ವಿಐಪಿ ಸಂಸ್ಕೃತಿಯ ವಿರುದ್ಧ ಆಕ್ರೋಶ: ಐಪಿಎಲ್ ಟಿಕೆಟ್ ನಿರಾಕರಿಸಿದ ಬಿಜೆಪಿ ಶಾಸಕ ಸುರೇಶ್ ಕುಮಾರ್
x

ಕಳೆದ ವರ್ಷ ಆರ್‌ಸಿಬಿ ಗೆದ್ದಾಗ ವಿಧಾನಸೌಧದ ಮುಂದೆ ನಿರ್ಮಿಸಲಾಗಿದ್ದ ವೇದಿಕೆಗೆ ಮುಖ್ಯಮಂತ್ರಿಗಳು ತಮ್ಮ ಮೊಮ್ಮಗನನ್ನು ಕರೆದುಕೊಂಡು ಹೋಗಿದ್ದ ದೃಶ್ಯವನ್ನು ಈ ವೇಳೆ ಅವರು ನೆನಪಿಸಿದ್ದಾರೆ.

ವಿಐಪಿ ಸಂಸ್ಕೃತಿಯ ವಿರುದ್ಧ ಆಕ್ರೋಶ: ಐಪಿಎಲ್ ಟಿಕೆಟ್ ನಿರಾಕರಿಸಿದ ಬಿಜೆಪಿ ಶಾಸಕ ಸುರೇಶ್ ಕುಮಾರ್

ಶಾಸಕರ ಬೇಡಿಕೆಯ ಮೇರೆಗೆ ಉದ್ಘಾಟನಾ ಪಂದ್ಯಕ್ಕೆ ತಲಾ ಎರಡು ಹಾಗೂ ಮುಂದಿನ ದಿನಗಳಲ್ಲಿ ಐದು ಟಿಕೆಟ್ ನೀಡಲು ಕೆಎಸ್‌ಸಿಎ ನಿರ್ಧರಿಸಿರುವುದನ್ನು ಮಾಧ್ಯಮಗಳ ಮೂಲಕ ತಿಳಿದ ಸುರೇಶ್ ಕುಮಾರ್, ಇದು ಖಂಡಿತಾ ಸರಿಯಾದ ನಿರ್ಧಾರವಲ್ಲ ಎಂದಿದ್ದಾರೆ.


Click the Play button to hear this message in audio format

ವಿಧಾನಸಭೆಯಲ್ಲಿ ಶಾಸಕರು ಐಪಿಎಲ್ ಪಂದ್ಯದ ಉಚಿತ ಟಿಕೆಟ್‌ಗಳಿಗಾಗಿ ಬೇಡಿಕೆ ಇಟ್ಟಿದ್ದನ್ನು ಖಂಡಿಸಿ ಬಿಜೆಪಿ ಶಾಸಕ ಎಸ್. ಸುರೇಶ್ ಕುಮಾರ್ ಅವರು ತಮಗೆ ನೀಡಲಾಗುವ ಐಪಿಎಲ್ ಟಿಕೆಟ್ ಅನ್ನು ನಿರಾಕರಿಸಿದ್ದಾರೆ.

ಈ ಕುರಿತು ಮಾಧ್ಯಮ ಹೇಳಿಕೆ ಬಿಡುಗಡೆ ಮಾಡಿರುವ ಅವರು, ರಾಜ್ಯದಲ್ಲಿ ತಮ್ಮನ್ನು ತಾವು "ಸಮಾಜವಾದಿ" ಎಂದು ಕರೆದುಕೊಳ್ಳುವ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರವಿದ್ದರೂ, ಈ ಆಡಳಿತದಲ್ಲಿ ವಿಐಪಿ ಸಂಸ್ಕೃತಿ ಮುಂದುವರಿಯುತ್ತಿರುವುದು ನಿಜಕ್ಕೂ ಅಚ್ಚರಿ ಹಾಗೂ ದುರಂತ ಎಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಕಳೆದ ವರ್ಷ ಆರ್‌ಸಿಬಿ ಗೆದ್ದಾಗ ವಿಧಾನಸೌಧದ ಮುಂದೆ ನಿರ್ಮಿಸಲಾಗಿದ್ದ ವೇದಿಕೆಗೆ ಮುಖ್ಯಮಂತ್ರಿಗಳು ತಮ್ಮ ಮೊಮ್ಮಗನನ್ನು ಕರೆದುಕೊಂಡು ಹೋಗಿದ್ದ ದೃಶ್ಯವನ್ನು ಈ ವೇಳೆ ಅವರು ನೆನಪಿಸಿದ್ದಾರೆ.

ಸಮಸ್ಯೆಗಳ ಬಗ್ಗೆ ಚರ್ಚೆಯಿಲ್ಲ, ಟಿಕೆಟ್‌ಗಾಗಿ ಆಕ್ರೋಶ

ವಿಧಾನಸಭೆಯಲ್ಲಿ ಗ್ರೇಟರ್ ಬೆಂಗಳೂರು ಅಥಾರಿಟಿ (GBA) ವ್ಯಾಪ್ತಿಯಲ್ಲಿ ಜನಸಾಮಾನ್ಯರು ಅನುಭವಿಸುತ್ತಿರುವ ಸಮಸ್ಯೆಗಳ ಬಗ್ಗೆ ಚರ್ಚೆ ನಡೆಯುತ್ತಿದ್ದಾಗ, ಇದ್ದಕ್ಕಿದ್ದಂತೆ ಚಿನ್ನಸ್ವಾಮಿ ಕ್ರೀಡಾಂಗಣ ಹಾಗೂ ಐಪಿಎಲ್ ಟಿಕೆಟ್‌ಗಳ ಬಗ್ಗೆ ಶಾಸಕರು ಪಕ್ಷಾತೀತವಾಗಿ ಧ್ವನಿ ಎತ್ತಿದ್ದನ್ನು ಸುರೇಶ್ ಕುಮಾರ್ ಖಂಡಿಸಿದ್ದಾರೆ.

ಇದೇ ವಿಧಾನಸೌಧದಲ್ಲಿ ಕಳೆದ ವರ್ಷ ಆರ್‌ಸಿಬಿ ಗೆಲುವಿನ ಸಂಭ್ರಮಾಚರಣೆ ವೇಳೆ 11 ಮಂದಿ ಮೃತಪಟ್ಟ ಬಗ್ಗೆ ನೋವು ತೋಡಿಕೊಳ್ಳಲಾಗಿತ್ತು. ಆದರೆ, ಈಗ ಅದೇ ಪಂದ್ಯದ ಟಿಕೆಟ್‌ಗಾಗಿ "ನಮಗೆ ಮರ್ಯಾದೆ ಸಿಗಲೇಬೇಕು" ಎಂದು ಆಕ್ರೋಶದಿಂದ ಚರ್ಚೆ ನಡೆಸುತ್ತಿರುವುದು ಜನಸಾಮಾನ್ಯರಲ್ಲಿ ರಾಜಕಾರಣಿಗಳ ಬಗೆಗಿನ ತಿರಸ್ಕಾರವನ್ನು ಹೆಚ್ಚಿಸಿದೆ ಎಂದು ಅವರು ಕಳವಳ ವ್ಯಕ್ತಪಡಿಸಿದ್ದಾರೆ. ಸದನ ಮುಗಿದ ಮೇಲೆ, "ನೀವು ಜನಸಾಮಾನ್ಯರ ಸಮಸ್ಯೆಗಳ ಬಗ್ಗೆ ಮಾತನಾಡುತ್ತೀರೋ ಅಥವಾ ನಿಮಗೆ ಬೇಕಾದ ಸೌಲಭ್ಯಗಳ ಬಗ್ಗೆಯೋ?" ಎಂದು ಜನರು ಪ್ರಶ್ನಿಸುತ್ತಿದ್ದಾರೆ ಎಂದು ಅವರು ಬೇಸರ ವ್ಯಕ್ತಪಡಿಸಿದ್ದಾರೆ.

ಸೇವಕರಿಗೆ ಕಿವಿಮಾತು

ಶಾಸಕರ ಬೇಡಿಕೆಯ ಮೇರೆಗೆ ಉದ್ಘಾಟನಾ ಪಂದ್ಯಕ್ಕೆ ತಲಾ ಎರಡು ಹಾಗೂ ಮುಂದಿನ ದಿನಗಳಲ್ಲಿ ಐದು ಟಿಕೆಟ್ ನೀಡಲು ಕೆಎಸ್‌ಸಿಎ ನಿರ್ಧರಿಸಿರುವುದನ್ನು ಮಾಧ್ಯಮಗಳ ಮೂಲಕ ತಿಳಿದ ಸುರೇಶ್ ಕುಮಾರ್, ಇದು ಖಂಡಿತಾ ಸರಿಯಾದ ನಿರ್ಧಾರವಲ್ಲ ಎಂದಿದ್ದಾರೆ. "ನಮ್ಮ ಎಷ್ಟೋ ಪ್ರಶ್ನೆಗಳಿಗೆ ವರ್ಷಾನುಗಟ್ಟಲೆ ಫಲಿತಾಂಶ ಸಿಗುವುದಿಲ್ಲ, ಆದರೆ ಶಾಸಕರ ವಿಷಯ ಬಂದ ತಕ್ಷಣ ಇಷ್ಟು ಬೇಗ ಕೆಲಸ ಮಾಡಿಬಿಟ್ಟರು" ಎಂದು ಜನ ಮಾತನಾಡಿಕೊಳ್ಳುತ್ತಿದ್ದಾರೆ. ಹೀಗಾಗಿ, ತಮಗೆ ನೀಡುವ ಪಾಸ್‌ಗಳನ್ನು ಅಥವಾ ಟಿಕೆಟ್‌ಗಳನ್ನು ತಾವು ಸವಿನಯವಾಗಿ ನಿರಾಕರಿಸುವುದಾಗಿ ಸ್ಪಷ್ಟಪಡಿಸಿದ್ದಾರೆ. ನಾವು ನಮ್ಮನ್ನು ವೇದಿಕೆಯ ಮೇಲೆ 'ಜನಸೇವಕರು' ಎಂದು ಕರೆದುಕೊಳ್ಳುತ್ತೇವೆ, ಈ ರೀತಿ ವಿಐಪಿ ಸಂಸ್ಕೃತಿಯನ್ನು ಮುಂದುವರೆಸಿದರೆ ಜನಸಾಮಾನ್ಯರ ದೃಷ್ಟಿಯಲ್ಲಿ ನಾವಿನ್ನೂ ಕನಿಷ್ಠರಾಗುತ್ತೇವೆ ಎಂಬುದನ್ನು ನಾವೆಲ್ಲರೂ ಜ್ಞಾಪಕದಲ್ಲಿಟ್ಟುಕೊಳ್ಳಬೇಕು ಎಂದು ಅವರು ಕಿವಿಮಾತು ಹೇಳಿದ್ದಾರೆ.

Read More
Next Story