
ಸಿಎಂಗೆ ಅನುದಾನ’ದ ಆತಂಕ: ‘100 ಕೋಟಿ’ ಬೇಡಿಕೆ ಇಟ್ಟ ಶಾಸಕರು!
ಕೇವಲ ಗ್ಯಾರಂಟಿ ನಂಬಿಕೊಂಡು ಜನರ ಬಳಿಗೆ ಹೋದರೆ ಪ್ರಯೋಜನ ಇಲ್ಲ. ಜನರು ಅಭಿವೃದ್ಧಿಯನ್ನೂ ಚುನಾವಣಾ ವಿಚಾರವಾಗಿ ಪರಿಗಣಿಸಿದ್ದರಿಂದ ಅನುದಾನ ಅಗತ್ಯ ಎಂದು ಶಾಸಕರು ಹೇಳಿದ್ದಾರೆ.
ಗ್ಯಾರಂಟಿ ಯೋಜನೆಗಳ ಅನುಷ್ಠಾನದ ಹಿನ್ನೆಲೆಯಲ್ಲಿ ಆರ್ಥಿಕವಾಗಿ ಸಮತೋಲನ ಕಾಯ್ದುಕೊಳ್ಳಲು ಶತಪ್ರಯತ್ನ ಮಾಡುತ್ತಿರುವ ಸಿಎಂದ ಸಿದ್ದರಾಮಯ್ಯ ಅವರಿಗೆ, ಇದೀಗ ಸ್ವಪಕ್ಷೀಯ ಶಾಸಕರಿಂದಲೇ ಹೊಸದೊಂದು ತಲೆನೋವು ಎದುರಾಗಿದೆ. ಮುಂಬರುವ ಸ್ಥಳೀಯ ಸಂಸ್ಥೆಗಳ ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು, ಕ್ಷೇತ್ರಗಳ ಅಭಿವೃದ್ಧಿಗೆ ತಲಾ 100 ಕೋಟಿ ರೂಪಾಯಿ ಅನುದಾನ ನೀಡುವಂತೆ ಕೈ ಶಧಾಸಕರು ಸಿಎಂ ಮುಂದೆ ಪಟ್ಟು ಹಿಡಿದಿದ್ದಾರೆ.
ಇತ್ತೀಚೆಗೆ ಬೆಳಗಾವಿಯಲ್ಲಿ ನಡೆದ ಅಧಿವೇಶನ ಹಾಗೂ ಬೆಂಗಳೂರಿನಲ್ಲಿ ನಡೆದ ಶಾಸಕಾಂಗ ಸಭೆಗಳ ಸಂದರ್ಭದಲ್ಲಿ, ಆಡಳಿತ ಪಕ್ಷದ ಬಹುತೇಕ ಶಾಸಕರು ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ಈ ಬೃಹತ್ ಮೊತ್ತದ ಅನುದಾನ ವಿತರಣೆ ಮಾಡುವಂತೆ ಬೇಡಿಕೆ ಇಟ್ಟಿದ್ದಾರೆ.
ಅಭಿವೃದ್ಧಿಯೂ ಬೇಕು
ರಾಜ್ಯದಲ್ಲಿ ಶೀಘ್ರದಲ್ಲೇ ಸ್ಥಳೀಯ ಸಂಸ್ಥೆಗಳ ಚುನಾವಣೆ ಘೋಷಣೆಯಾಗುವ ಸಾಧ್ಯತೆಗಳಿವೆ. ಹೀಗಾಗಿ ಶಾಸಕರಿಗೆ ಸ್ಥಳೀಯ ಮಟ್ಟದಲ್ಲಿ ಎದುರಾಗುವ ಅಭಿವೃದ್ಧಿ ಕಾರ್ಯಗಳ ಕುರಿತು ಪ್ರಶ್ನೆಗಳನ್ನು ಅಂದಾಜಿಸುತ್ತಾ ಈಗಿನಿಂದಲೇ ಆತಂಕ ಶುರುವಾಗಿದೆ. "ಕೇವಲ ಗ್ಯಾರಂಟಿ ಯೋಜನೆಗಳನ್ನು ನಂಬಿಕೊಂಡು ಜನರ ಬಳಿ ಮತ ಕೇಳಲು ಹೋಗಲು ಸಾಧ್ಯವಿಲ್ಲ. ಹಳ್ಳಿಗಳಲ್ಲಿ ರಸ್ತೆ, ಚರಂಡಿ, ಕುಡಿಯುವ ನೀರಿನಂತಹ ಮೂಲಭೂತ ಸೌಕರ್ಯಗಳು ಹದಗೆಟ್ಟಿವೆ. ಹಳ್ಳಿಯ ಜನರೂ ಅಭಿವೃದ್ಧಿ ಕೆಲಸಗಳನ್ನು ನೋಡುತ್ತಾರೆ. ಅಭಿವೃದ್ಧಿ ಕೆಲಸ ಮಾಡದೆ ಹೋದರೆ ಜನರ ಕಠಿಣ ಪ್ರಶ್ನೆಗಳನ್ನು ಎದುರಿಸಬೇಕಾಗುತ್ತದೆ," ಎಂಬ ಆತಂಕವನ್ನು ಶಾಸಕರು ಸಿಎಂ ಮುಂದೆ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.
ಕ್ಷೇತ್ರದಲ್ಲಿ ರಸ್ತೆ, ಚರಂಡಿ ಸೇರಿದಂತೆ ಮೂಲಸೌಕರ್ಯಗಳ ಅಭಿವೃದ್ಧಿ ವಿಚಾರದಲ್ಲಿ ಕಣ್ಣಿಗೆ ಕಟ್ಟುವಂತಹ ಕೆಲಸ ಮಾಡಿದರೆ ಮಾತ್ರ ಸ್ಥಳೀಯ ಚುನಾವಣೆಯಲ್ಲಿ ಪಕ್ಷಕ್ಕೆ ಹಿಡಿತ ಸಾಧಿಸಲು ಸಾಧ್ಯ ಎಂಬ ಲೆಕ್ಕಾಚಾರ ಶಾಸಕರದ್ದಾಗಿದೆ.
ಕಿತ್ತೂರು ಕರ್ನಾಟಕ ಶಾಸಕರ ನಿಯೋಗ
ವಿಶೇಷವಾಗಿ ಕಿತ್ತೂರು ಕರ್ನಾಟಕ ಭಾಗದ ಶಾಸಕರು ಅನುದಾನಕ್ಕಾಗಿ ಪ್ರಬಲ ಒತ್ತಾಯ ಹೇರಿದ್ದಾರೆ. ಈ ಬಗ್ಗೆ 'ದ ಫೆಡರಲ್ ಕರ್ನಾಟಕ'ದೊಂದಿಗೆ ಮಾತನಾಡಿರುವ ನವಲಗುಂದ ಶಾಸಕ ಎನ್.ಎಚ್. ಕೋನರೆಡ್ಡಿ, ಶಾಸಕರ ಬೇಡಿಕೆ ಇಟ್ಟಿರುವುದು ಹೌದು ಎಂದು ಹೇಳಿದ್ದಾರೆ.
"ಸರ್ಕಾರದ ಗ್ಯಾರಂಟಿ ಯೋಜನೆಗಳಿಂದ ಬಡವರಿಗೆ ಸಾಕಷ್ಟು ಅನುಕೂಲವಾಗಿದೆ ಎಂಬುದರಲ್ಲಿ ಎರಡು ಮಾತಿಲ್ಲ. ಆದರೆ, ಇದರ ಜೊತೆಗೆ ಕ್ಷೇತ್ರದ ಅಭಿವೃದ್ಧಿಯೂ ಮುಖ್ಯವಾಗುತ್ತದೆ. ಹೀಗಾಗಿ, ನಮ್ಮ ಭಾಗದ ಶಾಸಕರೆಲ್ಲರೂ ಸೇರಿ ಮುಖ್ಯಮಂತ್ರಿಗಳನ್ನು ಭೇಟಿಯಾಗಿ, ಪ್ರತಿ ಕ್ಷೇತ್ರಕ್ಕೆ ತಲಾ 100 ಕೋಟಿ ರೂ. ವಿಶೇಷ ಅನುದಾನ ನೀಡುವಂತೆ ಮನವಿ ಮಾಡಿದ್ದೇವೆ. ನಮ್ಮ ಮನವಿಗೆ ಸಿಎಂ ಸಿದ್ದರಾಮಯ್ಯ ಅವರು ಸಕಾರಾತ್ಮಕವಾಗಿ ಸ್ಪಂದಿಸಿದ್ದು, ಅನುದಾನ ಬಿಡುಗಡೆ ಮಾಡುವ ಭರವಸೆ ನೀಡಿದ್ದಾರೆ," ಎಂದು ಕೋನರೆಡ್ಡಿ ತಿಳಿಸಿದ್ದಾರೆ.

