
ಹೈಕಮಾಂಡ್ ʼಕೈʼ ಹಿಡಿದ ಟ್ರಬಲ್ ಶೂಟರ್': ಡಿಕೆಶಿ ಸಿಎಂ ಕನಸಿಗೆ ʼಲಾಸ್ಟ್ ರೆಸಾರ್ಟ್ʼ
ಕಾಂಗ್ರೆಸ್ ಪಕ್ಷಕ್ಕೆ ಬಿಕ್ಕಟ್ಟು ಎದುರಾದಾಗಲೆಲ್ಲಾ ಆಪತ್ಬಾಂಧವನಾಗಿ ನಿಲ್ಲುವ ಡಿ.ಕೆ.ಶಿವಕುಮಾರ್, ಇದೀಗ ಆಪರೇಷನ್ ಕಮಲದ ಭೀತಿಯಲ್ಲಿರುವ ಒಡಿಶಾ ಕಾಂಗ್ರೆಸ್ ಶಾಸಕರಿಗೆ ಬಿಡದಿಯ ವಂಡರ್‌ಲಾ ರೆಸಾರ್ಟ್‌ನಲ್ಲಿ ಆಶ್ರಯ ನೀಡಿದ್ದಾರೆ.
ಮುಖ್ಯಮಂತ್ರಿ ಹುದ್ದೆ ರೇಸ್‌ನಲ್ಲಿರುವ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರನ್ನು ಕಾಂಗ್ರೆಸ್ ಪಾಲಿನ ಟ್ರಬಲ್ ಶೂಟರ್ ಎಂದೇ ಆ ಪಕ್ಷದ ಕಾರ್ಯಕರ್ತರು ಹೇಳುತ್ತಿರುತ್ತಾರೆ. ಪಕ್ಷಕ್ಕೆ ಸಂಕಷ್ಟ ಎದುರಾದಾಗಲೆಲ್ಲ ಮುಂಚೂಣಿಯಲ್ಲಿರುವ ಡಿಕೆಶಿ, ಈಗ ಒಡಿಶಾ ರಾಜ್ಯದ ರಾಜ್ಯಸಭೆ ಚುನಾವಣೆಗೆ ಕೈ ಹಾಕಿದ್ದಾರೆ.
ಸಂಕಷ್ಟ ಸಂದರ್ಭದಲ್ಲಿ ಟ್ರಬಲ್ ಶೂಟರ್ ಆಗುವ ಸಂದೇಶವನ್ನು ಹೈಕಮಾಂಡ್‌ಗೆ ಮರು ರವಾನೆ ಮಾಡಿರುವ ಡಿಕೆಶಿ, ಪಕ್ಷದ ಕೆಲಸದಲ್ಲಿ ತಾವು ಸದಾ ಮುಂದು ಎನ್ನುವುದನ್ನು ಮತ್ತೆ ನೆನಪಿಸಿದ್ದಾರೆ. ಆ ಮೂಲಕ ಮುಖ್ಯಮಂತ್ರಿ ಆಗುವ ಆಸೆಗೆ ಮರುಜೀವ ನೀಡಲು ಡಿಕೆಶಿ ಪಣತೊಟ್ಟಂತೆ ಕಾಣುತ್ತಿದೆ. ʼಪಕ್ಷಕ್ಕಾಗಿ ಎಲ್ಲವನ್ನೂ ಮಾಡಿದ್ದೇನೆ, ಮಾತು ನೀಡಿದಂತೆ ತಮಗೂ ಅವಕಾಶ ನೀಡಿʼ ಎನ್ನುವ ತಮ್ಮ ಎಂದಿನ ಬೇಡಿಕೆಗೆ ಮತ್ತಷ್ಟು ಬಲ ನೀಡಲು ಈ ಘಟನೆ ಸಹಕಾರಿಯಾಗಿದೆ ಎನ್ನಲಾಗಿದೆ.
ಒಡಿಶಾ ಮಾತ್ರವಲ್ಲದೆ, ಅಸ್ಸಾಂ ಚುನಾವಣೆಯ ಉಸ್ತುವಾರಿಯೂ ಆಗಿರುವ ಅವರು, ಮುಂದೇನಾದರೂ ಅತಂತ್ರ ಸರ್ಕಾರ ಸಂದರ್ಭ ಸೃಷ್ಟಿಯಾದರೆ, ಆಪರೇಷನ್ ಕಮಲ ತಪ್ಪಿಸಲು ತೆರೆಮರೆಯ ಸಿದ್ಧತೆಯನ್ನೂ ಆರಂಭಿಸಿದ್ದಾರೆ. ತಮಿಳುನಾಡು, ಕೇರಳ, ಪುದುಚೆರಿ, ಅಸ್ಸಾಂ, ಪಶ್ಚಿಮ ಬಂಗಾಲ ವಿಧಾನಸಭೆ ಚುನಾವಣೆ ಬಳಿಕ ಮತ್ತೆ ತಮ್ಮ ʼಮುಖ್ಯಮಂತ್ರಿ ಸ್ಥಾನ ಬೇಡಿಕೆʼಗೆ ಬಲತುಂಬಲಿದ್ದಾರೆ ಎಂದು ಅವರ ನಿಕಟವರ್ತಿ ವಲಯದ ಮೂಲಗಳು ತಿಳಿಸಿವೆ.
ಅಲ್ಲಿನ 14 ಕಾಂಗ್ರೆಸ್ ಶಾಸಕರಲ್ಲಿ 10 ಮಂದಿ ಶಾಸಕರನ್ನು ಈಗಾಗಲೇ ಬಿಡದಿ ಬಳಿಯ ಖಾಸಗಿ ರೆಸಾರ್ಟ್‌ಗೆ ಶುಕ್ರವಾರ ಬೆಳಗಿನ ಜಾವ ಕರೆತರುವ ಮೂಲಕ ಆಪರೇಷನ್ ಕಮಲಕ್ಕೆ ತಿರುಗೇಟು ನೀಡಿದ್ದಾರೆ. ಇನ್ನೂ 4 ಶಾಸಕರು ಶುಕ್ರವಾರ ಸಂಜೆ ಜತೆ ಸೇರಲಿದ್ದಾರೆ.
ಒಡಿಶಾದಲ್ಲಿನ ರಾಜ್ಯಸಭೆ ಚುನಾವಣೆಯಲ್ಲಿ ಬಿಜೆಪಿ ಸ್ಪರ್ಧಿ ಪರ ಅಡ್ಡ ಮತದಾನದ ಆಮಿಷದ ಆತಂಕದ ಹಿನ್ನೆಲೆಯಲ್ಲಿ ಹೈಕಮಾಂಡ್ ಸೂಚನೆ ಮೇರೆಗೆ ಅಲ್ಲಿನ ಕಾಂಗ್ರೆಸ್ ಶಾಸಕರ ಸಂಪೂರ್ಣ ಜವಾಬ್ದಾರಿಯನ್ನು ಡಿ.ಕೆ.ಶಿವಕುಮಾರ್ ವಹಿಸಿಕೊಂಡಿದ್ದಾರೆ. ಈ ಹಿಂದೆ ರೆಸಾರ್ಟ್ ರಾಜಕೀಯದಲ್ಲಿ ಗೆಲುವು ಕಂಡಿರುವ ಡಿಕೆಶಿ, ಈಗಿನ ರೆಸಾರ್ಟ್ ರಾಜಕೀಯವನ್ನು ಯಶಸ್ವಿಯಾಗಿ ನಿರ್ವಹಿಸುವ ಮೂಲಕ ಹೈಕಮಾಂಡ್‌ನ ಮೆಚ್ಚುಗೆ ಗಳಿಸಲು ಮುಂದಾಗಿದ್ದಾರೆ.
ಮುಖ್ಯಮಂತ್ರಿ ಆಗಲೇಬೇಕು ಎನ್ನುವ ಹಠತೊಟ್ಟಿರುವ ಡಿಕೆಶಿ ಅವರು ʼತಾವು ಪಕ್ಷದ ನಿಷ್ಠಾವಂತ ಕಾರ್ಯಕರ್ತʼ ಎಂದು ಪದೇಪದೇ ಹೇಳುತ್ತಲೇ, ಈಗ ಮತ್ತೆ ಪಕ್ಷದ ಕೈಂಕರ್ಯ ಸಾಧಿಸಲು ಹೊರಟಿದ್ದಾರೆ. ಆ ಮೂಲಕ ಪಕ್ಷದ ಕಷ್ಟದ ಸಂದರ್ಭದಲ್ಲಿ ತಾವಿರುವುದಾಗಿ ಮತ್ತೆ ಸಂದೇಶ ನೀಡುತ್ತಿದ್ದಾರೆ ಎಂದು ವಿಶ್ಲೇಷಿಸಲಾಗಿದೆ.
ಮೊದಲಿಗೆ ನಿಲ್ಲುವ ಡಿಕೆಶಿ
ಕಾಂಗ್ರೆಸ್ ಪಾಲಿಗೆ ಸಂಕಷ್ಟ ಎದುರಾದಾಗಲೆಲ್ಲಾ ಹೈಕಮಾಂಡ್ ಕಣ್ಣಿಗೆ ಮೊದಲು ಕಾಣುವುದೇ ಡಿ.ಕೆ. ಶಿವಕುಮಾರ್. ಕರ್ನಾಟಕಕ್ಕೆ ಮಾತ್ರವಲ್ಲದೆ, ಅನ್ಯ ರಾಜ್ಯಗಳಲ್ಲಿಯೂ ಪಕ್ಷ ಬಿಕ್ಕಟ್ಟಿಗೆ ಸಿಲುಕಿದಾಗಲೆಲ್ಲಾ ಚಾಣಾಕ್ಷ ತಂತ್ರಗಾರಿಕೆಯ ಮೂಲಕ ರಕ್ಷಣೆಗೆ ನಿಂತ 'ಟ್ರಬಲ್ ಶೂಟರ್' ಡಿಕೆಶಿ, ಈ ಹಿಂದೆ ರೆಸಾರ್ಟ್ ರಾಜಕೀಯ ಮಾಡಿದ ಬಳಿಕ ಐಟಿ -ಇಡಿ ದಾಳಿಗಳಿಗೆ ಸಿಲುಕಿದ್ದರು.
ಈ ಹಿಂದೆ ಡಿ.ಕೆ. ಶಿವಕುಮಾರ್ ಅವರನ್ನು ಇಡಿ ಅಧಿಕಾರಿಗಳು ವಶಕ್ಕೆ ತೆಗೆದುಕೊಂಡ ಸಂದರ್ಭ.
2002ರಿಂದಲೂ ಎತ್ತಿದ ಕೈ
2002ರಲ್ಲಿ ಮಹಾರಾಷ್ಟ್ರದಲ್ಲಿನ ಕಾಂಗ್ರೆಸ್‌ನ ವಿಲಾಸರಾವ್ ದೇಶ್‌ಮುಖ್ ನೇತೃತ್ವದ ಸರ್ಕಾರ ಪತನದ ಅಂಚಿಗೆ ಸಿಲುಕಿದ್ದ ವೇಳೆ ರೆಸಾರ್ಟ್ ರಾಜಕೀಯದ ಅಖಾಡಕ್ಕಿಳಿದಿದ್ದ ಡಿಕೆಶಿ, ಅಂದಿನಿಂದ ಈ ವರೆಗೂ ʼರೆಸಾರ್ಟ್ ರಾಜಕೀಯʼದ ತಜ್ಞರಾಗಿದ್ದಾರೆ. ಅಂದು ಮಹಾರಾಷ್ಟ್ರ ಶಾಸಕರನ್ನು ವಿಶ್ವಾಸ ಮತ ಯಾಚನೆಯವರೆಗೂ ಒಗ್ಗಟ್ಟಾಗಿಡುವ ಮಹತ್ವದ ಜವಾಬ್ದಾರಿಯನ್ನು ಹೈಕಮಾಂಡ್ ಡಿ.ಕೆ. ಶಿವಕುಮಾರ್ ಅವರಿಗೆ ವಹಿಸಿತ್ತು. ಮಹಾರಾಷ್ಟ್ರದ ಶಾಸಕರನ್ನು ಬೆಂಗಳೂರಿನ ಹೊರವಲಯದ ರೆಸಾರ್ಟ್‌ನಲ್ಲಿ ಸುರಕ್ಷಿತವಾಗಿರಿಸಿ, ವಿಪಕ್ಷಗಳ ಯಾವುದೇ ಆಮಿಷಗಳಿಗೆ ಬಲಿಯಾಗದಂತೆ ನೋಡಿಕೊಂಡು ಸರ್ಕಾರವನ್ನು ಉಳಿಸಿಕೊಟ್ಟಿದ್ದರು.
ಗುಜರಾತ್ ಚುನಾವಣೆಯಲ್ಲಿ ಮೇಲುಗೈ
2017ರ ಗುಜರಾತ್ ರಾಜ್ಯಸಭಾ ಚುನಾವಣೆಯಲ್ಲಿ, ಕಾಂಗ್ರೆಸ್‌ನ ಹಿರಿಯ ನಾಯಕ ಹಾಗೂ ಸೋನಿಯಾ ಗಾಂಧಿಯವರ ಸಲಹೆಗಾರ ಅಹಮದ್ ಪಟೇಲ್ ಅವರ ಗೆಲುವು ಪಕ್ಷಕ್ಕೆ ಪ್ರತಿಷ್ಠೆಯ ಪ್ರಶ್ನೆಯಾಗಿತ್ತು. ಬಿಜೆಪಿಯ ಆಪರೇಷನ್ ಕಮಲದ ಭೀತಿಯಲ್ಲಿದ್ದ ಗುಜರಾತ್‌ನ 44 ಕಾಂಗ್ರೆಸ್ ಶಾಸಕರನ್ನು ರಾಮನಗರ ಜಿಲ್ಲೆಯ ಬಿದದಿಯ ಈಗಲ್‌ಟನ್ ರೆಸಾರ್ಟ್‌ನಲ್ಲಿರಿಸಿ, ಸಂಪೂರ್ಣ ಭದ್ರತೆ ಒದಗಿಸುವ ಹೊಣೆಯನ್ನು ಡಿಕೆಶಿ ಹೊತ್ತಿದ್ದರು. ಅಂದಿನ ತಂತ್ರಗಾರಿಕೆ ಫಲಿಸಿ, ಅಹಮದ್ ಪಟೇಲ್ ಗೆಲುವು ಸಾಧಿಸಿದರು. ಈ ಘಟನೆ ಡಿ.ಕೆ. ಶಿವಕುಮಾರ್ ಅವರನ್ನು ಗಾಂಧಿ ಕುಟುಂಬದ ಅತ್ಯಂತ ಆಪ್ತ ವಲಯದಲ್ಲಿ ಗುರುತಿಸಿಕೊಳ್ಳುವಂತೆ ಮಾಡಿತು. ಈ ಪ್ರಕರಣ ಅವರ 'ಟ್ರಬಲ್ ಶೂಟರ್' ಇಮೇಜ್ ಅನ್ನು ಶಾಶ್ವತವಾಗಿ ಭದ್ರಪಡಿಸಿತು.
ತಿಹಾರ್ ಜೈಲುವಾಸದ ಹೋರಾಟ
ಗುಜರಾತ್ ಶಾಸಕರಿಗೆ ಆಶ್ರಯ ನೀಡಿದ ಬೆನ್ನಲ್ಲೇ ಡಿ.ಕೆ.ಶಿವಕುಮಾರ್ ಅವರ ನಿವಾಸಗಳು ಮತ್ತು ಆಪ್ತರ ಮೇಲೆ ಐಟಿ (ಆದಾಯ ತೆರಿಗೆ) ಮತ್ತು ಇಡಿ (ಜಾರಿ ನಿರ್ದೇಶನಾಲಯ) ಇಲಾಖೆಗಳ ನಿರಂತರ ದಾಳಿಗಳು ಆರಂಭವಾದವು. 2019ರ ಸೆಪ್ಟೆಂಬರ್ ತಿಂಗಳಿನಲ್ಲಿ ಅಕ್ರಮ ಹಣ ವರ್ಗಾವಣೆ ಆರೋಪದ ಮೇಲೆ ಜಾರಿ ನಿರ್ದೇಶನಾಲಯ ಅವರನ್ನು ಬಂಧಿಸಿತು. ದೆಹಲಿಯ ತಿಹಾರ್ ಜೈಲಿನಲ್ಲಿ ಬರೋಬ್ಬರಿ 50 ದಿನಗಳ ಕಾಲ ಅವರು ಜೈಲುವಾಸ ಅನುಭವಿಸಬೇಕಾಯಿತು.
ಈ ಘಟನೆಯ ಇಂಪ್ಯಾಕ್ಟ್ ರಾಜಕೀಯವಾಗಿ ಅವರಿಗೆ ಅನಿರೀಕ್ಷಿತ ತಿರುವು ನೀಡಿತು. ಜೈಲುವಾಸ ಅವರನ್ನು ಕುಗ್ಗಿಸುವ ಬದಲು, ರಾಜಕೀಯವಾಗಿ ಮತ್ತಷ್ಟು ಬಲಶಾಲಿಯನ್ನಾಗಿಸಿತು. ಜೈಲಿನಿಂದ ಜಾಮೀನಿನ ಮೇಲೆ ಬಿಡುಗಡೆಯಾಗಿ ಬೆಂಗಳೂರಿಗೆ ಆಗಮಿಸಿದಾಗ ಅವರಿಗೆ ಸಿಕ್ಕ ಅಭೂತಪೂರ್ವ ಸ್ವಾಗತ, ಅವರನ್ನು ದ್ವೇಷ ರಾಜಕಾರಣದ 'ಬಲಿಪಶು' ಎಂಬ ಅನುಕಂಪದ ಅಲೆಯಲ್ಲಿ ತೇಲಿಸಿತು. ಈ ಘಟನೆಯು ಹಳೆ ಮೈಸೂರು ಭಾಗದಲ್ಲಿ ಒಕ್ಕಲಿಗ ಸಮುದಾಯವನ್ನು ಅವರ ಬೆನ್ನಿಗೆ ದೃಢವಾಗಿ ನಿಲ್ಲುವಂತೆ ಮಾಡಿತು ಹಾಗೂ ಅವರನ್ನು ಕೆಪಿಸಿಸಿ ಅಧ್ಯಕ್ಷರನ್ನಾಗಿಸಲು ವೇದಿಕೆ ಸೃಷ್ಟಿಸಿತು. ಜೈಲಿನಲ್ಲಿದ್ದ ವೇಳೆ, ಸ್ವತಃ ಸೋನಿಯಾ ಗಾಂಧಿಯವರು ಭೇಟಿಯಾಗಿ ʼಮುಂದಿನ ರಾಜಕೀಯ ಭವಿಷ್ಯʼವನ್ನು ಸುಗಮಗೊಳಿಸುವ ಭರವಸೆ ನೀಡಿದ್ದರು ಎನ್ನಲಾಗಿದೆ.
ಡಿ.ಕೆ. ಶಿವಕುಮಾರ್ ಅವರು ತಿಹಾರ್ ಜೈಲು ಸೇರಿದ್ದ ಸಂದರ್ಭದಲ್ಲಿ ಭೇಟಿಯಾಗಿದ್ದ ಕಾಂಗ್ರೆಸ್ ಹಿರಿಯ ನಾಯಕಿ ಸೋನಿಯಾ ಗಾಂಧಿ
ಮೈತ್ರಿ ರಾಜಕಾರಣಕ್ಕೂ ರೆಸಾರ್ಟ್
2018ರ ಕರ್ನಾಟಕ ವಿಧಾನಸಭಾ ಚುನಾವಣೆಯ ಬಳಿಕ ಅತಂತ್ರ ವಿಧಾನಸಭೆ ಸೃಷ್ಟಿಯಾದಾಗ, ದಶಕಗಳ ಕಾಲ ರಾಮನಗರ ಹಾಗೂ ಮೈಸೂರು ಭಾಗದಲ್ಲಿ ಕಡು ರಾಜಕೀಯ ವೈರಿಗಳಾಗಿದ್ದ ಎಚ್.ಡಿ. ದೇವೇಗೌಡರ ಕುಟುಂಬದ ಜೊತೆ ಕೈಜೋಡಿಸಲು ಮುಂದಾದ ಡಿಕೆಶಿ, ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರ ರಚನೆಯಲ್ಲಿ ಮುಂಚೂಣಿಯಲ್ಲಿದ್ದರು.
ಆದರೆ, 2019ರಲ್ಲಿ ಸಮ್ಮಿಶ್ರ ಸರ್ಕಾರದ 17 ಶಾಸಕರು ರಾಜೀನಾಮೆ ನೀಡಿ ಮುಂಬೈನ ಹೋಟೆಲ್ ಸೇರಿಕೊಂಡಾಗ, ಸರ್ಕಾರ ಉಳಿಸಿಕೊಳ್ಳಲು ಕೊನೆಯ ಕ್ಷಣದವರೆಗೂ ಡಿಕೆಶಿ ಹೋರಾಡಿದರು. ಮುಂಬೈನ ಹೋಟೆಲ್ ಎದುರು ಮಳೆಯನ್ನೂ ಲೆಕ್ಕಿಸದೆ, ಶಾಸಕರನ್ನು ಭೇಟಿಯಾಗಲು ಅವರು ನಡೆಸಿದ ಏಕಾಂಗಿ ಹೋರಾಟದ ದೃಶ್ಯಗಳು ಕಾಂಗ್ರೆಸ್ ಕಾರ್ಯಕರ್ತರಲ್ಲಿ ಅವರ ಬಗೆಗಿನ ಅಭಿಮಾನವನ್ನು ಇಮ್ಮಡಿಗೊಳಿಸಿದವು. ಸರ್ಕಾರ ಪತನಗೊಂಡರೂ, ಹೋರಾಟಗಾರನಾಗಿ ಅವರು ಮುನ್ನೆಲೆಗೆ ಬಂದಿದ್ದು ಅವರ ಟ್ರಬಲ್ ಶೂಟರ್ ಇಮೇಜ್ ಅನ್ನು ಇನ್ನಷ್ಟು ಹೆಚ್ಚಿಸಿತು.
ಕೆಪಿಸಿಸಿಯಲ್ಲಿಯೂ ಮೇಲುಗೈ
ಕೆಪಿಸಿಸಿ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ನಂತರ, ಬಣ ರಾಜಕಾರಣದಿಂದ ಬಳಲುತ್ತಿದ್ದ ಪಕ್ಷವನ್ನು ತಳಮಟ್ಟದಿಂದ ಸಂಘಟಿಸುವ ಸವಾಲು ಅವರ ಮುಂದಿತ್ತು. ಮೇಕೆದಾಟು ಪಾದಯಾತ್ರೆಯಂತಹ ಬೃಹತ್ ಹೋರಾಟಗಳ ಮೂಲಕ ಅಂದಿನ ಬಿಜೆಪಿ ಸರ್ಕಾರದ ವಿರುದ್ಧ ಜನಾಭಿಪ್ರಾಯ ರೂಪಿಸಿದರು. ಸಿದ್ದರಾಮಯ್ಯ ಅವರ ಮಾಸ್ ಲೀಡರ್‌ಶಿಪ್ ಮತ್ತು ಡಿ.ಕೆ.ಶಿವಕುಮಾರ್ ಅವರ ಮೈಕ್ರೋ ಮ್ಯಾನೇಜ್ಮೆಂಟ್ ಹಾಗೂ ಬೂತ್ ಮಟ್ಟದ ಸಂಘಟನಾ ಚಾತುರ್ಯದ ಪರಿಣಾಮವೇ 2023ರ ಚುನಾವಣೆಯಲ್ಲಿ ಕಾಂಗ್ರೆಸ್ 135 ಸ್ಥಾನಗಳನ್ನು ಗೆದ್ದು ಬೀಗಲು ಕಾರಣವಾಯಿತು ಎಂದೇ ವಿಶ್ಲೇಷಿಸಲಾಗುತ್ತಿದೆ.
ಅನ್ಯ ರಾಜ್ಯಗಳಲ್ಲಿಯೂ ಕೆಲಸ
ಇತ್ತೀಚೆಗಷ್ಟೇ ಹಿಮಾಚಲ ಪ್ರದೇಶದಲ್ಲಿ ಕಾಂಗ್ರೆಸ್ ಸರ್ಕಾರ ಬಿಕ್ಕಟ್ಟಿಗೆ ಸಿಲುಕಿದಾಗಲೂ ಹೈಕಮಾಂಡ್ ಡಿಕೆಶಿ ಅವರನ್ನು ವೀಕ್ಷಕರನ್ನಾಗಿ ಕಳುಹಿಸಿತ್ತು. ತೆಲಂಗಾಣದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರುವಲ್ಲೂ ಅವರ ಕಾರ್ಯತಂತ್ರ ಕೆಲಸ ಮಾಡಿದೆ. ಒಟ್ಟಾರೆಯಾಗಿ, ಪಕ್ಷಕ್ಕಾಗಿ ಎಂತಹ ಸವಾಲು ಸ್ವೀಕರಿಸಲು ಸಿದ್ಧರಿರುವ ಡಿಕೆಶಿ, ಈಗ ಒಡಿಶಾ ರಾಜ್ಯದ ರಾಜ್ಯಸಭೆ ಚುನಾವಣೆಗೆ ರೆಸಾರ್ಟ್ ರಾಜಕೀಯ ಶುರು ಮಾಡಿದ್ದಾರೆ.
ಬಿಡದಿಯ ವಂಡರ್ ಲಾ ರೆಸಾರ್ಟ್ ಸೇರಿದ ಒಡಿಶಾ ರಾಜ್ಯದ ಕೈ ಶಾಸಕರು
ವಂಡರ್ ಲಾ ರೆಸಾರ್ಟ್
ಡಿಕೆಶಿ ನಡೆಸಿದ ಪ್ರತಿ ರೆಸಾರ್ಟ್ ರಾಜಕೀಯದಲ್ಲಿಯೂ ಬಿಡದಿಯಲ್ಲಿನ ಈಗಲ್‌ಟನ್ ರೆಸಾರ್ಟ್ ಅನ್ನೇ ಬಳಸಿಕೊಳ್ಳುತ್ತಿದ್ದ ಅವರು, ಇದೇ ಮೊದಲ ಬಾರಿಗೆ ಬಿಡದಿಯ ವಂಡರ್ ಲಾ ರೆಸಾರ್ಟ್ ಅನ್ನು ಬಳಸಿಕೊಂಡಿದ್ದಾರೆ. ಆಪರೇಷನ್ ಕಮಲದ ಭೀತಿ ಹಿನ್ನೆಲೆಯಲ್ಲಿ ಒಡಿಶಾದ 10 ಮಂದಿ ಶಾಸಕರನ್ನು ಡಿಸಿಎಂ ಡಿ.ಕೆ.ಶಿವಕುಮಾರ್ ಸೂಚನೆಯ ಮೇರೆಗೆ ಬಿಡದಿ ಸಮೀಪದ ವಂಡರ್ ಲಾ ರೆಸಾರ್ಟ್‌ಗೆ ಕರೆತಂದು ಇರಿಸಲಾಗಿದೆ. ಇನ್ನುಳಿದ ಶಾಸಕರು ಮಧ್ಯಾಹ್ನದ ಬಳಿಕ ರೆಸಾರ್ಟ್ ತಲುಪಲಿದ್ದಾರೆ.
ಗುರುವಾರ ರಾತ್ರಿ 2 ಗಂಟೆ ಸುಮಾರಿನಲ್ಲಿ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಒಡಿಶಾ ಶಾಸಕರನ್ನು ಕಾಂಗ್ರೆಸ್ ಮುಖಂಡರು 8 ಇನ್ನೋವಾ ಕಾರುಗಳಲ್ಲಿ ವಂಡರ್ ಲಾ ರೆಸಾರ್ಟ್‌ಗೆ ಕರೆತಂದರು. ವಂಡರ್ ಲಾ ರೆಸಾರ್ಟ್‌ಗೆ ಆಗಮಿಸಿದ ಶಾಸಕರನ್ನು ಗುಲಾಬಿ ಹಾರ ಹಾಕಿ ಸ್ವಾಗತಿಸಿದ ಸ್ಥಳೀಯ ಕಾಂಗ್ರೆಸ್ ಮುಖಂಡರು ವಿಶ್ರಾಂತಿ ತೆಗೆದುಕೊಳ್ಳಲು ಅವರಿಗೆ ಮೊದಲೇ ಕಾಯ್ದಿರಿಸಿದ ಕೊಠಡಿಗಳಿಗೆ ಕಳುಹಿಸಿದ್ದಾರೆ. ಇನ್ನು ರೆಸಾರ್ಟ್ ಸುತ್ತ ಸ್ಥಳೀಯ ಪೊಲೀಸರಿಂದ ಬಿಗಿ ಭದ್ರತೆ ಕಲ್ಪಿಸಲಾಗಿದ್ದು ಸಾರ್ವಜನಿಕರ ಪ್ರವೇಶಕ್ಕೆ ನಿರ್ಬಂಧ ವಿಧಿಸಲಾಗಿದೆ. ಡಿ.ಕೆ.ಶಿವಕುಮಾರ್ ಆಪ್ತ ಕಾಂಗ್ರೆಸ್ ಮುಖಂಡರಿಗೆ ಮಾತ್ರ ರೆಸಾರ್ಟ್‌ಗೆ ಪ್ರವೇಶವಿದ್ದು, ಬೇರೆ ಯಾರೂ ಸುಳಿಯದಂತೆ ಎಚ್ಚರಿಕೆ ವಹಿಸಲಾಗಿದೆ.
ಒಡಿಶಾದಲ್ಲಿ ರಾಜ್ಯಸಭೆ ಚುನಾವಣೆಯು ನಡೆಯಲಿದೆ. ಈಗಾಗಲೇ ಅಲ್ಲಿನ ಕೈಪಾಳಯದಲ್ಲಿ ಪಕ್ಷಾಂತರ ಪರ್ವ ಆರಂಭವಾಗಿದೆ. ಈಗಾಗಲೇ ಕೆಲಮಂದಿ ಕಾಂಗ್ರೆಸ್ ಪ್ರಮುಖರು ಬಿಜೆಪಿಗೆ ಸೇರ್ಪಡೆಯಾಗಿದ್ದು, ಮತ್ತಷ್ಟು ಶಾಸಕರು ಬಿಜೆಪಿ ಸೇರುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ಕೈ ಶಾಸಕರನ್ನು ಬಿಜೆಪಿ ಸಂಪರ್ಕಕ್ಕೆ ಸಿಗದಂತೆ ತಪ್ಪಿಸಲು ಒಡಿಶಾ ಚುನಾವಣಾ ಉಸ್ತುವಾರಿ ವಹಿಸಿಕೊಂಡಿರುವ ಕೈ ಪಾಳಯದ ಟ್ರಬಲ್ ಶೂಟರ್ ಡಿ.ಕೆ.ಶಿವಕುಮಾರ್ ಶಾಸಕರ ರೆಸಾರ್ಟ್ ರಾಜಕಾರಣ ಆರಂಭಿಸಿದ್ದಾರೆ.
ಡಿಕೆಶಿ ಹೇಳಿಕೆ
"ಒಡಿಶಾ ಶಾಸಕರನ್ನು ಕರೆಸಿಲ್ಲ, ಅವರೇ ಬೆಂಗಳೂರಿಗೆ ಬಂದಿದ್ದಾರೆ” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಎಂದು ಹೇಳಿದ್ದಾರೆ. ಸದಾಶಿವನಗರ ನಿವಾಸದಲ್ಲಿ ಮಾಧ್ಯಮಗಳ ಪ್ರಶ್ನೆಗಳಿಗೆ ಉತ್ತರಿಸಿದ ಅವರು, “ಪಕ್ಷ ಹೇಳಿದ್ದನ್ನು ಮಾಡಬೇಕು. ಎಲ್ಲಾ ರಾಜ್ಯಗಳಲ್ಲೂ ಈ ರೀತಿ ನಡೆಯುತ್ತಿರುತ್ತದೆ. ಇದು ಹೊಸತೇನಲ್ಲ ,"ಎಂದರು.
"ಅವರನ್ನು(ಒಡಿಶಾ ಶಾಸಕರನ್ನು) ನೋಡಿಕೊಳ್ಳುವುದು ನಮ್ಮ ಕರ್ತವ್ಯ. ನಾನು ಇದನ್ನು ವಿಲಾಸ್ ರಾವ್ ದೇಶಮುಖ್ ಅವರ ಸರ್ಕಾರದಸಮಯದಿಂದಲೂ ಮಾಡಿಕೊಂಡು ಬರುತ್ತಿರುವೆ. ಅಹ್ಮದ್ ಪಟೇಲ್ ಅವರ ರಾಜ್ಯಸಭೆ ಚುನಾವಣೆ, ಮಧ್ಯಪ್ರದೇಶ ಸೇರಿದಂತೆ ಅನೇಕ ಬಾರಿ ಈ ಕೆಲಸ ಮಾಡಿದ್ದೇನೆ” ಎಂದು ಸ್ಪಷ್ಟಪಡಿಸಿದರು.

