ಬಿಜೆಪಿ ಅವಧಿಯಲ್ಲಿ ಶ್ರೀಮಂತ-ಬಡವರ ನಡುವಿನ ಅಂತರ ಹೆಚ್ಚಳ: ಸಿಎಂ ಸಿದ್ದರಾಮಯ್ಯ
x

ಸಿಎಂ ಸಿದ್ದರಾಮಯ್ಯ

ಬಿಜೆಪಿ ಅವಧಿಯಲ್ಲಿ ಶ್ರೀಮಂತ-ಬಡವರ ನಡುವಿನ ಅಂತರ ಹೆಚ್ಚಳ: ಸಿಎಂ ಸಿದ್ದರಾಮಯ್ಯ

ನಮ್ಮ ಸರ್ಕಾರ ಮಹಿಳೆಯರು, ದಲಿತರು, ಹಿಂದುಳಿದವರು, ಅಲ್ಪಸಂಖ್ಯಾತರು ಸೇರಿದಂತೆ ಶೋಷಿತ ವರ್ಗಗಳ ಏಳಿಗೆಗೆ ಶ್ರಮಿಸುತ್ತಿದೆ. ತಳಸಮುದಾಯದವರಿಗೆ ಆರ್ಥಿಕ ಮತ್ತು ಸಾಮಾಜಿಕ ಬಲ ತುಂಬಲು ಯೋಜನೆಗಳನ್ನು ಜಾರಿಗೊಳಿಸಿದೆ ಎಂದು ತಿಳಿಸಿದರು.


Click the Play button to hear this message in audio format

ಸಮಪಾಲು, ಸಮಬಾಳು ಎನ್ನುವ ಬಸವಣ್ಣನವರನ್ನು ಸಾಂಸ್ಕೃತಿಕ ನಾಯಕ ಎಂದು ಘೋಷಿಸಿದ್ದು ನಮ್ಮ ಸರ್ಕಾರ. ಆದರೆ ಕೇಂದ್ರ ಸರ್ಕಾರ ಉದ್ಯೋಗದ ಭರವಸೆಯನ್ನು ನುಂಗುವ ವಿಬಿಜಿರಾಮ್ ಜಿ ಯೋಜನೆಯನ್ನು ತಂದಿದ್ದು, ಕೇವಲ ಕಾರ್ಪೊರೇಟ್ ಶಕ್ತಿಗಳು ಬಲಗೊಳ್ಳುತ್ತಿದ್ದಾರೆ. ಶ್ರೀಮಂತರು ಮತ್ತು ಬಡವರ ನಡುವಿನ ಅಂತರ ಹೆಚ್ಚಾಗುತ್ತಿದೆ ಎಂದು ಸಿಎಂ ಸಿದ್ದರಾಮಯ್ಯ ಆರೋಪಿಸಿದರು.

ಶನಿವಾರ (ಏ.4) ಬಾಗಲಕೋಟೆಯ ಉಪಚುನಾವಣೆ ಪ್ರಚಾರದಲ್ಲಿ ಮಾತನಾಡಿದ ಅವರು, ಜನಪ್ರತಿನಿಧಿಯಾಗಿ ನಿಷ್ಠೆಯಿಂದ ಸೇವೆ ಸಲ್ಲಿಸಿದ ಹೆಚ್.ವೈ. ಮೇಟಿಯವರು ಅಕಾಲಿಕ ನಿಧನರಾದ ಕಾರಣದಿಂದ ಅವರ ಪುತ್ರ ಉಮೇಶ್ ಮೇಟಿಯವರನ್ನು ಕಾಂಗ್ರೆಸ್ ಅಭ್ಯರ್ಥಿಯಾಗಿ ಆಯ್ಕೆ ಮಾಡಲಾಗಿದೆ. ಜನರು ಬಹುಮತದೊಂದಿಗೆ ಗೆಲ್ಲಿಸಬೇಕು ಎಂದು ಮತದಾರರಲ್ಲಿ ಮನವಿ ಮಾಡಿದರು.

ಆರ್ಥಿಕ, ಸಾಮಾಜಿಕ ಶಕ್ತಿ ಅಗತ್ಯ

"ನಮ್ಮ ಸರ್ಕಾರ ಮಹಿಳೆಯರು, ದಲಿತರು, ಹಿಂದುಳಿದವರು, ಅಲ್ಪಸಂಖ್ಯಾತರು ಸೇರಿದಂತೆ ಶೋಷಿತ ವರ್ಗಗಳ ಏಳಿಗೆಗೆ ಶ್ರಮಿಸುತ್ತಿದೆ. ತಳಸಮುದಾಯದವರಿಗೆ ಆರ್ಥಿಕ ಮತ್ತು ಸಾಮಾಜಿಕ ಬಲ ತುಂಬಲು ಯೋಜನೆಗಳನ್ನು ಜಾರಿಗೊಳಿಸಿದೆ. ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ಮೂರು ವರ್ಷಗಳಲ್ಲಿ ಎಲ್ಲಾ ಗ್ಯಾರಂಟಿಗಳನ್ನು ಸಮರ್ಪಕವಾಗಿ ಜಾರಿ ಮಾಡಿದೆ. ಇದುವರೆಗೆ 1.31 ಲಕ್ಷ ಕೋಟಿ ರೂ. ಅನುದಾನವನ್ನು ಗ್ಯಾರಂಟಿಗಳಿಗೆ ವ್ಯಯಿಸಲಾಗಿದೆ" ಎಂದರು.

ವೈದ್ಯಕೀಯ ಕಾಲೇಜು, ಹೆಚ್.ವೈ.ಮೇಟಿ ಕನಸು

ಹೆಚ್.ವೈ.ಮೇಟಿಯವರು 5 ಬಾರಿ ಶಾಸಕರಾಗಿ, ಸಚಿವರಾಗಿ, ಸಂಸದರಾಗಿ ಸೇವೆ ಸಲ್ಲಿಸಿದ ಜನಾನುರಾಗಿ ನಾಯಕರಾಗಿದ್ದರು, ಜಾತಿ ಬೇಧವಿಲ್ಲದೇ ಜನರ ಸೇವೆ ಸಲ್ಲಿಸಿದ್ದರು. ಬಾಗಲಕೋಟೆಗೆ ವೈದ್ಯಕೀಯ ಕಾಲೇಜು ಸ್ಥಾಪನೆಯ ಕನಸು ಕಂಡಿದ್ದರು. ಅದರಂತೆ ಇಲ್ಲಿ ವೈದ್ಯಕೀಯ ಕಾಲೇಜಿಗೆ ಶಂಕುಸ್ಥಾಪನೆಯನ್ನು ಮಾಡಲಾಗಿದೆ. ಆದ್ದರಿಂದ ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸಿದ ಹೆಚ್.ವೈ.ಮೇಟಿಯವರ ಪುತ್ರ ಉಮೇಶ್ ಮೇಟಿಯವರನ್ನು ಬಹುಮತದಿಂದ ಆಯ್ಕೆ ಮಾಡಬೇಕೆಂದರು.

ಸಾಮಾಜಿಕ ನ್ಯಾಯದಲ್ಲಿ ನಂಬಿಕೆ

ಸಾಮಾಜಿಕ ನ್ಯಾಯದಲ್ಲಿ ನಂಬಿಕೆಯಿಟ್ಟುಕೊಂಡಿರುವುದು ಕಾಂಗ್ರೆಸ್‌ ಪಕ್ಷ. ಕಾನೂನಿನ ದೃಷ್ಟಿಯಲ್ಲಿ ಎಲ್ಲರೂ ಸಮಾನರು ಹಾಗೂ ಎಲ್ಲರಿಗೂ ಸಮಾನ ರಕ್ಷಣೆ ದೊರೆಯಬೇಕು. ದುರ್ಬಲ ವರ್ಗದವರಿಗೆ, ಮಹಿಳೆಯರಿಗೆ, ಮಕ್ಕಳಿಗೆ, ಅಶಕ್ತರಿಗೆ ಆದ್ಯತೆ ಮೇರೆಗೆ ರಕ್ಷಣೆ ನೀಡಬೇಕೆಂದು ಪೊಲೀಸ್ ಇಲಾಖೆಗೆ ಸೂಚಿಸಲಾಗಿದೆ. ಇದು ನಮ್ಮ ಸರ್ಕಾರದ ಧ್ಯೇಯ ಎಂದರು.

ಕಾಂಗ್ರೆಸ್‌ನಿಂದ ಬಡವರ ಪರ ಕೆಲಸ

ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟ ಪಕ್ಷ ಕಾಂಗ್ರೆಸ್. ಹಾಗಾಗಿ ಎಲ್ಲರೂ ಪಕ್ಷವನ್ನು ಬೆಂಬಲಿಸಬೇಕು. ಬಿಜೆಪಿ ಎಂದಿಗೂ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗಿಯಾಗಿರಲಿಲ್ಲ. ಸ್ವಾತಂತ್ರ್ಯ ಲಭಿಸದೆ ಹೋಗಿದ್ದರೆ ನಾವು ಗುಲಾಮರಾಗಿಯೇ ಇರುತ್ತಿದ್ದೆವು. ಕಾಂಗ್ರೆಸ್ ಎಲ್ಲಾ ಕಾಲದಲ್ಲಿಯೂ ಬಡವರ ಪರವಾಗಿ ಕೆಲಸ ಮಾಡಿಕೊಂಡು ಬಂದಿದೆ. ಬಿಜೆಪಿಯವರು ಕರ್ನಾಟಕದಲ್ಲಿ 9 ವರ್ಷಗಳ ಕಾಲ ಅಧಿಕಾರ ಮಾಡಿದ್ದಾರೆ. ಏನು ಮಾಡಿದ್ದಾರೆ ಎಂದು ಅವರು ಜನರ ಮುಂದೆ ಹೇಳುವುದೇ ಇಲ್ಲ. ಅದರ ಬದಲಿಗೆ ನಮ್ಮ ಸರ್ಕಾರವನ್ನು ಟೀಕೆ , ಅಪಪ್ರಚಾರ ಮಾಡಿಕೊಂಡು ಓಡಾಡಿದ್ದಾರೆ. ಬಿಜೆಪಿ ನುಡಿದಂತೆ ನಡೆದ ಪಕ್ಷವಲ್ಲ ಎಂದು ವಾಗ್ದಾಳಿ ನಡೆಸಿದರು.

ನಿರುದ್ಯೋಗ ಹೆಚ್ಚಳ

ನರೇಂದ್ರ ಮೋದಿಯವರು 2014 ರಲ್ಲಿ ಹೇಳಿದ್ದನ್ನು ಇಲ್ಲಿಯವರೆಗೂ ಜಾರಿ ಮಾಡಿಲ್ಲ. ಅಚ್ಚೇ ದಿನ್ ಆಯೇಗಾ ಎಂದು ಹೇಳಿದ್ದರು. ಬಡತನ ಹೋಗುತ್ತದೆ, ನಿರುದ್ಯೋಗ ಹೋಗಲಾಡಿಸಲಾಗುತ್ತದೆ, ರೈತರ ಆದಾಯ ದುಪ್ಪಟಾಗುತ್ತದೆ ಎಂದೆಲ್ಲಾ ಹೇಳಿದ್ದರು. ಒಳ್ಳೆ ದಿನಗಳು ಬರಲಿಲ್ಲ, ರೈತರ ಆದಾಯವೂ ಎರಡು ಪಟ್ಟು ಆಗಲಿಲ್ಲ. ವಿದೇಶದಲ್ಲಿರುವ ಕಪ್ಪು ಹಣವನ್ನು ತಂದು ಪ್ರತಿ ಮನೆಗೆ 15 ಲಕ್ಷ ರೂಪಾಯಿ ಕೊಡುತ್ತೇನೆ ಎಂದಿದ್ದರು, ಕೊಟ್ಟರೇ ಎಂದು ಪ್ರಶ್ನಿಸಿದರು.

ದೇಶದಲ್ಲಿ ರೈತರಿಗೆ ಉಳುವವನೇ ಭೂಮಿಯ ಒಡೆಯ ಎಂದು ಮಾಡಿದ್ದು, ಮಲ ಹೊರುವ ಪದ್ದತಿ ನಿಷೇಧ, ಸಾಲ ಮನ್ನಾ ಮಾಡಿದ್ದು, ಕಾಂಗ್ರೆಸ್ ಸರ್ಕಾರ. ಬಿಜೆಪಿ 28 ಕೋಟಿ ಉದ್ಯೋಗ ಸೃಷ್ಟಿ ಮಾಡಿದ್ದರೆ ನಿರುದ್ಯೋಗ ಸಮಸ್ಯೆಯೇ ಇರುತ್ತಿರಲಿಲ್ಲ. ನಮ್ಮ ಸರ್ಕಾರ ಯುವನಿಧಿ ಯೋಜನೆಯನ್ನು ಜಾರಿ ಮಾಡಿದೆ. ಇದನ್ನು ಬಿಜೆಪಿ ಏಕೆ ಮಾಡಲಿಲ್ಲ. ರಾಜಕೀಯ ಸ್ವಾತಂತ್ರ್ಯ ಯಶಸ್ವಿಯಾಗಲು ಪ್ರತಿಯೊಬ್ಬರೂ , ಸಾಮಾಜಿಕ, ಶೈಕ್ಷಣಿಕವಾಗಿ ಪ್ರಬಲರಾಗಬೇಕು ಎಂದರು.

Read More
Next Story