Karnataka By-Election| ದಾವಣಗೆರೆ ದಕ್ಷಿಣ - ಬಾಗಲಕೋಟೆ ಗೆಲುವಿಗೆ ಸಿಎಂ ಪಣ; ಶಾಸಕರಿಗೆ ಪಂಚಾಯ್ತಿ ಮಟ್ಟದ ಹೊಣೆ
x

ದಾವಣಗೆರೆ ದಕ್ಷಿಣ ಹಾಗೂ ಬಾಗಲಕೋಟೆ ಉಪಚುನಾವಣೆ ಗೆಲುವಿಗೆ ಸಿಎಂ ಸಿದ್ದರಾಮಯ್ಯ ಭರ್ಜರಿ ರಣತಂತ್ರ ರೂಪಿಸಿದ್ದಾರೆ.

Karnataka By-Election| ದಾವಣಗೆರೆ ದಕ್ಷಿಣ - ಬಾಗಲಕೋಟೆ ಗೆಲುವಿಗೆ ಸಿಎಂ ಪಣ; ಶಾಸಕರಿಗೆ ಪಂಚಾಯ್ತಿ ಮಟ್ಟದ ಹೊಣೆ

ದಾವಣಗೆರೆ ದಕ್ಷಿಣ ಹಾಗೂ ಬಾಗಲಕೋಟೆ ಉಪಚುನಾವಣೆ ಗೆಲುವಿಗೆ ಸಿಎಂ ಸಿದ್ದರಾಮಯ್ಯ ಭರ್ಜರಿ ರಣತಂತ್ರ ರೂಪಿಸಿದ್ದಾರೆ.ಅಲ್ಪಸಂಖ್ಯಾತ ಮತಗಳು ಚದುರದಂತೆ ನೋಡಿಕೊಳ್ಳಲು ಸಚಿವರಿಗೆ ಖಡಕ್ ಸೂಚನೆ ನೀಡಿದ್ದಾರೆ.


Click the Play button to hear this message in audio format

ರಾಜ್ಯದ ದಾವಣಗೆರೆ ದಕ್ಷಿಣ ಹಾಗೂ ಬಾಗಲಕೋಟೆ ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಯಲ್ಲಿ ಹೇಗಾದರೂ ಮಾಡಿ ಜಯಭೇರಿ ಬಾರಿಸಬೇಕೆಂದು ಪಣತೊಟ್ಟಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯಲ್ಲಿ ಸಚಿವರು ಹಾಗೂ ಶಾಸಕರಿಗೆ ಖಡಕ್ ಸೂಚನೆ ನೀಡಿದ್ದಾರೆ.

ಬುಧವಾರ ರಾತ್ರಿ ನಡೆದ ಶಾಸಕಾಂಗ ಪಕ್ಷದ ಸಭೆಯಲ್ಲಿ ಚುನಾವಣಾ ತಂತ್ರಗಾರಿಕೆ ಬಗ್ಗೆ ಸುದೀರ್ಘ ಚರ್ಚೆ ನಡೆಸಿದ ಸಿಎಂ, ಗೆಲುವಿಗಾಗಿ ಪ್ರತಿಯೊಬ್ಬರಿಗೂ ನಿರ್ದಿಷ್ಟ ಜವಾಬ್ದಾರಿಗಳನ್ನು ಹಂಚಿಕೆ ಮಾಡಿದ್ದಾರೆ.

ಪಂಚರಾಜ್ಯಗಳ ಚುನಾವಣಾ ಪ್ರಚಾರಕ್ಕೆ ನಿಯೋಜನೆಗೊಂಡಿರುವ ಸಚಿವರನ್ನು ಹೊರತುಪಡಿಸಿ, ರಾಜ್ಯದಲ್ಲಿರುವ ಉಳಿದ ಎಲ್ಲಾ ಸಚಿವರಿಗೆ ಉಪಚುನಾವಣೆಯ ಉಸ್ತುವಾರಿ ನೀಡಲಾಗಿದೆ. ಸಚಿವರು ಕೇವಲ ಮೇಲ್ನೋಟಕ್ಕೆ ಕೆಲಸ ಮಾಡುವುದಲ್ಲದೆ, ಜಿಲ್ಲಾ ಕೇಂದ್ರಗಳಲ್ಲೇ ವಾಸ್ತವ್ಯ ಹೂಡಿ ಪಕ್ಷ ಸಂಘಟನೆ ಮಾಡಬೇಕೆಂದು ಸಿಎಂ ಸೂಚಿಸಿದ್ದಾರೆ.

ಶಾಸಕರಿಗೆ ಪಂಚಾಯ್ತಿ‌ ಮಟ್ಟದಲ್ಲಿ ಹೊಣೆ

ಇನ್ನು ಶಾಸಕರಿಗೂ ಎರಡೂ ಕ್ಷೇತ್ರಗಳಲ್ಲಿ ಪಂಚಾಯ್ತಿವಾರು ಹೊಣೆ ನಿಗದಿಪಡಿಸಿದ್ದಾರೆ.

ಪ್ರತಿ ಪಂಚಾಯ್ತಿಗೆ ಮೂವರು ಶಾಸಕರನ್ನು ಉಸ್ತುವಾರಿಗಳನ್ನಾಗಿ ನೇಮಿಸಲಾಗಿದೆ. ಚುನಾವಣಾ ಪ್ರಕ್ರಿಯೆ ಮುಗಿಯುವವರೆಗೆ ಈ ಶಾಸಕರು ಕ್ಷೇತ್ರ ಬಿಟ್ಟು ಕದಲಬಾರದು ಮತ್ತು ಪಂಚಾಯ್ತಿ ಮಟ್ಟದಲ್ಲಿ ಬೀಡುಬಿಟ್ಟು ಮತದಾರರನ್ನು ಪಕ್ಷದತ್ತ ಸೆಳೆಯಬೇಕೆಂದು ತಾಕೀತು ಮಾಡಿದ್ದಾರೆ.

ದಾವಣಗೆರೆ ದಕ್ಷಿಣ ಕ್ಷೇತ್ರದಲ್ಲಿ ಅಲ್ಪಸಂಖ್ಯಾತ ಮತಗಳು ನಿರ್ಣಾಯಕವಾಗಿದ್ದು, ಈ ಮತಗಳು ಚದುರದಂತೆ ನೋಡಿಕೊಳ್ಳುವುದು ಕಾಂಗ್ರೆಸ್‌ಗೆ ದೊಡ್ಡ ಸವಾಲಾಗಿದೆ. ದಾವಣಗೆರೆ ದಕ್ಷಿಣದಲ್ಲಿ ಈಗಾಗಲೇ ಹಲವು ಅಲ್ಪಸಂಖ್ಯಾತ ಅಭ್ಯರ್ಥಿಗಳು ಪಕ್ಷೇತರವಾಗಿ ನಾಮಪತ್ರ ಸಲ್ಲಿಸಿರುವುದು ಪಕ್ಷದ ನಾಯಕರಲ್ಲಿ ಆತಂಕ ಮೂಡಿಸಿದೆ. ಈ ಹಿನ್ನೆಲೆಯಲ್ಲಿ ಮುಸ್ಲಿಂ ಸಮುದಾಯದ ಸಚಿವರು ಮತ್ತು ಶಾಸಕರಿಗೆ ವಿಶೇಷ ಜವಾಬ್ದಾರಿ ನೀಡಿರುವ ಸಿದ್ದರಾಮಯ್ಯ, ಬಂಡಾಯ ಎದ್ದಿರುವ ಅಭ್ಯರ್ಥಿಗಳ ಮನವೊಲಿಸಿ ನಾಮಪತ್ರ ವಾಪಸ್ ಪಡೆಯುವಂತೆ ನೋಡಿಕೊಳ್ಳಲು ಸೂಚಿಸಿದ್ದಾರೆ.

ಯಾವುದೇ ಕಾರಣಕ್ಕೂ ಮುಸ್ಲಿಂ ಮತಗಳು ತಟಸ್ಥವಾಗಬಾರದು ಅಥವಾ ವಿಭಜನೆಯಾಗಬಾರದು, ಅವು ಸಂಪೂರ್ಣವಾಗಿ ಕಾಂಗ್ರೆಸ್ ಅಭ್ಯರ್ಥಿಗಳಿಗೆ ಬೀಳುವಂತೆ ಕೆಲಸ ಮಾಡಬೇಕೆಂದು ಸಭೆಯಲ್ಲಿ ತಿಳಿಸಿದ್ದಾರೆ.

ಕುಟುಂಬ ರಾಜಕಾರಣದ ಟೀಕೆಗಳ ನಡುವೆಯೂ ದಾವಣಗೆರೆ ದಕ್ಷಿಣದಲ್ಲಿ ಸಮರ್ಥ್ ಮಲ್ಲಿಕಾರ್ಜುನ್ ಹಾಗೂ ಬಾಗಲಕೋಟೆಯಲ್ಲಿ ಉಮೇಶ್ ಮೇಟಿ ಅವರನ್ನು ಗೆಲ್ಲಿಸಿಕೊಂಡು ಬರಲು ಕಾಂಗ್ರೆಸ್ ಸರ್ಕಾರ ಮತ್ತು ಸಂಘಟನೆ ಈಗ ಸಂಪೂರ್ಣವಾಗಿ ಅಖಾಡಕ್ಕಿಳಿದಿದೆ.

Read More
Next Story