
ಜಿ. ಪರಮೇಶ್ವರ್
ಸಿದ್ದರಾಮಯ್ಯ ಇನ್ನೂ ಎರಡು ವರ್ಷ ಸಿಎಂ ಆಗಿ ಮುಂದುವರಿಯುತ್ತಾರೆ: ಜಿ. ಪರಮೇಶ್ವರ ಸ್ಪಷ್ಟನೆ
ನಾಯಕತ್ವ ಬದಲಾವಣೆ ಕುರಿತ ಚರ್ಚೆಗಳನ್ನು ತಳ್ಳಿಹಾಕಿದ ಪರಮೇಶ್ವರ್ ಅವರು, ಹೈಕಮಾಂಡ್ ಈ ವಿಚಾರದಲ್ಲಿ ಯಾವುದೇ ಗೊಂದಲವನ್ನು ಸೃಷ್ಟಿಸಿಲ್ಲ. ಸಿದ್ದರಾಮಯ್ಯ ಅವರ ಅಧಿಕಾರದ ಅವಧಿ ಇಂತಿಷ್ಟೇ ಎಂದು ಹೈಕಮಾಂಡ್ ಎಂದಾದರೂ ಹೇಳಿದೆಯೇ? ಎಂದು ನುಡಿದರು.
ಮುಖ್ಯಮಂತ್ರಿ ಸ್ಥಾನದ ಬದಲಾವಣೆ ಕುರಿತಂತೆ ರಾಜ್ಯ ರಾಜಕೀಯದಲ್ಲಿ ಆಗಾಗ ಕೇಳಿಬರುತ್ತಿರುವ ಊಹಾಪೋಹಗಳ ನಡುವೆಯೇ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ಇನ್ನೂ ಎರಡು ವರ್ಷಗಳ ಕಾಲ ತಮ್ಮ ಹುದ್ದೆಯಲ್ಲಿ ಮುಂದುವರಿಯಲಿದ್ದಾರೆ ಎಂದು ಗೃಹ ಸಚಿವ ಜಿ. ಪರಮೇಶ್ವರ ಸ್ಪಷ್ಟಪಡಿಸಿದ್ದಾರೆ.
ಸೋಮವಾರ ಮೈಸೂರಿನಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿ ಸ್ಥಾನದ ಕುರಿತಾದ ಗೊಂದಲಗಳಿಗೆ ತೆರೆ ಎಳೆಯುವ ಪ್ರಯತ್ನ ಮಾಡಿದರು. "2013ರಲ್ಲಿ ಸಿದ್ದರಾಮಯ್ಯ ಅವರು ಐದು ವರ್ಷಗಳ ಕಾಲ ಮುಖ್ಯಮಂತ್ರಿಯಾಗಿರುತ್ತಾರೆ ಎಂದು ಕಾಂಗ್ರೆಸ್ ಹೈಕಮಾಂಡ್ ಘೋಷಣೆ ಮಾಡಿರಲಿಲ್ಲ. ಆದರೂ ಅವರು ತಮ್ಮ ಐದು ವರ್ಷಗಳ ಅಧಿಕಾರಾವಧಿಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ್ದರು. ಅದೇ ರೀತಿ 2023ರ ಚುನಾವಣೆಯ ನಂತರವೂ ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿ ಎಂದು ಹೈಕಮಾಂಡ್ ಘೋಷಿಸಿದೆ. ಪ್ರಸ್ತುತ ಸರ್ಕಾರದ ಅಧಿಕಾರದ ಅವಧಿ 2028ರವರೆಗೆ ಇದ್ದು, ಅವರು ಅದನ್ನು ಪೂರ್ಣಗೊಳಿಸಲಿದ್ದಾರೆ. ನೀವೇ ಐದು ವರ್ಷ ಸಿಎಂ ಎಂದು ಹೈಕಮಾಂಡ್ ಪದೇ ಪದೇ ಪ್ರತ್ಯೇಕವಾಗಿ ಸ್ಪಷ್ಟೀಕರಣ ನೀಡುವ ಅಗತ್ಯವಿಲ್ಲ," ಎಂದು ಪ್ರತಿಪಾದಿಸಿದರು.
ನಾಯಕತ್ವ ಬದಲಾವಣೆ ಇಲ್ಲ
ನಾಯಕತ್ವ ಬದಲಾವಣೆ ಕುರಿತ ಚರ್ಚೆಗಳನ್ನು ತಳ್ಳಿಹಾಕಿದ ಸಚಿವರು, "ಹೈಕಮಾಂಡ್ ಈ ವಿಚಾರದಲ್ಲಿ ಯಾವುದೇ ಗೊಂದಲವನ್ನು ಸೃಷ್ಟಿಸಿಲ್ಲ. ಸಿದ್ದರಾಮಯ್ಯ ಅವರ ಅಧಿಕಾರದ ಅವಧಿ ಇಂತಿಷ್ಟೇ ಎಂದು ಹೈಕಮಾಂಡ್ ಎಂದಾದರೂ ಹೇಳಿದೆಯೇ? ಅಥವಾ ಬದಲಾವಣೆ ಬಗ್ಗೆ ಮಾತನಾಡಿದೆಯೇ? ಇದರರ್ಥ, ನಾಯಕತ್ವ ಬದಲಾವಣೆಯಂತಹ ಯಾವುದೇ ಬೆಳವಣಿಗೆಗಳು ಸದ್ಯಕ್ಕಿಲ್ಲ ಎಂದೇ ಭಾವಿಸಬೇಕು," ಎಂದು ಹೇಳಿದರು.
"ಮುಖ್ಯಮಂತ್ರಿ ಸ್ಥಾನವನ್ನು ಬದಲಾವಣೆ ಮಾಡಬೇಕಾಗಿರುವುದು ಕೇವಲ ಹೈಕಮಾಂಡ್ ವಿವೇಚನೆಗೆ ಬಿಟ್ಟ ವಿಚಾರ. ಆ ಬಗ್ಗೆ ಹೈಕಮಾಂಡ್ ಎಂದಾದರೂ ಮಾತನಾಡಿದ್ದರೆ ಮಾತ್ರ ಅದಕ್ಕೊಂದು ಅರ್ಥ ಬರುತ್ತಿತ್ತು. ಅಲ್ಲಿಯವರೆಗೆ ಯಾರೇ ಹೇಳಿಕೆಗಳನ್ನು ನೀಡಿದರೂ, ಅದು ಕೇವಲ ಅವರ ವೈಯಕ್ತಿಕ ಅಭಿಪ್ರಾಯವಷ್ಟೇ ಹೊರತು ಪಕ್ಷದ ನಿಲುವಲ್ಲ," ಎಂದು ಪರಮೇಶ್ವರ ಖಡಕ್ ಆಗಿ ನುಡಿದರು.

