Maintaining fiscal discipline despite the Center
x

ಸಿಎಂ ಸಿದ್ದರಾಮಯ್ಯ ಇಂದು ಸಚಿವರೊಂದಿಗೆ ಮಹತ್ವದ ಡಿನ್ನರ್ ಮೀಟಿಂಗ್ ನಡೆಸಲಿದ್ದಾರೆ.

ಸಿಎಂ ಕಾವೇರಿ ನಿವಾಸದಲ್ಲಿ ಇಂದು ಹೈವೋಲ್ಟೇಜ್ ಡಿನ್ನರ್ ಮೀಟಿಂಗ್

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ಇಂದು ಸಂಜೆ 6 ಗಂಟೆಗೆ ಬೆಂಗಳೂರಿನ 'ಕಾವೇರಿ' ನಿವಾಸದಲ್ಲಿ ಸಚಿವರ ವಿಶೇಷ ಭೋಜನ ಕೂಟ ಆಯೋಜನೆಯಾಗಿದೆ.


Click the Play button to hear this message in audio format

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು ಸಂಜೆ 6 ಗಂಟೆಗೆ ತಮ್ಮ ಅಧಿಕೃತ ನಿವಾಸ 'ಕಾವೇರಿ'ಯಲ್ಲಿ ಸಚಿವ ಸಂಪುಟದ ಸಹೋದ್ಯೋಗಿಗಳಿಗೆ ವಿಶೇಷ ಭೋಜನ ಕೂಟವನ್ನು ಆಯೋಜಿಸಿದ್ದಾರೆ. ಈ ಸಂದರ್ಭದಲ್ಲಿ ರಾಜ್ಯದ ಪ್ರಚಲಿತ ಹಾಗೂ ಸಂಕೀರ್ಣ ವಿಷಯಗಳ ಕುರಿತು ಗಂಭೀರ ಸಮಾಲೋಚನೆ ನಡೆಸಲಿದ್ದಾರೆ ಎನ್ನಲಾಗಿದೆ.

ಈ ಸಭೆಯಲ್ಲಿ ಪ್ರಮುಖವಾಗಿ ಚರ್ಚೆಯಾಗಲಿರುವ ವಿಷಯವೆಂದರೆ ಎಸ್‌ಸಿ ಒಳಮೀಸಲಾತಿ ಜಾರಿಯ ಕಗ್ಗಂಟು. ಇದೇ ಮಾರ್ಚ್ 27 ರಂದು ನಡೆಯಲಿರುವ ವಿಶೇಷ ಸಚಿವ ಸಂಪುಟ ಸಭೆಯಲ್ಲಿ ತೆಗೆದುಕೊಳ್ಳಬೇಕಾದ ಅಂತಿಮ ನಿರ್ಧಾರದ ಬಗ್ಗೆ ಮುಖ್ಯಮಂತ್ರಿಗಳು ಸಚಿವರೊಂದಿಗೆ ಸಮಾಲೋಚನೆ ನಡೆಸಲಿದ್ದಾರೆ. ರಾಜ್ಯ ಸರ್ಕಾರವು ಈಗಾಗಲೇ 56,432 ಹುದ್ದೆಗಳ ಬೃಹತ್ ನೇಮಕಾತಿ ಪ್ರಕ್ರಿಯೆಗೆ ಚಾಲನೆ ನೀಡಲು ಸಿದ್ಧತೆ ನಡೆಸಿದ್ದು, ಈ ನೇಮಕಾತಿಗಳಲ್ಲಿ ಒಳಮೀಸಲಾತಿಯನ್ನು ಹೇಗೆ ಜಾರಿಗೊಳಿಸಬೇಕು ಮತ್ತು ಸುಪ್ರೀಂ ಕೋರ್ಟ್‌ನ 50% ಮಿತಿ ಆದೇಶವನ್ನು ಗಮನದಲ್ಲಿಟ್ಟುಕೊಂಡು ಮೀಸಲಾತಿ ಪ್ರಮಾಣವನ್ನು ಹೇಗೆ ಮರುಹಂಚಿಕೆ ಮಾಡಬೇಕು ಎಂಬ ತಾಂತ್ರಿಕ ಅಂಶಗಳ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಯಲಿದೆ.

ಮತ್ತೊಂದೆಡೆ, ಕೇಂದ್ರ ಚುನಾವಣಾ ಆಯೋಗವು ರಾಜ್ಯದ ಬಾಗಲಕೋಟೆ ಮತ್ತು ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರಗಳಿಗೆ ಉಪಚುನಾವಣೆಯ ದಿನಾಂಕವನ್ನು ಘೋಷಿಸಿದೆ. ಏಪ್ರಿಲ್ 9 ರಂದು ಮತದಾನ ನಡೆಯಲಿದ್ದು, ಮೇ 4 ರಂದು ಫಲಿತಾಂಶ ಹೊರಬೀಳಲಿದೆ.

ಹಿರಿಯ ನಾಯಕರಾಗಿದ್ದ ಎಚ್.ವೈ. ಮೇಟಿ ಮತ್ತು ಶಾಮನೂರು ಶಿವಶಂಕರಪ್ಪ ಅವರ ನಿಧನದಿಂದ ತೆರವಾಗಿರುವ ಈ ಎರಡು ಕ್ಷೇತ್ರಗಳನ್ನು ಉಳಿಸಿಕೊಳ್ಳುವುದು ಕಾಂಗ್ರೆಸ್‌ಗೆ ಪ್ರತಿಷ್ಠೆಯ ಪ್ರಶ್ನೆಯಾಗಿದೆ. ಈ ಹಿನ್ನೆಲೆಯಲ್ಲಿ ಅಭ್ಯರ್ಥಿಗಳ ಆಯ್ಕೆ, ಚುನಾವಣಾ ಉಸ್ತುವಾರಿ ಮತ್ತು ವಿರೋಧ ಪಕ್ಷಗಳ ತಂತ್ರಗಾರಿಕೆಯನ್ನು ಎದುರಿಸಲು ಸಚಿವರುಗಳಿಗೆ ನೀಡಬೇಕಾದ ಜವಾಬ್ದಾರಿಗಳ ಬಗ್ಗೆ ಮುಖ್ಯಮಂತ್ರಿಗಳು ಈ ಸಭೆಯಲ್ಲಿ ಸೂಚನೆ ನೀಡಲಿದ್ದಾರೆ.

ಪರಿಶಿಷ್ಟ ಜಾತಿಯಲ್ಲಿರುವ 101 ಉಪಜಾತಿಗಳ ಪೈಕಿ ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿ ಹಂಚಿಕೆ ಮಾಡಬೇಕು ಎಂಬುದು ಎಡಗೈ ಸಮುದಾಯದ ಬಹುದಿನಗಳ ಬೇಡಿಕೆಯಾಗಿದೆ. ಕಾಂಗ್ರೆಸ್ ನೇತೃತ್ವದ ಸರ್ಕಾರ ಅಸ್ತಿತ್ವಕ್ಕೆ ಬಂದರೆ ಒಳ ಮೀಸಲಾತಿ ಜಾರಿ ಮಾಡುವುದಾಗಿ ಕಳೆದ ವಿಧಾನಸಭೆ ಚುನಾವಣೆಯಲ್ಲಿ ಆಶ್ವಾಸನೆ ನೀಡಿತ್ತು. ಆದರೆ, ಅಧಿಕಾರಕ್ಕೆ ಬಂದು ಎರಡು ವರ್ಷ ಕಳೆದರೂ, ಪರಿಶಿಷ್ಟ ಜಾತಿಯ ಉಪಪಂಗಡಗಳ ಅಂಕಿ ಅಂಶ ಕಲೆ ಹಾಕಿದ್ದರೂ ವರದಿ ಜಾರಿ ವಿಳಂಬ ಮಾಡುತ್ತಿರುವುದು ಎಡಗೈ ಸಮುದಾಯದಲ್ಲಿ ಕಿಚ್ಚು ಹೊತ್ತಿಸಿದೆ.

Read More
Next Story