
ನಿರ್ಮಲಾನಂದನಾಥ ಸ್ವಾಮೀಜಿ ಫೋನ್ ಕದ್ದಾಲಿಕೆ ಮಾಡಿದ್ದ ಹೆಚ್ಡಿಕೆ; ಸಿದ್ದರಾಮಯ್ಯ ತಿರುಗೇಟು
2018ರಲ್ಲಿ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಕುಮಾರಸ್ವಾಮಿ ಅವರು ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷರಾದ ಪೂಜ್ಯ ನಿರ್ಮಲಾನಂದನಾಥ ಸ್ವಾಮೀಜಿಯವರ ಫೋನ್ ಕದ್ದಾಲಿಕೆ ಮಾಡಿದ್ದರು ಎಂದು ಗಂಭೀರ ಆರೋಪ ಮಾಡಿದ್ದಾರೆ.
ಕರ್ನಾಟಕದ ರಾಜಕೀಯದಲ್ಲಿ ಫೋನ್ ಕದ್ದಾಲಿಕೆ ವಿಷಯ ಈಗ ಜೋರು ಚರ್ಚೆಗೆ ಕಾರಣವಾಗಿದೆ. ಸೋಮವಾರ ಡಿಸಿಎಂ ಡಿ.ಕೆ ಶಿವಕುಮಾರ್ ಅವರ ಬಣದ ಶಾಸಕರ ಫೋನ್‌ಗಳನ್ನು ಸಿಎಂ ಬಣದ ನಾಯಕರು ಕದ್ದು ಆಲಿಸುತ್ತಿದ್ದಾರೆ ಎಂದು ಜೆಡಿಎಸ್ ವರಿಷ್ಠ ಹಾಗೂ ಕೇಂದ್ರ ಸಚಿವ ಎಚ್ ಡಿ ಕುಮಾರಸ್ವಾಮಿ ಹೇಳಿಕೆ ನೀಡಿದ್ದಕ್ಕೆ ಪ್ರತಿಯಾಗಿ ಸಿಎಂ ಮಂಗಳವಾರ (ಮಾರ್ಚ್ 3) ತಿರುಗೇಟು ನೀಡಿದ್ದಾರೆ. ಕದ್ದಾಲಿಕೆ ಅಭ್ಯಾಸ ಎಚ್ಡಿಕೆ ಅವರದ್ದಾಗಿದ್ದು, ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷ ನಿರ್ಮಲಾನಂದ ಸ್ವಾಮೀಜಿಯರ ಫೋನ್ ಕದ್ದಾಲಿಸಿದ್ದಾರೆ ಎಂದು ಸೋಶಿಯಲ್ ಮೀಡಿಯಾಗಳ ಮೂಲಕ ಆರೋಪಿಸಿದ್ದದಾರೆ.
2018ರಲ್ಲಿ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಕುಮಾರಸ್ವಾಮಿ ಅವರು ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷರಾದ ಪೂಜ್ಯ ನಿರ್ಮಲಾನಂದನಾಥ ಸ್ವಾಮೀಜಿಯವರ ಫೋನ್ ಕದ್ದಾಲಿಕೆ ಮಾಡಿದ್ದರು ಎಂದು ಗಂಭೀರ ಆರೋಪ ಮಾಡಿದ್ದಾರೆ. ಸಾಮಾಜಿಕ ಜಾಲತಾಣ 'ಎಕ್ಸ್'ನಲ್ಲಿ (ಹಿಂದಿನ ಟ್ವಿಟರ್) ಸುದೀರ್ಘ ಪೋಸ್ಟ್ ಮಾಡಿರುವ ಅವರು, ಕುಮಾರಸ್ವಾಮಿಯವರ ರಾಜಕೀಯ ನಡೆಯನ್ನು ಕಟುವಾಗಿ ಟೀಕಿಸಿದ್ದಾರೆ.
ಬಿ.ವೈ. ವಿಜಯೇಂದ್ರ ಹಳೆಯ ಹೇಳಿಕೆಯ ಉಲ್ಲೇಖ
ಈ ಫೋನ್ ಕದ್ದಾಲಿಕೆ ಆರೋಪವನ್ನು ತಾವು ಮಾಡಿದ್ದಲ್ಲ, ಬದಲಾಗಿ ಪ್ರಸ್ತುತ ಕುಮಾರಸ್ವಾಮಿಯವರ ರಾಜಕೀಯ ಸಂಗಾತಿಯಾಗಿರುವ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರೇ ಈ ಹಿಂದೆ ಇದೇ ಆರೋಪವನ್ನು ಮಾಡಿದ್ದರು ಎಂದು ಸಿದ್ದರಾಮಯ್ಯ ನೆನಪಿಸಿದ್ದಾರೆ. ಅಂದು ಕುಮಾರಸ್ವಾಮಿ ನೇತೃತ್ವದ ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ನಡೆದ ಈ ಫೋನ್ ಕದ್ದಾಲಿಕೆ ಪ್ರಕರಣದ ಬಗ್ಗೆ ಸಿಬಿಐ (CBI) ತನಿಖೆ ನಡೆಸಿತ್ತು. ಆ ತನಿಖಾ ವರದಿಯ ಪ್ರಕಾರ, ಕೇವಲ ಆದಿಚುಂಚನಗಿರಿ ಸ್ವಾಮೀಜಿ ಮಾತ್ರವಲ್ಲದೆ ರಾಜ್ಯದ ಒಟ್ಟು ಏಳು ಮಠಾಧೀಶರ ಫೋನ್‌ಗಳನ್ನು ಕದ್ದಾಲಿಕೆ ಮಾಡಲಾಗಿತ್ತು ಎಂಬ ಆಘಾತಕಾರಿ ಅಂಶವನ್ನು ಅವರು ಉಲ್ಲೇಖಿಸಿದ್ದಾರೆ.
ಬಿಜೆಪಿ ನಾಯಕರ ಫೋನ್‌ಗಳಿಗೂ ಗೂಢಚಾರಿಕೆ
ಪರಮಪೂಜ್ಯ ಸ್ವಾಮೀಜಿಗಳ ಫೋನ್‌ಗಳನ್ನೇ ಕದ್ದಾಲಿಸುವ ಮೂಲಕ ಕುಮಾರಸ್ವಾಮಿಯವರು ತಾವು ನಂಬಿಕೆಗೆ ಅರ್ಹರಲ್ಲ ಎಂಬುದನ್ನು ಸ್ವತಃ ಸಾಬೀತುಪಡಿಸಿದ್ದಾರೆ ಎಂದು ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ. ಇಂಥವರನ್ನು ಈಗ ಅವರೊಂದಿಗೆ ಮೈತ್ರಿ ಮಾಡಿಕೊಂಡಿರುವ ಬಿಜೆಪಿಯವರು ಸುಮ್ಮನೆ ಬಿಟ್ಟಾರೆಯೇ? ಎಂದು ಪ್ರಶ್ನಿಸಿರುವ ಅವರು, ಖಂಡಿತವಾಗಿಯೂ ಬಿಜೆಪಿ ನಾಯಕರ ವಿರುದ್ಧವೂ ಕುಮಾರಸ್ವಾಮಿ ಗೂಢಚಾರರನ್ನು ಬಿಟ್ಟಿರಬಹುದು ಎಂದು ಅನುಮಾನ ವ್ಯಕ್ತಪಡಿಸಿದ್ದಾರೆ.
ದುರ್ಬುದ್ಧಿಗೆ ತಕ್ಕ ಪಾಠ ಕಲಿಸಿದ ಜನತೆ
ಅಧಿಕಾರದಲ್ಲಿದ್ದಾಗ ಇಂತಹ ಕೀಳುಮಟ್ಟದ ಕೃತ್ಯಗಳನ್ನು ಎಸಗುವ ಹಾಗೂ ಬೇರೆಯವರ ಖಾಸಗಿತನವನ್ನು ಭಂಗ ಮಾಡುವ ಇಂತಹ ದುರ್ಬುದ್ಧಿಗಾಗಿಯೇ ರಾಜ್ಯದ ಪ್ರಜ್ಞಾವಂತ ಜನತೆ ಬಿಜೆಪಿ ಮತ್ತು ಜೆಡಿಎಸ್ ಎರಡೂ ಪಕ್ಷಗಳನ್ನು ತಿರಸ್ಕರಿಸಿ, ವಿಧಾನಸಭೆ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಿದ್ದಾರೆ ಎನ್ನುವುದನ್ನು ಮರೆಯಬಾರದು ಎಂದು ಸಿದ್ದರಾಮಯ್ಯ ಮಾರ್ಮಿಕವಾಗಿ ಎಚ್ಚರಿಕೆ ನೀಡಿದ್ದಾರೆ. ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಧಾರ್ಮಿಕ ಮುಖಂಡರನ್ನು ಬಳಸಿಕೊಳ್ಳುವ ಮತ್ತು ಅವರ ಬೆನ್ನಲ್ಲೇ ಅವರ ವಿರುದ್ಧವೇ ಗೂಢಚರ್ಯೆ ನಡೆಸುವ ಈ ಇಬ್ಬಗೆಯ ನೀತಿಯೇ ಪ್ರತಿಪಕ್ಷಗಳ ಇಂದಿನ ದುಸ್ಥಿತಿಗೆ ಕಾರಣ ಎಂದು ಅವರು ವಾಗ್ದಾಳಿ ನಡೆಸಿದ್ದಾರೆ.

