
ಸಿದ್ದರಾಮಯ್ಯ ಅವರು ಎಕ್ಸ್ ಪೋಸ್ಟ್ನಲ್ಲಿ ಬಳಸಿರುವ ಚಿತ್ರ.
ಎಲ್‌ಪಿಜಿ ಸಿಲಿಂಡರ್ ಬೆಲೆ ಏರಿಕೆ: ಪ್ರಧಾನಿ ಮೋದಿ ಕ್ಷಮೆಯಾಚಿಸಿ, ರಾಜೀನಾಮೆ ನೀಡಲಿ ಎಂದ ಸಿದ್ದರಾಮಯ್ಯ
ಜಾಲತಾಣಗಳಲ್ಲಿ ಕಿಡಿಕಾರಿರುವ ಪ್ರಧಾನಿ ವಿರುದ್ಧ ಸಿಎಂ ಸಿಲಿಂಡರ್ ಬೆಲೆ ಏರಿಕೆಯು ಯಾವುದೇ ಅನಿವಾರ್ಯ ಕ್ರಮವಲ್ಲ, ಬದಲಾಗಿ ಇದು ಅಮೆರಿಕದ ಮಾತುಗಳಿಗೆ ಮೂಕರಂತೆ ತಲೆಯಾಡಿಸುವ ಶರಣಾಗತಿಯ ವಿದೇಶಾಂಗ ನೀತಿಯ ಫಲ ಎಂದಿದ್ದಾರೆ.
ದೇಶದಲ್ಲಿ ಹಣದುಬ್ಬರ ಮತ್ತು ಬೆಲೆ ಏರಿಕೆಯಿಂದ ತತ್ತರಿಸಿರುವ ಬಡ ಮತ್ತು ಮಧ್ಯಮ ವರ್ಗದ ಜನರ ಮೇಲೆ ಗೃಹ ಬಳಕೆಯ ಎಲ್‌ಪಿಜಿ ಸಿಲಿಂಡರ್ ದರವನ್ನು 60 ರೂ.ಗಳಷ್ಟು ಹೆಚ್ಚಿಸುವ ಮೂಲಕ ಕೇಂದ್ರ ಸರ್ಕಾರ ಗಾಯದ ಮೇಲೆ ಬರೆ ಎಳೆದಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಈ ಬೆಲೆ ಏರಿಕೆಗೆ ಕೇಂದ್ರ ಸರ್ಕಾರದ ವಿದೇಶಾಂಗ ನೀತಿಯ ವೈಫಲ್ಯವೇ ಕಾರಣ ಎಂದು ಗಂಭೀರ ಆರೋಪ ಮಾಡಿರುವ ಅವರು, ಪ್ರಧಾನಿ ನರೇಂದ್ರ ಮೋದಿ ಅವರು ದೇಶದ ಜನರ ಬಹಿರಂಗ ಕ್ಷಮೆಯಾಚಿಸಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದ್ದಾರೆ.
ಅಮೆರಿಕಕ್ಕೆ ಶರಣಾಗತಿ ಮತ್ತು ಇಂಧನ ಬಿಕ್ಕಟ್ಟು
ಈ ಕುರಿತು ಎಕ್ಸ್ (ಟ್ವಿಟರ್) ಸಾಮಾಜಿಕ ಜಾಲತಾಣದಲ್ಲಿ ಸುದೀರ್ಘವಾಗಿ ಕಿಡಿಕಾರಿರುವ ಅವರು, ಸಿಲಿಂಡರ್ ಬೆಲೆ ಏರಿಕೆಯು ಯಾವುದೇ ಅನಿವಾರ್ಯ ಕ್ರಮವಲ್ಲ, ಬದಲಾಗಿ ಇದು ಅಮೆರಿಕದ ಮಾತುಗಳಿಗೆ ಮೂಕರಂತೆ ತಲೆಯಾಡಿಸುವ ಶರಣಾಗತಿಯ ವಿದೇಶಾಂಗ ನೀತಿಯ ಫಲವಾಗಿದೆ ಎಂದು ಟೀಕಿಸಿದ್ದಾರೆ. ಭಾರತದ ವ್ಯೂಹಾತ್ಮಕ ಸ್ವಾತಂತ್ರ್ಯವನ್ನು ಬೇರೊಂದು ರಾಷ್ಟ್ರದ ಪಾದದಡಿ ಇಟ್ಟಿರುವ ಪ್ರಧಾನಿ ಮೋದಿಯವರು, ದಶಕಗಳಿಂದ ಭಾರತಕ್ಕೆ ಇಂಧನ ಸ್ಥಿರತೆಯನ್ನು ಒದಗಿಸುತ್ತಿದ್ದ ರಷ್ಯಾ ಮತ್ತು ಇರಾನ್‌ನಂತಹ ದೇಶಗಳೊಂದಿಗಿನ ದೀರ್ಘಕಾಲೀನ ಸಹಭಾಗಿತ್ವವನ್ನು ಸಂಪೂರ್ಣವಾಗಿ ಹಾಳುಗೆಡವಿದ್ದಾರೆ. ನೆಲಕ್ಕೆ ಬಿದ್ದವನಿಗೆ ಒದ್ದಂತೆ, ಈಗಾಗಲೇ ಬೆಲೆ ಏರಿಕೆಯಿಂದ ಕಂಗೆಟ್ಟಿರುವ ಜನಸಾಮಾನ್ಯರ ಜೀವನ ನಿರ್ವಹಣೆಯ ವೆಚ್ಚವನ್ನು ಈ ನಿರ್ಧಾರವು ಮತ್ತಷ್ಟು ದುಬಾರಿಯಾಗಿಸಲಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನೆಹರೂ ಎಚ್ಚರಿಕೆ ಮತ್ತು ನರವಣೆ ಕೃತಿಯ ಉಲ್ಲೇಖ
"ವಿದೇಶಾಂಗ ನೀತಿಯು ಆರ್ಥಿಕ ನೀತಿಯ ಪರಿಣಾಮವಾಗಿದೆ" ಎಂಬ ಪಂಡಿತ್ ಜವಾಹರಲಾಲ್ ನೆಹರೂ ಅವರ ಏಳೆಂಟು ದಶಕಗಳ ಹಿಂದಿನ ಎಚ್ಚರಿಕೆ ಇಂದು ಅಕ್ಷರಶಃ ಸತ್ಯವಾಗಿದೆ ಎಂದು ಸಿದ್ದರಾಮಯ್ಯ ಉಲ್ಲೇಖಿಸಿದ್ದಾರೆ. ರಾಜತಾಂತ್ರಿಕತೆ ಎನ್ನುವುದು ಕಾರ್ಯತಂತ್ರವಾಗದೆ ಕೇವಲ ಪ್ರದರ್ಶನದ ವಸ್ತುವಾದಾಗ, ಅನಿವಾರ್ಯವಾಗಿ ಜನಸಾಮಾನ್ಯರು ಅದಕ್ಕೆ ಬಲಿಯಾಗಬೇಕಾಗುತ್ತದೆ ಎಂದಿದ್ದಾರೆ. ಇತ್ತೀಚೆಗಷ್ಟೇ ಮಾಜಿ ಸೇನಾ ಮುಖ್ಯಸ್ಥ ಜನರಲ್ ಎಂ.ಎಂ. ನರವಣೆ ಅವರು ತಮ್ಮ ಪುಸ್ತಕದಲ್ಲಿ, ಭಾರತದ ವಿದೇಶಾಂಗ ನೀತಿ ನಿರ್ಧಾರಗಳಲ್ಲಿ ಸಾಂಸ್ಥಿಕ ಸಮಾಲೋಚನೆ ಮತ್ತು ವ್ಯೂಹಾತ್ಮಕ ತಿಳುವಳಿಕೆಯ ಕೊರತೆಯ ಬಗ್ಗೆ ಕಳವಳ ವ್ಯಕ್ತಪಡಿಸಿದ್ದರು. ಇದು ಪ್ರಧಾನಿಗಳಿಗೆ ರಾಜತಾಂತ್ರಿಕತೆಯ ಮೂಲಭೂತ ತಿಳುವಳಿಕೆ ಇಲ್ಲದಿರುವುದನ್ನು ಖಚಿತಪಡಿಸುತ್ತದೆ ಎಂದು ಅವರು ವಿಶ್ಲೇಷಿಸಿದ್ದಾರೆ.
ಎಫ್‌ಸ್ಟೀನ್ ಫೈಲ್ಸ್ ಭಯ ಮತ್ತು ರಾಜೀನಾಮೆಗೆ ಪಟ್ಟು
ಭಾರತದ ಇಂದಿನ ವಿದೇಶಾಂಗ ನೀತಿಯ ಸಂಪೂರ್ಣ ವೈಫಲ್ಯವು ಪ್ರಧಾನಿ ನರೇಂದ್ರ ಮೋದಿ ಅವರಿಗೆ 'ಎಫ್‌ಸ್ಟೀನ್ ಫೈಲ್ಸ್' (Epstein Files) ಬಗೆಗಿನ ಭಯ ಮತ್ತು ರಾಜತಾಂತ್ರಿಕ ನಿರ್ಧಾರಗಳಲ್ಲಿನ ಅಜ್ಞಾನವನ್ನು ಎತ್ತಿತೋರಿಸುತ್ತದೆ ಎಂದು ಸಿದ್ದರಾಮಯ್ಯ ಗಂಭೀರ ಆರೋಪ ಮಾಡಿದ್ದಾರೆ. ತಮ್ಮ ಈ ರಾಜತಾಂತ್ರಿಕ ವೈಫಲ್ಯಕ್ಕೆ ಕೋಟ್ಯಂತರ ಭಾರತೀಯರು ಏಕೆ ಬೆಲೆ ತೆರಬೇಕು ಎಂಬುದನ್ನು ಪ್ರಧಾನಿಗಳು ಮೊದಲು ದೇಶಕ್ಕೆ ಸ್ಪಷ್ಟಪಡಿಸಬೇಕು. ಜಾಗತಿಕ ಮಟ್ಟದಲ್ಲಿ ದೇಶದ ಮಾನ ಕಳೆಯುತ್ತಿರುವ ಮೋದಿಯವರು, ತಕ್ಷಣವೇ ಬಹಿರಂಗವಾಗಿ ದೇಶದ ಜನತೆಯ ಕ್ಷಮೆಯಾಚಿಸಬೇಕು ಹಾಗೂ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಮುಖ್ಯಮಂತ್ರಿಗಳು ಕಠಿಣ ಶಬ್ದಗಳಲ್ಲಿ ಒತ್ತಾಯಿಸಿದ್ದಾರೆ.

