
ಪ್ರಧಾನಿ ನರೇಂದ್ರ ಮೋದಿ ಹಾಗೂ ಸಿಎಂ ಸಿದ್ದರಾಮಯ್ಯ
ಕೇಂದ್ರದಿಂದ 'ತೆರಿಗೆ ದರೋಡೆʼ; ದನಿ ಎತ್ತದ ಬಿಜೆಪಿ ನಾಯಕರಿಗೆ ಸಿಎಂ ತಿರುಗೇಟು
ಕಳೆದ ಮೂರು ವರ್ಷಗಳಲ್ಲಿ ಹಲವಾರು ಬಾರಿ ತೆರಿಗೆ ದರೋಡೆಯನ್ನು ಕೇಂದ್ರ ಸರ್ಕಾರದ ಗಮನಕ್ಕೆ ತಂದಿದ್ದೇವೆ. ದೆಹಲಿಗೆ ಹೋಗಿ ಅನ್ಯಾಯವನ್ನು ಕೂಗಿ ಹೇಳಿದ್ದೇವೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ರಾಜ್ಯ ಮತ್ತು ಕೇಂದ್ರ ಸರ್ಕಾರದ ನಡುವಿನ 'ತೆರಿಗೆ ಹಂಚಿಕೆ' ಸಂಘರ್ಷ ಈಗ ಮತ್ತೊಂದು ಹಂತಕ್ಕೆ ತಲುಪಿದೆ. ಕೇಂದ್ರ ಸರ್ಕಾರವು ಕರ್ನಾಟಕಕ್ಕೆ ನೀಡುತ್ತಿರುವ ತೆರಿಗೆ ಪಾಲಿನ ಅನ್ಯಾಯವನ್ನು "ತೆರಿಗೆ ದರೋಡೆ" ಎಂದು ಕರೆಯುವ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜ್ಯ ಬಿಜೆಪಿ ನಾಯಕರ ವಿರುದ್ಧ ಕಿಡಿಕಾರಿದ್ದಾರೆ.
"ಕನ್ನಡಿಗರು ನೀಡುವ ಒಂದು ರೂಪಾಯಿ ತೆರಿಗೆಗೆ ಪ್ರತಿಯಾಗಿ ಕೇಂದ್ರ ನೀಡುತ್ತಿರುವುದು ಕೇವಲ 15 ಪೈಸೆ ಮಾತ್ರ" ಎಂದು ಅಂಕಿ-ಅಂಶಗಳ ಸಹಿತ ಸಿಎಂ ವಾಗ್ದಾಳಿ ನಡೆಸಿದ್ದಾರೆ.
ಬುಧವಾರ(ಏ.1) ಈ ಕುರಿತು ಪ್ರಕಟಣೆ ಹೊರಡಿಸಿರುವ ಅವರು, "ಕಳೆದ ಹಣಕಾಸು ವರ್ಷದಲ್ಲಿ ಕೇಂದ್ರ ಸರ್ಕಾರ ರಾಜ್ಯದಿಂದ ರೂ.4.50 ಲಕ್ಷ ಕೋಟಿಗೂ ಹೆಚ್ಚು ಸಂಪನ್ಮೂಲವನ್ನು ತೆರಿಗೆ, ಸೆಸ್, ಸರ್ ಚಾರ್ಜ್ ಮೂಲಕ ಸಂಗ್ರಹಿಸಿದೆ. ಇದಕ್ಕೆ ಪ್ರತಿಯಾಗಿ ನೀಡಿದ್ದು ರೂ.79,000 ಕೋಟಿ ಮಾತ್ರ. ಕಳೆದ ಮೂರು ವರ್ಷಗಳಲ್ಲಿ ಹಲವಾರು ಬಾರಿ ಈ ತೆರಿಗೆ ದರೋಡೆಯನ್ನು ಕೇಂದ್ರ ಸರ್ಕಾರದ ಗಮನಕ್ಕೆ ತಂದಿದ್ದೇವೆ. ದೆಹಲಿಗೆ ಹೋಗಿ ಸಂಸತ್ ಭವನದ ಎದುರಿಗೆ ನಿಂತು ಈ ಅನ್ಯಾಯವನ್ನು ಕೂಗಿ ಹೇಳಿದ್ದೇವೆ. ಆಗ ಬಾಯಿ ಮುಚ್ಚಿಕೊಂಡು ಏಳುಕೋಟಿ ಕನ್ನಡಿಗರಿಗೆ ದ್ರೋಹ ಬಗೆದಿರುವ ಈ ಬಸವರಾಜ ಬೊಮ್ಮಾಯಿ, ಆರ್.ಅಶೋಕ್ ಮೊದಲಾದ ಬಿಜೆಪಿ ನಾಯಕರು ಈಗ ನಮ್ಮ ವಿರುದ್ಧ ಕೂಗು ಹಾಕುತ್ತಿದ್ದಾರೆ" ಎಂದಿದ್ದಾರೆ.
ಕರ್ನಾಟಕವು ಜಿಎಸ್‌ಟಿ ಸಂಗ್ರಹದಲ್ಲಿ ಗಮನಾರ್ಹ ಸಾಧನೆ ಮಾಡಿದೆ. ಜಿಎಸ್‌ಟಿ ಸಂಗ್ರಹದಲ್ಲಿ ದೇಶದಲ್ಲೇ ಎರಡನೇ ಸ್ಥಾನದಲ್ಲಿದೆ. ಇನ್ನು ಜಿಎಸ್‌ಟಿ ಸಂಗ್ರಹದ ಬೆಳೆವಣಿಗೆ ದರ ಗಮನಿಸಿದರೆ ಶೇ.17ರ ಸಾಧನೆ ಮೂಲಕ ದೇಶದಲ್ಲೇ ಮೊದಲ ಸ್ಥಾನದಲ್ಲಿ ಕರ್ನಾಟಕವಿದೆ. ವಿಪರ್ಯಾಸವೆಂದರೆ ಈ ಪ್ರಮಾಣದಲ್ಲಿ ಜಿಎಸ್‌ಟಿ ಹಣವನ್ನು ಕೇಂದ್ರಕ್ಕೆ ಸಂಗ್ರಹಿಸಿ ನೀಡಿದರೂ ಇದರಿಂದ ರಾಜ್ಯಕ್ಕೆ ಮರಳಿ ದೊರೆಯುತ್ತಿರುವುದು ಶೇ.52 ರಷ್ಟು ಪಾಲು ಮಾತ್ರ. ಜಿಎಸ್‌ಟಿಯ ಅವೈಜ್ಞಾನಿಕ ಅನುಷ್ಠಾನದಿಂದ ಕರ್ನಾಟಕವು ಸಾವಿರಾರು ಕೋಟಿ ರೂ. ಕಳೆದುಕೊಂಡಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಕೇಂದ್ರ ಪ್ರಾಯೋಜಿತ ಯೋಜನೆಗೆ ಅನುದಾನವಿಲ್ಲ
15ನೇ ಹಣಕಾಸಿನಲ್ಲಿ ರಾಜ್ಯಕ್ಕೆ ನ್ಯಾಯಬದ್ಧ ತೆರಿಗೆ ಪಾಲು ನೀಡದೇ ಕೇಂದ್ರ ಸರ್ಕಾರ ವಿಧಿಸುವ ಸೆಸ್‌ಗಳು ಮತ್ತು ಸರ್‌ಚಾರ್ಜ್‌ಗಳನ್ನು ರಾಜ್ಯಗಳಿಗೆ ಹಂಚಿಕೆ ಮಾಡಿಲ್ಲ. ಜಿಎಸ್‌ಟಿ ಜಾರಿಯಿಂದ ರಾಜ್ಯಕ್ಕಾಗಿರುವ ನಷ್ಟವನ್ನು ಸರಿದೂಗಿಸಲು ಪರಿಹಾರ ನೀಡದೇ ಮತ್ತು ಕೇಂದ್ರ ಪ್ರಾಯೋಜಿತ ಯೋಜನೆಗಳಿಗೆ ಅನುದಾನ ನೀಡದೆ ಕೇಂದ್ರ ಸರ್ಕಾರವು ಕರ್ನಾಟಕ ಸರ್ಕಾರವನ್ನು ಸಾಲ ಮಾಡಲೇಬೇಕಾದ ಅಸಹಾಯಕ ಪರಿಸ್ಥಿತಿಗೆ ತಳ್ಳಿದೆ ಎಂದು ಸಿಎಂ ಕಿಡಿಕಾರಿದ್ದಾರೆ.
ರಾಜ್ಯದ ಪಾಲು ಇಳಿಕೆ
ತೆರಿಗೆ ಹಂಚಿಕೆ, ಜಿಎಸ್‌ಟಿ ಪರಿಹಾರ ಮತ್ತು ಕೇಂದ್ರ ಪ್ರಾಯೋಜಿತ ಯೋಜನೆಗಳಿಗೆ ನೀಡುವ ಅನುದಾನದಲ್ಲಿ ಅನ್ಯಾಯ ಮಾಡದೆ ನಮಗೆ ಸಿಗಬೇಕಾದ ನ್ಯಾಯಬದ್ಧ ಸಂಪನ್ಮೂಲದ ಪಾಲು ನೀಡಿದರೆ ಒಂದು ಪೈಸೆ ಸಾಲ ಮಾಡುವ ಪರಿಸ್ಥಿತಿ ಇರುವುದಿಲ್ಲ. ಈ ಸವಾಲನ್ನು ಸ್ವೀಕರಿಸಲು ಬಿಜೆಪಿ ನಾಯಕರು ಸಿದ್ಧರಿದ್ದಾರಾ?, ಮಹಾರಾಷ್ಟ್ರದ ನಂತರ ಕೇಂದ್ರ ಸರ್ಕಾರಕ್ಕೆ ಅತ್ಯಧಿಕ ಪ್ರಮಾಣದ ತೆರಿಗೆ ನೀಡುವ ರಾಜ್ಯ ನಮ್ಮದು. ದೇಶದ ಸಂಪತ್ತಿಗೆ ಕರ್ನಾಟಕವು ವರ್ಷದಿಂದ ವರ್ಷಕ್ಕೆ ಹೆಚ್ಚೆಚ್ಚು ಕೊಡುಗೆ ನೀಡುತ್ತಲೇ ಬಂದರೂ ಕೇಂದ್ರದಿಂದ ಕರ್ನಾಟಕಕ್ಕೆ ದೊರೆಯಬೇಕಾದ ನ್ಯಾಯಯುತ ಪಾಲಿನಲ್ಲಿ ವರ್ಷದಿಂದ ವರ್ಷಕ್ಕೆ ಇಳಿಕೆಯಾಗುತ್ತಿದೆ ಎಂದಿದ್ದಾರೆ.
ದೇಶದ ಪ್ರತಿ ಪ್ರಜೆ ಮೇಲೆ 1.50 ಲಕ್ಷ ರೂ. ಸಾಲ
ನಮ್ಮ ಸರ್ಕಾರ ಮಾಡಿರುವ ಸಾಲವನ್ನು ಅತಿರಂಜಿತವಾಗಿ ಬಣ್ಣಿಸುವ ಬಿಜೆಪಿ ನಾಯಕರಿಗೆ ಕೇಂದ್ರ ಸರ್ಕಾರ ಪ್ರತಿಯೊಬ್ಬ ಭಾರತೀಯನ ತಲೆ ಮೇಲೆ ಹೊರಿಸಿರುವ ಸಾಲದ ಹೊರೆ ಕಾಣಿಸುವುದೇ ಇಲ್ಲ. ಪ್ರಧಾನಿ ನರೇಂದ್ರ ಮೋದಿಯವರು 2014ರಲ್ಲಿ ಪ್ರಧಾನಿ ಪಟ್ಟಕ್ಕೇರಿದಾಗ ಇದ್ದ ದೇಶದ ಸಾಲದ ಮೊತ್ತ ರೂ.51.06 ಲಕ್ಷ ಕೋಟಿ, 2026-27ನೇ ಸಾಲಿನ ಬಜೆಟ್ ನಲ್ಲಿ ಇದು ರೂ.214 ಲಕ್ಷ ಕೋಟಿಗೆ ಏರಿದೆ. ಈ ಲೆಕ್ಕದ ಪ್ರಕಾರ ಪ್ರತಿಯೊಬ್ಬ ಭಾರತೀಯನ ತಲೆ ಮೇಲೆ 1.5 ಲಕ್ಷ ರೂ. ಸಾಲದ ಹೊರೆ ಇದೆ. ಮೋದಿಯವರ ಸಾಲದ ಹೊರೆ ರಾಜ್ಯದ ಏಳು ಕೋಟಿ ಕನ್ನಡಿಗರ ತಲೆ ಮೇಲೆಯೂ ಇದೆ ಎನ್ನುವುದನ್ನು ಬೊಮ್ಮಾಯಿ ಮತ್ತು ಅಶೋಕ್ ತಿಳಿದುಕೊಂಡು ಮಾತನಾಡಲಿ ಎಂದು ತಿರುಗೇಟು ನೀಡಿದ್ದಾರೆ.
ಸಿಎಂ ಹೇಳಿಕೆಗೆ ಬೊಮ್ಮಾಯಿ ತಿರುಗೇಟು
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ವೈಫಲ್ಯ ಮುಚ್ಚಿಕೊಳ್ಳಲು ಮತ್ತು ರಾಜಕಿಯ ಲಾಭಕ್ಕಾಗಿ ಜಾರಿಗೆ ತಂದಿರುವ ಗ್ಯಾರಂಟಿ ಯೋಜನೆಗಳಿಗಾಗಿ ತೆರಿಗೆ ಭಯೋತ್ಪಾದನೆ ಮಾಡುತ್ತಿದ್ದಾರೆ ಎಂದು ಮಾಜಿ ಸಿಎಂ ಬಸವರಾಜು ಬೊಮ್ಮಾಯಿ ತಿರುಗೇಟು ನೀಡಿದ್ದಾರೆ.
ಮೊದಲ ಬಜೆಟ್‌ನಲ್ಲಿಯೇ ಸ್ಟಾಂಪ್ ಡ್ಯೂಟಿ, ಅಬಕಾರಿ ತೆರಿಗೆ, ಮೊಟರ್ ವೆಹಿಕಲ್ ತೆರಿಗೆ ಹೆಚ್ಚಳ ಮಾಡಿರುವುದು ಸಿಎಂ ಸಿದ್ದರಾಮಯ್ಯ ಅವರು. ಸಂಪೂರ್ಣ ಅಭಿವೃದ್ಧಿ ನಿಲ್ಲಿಸಿದ ಅಪಖ್ಯಾತಿಯೂ ಅವರಿಗಿದೆ. ತಮ್ಮ ತಪ್ಪು ಮುಚ್ಚಿಕೊಳ್ಳಲು ಸಂಸದರ ಮೇಲೆ ಬೊಟ್ಟು ಮಾಡುವುದು ಎಷ್ಟು ಸರಿ ಎಂದು ಕಿಡಿಕಾರಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪತ್ರಿಕಾ ಹೇಳಿಕೆಗೆ ʼಎಕ್ಸ್ʼ ಮೂಲಕ ತಿರುಗೇಟು ನೀಡಿರುವ ಅವರು, 14 ನೇ ಹಣಕಾಸಿನ ಷರತ್ತುಗಳು ನಿರ್ಧಾರ ಮಾಡುವಾಗ ನಿಮ್ಮದೇ ಸರ್ಕಾರ ಇತ್ತು. ಅದನ್ನು ಅಂತಿಮಗೊಳಿಸುವಾಗ ನಿಮ್ಮ ನೇತೃತ್ವದ ಸಮ್ಮಿಶ್ರ ಸರ್ಕಾರ ಇತ್ತು. ಆಗ ಅದರಲ್ಲಿ ಐದು ಜನ ಕಾಂಗ್ರೆಸ್ಸಿನ ಸಚಿವರಿದ್ದರು. ಆಗ ಬಾಯಿ ಮುಚ್ಚಿಕೊಂಡು ಸುಮ್ಮನಿದ್ದು, ಈಗ ಅನ್ಯಾಯ ಆಗಿದೆ ಅನ್ನುವುದು ಬೂಟಾಟಿಕೆ ಅಲ್ಲವೆ ಎಂದು ಪ್ರಶ್ನಿಸಿದ್ದಾರೆ.
ಜಿಎಸ್ ಟಿ ಜಾರಿಗೆ ತಂದದ್ದು ಯುಪಿಎ ಸರ್ಕಾರ. ಜಿಎಸ್ ಟಿಯ ಎಲ್ಲ ವಿಚಾರಗಳು ಕೌನ್ಸಿಲ್‌ನಲ್ಲಿ ನಿರ್ಧಾರವಾಗಲಿವೆ. ಅದರಲ್ಲಿ ಶಾಶ್ವತ ಸದಸ್ಯ ಸ್ಥಾನದಲ್ಲಿ ಕರ್ನಾಟಕ ಸರ್ಕಾರವೂ ಇರಲಿದೆ. ಇಂತಹ ಪ್ರಮುಖ ವಿಚಾರ ಇದ್ದಾಗ ಮುಖ್ಯಮಂತ್ರಿಗಳು ಒಂದು ಬಾರಿಯೂ ಜಿಎಸ್ ಟಿ ಕೌನ್ಸಿಲ್ ಸಭೆಗೆ ಹೋಗಿಲ್ಲ. ಅಲ್ಲಿ ಕಳಿಸಿರುವ ನಮ್ಮ ರಾಜ್ಯದ ಪ್ರತಿನಿಧಿಗಳು ರಾಜ್ಯದ ಹಿತ ಕಾಪಾಡಲು ಏನು ಕ್ರಮ ತೆಗೆದುಕೊಂಡಿದ್ದಾರೆ. ಅಲ್ಲಿ ಏನೂ ಮಾತನಾಡದೇ ಹೊರಗಡೆ ರಾಜಕಾರಣಕ್ಕಾಗಿ ಈ ಮಾತನಾಡುವುದು ಸರಿಯಲ್ಲ ಎಂದು ಹೇಳಿದ್ದಾರೆ.

