವ್ರವಾಗಿ ವಿರೋಧಿಸಿ ಬಂಡಾಯದ ಮುನ್ಸೂಚನೆ ನೀಡಿದ್ದಾರೆ. ಮತ್ತೊಬ್ಬ ಪುತ್ರಿ ಬಾಯಕ್ಕ ಮೇಟಿ ಪಕ್ಷದ ಆಯ್ಕೆಗೆ ಬದ್ಧವಾಗಿರುವುದಾಗಿ ತಿಳಿಸಿದ್ದರೂ, ಕುಟುಂಬದ ಈ ಒಳಜಗಳವು ಉಪಚುನಾವಣೆಯಲ್ಲಿ ಪಕ್ಷದ ಭವಿಷ್ಯಕ್ಕೆ ಅಡ್ಡಿಯಾಗುವ ಆತಂಕವನ್ನು ಸೃಷ್ಟಿಸಿದೆ.

