State by-elections | Womens power is key for Congress victory: CM Siddaramaiah
x

ಸಿಎಂ ಸಿದ್ದರಾಮಯ್ಯ ಮಾತನಾಡಿದರು.

ರಾಜ್ಯ ಉಪಚುನಾವಣೆ| ಕಾಂಗ್ರೆಸ್ ಗೆಲುವಿಗೆ ಮಹಿಳಾ ಶಕ್ತಿ ಪ್ರಮುಖ: ಸಿಎಂ ಸಿದ್ದರಾಮಯ್ಯ

ಮಹಿಳಾ ಕೇಂದ್ರಿತ ಯೋಜನೆಗಳಿಂದ ಮಹಿಳೆಯರ ಹಕ್ಕುಗಳನ್ನು ರಕ್ಷಿಸಲಾಗಿದೆ. ಸರ್ಕಾರದ ಗ್ಯಾರಂಟಿಗಳಿಂದ ಕೊಂಡುಕೊಳ್ಳುವ ಶಕ್ತಿ ಹೆಚ್ಚಾಗಿದೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದರು.


Click the Play button to hear this message in audio format

ಎಚ್‌.ವೈ. ಮೇಟಿ ಹಾಗೂ ಶಾಮನೂರು ಶಿವಶಂಕರಪ್ಪನವರ ನಿಧನದಿಂದ ತೆರವಾಗಿರುವ ಬಾಗಲಕೋಟೆ ಹಾಗೂ ದಾವಣಗೆರೆ ದಕ್ಷಿಣ ಉಪಚುನಾವಣೆಯ ಗೆಲುವಿನಲ್ಲಿ ಕಾಂಗ್ರೆಸ್ ಮಹಿಳಾ ಸದಸ್ಯರ ಪಾತ್ರ ಪ್ರಮುಖವಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

ಸೋಮವಾರ (ಮಾ. 16) ಬೆಂಗಳೂರಿನಲ್ಲಿ ಆಯೋಜಿಸಲಾಗಿದ್ದ ʼಕರ್ನಾಟಕ ಪ್ರದೇಶ ಮಹಿಳಾ ಕಾಂಗ್ರೆಸ್ ಕಾರ್ಯಕಾರಿ ಸಭೆ ಮತ್ತು ತರಬೇತಿ ಶಿಬಿರʼ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, 2013ರಿಂದ 2018 ಮತ್ತು 2023ರಿಂದ ಕಾಂಗ್ರೆಸ್ ಸರ್ಕಾರ ಮಹಿಳಾ ಸಬಲೀಕರಣಕ್ಕೆ ಒತ್ತು ನೀಡಿದೆ. ಪ್ರಮುಖ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಶಕ್ತಿ ಯೋಜನೆಯಿಂದ ಇದುವರೆಗೆ ಮಹಿಳೆಯರು 700 ಕೋಟಿ ಪ್ರಯಾಣಗಳನ್ನು ಕೈಗೊಂಡಿದ್ದಾರೆ ಎಂದರು.

ರಾಜ್ಯ ಮಹಿಳಾ ಕಾಂಗ್ರೆಸ್‌ ವತಿಯಿಂದ ಸಿಎಂ ಸಿದ್ದರಾಮಯ್ಯನವರಿಗೆ ಸ್ಮರಣಿಕೆ ನೀಡಿ ಗೌರವಿಸಲಾಯಿತು.

ಅಸಮಾನತೆ ನಿವಾರಣೆಯಾಗಲಿ

ಮಹಿಳಾ ಕೇಂದ್ರಿತ ಯೋಜನೆಗಳಿಂದ ಮಹಿಳೆಯರ ಹಕ್ಕುಗಳನ್ನು ರಕ್ಷಿಸಲಾಗಿದೆ. ಸರ್ಕಾರದ ಗ್ಯಾರಂಟಿಗಳಿಂದ ಮಹಿಳೆಯರ ಕೊಂಡುಕೊಳ್ಳುವ ಶಕ್ತಿ ಹೆಚ್ಚಾಗಿದೆ. ಗೃಹಲಕ್ಷ್ಮಿ ಯೋಜನೆಯಡಿ 1.26 ಕೋಟಿ ಮಹಿಳೆಯರಿಗೆ ಮಾಸಿಕ 2,000 ರೂ.ಗಳನ್ನು ನೀಡಲಾಗುತ್ತಿದ್ದು, ಇದರಿಂದ ಮಹಿಳೆಯರ ಆರ್ಥಿಕ ಹಾಗೂ ಸಾಮಾಜಿಕ ಸ್ಥಿತಿ ಸುಧಾರಿಸಿದೆ. ಆರ್ಥಿಕ ಸ್ವಾತಂತ್ರ್ಯದಿಂದ ಮಹಿಳೆಯರ ಆತ್ಮವಿಶ್ವಾಸ ಹೆಚ್ಚಿದೆ. ಡಾ.ಬಿ.ಆರ್. ಅಂಬೇಡ್ಕರ್ ಅವರು ಸಮಾಜದಲ್ಲಿ ಲಿಂಗತಾರತಮ್ಯ ಮತ್ತು ಅಸಮಾನತೆ ನಿವಾರಣೆಯಾಗಬೇಕು ಎಂದು ಕನಸು ಕಂಡಿದ್ದರು ಎಂದು ಹೇಳಿದರು.

ಮಹಿಳಾ ಸದಸ್ಯರ ಸಂಖ್ಯೆ ವೃದ್ಧಿಸಲಿ

ಮಹಿಳೆಯರಲ್ಲಿ ನಾಯಕತ್ವದ ಗುಣ ಬಹಳ ಪ್ರಮುಖವಾಗಿದೆ. ಎಲ್ಲರಿಗೂ ಸಮಾನ ಅವಕಾಶ ದೊರೆತರೆ ಸಮಾನತೆಯನ್ನು ಸಾಧಿಸುವುದು ಸುಲಭ. ಕರ್ನಾಟಕ ಪ್ರದೇಶ ಮಹಿಳಾ ಕಾಂಗ್ರೆಸ್‌ನಲ್ಲಿ ಒಂದು ಲಕ್ಷಕ್ಕೂ ಹೆಚ್ಚು ಮಹಿಳಾ ಸದಸ್ಯರಿದ್ದು, ಭವಿಷ್ಯದಲ್ಲಿ ಈ ಸಂಖ್ಯೆ ಎರಡು ಲಕ್ಷಗಳಿಗೆ ವೃದ್ಧಿಸಬೇಕು. ಉಪಚುನಾವಣೆ ಸಮೀಪಿಸುತ್ತಿರುವುದರಿಂದ ಸರ್ಕಾರದ ಜನಪರ ಯೋಜನೆಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವಲ್ಲಿ ಮಹಿಳಾ ಸದಸ್ಯರ ಪಾತ್ರ ಮಹತ್ವದ್ದಾಗಿದೆ ಎಂದರು.

ಪ್ರಚಾರದಲ್ಲಿ ಭಾಗವಹಿಸಲು ಕರೆ

ಬಾಗಲಕೋಟೆ ಹಾಗೂ ದಾವಣಗೆರೆ ದಕ್ಷಿಣ ಉಪಚುನಾವಣೆಯಲ್ಲಿ ಮಹಿಳಾ ಸದಸ್ಯರ ಎರಡು ತಂಡಗಳನ್ನು ರಚಿಸಿ, ಪ್ರಚಾರ ಕಾರ್ಯದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಬೇಕು. ಕಳೆದ ಬಾರಿ ಚನ್ನಪಟ್ಟಣ, ಶಿಗ್ಗಾಂವ್‌, ಸಂಡೂರು ಉಪಚುನಾವಣೆಗಳಲ್ಲಿ ಕಾಂಗ್ರೆಸ್ ಜಯಭೇರಿ ಬಾರಿಸಿತ್ತು. ಈ ಬಾರಿಯೂ ಎರಡೂ ಸ್ಥಾನಗಳಲ್ಲಿ ಕಾಂಗ್ರೆಸ್ ಪಕ್ಷ ಗೆಲ್ಲಲೇಬೇಕಿದ್ದು, ಇದಕ್ಕಾಗಿ ಅಗತ್ಯ ಸಿದ್ಧತೆಗಳನ್ನು ಕಾಂಗ್ರೆಸ್ ಮಾಡಿಕೊಂಡಿದೆ ಎಂದು ತಿಳಿಸಿದರು.

Read More
Next Story