
ನವದೆಹಲಿಯ ಕರ್ನಾಟಕ ಭವನದಲ್ಲಿ ಸಿಎಂ ಸಿದ್ದರಾಮಯ್ಯ ಸೇರಿದಂತೆ ಸಚಿವರು ಹಾಗೂ ಶಾಸಕರು ಭೋಜನ ಸೇವಿಸಿದರು.
ಒಳ ಮೀಸಲು ಬಿಕ್ಕಟ್ಟು, ಸಂಪುಟ ಪುನರ್‌ರಚನೆ ಚರ್ಚೆ: ಮಾ.16ರಂದು ಸಚಿವರ ಸಭೆ ಕರೆದ ಸಿಎಂ
ಔತಣಕೂಟದ ಜೊತೆಗೆ ರಾಜ್ಯದ ಪ್ರಸ್ತುತ ರಾಜಕೀಯ ಹಾಗೂ ಸಾಮಾಜಿಕ ಬೆಳವಣಿಗೆಗಳ ಬಗ್ಗೆ ಸಚಿವರೊಂದಿಗೆ ಮುಖ್ಯಮಂತ್ರಿಗಳು ಸುದೀರ್ಘ ಸಮಾಲೋಚನೆ ನಡೆಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ರಾಜ್ಯದಲ್ಲಿ ಒಳ ಮೀಸಲಾತಿ ಜಾರಿ ಕುರಿತ ಗೊಂದಲ ಹಾಗೂ ಸಚಿವ ಸಂಪುಟ ಪುನರ್‌ರಚನೆಯ ಊಹಾಪೋಹಗಳ ನಡುವೆಯೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ಸಂಪುಟ ಸಹೋದ್ಯೋಗಿಗಳ ಮಹತ್ವದ ಸಭೆಯನ್ನು ಕರೆದಿದ್ದಾರೆ. ಮುಂಬರುವ ವಿಶೇಷ ಸಚಿವ ಸಂಪುಟ ಸಭೆಗೂ ಮುನ್ನ ನಡೆಯುತ್ತಿರುವ ಈ ಸಭೆ ರಾಜ್ಯ ರಾಜಕಾರಣದಲ್ಲಿ ತೀವ್ರ ಕುತೂಹಲ ಕೆರಳಿಸಿದೆ.
ಮಾರ್ಚ್ 16ರ ಸೋಮವಾರದಂದು ಮುಖ್ಯಮಂತ್ರಿಗಳ ಅಧಿಕೃತ ನಿವಾಸ 'ಕಾವೇರಿ'ಯಲ್ಲಿ ರಾತ್ರಿ ಭೋಜನಕೂಟದ ನೆಪದಲ್ಲಿ ಈ ಸಭೆಯನ್ನು ಆಯೋಜಿಸಲಾಗಿದೆ. ಔತಣಕೂಟದ ಜೊತೆಗೆ ರಾಜ್ಯದ ಪ್ರಸ್ತುತ ರಾಜಕೀಯ ಹಾಗೂ ಸಾಮಾಜಿಕ ಬೆಳವಣಿಗೆಗಳ ಬಗ್ಗೆ ಸಚಿವರೊಂದಿಗೆ ಮುಖ್ಯಮಂತ್ರಿಗಳು ಸುದೀರ್ಘ ಸಮಾಲೋಚನೆ ನಡೆಸಲಿದ್ದಾರೆ. ವಿಶೇಷ ಸಚಿವ ಸಂಪುಟ ಸಭೆಯಲ್ಲಿ ಕೈಗೊಳ್ಳಬೇಕಾದ ನಿರ್ಣಯಗಳ ಬಗ್ಗೆಯೂ ಇಲ್ಲಿ ಪೂರ್ವಭಾವಿ ಚರ್ಚೆ ನಡೆಯುವ ಸಾಧ್ಯತೆಯಿದೆ.
ಒಳ ಮೀಸಲಾತಿ ಗೊಂದಲದ ಬಗ್ಗೆ ಚರ್ಚೆ
ಸಭೆಯಲ್ಲಿ ಪ್ರಮುಖವಾಗಿ 'ಒಳ ಮೀಸಲಾತಿ' ಹಂಚಿಕೆ ಮತ್ತು ಜಾರಿ ವಿಚಾರವಾಗಿ ಗಂಭೀರ ಚರ್ಚೆ ನಡೆಯುವ ನಿರೀಕ್ಷೆಯಿದೆ. ಒಳ ಮೀಸಲಾತಿ ಆಧಾರದ ಮೇಲೆಯೇ ಮುಂದಿನ ಸರ್ಕಾರಿ ನೇಮಕಾತಿಗಳನ್ನು ನಡೆಸಬೇಕು ಎಂದು ದಲಿತ ಎಡಗೈ ಸಮುದಾಯದ ನಾಯಕರು ಪಟ್ಟು ಹಿಡಿದಿದ್ದಾರೆ. ಇದರಿಂದಾಗಿ ರಾಜಕೀಯ ವಲಯದಲ್ಲಿ ಒಳ ಮೀಸಲಾತಿ ತಿಕ್ಕಾಟ ತೀವ್ರ ಸ್ವರೂಪ ಪಡೆದುಕೊಂಡಿದ್ದು, ಸರ್ಕಾರಕ್ಕೆ ತಲೆನೋವಾಗಿ ಪರಿಣಮಿಸಿದೆ. ಈ ಬಿಕ್ಕಟ್ಟನ್ನು ಶಮನಗೊಳಿಸುವ ನಿಟ್ಟಿನಲ್ಲಿ ಹಾಗೂ ಸಮುದಾಯಗಳ ನಡುವಿನ ಗೊಂದಲ ಬಗೆಹರಿಸಲು ಸಚಿವರ ಅಭಿಪ್ರಾಯ ಸಂಗ್ರಹಿಸಲು ಸಿಎಂ ಮುಂದಾಗಿದ್ದಾರೆ.
ಇದರ ಜೊತೆಗೆ, ಕಳೆದ ಕೆಲವು ದಿನಗಳಿಂದ ಆಡಳಿತ ಪಕ್ಷದಲ್ಲಿ ಸಂಪುಟ ಪುನರ್‌ರಚನೆಯ ಚರ್ಚೆಗಳು ಕೂಡ ಮುನ್ನೆಲೆಗೆ ಬಂದಿವೆ. ಈ ಎಲ್ಲ ಮಹತ್ವದ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಸೋಮವಾರದ ಸಚಿವರ ಸಭೆ ಭಾರಿ ಪ್ರಾಮುಖ್ಯತೆ ಪಡೆದುಕೊಂಡಿದೆ.

