
ನಕಲಿ ಆದೇಶದ ಪತ್ರದ ಪ್ರತಿ.
ವೈದ್ಯರಿಗೆ 'ಅಬಕಾರಿ' ಹುದ್ದೆ ನೀಡಿದ ನಕಲಿ ಆದೇಶ; ಬಿಜೆಪಿ ವ್ಯಂಗ್ಯದ ಬೆನ್ನಲ್ಲೇ ಸಿಎಂ ಎಚ್ಚರಿಕೆ
ಸಾಮಾನ್ಯವಾಗಿ ವೈದ್ಯಕೀಯ ವೃತ್ತಿಯಲ್ಲಿರುವ ಒಬ್ಬ ಜಿಲ್ಲಾ ಆರೋಗ್ಯಾಧಿಕಾರಿಯನ್ನು, ಅದಕ್ಕೆ ಸಂಬಂಧವೇ ಇಲ್ಲದ ಅಬಕಾರಿ ಇಲಾಖೆಗೆ ವರ್ಗಾಯಿಸಲು ನಿಯಮಗಳಲ್ಲಿ ಅವಕಾಶವಿರುವುದಿಲ್ಲ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಹೆಸರಿನಲ್ಲಿ ನಕಲಿ ವರ್ಗಾವಣೆ ಆದೇಶದ ಟಿಪ್ಪಣಿಯೊಂದನ್ನು ಸೃಷ್ಟಿಸಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟ ಗಂಭೀರ ಪ್ರಕರಣ ಬೆಳಕಿಗೆ ಬಂದಿದೆ. ಅಚ್ಚರಿಯೆಂದರೆ, ಈ ನಕಲಿ ಆದೇಶವನ್ನೇ ಮುಂದಿಟ್ಟುಕೊಂಡು ಪ್ರತಿಪಕ್ಷ ಬಿಜೆಪಿ ಮತ್ತು ನೆಟ್ಟಿಗರು ಸರ್ಕಾರದ ವಿರುದ್ಧ ಟೀಕಾಪ್ರಹಾರ ನಡೆಸಿದ್ದರು. ಇದೀಗ ಎಚ್ಚೆತ್ತುಕೊಂಡಿರುವ ಸಿಎಂ, ಸುಳ್ಳು ಸುದ್ದಿ ಹಬ್ಬಿಸಿದವರ ವಿರುದ್ಧ ಪೊಲೀಸ್ ದೂರು ದಾಖಲಿಸಿದ್ದು, ಕಠಿಣ ಕ್ರಮದ ಎಚ್ಚರಿಕೆ ನೀಡಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ ಮುಖ್ಯಮಂತ್ರಿಗಳ ಅಧಿಕೃತ ಚಿಹ್ನೆಯುಳ್ಳ ಟಿಪ್ಪಣಿಯಲ್ಲಿ, "ಮಂಡ್ಯ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಯಾಗಿರುವ ಡಾ. ಕೆ. ಮೋಹನ್ ಅವರನ್ನು ಮೈಸೂರು ಗ್ರಾಮಾಂತರದ ಅಬಕಾರಿ ಉಪ ಆಯುಕ್ತರಾಗಿ ವರ್ಗಾವಣೆ ಮಾಡಲಾಗಿದೆ" ಎಂದು ಬರೆಯಲಾಗಿತ್ತು.
ಸಾಮಾನ್ಯವಾಗಿ ವೈದ್ಯಕೀಯ ವೃತ್ತಿಯಲ್ಲಿರುವ ಒಬ್ಬ ಜಿಲ್ಲಾ ಆರೋಗ್ಯಾಧಿಕಾರಿಯನ್ನು, ಅದಕ್ಕೆ ಸಂಬಂಧವೇ ಇಲ್ಲದ ಅಬಕಾರಿ ಇಲಾಖೆಗೆ ವರ್ಗಾಯಿಸಲು ನಿಯಮಗಳಲ್ಲಿ ಅವಕಾಶವಿರುವುದಿಲ್ಲ. ಆದರೂ, ಈ ನಕಲಿ ಪತ್ರವನ್ನು ಸತ್ಯವೆಂದು ನಂಬಿ ಹಲವರು ಶೇರ್ ಮಾಡಿದ್ದರು.
ಬಿಜೆಪಿ ಮತ್ತು ನೆಟ್ಟಿಗರ ವ್ಯಂಗ್ಯ
ಈ ನಕಲಿ ಆದೇಶ ಪ್ರತಿಯನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದ ಬಿಜೆಪಿಯ ಕೆಲ ಮುಖಂಡರು ಹಾಗೂ ನೆಟ್ಟಿಗರು, ರಾಜ್ಯ ಸರ್ಕಾರದ ವಿರುದ್ಧ ತೀವ್ರ ವ್ಯಂಗ್ಯವಾಡಿದ್ದರು. "ಒಬ್ಬ ವೈದ್ಯರನ್ನು ಅಬಕಾರಿ ಇಲಾಖೆಗೆ ವರ್ಗಾಯಿಸಲು ಹೇಗೆ ಸಾಧ್ಯ? ಇದು ತುಘಲಕ್ ಸರ್ಕಾರ," ಎಂದೆಲ್ಲಾ ಟೀಕಿಸಿದ್ದರು. ಆಡಳಿತ ಯಂತ್ರ ಕುಸಿದು ಬಿದ್ದಿದೆ ಎಂದು ಬಿಂಬಿಸುವ ಪ್ರಯತ್ನಗಳು ನಡೆದಿದ್ದವು. ಪ್ರತಿಪಕ್ಷ ನಾಯಕ ಆರ್. ಅಶೋಕ್, ಶಾಸಕ ಸುನೀಲ್ ಕುಮಾರ್ ಅವರು ಸೋಶಿಯಲ್ ಮೀಡಿಯಾಗಳಲ್ಲಿ ಪೋಸ್ಟ್ ಮಾಡಿದ್ದರು. ಆದರೆ, ಒಂದು ಬಾರಿ ನಕಲಿ ಎಂದು ಗೊತ್ತಾದ ತಕ್ಷಣ ಅಶೋಕ್ ಟ್ವೀಟ್ ಅಳಿಸಿ ಹಾಕಿದ್ದರೆ, ಸುನೀಲ್ ಕುಮಾರ್ ಅವರ ಖಾತೆಯಲ್ಲಿ ಇನ್ನೂ ಇದೆ.
ಸಿಎಂ ಸಿದ್ದರಾಮಯ್ಯ ಸ್ಪಷ್ಟನೆ, ಎಚ್ಚರಿಕೆ
ವಿಷಯ ಗಮನಕ್ಕೆ ಬರುತ್ತಿದ್ದಂತೆಯೇ ಪ್ರತಿಕ್ರಿಯಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ಇದು ಕಿಡಿಗೇಡಿಗಳ ಕೃತ್ಯ ಎಂದು ಸ್ಪಷ್ಟಪಡಿಸಿದ್ದಾರೆ.
"ನನ್ನ ಕಚೇರಿಯ ನಕಲಿ ಟಿಪ್ಪಣಿಯೊಂದನ್ನು ಸೃಷ್ಟಿಸಿ ಅಪಪ್ರಚಾರದಲ್ಲಿ ತೊಡಗಿರುವುದು ಖಂಡನೀಯ ಮತ್ತು ಅತ್ಯಂತ ಗಂಭೀರ ಸ್ವರೂಪದ ಅಪರಾಧವಾಗಿದೆ. ಈ ಬಗ್ಗೆ ನನ್ನ ಸಚಿವಾಲಯದ ಅಧಿಕಾರಿಗಳು ಈಗಾಗಲೇ ದೂರು ದಾಖಲಿಸಿದ್ದು, ಪೊಲೀಸ್ ಇಲಾಖೆ ಇದರ ಹಿಂದಿರುವ ದುಷ್ಟರನ್ನು ಪತ್ತೆ ಮಾಡಿ ಕಾನೂನು ಕ್ರಮ ಕೈಗೊಳ್ಳಲಿದೆ," ಎಂದು ಎಚ್ಚರಿಸಿದ್ದಾರೆ.
ಫೋಟೋಶಾಪ್ ಯುಗದಲ್ಲಿ ಎಚ್ಚರವಿರಲಿ
ನಕಲಿ ಸುದ್ದಿಯನ್ನು ನಂಬಿ ಶೇರ್ ಮಾಡಿದವರಿಗೂ ಕಿವಿಮಾತು ಹೇಳಿರುವ ಸಿಎಂ, "ಈಗಿನ ಫೋಟೋಶಾಪ್ ಮತ್ತು ಎಐ (AI) ಯುಗದಲ್ಲಿ ವಾಟ್ಸ್‌ಆ್ಯಪ್ ಮಾಹಿತಿಗಳ ಸತ್ಯಾಸತ್ಯತೆಯನ್ನು ಪರಾಮರ್ಶಿಸದೆ ಇತರರ ಜೊತೆ ಹಂಚಿಕೊಳ್ಳುವುದು ಕೂಡ ಅಪರಾಧವೇ ಆಗುತ್ತದೆ. ನಾವು ಸಕಾರಾತ್ಮಕ ಟೀಕೆಗೆ ಮುಕ್ತರಿದ್ದೇವೆ, ಆದರೆ ಸುಳ್ಳು ಸುದ್ದಿಗಳ ಅಪಪ್ರಚಾರವನ್ನು ಸಹಿಸುವುದಿಲ್ಲ," ಎಂದು ಖಡಕ್ ಸಂದೇಶ ರವಾನಿಸಿದ್ದಾರೆ.

