ಇ-ಖಾತಾ ಹೆಸರಲ್ಲಿ ಮಾಫಿಯಾ: ಕೆಳಮನೆಯಲ್ಲಿ ಸರ್ಕಾರದ ವಿರುದ್ಧ ಆರ್. ಅಶೋಕ ವಾಗ್ದಾಳಿ
x

ಇ-ಖಾತಾ ಹೆಸರಲ್ಲಿ ಮಾಫಿಯಾ: ಕೆಳಮನೆಯಲ್ಲಿ ಸರ್ಕಾರದ ವಿರುದ್ಧ ಆರ್. ಅಶೋಕ ವಾಗ್ದಾಳಿ

ಇ-ಖಾತಾ ಹೆಸರಲ್ಲಿ ಪಾಲಿಕೆ ಅಧಿಕಾರಿಗಳು ದಂಧೆ ಮಾಡುತ್ತಿದ್ದು, ಇ-ಖಾತಾ ಹೆಸರಲ್ಲಿ ಮಾಫಿಯಾ ಸೃಷ್ಟಿಯಾಗಿದೆ. ತೆರಿಗೆ ಪಾವತಿಸಿದರೂ ಮನೆ ಹರಾಜು ಹಾಕಲು ಅಧಿಕಾರಿಗಳು ಮುಂದಾಗುತ್ತಿದ್ದಾರೆ.


Click the Play button to hear this message in audio format

ಇ-ಖಾತಾ ಹೆಸರಲ್ಲಿ ಬೆಂಗಳೂರು ಪಾಲಿಕೆ ಅಧಿಕಾರಿಗಳು ದಂಧೆ ಮಾಡುತ್ತಿದ್ದು, ಮಾಫಿಯಾ ಸೃಷ್ಟಿಯಾಗಿದೆ. ತೆರಿಗೆ ಪಾವತಿಸಿದರೂ ಮನೆ ಹರಾಜು ಹಾಕಲು ಅಧಿಕಾರಿಗಳು ಮುಂದಾಗುತ್ತಿದ್ದಾರೆ. ಇವತ್ತು ಬೆಂಗಳೂರಿನಲ್ಲಿ ಇ-ಖಾತಾ ಮಾಡಿಸುವುದು ಜನಸಾಮಾನ್ಯರಿಗೆ ದುಸ್ತರವಾಗಿದೆ. ಇದೊಂದು ಮಾಫಿಯಾವಾಗಿ ಮಾರ್ಪಟ್ಟಿದೆ !

ಹೀಗೆಂದು ಆಕ್ರೋಶ ವ್ಯಕ್ತಪಡಿಸಿದವರು ವಿಧಾನಸಭೆ ಪ್ರತಿಪಕ್ಷ ನಾಯಕ ಆರ್‌. ಅಶೋಕ್‌. ಅವರು, ʼಇ ಖಾತಾ ಮಾಫಿಯಾʼ ಬಗ್ಗೆ ಉದಾಹರಣೆ ಸಮೇತ ವಿವರಿಸಿದರು.

"ಎಚ್‌ಬಿಆರ್ ಲೇಔಟ್‌ನಲ್ಲಿ ಬಿಡಿಎ ಹರಾಜಿನಲ್ಲಿ ಮೂಲೆ ನಿವೇಶನ ಪಡೆದಿದ್ದ ಮಾಲೀಕರೊಬ್ಬರು ಇ-ಖಾತಾ ಮಾಡಿಸಲು ಹೋದಾಗ, ಅಧಿಕಾರಿಗಳು ಅದನ್ನು 'ಬಿ ಖಾತಾ' ಎಂದು ವರ್ಗೀಕರಿಸಲು 30 ಸಾವಿರ ರೂ. ಲಂಚಕ್ಕೆ ಬೇಡಿಕೆಯಿಟ್ಟಿದ್ದರು. ಈ ಪೈಕಿ 15 ಸಾವಿರ ರೂ. ಅನ್ನು ಅಧಿಕಾರಿಗಳು 'ಫೋನ್ ಪೇ' ಮೂಲಕವೇ ಪಡೆದಿರುವುದು ಆಘಾತಕಾರಿ ಸಂಗತಿ. ಲಂಚ ಪಡೆದರೂ ಕೆಲಸವಾಗದಿದ್ದಾಗ, ಹಣ ವಾಪಸ್ ಕೇಳಿದರೆ ಅಧಿಕಾರಿಗಳು ಮೊಂಡುತನ ಪ್ರದರ್ಶಿಸಿದ್ದಾರೆ. ಗ್ರಾಹಕರ ನ್ಯಾಯಾಲಯ ಮತ್ತು ಸಹಾಯವಾಣಿಗಳಿಗೆ ದೂರು ನೀಡಿದರೂ ಯಾವುದೇ ಪ್ರಯೋಜನವಾಗಿಲ್ಲ. ದೇವನಹಳ್ಳಿ ಭಾಗದಲ್ಲೂ ಇ-ಖಾತಾ ಮಾಡಿಸಲು 50 ಸಾವಿರ ರೂ. ವರೆಗೆ ಲಂಚ ಪಡೆಯಲಾಗುತ್ತಿದೆ. ನಿವೃತ್ತ ಅಧಿಕಾರಿಯೊಬ್ಬರು ಖಾಸಗಿ ಕಚೇರಿ ತೆರೆದು ಈ ದಂಧೆಯಲ್ಲಿ ತೊಡಗಿದ್ದಾರೆ," ಎಂದು ಗಂಭೀರ ಆರೋಪ ಮಾಡಿದರು.

ತೆರಿಗೆ ಪಾವತಿಸಿದರೂ ಮನೆ ಹರಾಜು

ಬೆಂಗಳೂರಿನಲ್ಲಿ ಆಸ್ತಿ ತೆರಿಗೆ ಪಾವತಿಸುವ ಪ್ರಾಮಾಣಿಕ ನಾಗರಿಕರಿಗೂ ರಕ್ಷಣೆ ಇಲ್ಲದಂತಾಗಿದೆ. ಎಚ್‌ಬಿಆರ್ ಲೇಔಟ್‌ನಲ್ಲಿ ಮಗನ ಹೆಸರಿಗೆ ಖಾತೆ ವರ್ಗಾವಣೆಯಾಗಿ, ಮಗ ಸಕಾಲದಲ್ಲಿ ತೆರಿಗೆ ಪಾವತಿಸುತ್ತಿದ್ದರೂ, ಅಧಿಕಾರಿಗಳು ಹಳೆಯ ದಾಖಲೆಗಳ ಆಧಾರದ ಮೇಲೆ ತಂದೆಯ ಹೆಸರಿಗೆ ಹರಾಜು ನೋಟಿಸ್ ನೀಡುತ್ತಿದ್ದಾರೆ. ಎರಡು ವರ್ಷ ತೆರಿಗೆ ಬಾಕಿ ಇದೆ ಎಂಬ ಕುಂಟು ನೆಪವೊಡ್ಡಿ ಮನೆಗಳನ್ನು ಹರಾಜು ಹಾಕಲು ಮುಂದಾಗುತ್ತಿರುವುದು ಜನರಲ್ಲಿ ಭೀತಿ ಹುಟ್ಟಿಸಿದೆ. ಇದು ಕೇವಲ ಒಂದು ಲೇಔಟ್‌ನ ಕಥೆಯಲ್ಲ, ಇಡೀ ನಗರದಾದ್ಯಂತ ಇಂತಹ ಮಾಫಿಯಾ ಕೆಲಸ ಮಾಡುತ್ತಿದೆ ಎಂದು ಕಿಡಿಕಾರಿದರು.

ಒಸಿ ಇಲ್ಲದೆ ಪಾಳು ಬಿದ್ದ 4 ಲಕ್ಷ ಕಟ್ಟಡಗಳು

ನಗರದಲ್ಲಿ ಸುಮಾರು 4 ಲಕ್ಷ ಕಟ್ಟಡಗಳು ಒಸಿ ಇಲ್ಲದೆ ಬಳಕೆಗೆ ಬಾರದೆ ಪಾಳು ಬಿದ್ದಿವೆ. ಒಸಿ ನೀಡಲು ಸಾಧ್ಯವಿಲ್ಲವೆಂದಾದರೆ ಕಟ್ಟಡ ಕಟ್ಟಲು ಅನುಮತಿ ಏಕೆ ನೀಡಲಾಗುತ್ತಿದೆ. ಎಂದು ಸರ್ಕಾರವನ್ನು ಅಶೋಕ ತರಾಟೆಗೆ ತೆಗೆದುಕೊಂಡರು. ನಗರದ ಶೇ.80 ರಷ್ಟು ಕಟ್ಟಡಗಳು ಒಂದಲ್ಲ ಒಂದು ರೀತಿಯಲ್ಲಿ ತಾಂತ್ರಿಕ ತೊಂದರೆ ಎದುರಿಸುತ್ತಿವೆ. ಇವುಗಳನ್ನು ನೆಲಸಮ ಮಾಡುವುದು ಅಸಾಧ್ಯ. ಆದ್ದರಿಂದ 'ಒನ್ ಟೈಮ್ ಸೆಟಲ್‌ಮೆಂಟ್' ಮೂಲಕ ಜನರಿಗೆ ವಸತಿ ಕಲ್ಪಿಸಲು ಸರ್ಕಾರ ಮುಂದಾಗಬೇಕು ಎಂದು ಆಗ್ರಹಿಸಿದರು. ಡ್ರೋನ್ ಸಮೀಕ್ಷೆಯ ಮೂಲಕ ವಿಸ್ತೀರ್ಣ ಅಳತೆ ಮಾಡಿ ಜನರಿಗೆ ಕಿರುಕುಳ ನೀಡುವುದನ್ನು ನಿಲ್ಲಿಸಬೇಕು ಎಂದರು.

ಬ್ರ್ಯಾಂಡ್ ಬೆಂಗಳೂರು ಹಾಗೂ ವಾಸ್ತವ ಸ್ಥಿತಿ

ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಘೋಷಿಸಿರುವ 'ಬ್ರ್ಯಾಂಡ್ ಬೆಂಗಳೂರು' ಯೋಜನೆ ಕೇವಲ ಪ್ರಚಾರಕ್ಕೆ ಸೀಮಿತವಾಗಿದೆ ಎಂದು ಟೀಕಿಸಿದ ಆರ್‌.ಅಶೋಕ್‌, ನಗರದಲ್ಲಿ ಕಸದ ರಾಶಿ ಬೆಟ್ಟದಂತೆ ಬೆಳೆಯುತ್ತಿದೆ, ರಸ್ತೆ ಗುಂಡಿಗಳು ಜನರ ಪ್ರಾಣ ಹಿಂಡುತ್ತಿವೆ. ಉಪಮುಖ್ಯಮಂತ್ರಿಗಳು ನಗರ ಪ್ರದಕ್ಷಿಣೆ ಮಾಡಿದರೂ 15 ದಿನಗಳಲ್ಲಿ ರಸ್ತೆ ಗುಂಡಿ ಮುಚ್ಚಲಾಗಲಿಲ್ಲ ಎಂದು ಲೇವಡಿ ಮಾಡಿದರು. ಇದೇ ಸಂದರ್ಭದಲ್ಲಿ ತೆಲಂಗಾಣ ಮುಖ್ಯಮಂತ್ರಿ ರೇವಂತ್ ರೆಡ್ಡಿ ಅವರ ಹೇಳಿಕೆಯನ್ನು ಉಲ್ಲೇಖಿಸಿದ ಅವರು ನಮ್ಮ ನೆರೆಯ ರಾಜ್ಯದ ಮುಖ್ಯಮಂತ್ರಿಗಳೇ ಬೆಂಗಳೂರನ್ನು ಟೀಕಿಸುತ್ತಿದ್ದರೂ, ನಮ್ಮ ಸರ್ಕಾರ ಮೌನವಾಗಿರುವುದು ವಿಷಾದನೀಯ. ಬೆಂಗಳೂರಿನ ಘನತೆಯನ್ನು ಉಳಿಸಲು ಸರ್ಕಾರಕ್ಕೆ ಧೈರ್ಯವಿಲ್ಲವೇ? ಎಂದು ಪ್ರಶ್ನಿಸಿದರು.

ಬೆಂಗಳೂರು ನಗರದ ಆಡಳಿತಾತ್ಮಕ ವೈಫಲ್ಯಗಳು, ಭ್ರಷ್ಟಾಚಾರ ಮತ್ತು ಮೂಲಸೌಕರ್ಯಗಳ ಕುರಿತು ಸರ್ಕಾರದ ವಿರುದ್ಧ ಪ್ರತಿಪಕ್ಷ ನಾಯಕ ಆರ್. ಅಶೋಕ ವಿಧಾನಸಭೆಯಲ್ಲಿ ತೀವ್ರ ವಾಗ್ದಾಳಿ ನಡೆಸಿದರು. ನಗರದ ಆಡಳಿತ ಯಂತ್ರ ಸಂಪೂರ್ಣ ಕುಸಿದಿದ್ದು, ಪ್ರಮುಖವಾಗಿ ಇ-ಖಾತಾ ಪ್ರಕ್ರಿಯೆಯಲ್ಲಿ ನಡೆಯುತ್ತಿರುವ ಬೃಹತ್ ದಂಧೆ, ರಸ್ತೆ ಗುಂಡಿಗಳ ಸಮಸ್ಯೆ, ಮತ್ತು ಬಿಬಿಎಂಪಿಯ ಹಣಕಾಸಿನ ದಿವಾಳಿತನದ ಬಗ್ಗೆ ಎಳೆಎಳೆಯಾಗಿ ಅಂಕಿಅಂಶಗಳ ಸಮೇತ ವಿವರಿಸಿದರು.

ಬಿಬಿಎಂಪಿಯ ಆಡಳಿತಾತ್ಮಕ ಕುಸಿತಕ್ಕೆ ಸಿಬ್ಬಂದಿ ಕೊರತೆಯೇ ಮುಖ್ಯ ಕಾರಣವಾಗಿದೆ. ಕಂದಾಯ ಇಲಾಖೆಯಲ್ಲಿ 1482 ಹುದ್ದೆಗಳ ಪೈಕಿ ಕೇವಲ 858 ಅಧಿಕಾರಿಗಳಿದ್ದಾರೆ. ಆರೋಗ್ಯ ಇಲಾಖೆಯಲ್ಲಿ 1063 ಹುದ್ದೆಗಳ ಬದಲಿಗೆ 429 ಮಂದಿ ಮಾತ್ರ ಕೆಲಸ ಮಾಡುತ್ತಿದ್ದಾರೆ. ಎಂಜಿನಿಯರಿಂಗ್ ವಿಭಾಗದಲ್ಲಿ 1047 ಹುದ್ದೆಗಳಲ್ಲಿ ಅರ್ಧದಷ್ಟು (543) ಮಾತ್ರ ಭರ್ತಿಯಾಗಿವೆ. ಇನ್ನು, ಪ್ರಥಮ, ದ್ವಿತೀಯ ದರ್ಜೆ ಸಹಾಯಕರಲ್ಲಿ 2704 ಇರಬೇಕಾದ ಕಡೆ ಕೇವಲ 970 ಮಂದಿ ಇದ್ದಾರೆ. ಹಣಕಾಸಿನ ಸ್ಥಿತಿಯೂ ಅಯೋಮಯವಾಗಿದೆ. ಪಾಲಿಕೆಯ ಒಟ್ಟು ಆದಾಯ ಸುಮಾರು 5850 ಕೋಟಿ ರೂ.ಗಳಾಗಿದ್ದರೆ, ವೇತನ ಮತ್ತು ತ್ಯಾಜ್ಯ ವಿಲೇವಾರಿಗೇ 6300 ಕೋಟಿ ರೂ.ಗಳಿಗಿಂತ ಅಧಿಕ ಹಣ ಬೇಕಾಗುತ್ತದೆ. ಅಂದರೆ ಪಾಲಿಕೆಯ ಬಳಿ ತುರ್ತು ಪರಿಸ್ಥಿತಿಗಳನ್ನು ಎದುರಿಸಲು ಅಥವಾ ಅಭಿವೃದ್ಧಿ ಕಾಮಗಾರಿಗಳಿಗೆ ಹಣವೇ ಇಲ್ಲದಂತಾಗಿದೆ. ಈ ಹಣಕಾಸಿನ ಕೊರತೆಯಿಂದಾಗಿ ಟ್ಯಾಂಕರ್ ಮಾಫಿಯಾ ಮತ್ತೆ ತಲೆ ಎತ್ತುತ್ತಿದೆ ಎಂದು ಎಚ್ಚರಿಸಿದರು.

ಜಕ್ಕೂರಿನ ವೈಮಾನಿಕ ಶಾಲೆ ಮುಚ್ಚುವ ಹುನ್ನಾರ

ಐತಿಹಾಸಿಕ ಜಕ್ಕೂರಿನ ವೈಮಾನಿಕ ಶಾಲೆಯ ಜಾಗದ ಮೇಲೆ ರಿಯಲ್ ಎಸ್ಟೇಟ್ ದಂಧೆಕೋರರ ಕಣ್ಣು ಬಿದ್ದಿದೆ. ಮೈಸೂರು ಮಹಾರಾಜರು ನೀಡಿದ 370 ಎಕರೆ ಜಾಗದಲ್ಲಿರುವ ಈ ಶಾಲೆಯನ್ನು ಸ್ಥಳಾಂತರಿಸಿ, ಅಲ್ಲಿ ಶಾಪಿಂಗ್ ಕಾಂಪ್ಲೆಕ್ಸ್ ಮತ್ತು ಎತ್ತರದ ಕಟ್ಟಡಗಳನ್ನು ನಿರ್ಮಿಸಲು ಅಧಿಕಾರಿಗಳು ಮತ್ತು ರಾಜಕಾರಣಿಗಳು ಸಂಚು ರೂಪಿಸುತ್ತಿದ್ದಾರೆ. ಈ ಹಿಂದೆ ಬಿಜೆಪಿ ಸರ್ಕಾರ ಕೈಬಿಟ್ಟಿದ್ದ ಕ್ಲಬ್ ನಿರ್ಮಾಣದ ಯೋಜನೆಯನ್ನು ಈಗ ಮತ್ತೆ ಜೀವಂತಗೊಳಿಸಲಾಗುತ್ತಿದೆ. ಈ ಐತಿಹಾಸಿಕ ಆಸ್ತಿಯನ್ನು ಉಳಿಸುವುದು ಸರ್ಕಾರದ ಆದ್ಯತೆಯಾಗಬೇಕು ಎಂದು ಒತ್ತಾಯಿಸಿದರು.

Read More
Next Story