ಬಾಗಲಕೋಟೆ, ದಾವಣಗೆರೆ ದಕ್ಷಿಣ ಉಪಚುನಾವಣೆ: ಕಾಂಗ್ರೆಸ್​ ಅಭ್ಯರ್ಥಿಗಳು ಅಂತಿಮ
x

ಬಾಗಲಕೋಟೆ, ದಾವಣಗೆರೆ ದಕ್ಷಿಣ ಉಪಚುನಾವಣೆ: ಕಾಂಗ್ರೆಸ್​ ಅಭ್ಯರ್ಥಿಗಳು ಅಂತಿಮ

ಮುಸ್ಲಿಮರ ವಿರೋಧದ ನಡುವೆಯೂ ದಾವಣಗೆರೆ ದಕ್ಷಿಣದಲ್ಲಿ ಶಾಮನೂರು ಶಿವಶಂಕರಪ್ಪ ಅವರ ಮೊಮ್ಮಗ ಸಮರ್ಥ್​ ಹಾಗೂ ಕೌಟುಂಬಿಕ ಕಲಹದ ಹೊರತಾಗಿಯೂ ಉಮೇಶ್​ ಮೇಟಿಗೆ ಬಾಗಲಕೋಟೆಯಲ್ಲಿ ಟಿಕೆಟ್ ನೀಡಲಾಗಿದೆ.


Click the Play button to hear this message in audio format

ರಾಜ್ಯ ರಾಜಕಾರಣದಲ್ಲಿ ತೀವ್ರ ಕುತೂಹಲ ಕೆರಳಿಸಿರುವ ಬಾಗಲಕೋಟೆ ಮತ್ತು ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಗೆ ಕಾಂಗ್ರೆಸ್ ಹೈಕಮಾಂಡ್ ಭಾನುವಾರ ತನ್ನ ಅಧಿಕೃತ ಅಭ್ಯರ್ಥಿಗಳನ್ನು ಘೋಷಿಸಿದೆ. ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಅವರ ಒಪ್ಪಿಗೆಯ ಮೇರೆಗೆ, ಬಾಗಲಕೋಟೆಯಿಂದ ಉಮೇಶ್ ಮೇಟಿ ಹಾಗೂ ದಾವಣಗೆರೆ ದಕ್ಷಿಣದಿಂದ ಸಮರ್ಥ್ ಮಲ್ಲಿಕಾರ್ಜುನ್ ಅವರನ್ನು ಕಣಕ್ಕಿಳಿಸಲಾಗಿದೆ.




ಶಾಸಕ ಶಾಮನೂರು ಶಿವಶಂಕರಪ್ಪ ಅವರ ನಿಧನದಿಂದ ತೆರವಾದ ದಾವಣಗೆರೆ ದಕ್ಷಿಣ ಕ್ಷೇತ್ರಕ್ಕೆ ಅವರ ಮೊಮ್ಮಗ ಸಮರ್ಥ್ ಮಲ್ಲಿಕಾರ್ಜುನ್ ಅವರಿಗೆ ಟಿಕೆಟ್ ನೀಡಲಾಗಿದೆ. ಆದರೆ, ಈ ನಿರ್ಧಾರಕ್ಕೆ ಕ್ಷೇತ್ರದಲ್ಲಿ ಶೇ. 30ರಷ್ಟಿರುವ ಮುಸ್ಲಿಂ ಸಮುದಾಯದ ನಾಯಕರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಸಚಿವ ಜಮೀರ್ ಅಹ್ಮದ್ ಖಾನ್ ನೇತೃತ್ವದಲ್ಲಿ ಅಲ್ಪಸಂಖ್ಯಾತ ನಾಯಕರು ಮುಖ್ಯಮಂತ್ರಿಗಳನ್ನು ಭೇಟಿಯಾಗಿ, ಕುಟುಂಬ ರಾಜಕಾರಣವನ್ನು ವಿರೋಧಿಸಿ ತಮ್ಮ ಅಭ್ಯರ್ಥಿಯನ್ನು 50 ಸಾವಿರ ಮತಗಳ ಅಂತರದಿಂದ ಸೋಲಿಸುವ ಎಚ್ಚರಿಕೆ ನೀಡಿದ್ದಾರೆ.

ಬಾಗಲಕೋಟೆಯಲ್ಲಿ ಮೇಟಿ ಮಕ್ಕಳ ಜಗಳ ಶಮನ

ಬಾಗಲಕೋಟೆ ಕ್ಷೇತ್ರದಲ್ಲಿ ದಿವಂಗತ ಶಾಸಕ ಎಚ್.ವೈ. ಮೇಟಿ ಅವರ ಮಕ್ಕಳಾದ ಮಲ್ಲಿಕಾರ್ಜುನ್, ಉಮೇಶ್ ಮತ್ತು ಮಹಾದೇವಿ ನಡುವೆ ಟಿಕೆಟ್‌ಗಾಗಿ ಬಹಿರಂಗ ಜಗಳವೇ ನಡೆದಿತ್ತು. ಈ ಕೌಟುಂಬಿಕ ಬಂಡಾಯವನ್ನು ಶಮನ ಮಾಡಲು ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ. ಶಿವಕುಮಾರ್ ತಡರಾತ್ರಿ ಸಭೆ ನಡೆಸಿ ಸಂಧಾನ ಮಾಡುವಲ್ಲಿ ಯಶಸ್ವಿಯಾದರು. ಅಂತಿಮವಾಗಿ ಕುಟುಂಬದ ಒಮ್ಮತದ ಮೇರೆಗೆ, ಕುರುಬ ಸಮುದಾಯದ ಮತಗಳನ್ನು ಭದ್ರಪಡಿಸಿಕೊಳ್ಳುವ ಉದ್ದೇಶದಿಂದ ಉಮೇಶ್ ಮೇಟಿ ಅವರಿಗೆ ಟಿಕೆಟ್ ಖಚಿತಪಡಿಸಲಾಗಿದೆ.


ಗೆಲುವಿಗೆ ಕಾಂಗ್ರೆಸ್ ನೂತನ ತಂತ್ರ

ಬಂಡಾಯ ಮತ್ತು ಆಂತರಿಕ ಅಸಮಾಧಾನಗಳ ನಡುವೆಯೂ ಕಾಂಗ್ರೆಸ್ ತನ್ನ ಯುವ ಅಭ್ಯರ್ಥಿಗಳನ್ನು ಅಧಿಕೃತವಾಗಿ ಚುನಾವಣಾ ಅಖಾಡಕ್ಕಿಳಿಸಿದೆ. ನಾಯಕರ ನಿಧನದಿಂದ ಹುಟ್ಟಿಕೊಂಡಿರುವ ಅನುಕಂಪದ ಅಲೆ ಹಾಗೂ ಸರ್ಕಾರದ ಗ್ಯಾರಂಟಿ ಯೋಜನೆಗಳ ಬಲದಿಂದ ಎರಡೂ ಕ್ಷೇತ್ರಗಳಲ್ಲಿ ಗೆಲುವು ಸಾಧಿಸುವ ವಿಶ್ವಾಸವನ್ನು ಆಡಳಿತ ಪಕ್ಷ ಹೊಂದಿದೆ. ಈ ಎರಡೂ ಕ್ಷೇತ್ರಗಳ ಅಸಮಾಧಾನಿತ ನಾಯಕರನ್ನು ಸಮಾಧಾನಪಡಿಸಲು ರಾಜ್ಯ ಮಟ್ಟದ ನಾಯಕರು ಈಗಾಗಲೇ ಬಿರುಸಿನ ಕಾರ್ಯತಂತ್ರ ರೂಪಿಸುತ್ತಿದ್ದಾರೆ.

Read More
Next Story