
ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಹಾಗೂ ಸಿಎಂ ಸಿದ್ದರಾಮಯ್ಯ
ಒಳ ಮೀಸಲಾತಿಯಡಿ ನೇಮಕಾತಿ ಆಗದಿದ್ದರೆ ಹೋರಾಟ: ಸರ್ಕಾರಕ್ಕೆ ಬಿಜೆಪಿ ಎಚ್ಚರಿಕೆ
ಪರಿಶಿಷ್ಟ ಜಾತಿ ಹಾಗೂ ಪಂಗಡಗಳ ಬಗ್ಗೆ ಕಿಂಚಿತ್ತಾದರೂ ಕಾಳಜಿ ಇದ್ದರೆ ನೇಮಕಾತಿ ನೀಡುವ ಮೂಲಕ ಎಲ್ಲ ವರ್ಗಗಳ ಜನರಿಗೆ ನ್ಯಾಯ ಕೊಡುವ ಕೆಲಸ ಮಾಡಬೇಕು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ತಿಳಿಸಿದ್ದಾರೆ.
ರಾಜ್ಯದ ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ ಹುದ್ದೆಗಳಿಗೆ ಒಳ ಮೀಸಲಾತಿ ಅನ್ವಯವೇ ನೇಮಕಾತಿ ಪ್ರಕ್ರಿಯೆ ನಡೆಸುವಂತೆ ಬಿಜೆಪಿ ಆಗ್ರಹಿಸಿದೆ. ಒಳ ಮೀಸಲಾತಿ ಹೊರತುಪಡಿಸಿದ ಯಾವುದೇ ನೇಮಕಾತಿಯನ್ನು ಒಪ್ಪುವುದಿಲ್ಲ. ಆಗೊಮ್ಮೆ ರಾಜ್ಯ ಸರ್ಕಾರ ಏಕಪಕ್ಷಿಯವಾಗಿ ನೇಮಕಾತಿ ಆರಂಭಿಸಿದರೆ ಬಿಜೆಪಿ ವತಿಯಿಂದ ರಾಜ್ಯಾದ್ಯಂತ ಉಗ್ರ ಹೋರಾಟ ರೂಪಿಸಲು ಬಿಜೆಪಿ ಸಿದ್ಧತೆ ಆರಂಭಿಸಿದೆ.
ಬುಧವಾರ (ಮಾ.4) ಬೆಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು, ರಾಜ್ಯದಲ್ಲಿ ಖಾಲಿ ಇರುವ ಎಲ್ಲ ಹುದ್ದೆಗಳನ್ನು ಭರ್ತಿ ಮಾಡಬೇಕು ಎಂಬುದು ನಮ್ಮ ಆಗ್ರಹ. ಶೇ. 56 ಮೀಸಲಾತಿ ನೀಡಿ ಬಿಜೆಪಿ ಸರ್ಕಾರ ಎಲ್ಲಾ ಸಮುದಾಯಗಳಿಗೆ ನ್ಯಾಯ ಕೊಡುವ ಕೆಲಸ ಮಾಡಿತ್ತು. ಶೋಷಿತ ಸಮುದಾಯಗಳಿಗೆ ಒಳ ಮೀಸಲಾತಿ ಪರಿಗಣಿಸಿಯೇ ಸರ್ಕಾರ ಹುದ್ದೆಗಳನ್ನು ಭರ್ತಿ ಮಾಡಬೇಕೆಂದು ಆಗ್ರಹಿಸಿದರು.
ಒಳ ಮೀಸಲಾತಿಯನ್ವಯ ನೇಮಕವಾಗಲಿ
ಮುಖ್ಯಮಂತ್ರಿ ಸಿದ್ದರಾಮಯ್ಯ ಪದೇ ಪದೇ ತಳ ಸಮುದಾಯಗಳಿಗೆ ಅನ್ಯಾಯ ಮಾಡುತ್ತಿದ್ದಾರೆ. ಪರಿಶಿಷ್ಟ ಜಾತಿ ಹಾಗೂ ಪಂಗಡಗಳ ಬಗ್ಗೆ ಕಿಂಚಿತ್ತಾದರೂ ಕಾಳಜಿ ಇದ್ದರೆ ಉದ್ಯೋಗ ನೀಡುವ ಮೂಲಕ ಹಿಂದುಳಿದ ವರ್ಗ ಸೇರಿದಂತೆ ಎಲ್ಲ ವರ್ಗಗಳ ಜನರಿಗೆ ನ್ಯಾಯ ಕೊಡುವ ಕೆಲಸ ಮಾಡಬೇಕು. ಅದನ್ನು ಬಿಟ್ಟು ಕಾಂಗ್ರೆಸ್ ಸರ್ಕಾರ ತೊಟ್ಟಿಲು ತೂಗುವ ಜೊತೆಗೇ ಮಗುವನ್ನು ಚಿವುಟುವ ಕೆಲಸ ಮಾಡುತ್ತಿದ್ದು, ಇದು ಅಕ್ಷಮ್ಯ ಅಪರಾಧ. ಹಳೆಯ ಮೀಸಲಾತಿ ಪ್ರಮಾಣದಡಿ ನೇಮಕಾತಿ ಮಾಡಲು ಮುಂದಾಗಿರುವುದು ಸರಿಯಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದರು.
ಅಹಿಂದ ಸಮುದಾಯಕ್ಕೆ ಅನ್ಯಾಯ
ಅಹಿಂದ ಸಮುದಾಯದಿಂದ ಅಧಿಕಾರ ಹಿಡಿದು ಇದೀಗ ಅದೇ ಸಮುದಾಯದ ತಾಳ್ಮೆಯನ್ನು ಪರೀಕ್ಷೆ ಮಾಡಬೇಡಿ. ಶೋಷಿತ ಪೀಡಿತ ಸಮುದಾಯಗಳನ್ನು ಕೆಣಕದಿರಿ. ಒಳ ಮೀಸಲಾತಿ ಜಾರಿ ಮಾಡದೇ ಖಾಲಿ ಹುದ್ದೆ ಭರ್ತಿ ಮಾಡುವ ಕೆಲಸ ಮಾಡಿದರೆ ರಾಜ್ಯದಲ್ಲಿ ಮುಂದೆ ಆಗುವ ಘಟನೆಗಳಿಗೆ ತಾವೇ ಹೊಣೆಯಾಗಬೇಕಾಗುತ್ತದೆ. ರಾಜ್ಯದ ಯುವಜನತೆ ಬೀದಿಗಿಳಿದು ಹೋರಾಟ ಮಾಡುತ್ತಿದ್ದಾರೆ. ವಯೋಮಿತಿ ಮೀರುತ್ತಿದ್ದು ಅವರ ಸಹನೆಯ ಕಟ್ಟೆ ಒಡೆದಿದೆ. ಇದನ್ನು ಕೂಡ ಪರಿಗಣಿಸಿ ಸಿಎಂ ನ್ಯಾಯ ಕೊಡಿಸಬೇಕು. ಆ ಮೂಲಕ ಸಿಎಂ ಸ್ಥಾನದ ಗೌರವ ಕಾಪಾಡಿಕೊಳ್ಳಬೇಕು ಎಂದು ತಿಳಿಸಿದರು.
ಸರಣಿ ಪ್ರತಿಭಟನೆಗಳ ಪ್ರಾರಂಭ
ಮಾ. 6ರಿಂದ ಬಜೆಟ್ ಅಧಿವೇಶನ ಆರಂಭವಾಗುತ್ತಿದೆ. ರಾಜ್ಯ ಸರ್ಕಾರ ಯಾವುದೇ ಭರವಸೆಯನ್ನೂ ಈಡೇರಿಸಿಲ್ಲ. ಅಂಗನವಾಡಿ, ಆಶಾ ಕಾರ್ಯಕರ್ತೆಯರು ಹೋರಾಟ ಪ್ರಾರಂಭ ಮಾಡಿದ್ದಾರೆ. ಅತಿಥಿ ಉಪನ್ಯಾಸಕರೂ ಬೀದಿಗಿಳಿದು ಹೋರಾಟ ಮಾಡುವ ಸಂದರ್ಭ ಸೃಷ್ಟಿಯಾಗಿದೆ ಎಂದರು.
ಸರ್ಕಾರ ಸಾರಿಗೆ ನೌಕರರಿಗೆ ಪಿಎಫ್, ಗ್ರಾಚ್ಯುಟಿ ಕೊಡದೇ ಅನ್ಯಾಯ ಮಾಡುತ್ತಿದೆ. ಸರ್ಕಾರಿ ಆಸ್ಪತ್ರೆಯಲ್ಲಿ ಸೇವೆ ಸಲ್ಲಿಸುವ ವೈದ್ಯರೂ ಬೀದಿಗಿಳಿದು ಹೋರಾಟ ಮಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. 108 ಆಂಬುಲೆನ್ಸ್ ನೌಕರರಿಗೆ ಸಂಬಳ ಕೊಟ್ಟಿಲ್ಲ. ಗುತ್ತಿಗೆದಾರರ ಸುಮಾರು 45 ಸಾವಿರ ಕೋಟಿ ರೂ. ಬಾಕಿ ಉಳಿಸಿಕೊಂಡಿದ್ದಾರೆ. ಈಗಾಗಲೇ ಆತ್ಮಹತ್ಯೆ ಪ್ರಕರಣಗಳೂ ವರದಿಯಾಗಿವೆ ಎಂದು ಹೇಳಿದರು.

