
ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಸ್. ಮನೋಹರ್ ರಾಜ್ಯ ಪೊಲೀಸ್ ಮಹಾನಿರ್ದೇಶಕ ಡಾ.ಎಂ.ಎ. ಸಲೀಂಗೆ ದೂರು ನೀಡಿದರು.
ಜಾಹೀರಾತಿನಲ್ಲಿ ಗಾಂಧೀಜಿಗೆ ಅವಮಾನ ಆರೋಪ: ಬಿಜೆಪಿ ವಿರುದ್ಧ ಕಾಂಗ್ರೆಸ್ ದೂರು
ಗಾಂಧೀಜಿ ಕೇವಲ ಸ್ವಾತಂತ್ರ್ಯ ಹೋರಾಟಗಾರರಾಗಿರದೇ ಅಹಿಂಸೆ ಮತ್ತು ಮಾನವೀಯ ಮೌಲ್ಯಗಳ ಜಾಗತಿಕ ಪ್ರತೀಕವಾಗಿದ್ದಾರೆ. ಇಂತಹ ಮಹಾನ್ ವ್ಯಕ್ತಿಯನ್ನು ಈ ರೀತಿಯಾಗಿ ಚಿತ್ರಿಸುವುದು ಸಾರ್ವಜನಿಕ ಭಾವನೆಗಳಿಗೆ ಧಕ್ಕೆ ಉಂಟಾಗಿದೆ ಎಂದು ದೂರಿನಲ್ಲಿ ಕೆಪಿಸಿಸಿ ತಿಳಿಸಿದೆ.
ಶಾಂತಿಯ ಪ್ರತೀಕವಾಗಿರುವ ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರನ್ನು ರಾಜ್ಯ ಬಿಜೆಪಿ ಘಟಕ ಕಾಂಗ್ರೆಸ್ ನಾಯಕರನ್ನು ಕೋಲಿನಿಂದ ಹೊಡೆಯಲು ಹೋದಂತೆ ಪತ್ರಿಕೆಗಳಿಗೆ ಜಾಹೀರಾತು ನೀಡಿದ್ದಾರೆ ಎಂದು ಆರೋಪಿಸಿ ಕರ್ನಾಟಕ ರಾಜ್ಯ ಪ್ರದೇಶ ಕಾಂಗ್ರೆಸ್ ಘಟಕ ಬಿಜೆಪಿ ವಿರುದ್ಧ ದೂರು ನೀಡಿದೆ.
ಶುಕ್ರವಾರ(ಫೆ.6) ರಾಜ್ಯ ಪೊಲೀಸ್ ಮಹಾ ನಿರ್ದೇಶಕ ಡಾ.ಎಂ.ಎ. ಸಲೀಂಗೆ ದೂರು ನೀಡಿರುವ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಸ್. ಮನೋಹರ್, "ರಾಷ್ಟ್ರಪಿತ ಮಹಾತ್ಮ ಗಾಂಧೀಜಿಗೆ ಅವಮಾನ ಮಾಡುವಂತೆ, ಅವರು ಕೋಲಿನಿಂದ ಹೊಡೆಯುತ್ತಿರುವಂತೆ ಚಿತ್ರಿಸಿರುವುದು ಅತ್ಯಂತ ಅಕ್ಷೇಪಾರ್ಹ" ಎಂದು ತಿಳಿಸಿದ್ದಾರೆ.
ದೂರಿನಲ್ಲೇನಿದೆ ?
ರಾಜ್ಯ ಬಿಜೆಪಿ ಘಟಕ ಕನ್ನಡ ಹಾಗೂ ಆಂಗ್ಲ ದಿನಪತ್ರಿಕೆಗಳಲ್ಲಿ ನೀಡಿರುವ ಜಾಹೀರಾತಿನಲ್ಲಿ ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರನ್ನು ಅಹಿಂಸೆಯ ಪ್ರತೀಕವಾಗಿ ಬಿಂಬಿಸುವ ಬದಲು ಅವರು ಕೋಲಿನಿಂದ ಹೊಡೆಯುತ್ತಿರುವ ರೀತಿಯಲ್ಲಿ ಚಿತ್ರಿಸಿರುವುದು ಅತ್ಯಂತ ಆಕ್ಷೇಪಾರ್ಹವಾಗಿದೆ. ಗಾಂಧೀಜಿ ಕೇವಲ ಸ್ವಾತಂತ್ರ್ಯ ಹೋರಾಟಗಾರರಾಗಿರದೇ ಅಹಿಂಸೆ ಮತ್ತು ಮಾನವೀಯ ಮೌಲ್ಯಗಳ ಜಾಗತಿಕ ಪ್ರತೀಕವಾಗಿದ್ದಾರೆ. ಇಂತಹ ಮಹಾನ್ ವ್ಯಕ್ತಿಯನ್ನು ಈ ರೀತಿಯಾಗಿ ಚಿತ್ರಿಸುವುದು ಸಾರ್ವಜನಿಕ ಭಾವನೆಗಳಿಗೆ ಧಕ್ಕೆ ಉಂಟುಮಾಡುವುದರ ಜೊತೆಗೆ ರಾಷ್ಟ್ರಪಿತರಿಗೆ ತೀವ್ರ ಅವಮಾನ ಉಂಟುಮಾಡಿದೆ ಎಂದು ತಿಳಿಸಿದ್ದಾರೆ.
ಈ ಜಾಹೀರಾತು ಸಮಾಜದಲ್ಲಿ ದ್ವೇಷ, ಅಶಾಂತಿ ಹಾಗೂ ಹಿಂಸೆಯನ್ನು ಉತ್ತೇಜಿಸುವುದರ ಜೊತೆಗೆ, ಸಾರ್ವಜನಿಕರ ಶಾಂತಿಗೆ ಗಂಭೀರ ಧಕ್ಕೆ ಉಂಟುಮಾಡುವ ಸ್ವರೂಪ ಹೊಂದಿದೆ. ಆದ್ದರಿಂದ ಜಾಹೀರಾತು ನೀಡಿದವರು ಹಾಗೂ ಸಂಬಂಧಿಸಿದವರ ವಿರುದ್ಧ ಭಾರತೀಯ ದಂಡ ಸಂಹಿತೆಯ (IPC) 153A, 295A, 505 ರ ಪ್ರಕಾರ ಸೂಕ್ತ ತನಿಖೆ ನಡೆಸಿ ಅಗತ್ಯ ಕಾನೂನು ಕ್ರಮ ಕೈಗೊಳ್ಳಬೇಕೆಂದು ವಿನಂತಿಸುತ್ತೇನೆ ಎಂದಿದ್ದಾರೆ.
ಭಾರತದ ರಾಜ್ಯ ಲಾಂಛನ (ಅನುಚಿತ ಬಳಕೆ ನಿಷೇಧ) ಕಾಯ್ದೆ,1950ರ ಪ್ರಕಾರ ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ ಗೌರವ ಹಾಗೂ ರಾಷ್ಟ್ರಚಿಹ್ನೆಯ ಮೌಲ್ಯಗಳಿಗೆ ಧಕ್ಕೆ ಉಂಟುಮಾಡಿರುವ ಸ್ಪಷ್ಟ ಪ್ರಕರಣವಾಗಿದ್ದು, ಸಂಬಂಧಿಸಿದ ವ್ಯಕ್ತಿಗಳು ಹಾಗೂ ಸಂಸ್ಥೆಗಳ ವಿರುದ್ಧ ಕಾಯ್ದೆಯ ಪ್ರಕಾರ ಕಾನೂನು ಕ್ರಮ ಕೈಗೊಳ್ಳಬೇಕೆಂದು ವಿನಂತಿಸುತ್ತೇನೆ ಎಂದು ಪತ್ರದಲ್ಲಿ ತಿಳಿಸಿದ್ದಾರೆ.
ಬಿಜೆಪಿ ಜಾಹೀರಾತಿನಲ್ಲೇನಿದೆ ?
ರಾಜ್ಯ ಬಿಜೆಪಿಯು ವಿವಿಧ ಪತ್ರಿಕೆಗಳಿಗೆ ನೀಡಿರುವ ಜಾಹೀರಾತಿನಲ್ಲಿ "ಸಿದ್ದಪ್ಪ, ರಾಗಪ್ಪ, ಮಲ್ಲಪ್ಪ ಹಾಗೂ ಎಲ್ಲಾ ನುಂಗಪ್ಪಗಳಿರಾ, ನನ್ನ ಹೆಸರಲ್ಲಿ 60 ವರ್ಷ ಲೂಟಿ ಮಾಡಿದ್ದಲ್ಲದೇ, ನನ್ನ ಗ್ರಾಮ ಸ್ವರಾಜ್ಯ ಕನಸು ನನಸಾಗಿಸಲು ಮೋದಿ ಸರ್ಕಾರ ಜಾರಿಗೆ ತಂದಿರುವ ʼವಿಬಿ -ಜಿ ರಾಮ್ ಜಿʼ ಯೋಜನೆ ಕುರಿತು ಅಪಪ್ರಚಾರ ಮಾಡುತ್ತಿದ್ದೀರಾ" ಎಂದು ಗಾಂಧೀಜಿಯವರೇ ಪ್ರಶ್ನಿಸುವಂತೆ ತೋರಿಸಲಾಗಿದೆ.
ʼವಿಬಿ-ಜಿ ರಾಮ್ ಜಿʼ ಯೋಜನೆ ಶ್ರಮಿಕರ ಬದುಕಿಗೆ ಭರವಸೆಯಾಗಿದೆ. ಉದ್ಯೋಗ ಮತ್ತು ನ್ಯಾಯಯುತ ವೇತನ ಗ್ರಾಮೀಣ ಕಾರ್ಮಿಕರ ಹಕ್ಕು ಎಂದು ಪ್ರತಿಪಾದಿಸಿ ಕೆಲಸದ ದಿನಗಳನ್ನು 100 ರಿಂದ 125 ದಿನಗಳಿಗೆ ಹೆಚ್ಚಿಸಲಾಗಿದೆ. ನೂತನ ಯೋಜನೆಯಡಿ 15ದಿನದೊಳಗೆ ಡಿಬಿಟಿ ಮೂಲಕ ವೇತನ ಪಾವತಿಯಾಗಲಿದೆ. ಮನರೇಗಾದಲ್ಲಿ ತಿಂಗಳಾನುಗಟ್ಟಲೆ ವೇತನ ಪಾವತಿ ಆಗುತ್ತಿರಲಿಲ್ಲ. ಗ್ರಾಮ ಸಭೆಗಳಲ್ಲಿ ನಿರ್ಧಾರವಾಗಿ ಗ್ರಾಮ ಪಂಚಾಯಿತಿಗಳ ಮೂಲಕವೇ ಕೆಲಸಗಳು ನಡೆಯುತ್ತವೆ ಎಂದು ತಿಳಿಸಿದೆ.
ಕಾಂಗ್ರೆಸ್ ಜಾಹೀರಾತಿನಲ್ಲೇನಿತ್ತು ?
ವಿಬಿ-ಜಿ ರಾಮ್ ಜಿ ಯೋಜನೆ ವಿರುದ್ಧ ಕರ್ನಾಟಕ ಸರ್ಕಾರ ಕೆಲವು ದಿನಗಳ ಹಿಂದೆ ಜಾಹೀರಾತು ಒಂದನ್ನು ನೀಡಿತ್ತು. ಅದರಲ್ಲಿ ಬಿಜೆಪಿಯವನ್ನು ಪರೋಕ್ಷವಾಗಿ ʼಸಂಘಪ್ಪʼ ಎಂದು ಮೂದಲಿಸಿತ್ತು. (ಆರ್ಎಸ್ಎಸ್- ಸಂಘ ಪರಿವಾರ). ಇದಕ್ಕೆ ಪ್ರತಿಯಾಗಿ ಬಿಜೆಪಿಯವರು ಶುಕ್ರವಾರ(ಫೆ.6) ಜಾಹೀರಾತು ನೀಡಿದ್ದಾರೆ.

