
Karnataka Bypolls| ಉಪಚುನಾವಣೆ ಅಖಾಡಕ್ಕೆ ಬಿಜೆಪಿ ಸಜ್ಜು: ಬಾಗಲಕೋಟೆ ಮತ್ತು ದಾವಣಗೆರೆ ದಕ್ಷಿಣಕ್ಕೆ ಅಭ್ಯರ್ಥಿಗಳ ಘೋಷಣೆ!
Karnataka Byelection| 2026ರ ವಿಧಾನಸಭಾ ಉಪಚುನಾವಣೆಗೆ ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಬಿಡುಗಡೆಯಾಗಿದೆ. ಬಾಗಲಕೋಟೆ ಕ್ಷೇತ್ರಕ್ಕೆ ವೀರಭದ್ರಯ್ಯ ಚರಂತಿಮಠ ಮತ್ತು ದಾವಣಗೆರೆ ದಕ್ಷಿಣಕ್ಕೆ ಶ್ರೀನಿವಾಸ್ ಟಿ. ದಾಸಕರಿಯಪ್ಪ ಅವರಿಗೆ ಟಿಕೆಟ್ ಘೋಷಿಸಲಾಗಿದೆ.
ದೇಶದ ವಿವಿಧ ರಾಜ್ಯಗಳಲ್ಲಿ ನಡೆಯಲಿರುವ 2026ರ ವಿಧಾನಸಭಾ ಉಪಚುನಾವಣೆಗಳಿಗೆ ಭಾರತೀಯ ಜನತಾ ಪಕ್ಷವು (BJP) ತನ್ನ ಅಧಿಕೃತ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಬುಧವಾರ (ಮಾರ್ಚ್ 18, 2026) ದೆಹಲಿಯಲ್ಲಿ ನಡೆದ ಪಕ್ಷದ ಕೇಂದ್ರ ಚುನಾವಣಾ ಸಮಿತಿ (CEC) ಸಭೆಯಲ್ಲಿ ಕರ್ನಾಟಕ, ಗೋವಾ, ನಾಗಾಲ್ಯಾಂಡ್ ಮತ್ತು ತ್ರಿಪುರದ ಉಪ ಚುನಾವಣೆಗಳಿಗೆ ಅಭ್ಯರ್ಥಿಗಳನ್ನು ಘೋಷಿಸಲಾಗಿದೆ.
ಪಕ್ಷದ ರಾಷ್ಟ್ರೀಯ ಅಧ್ಯಕ್ಷ ನಿತಿನ್ ನವೀನ್ ಅವರ ಅಧ್ಯಕ್ಷತೆಯಲ್ಲಿ ನಡೆದ ಈ ಸಭೆಯಲ್ಲಿ ದೇಶದ ಉನ್ನತ ನಾಯಕರು ಭಾಗವಹಿಸಿದ್ದರು. ಪ್ರಧಾನಿ ನರೇಂದ್ರ ಮೋದಿ, ರಕ್ಷಣಾ ಸಚಿವ ರಾಜನಾಥ್ ಸಿಂಗ್, ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆಯಲ್ಲಿ ಪಾಲ್ಗೊಂಡಿದ್ದರು. ರಾಜ್ಯದ ರಾಜಕೀಯ ಸಮೀಕರಣಗಳನ್ನು ಗಮನದಲ್ಲಿಟ್ಟುಕೊಂಡು ಕೇಂದ್ರ ಚುನಾವಣಾ ಸಮಿತಿಯು ಕರ್ನಾಟಕದ ಎರಡು ಕ್ಷೇತ್ರಗಳಿಗೆ ಈ ಕೆಳಗಿನ ಹೆಸರುಗಳನ್ನು ಅನುಮೋದಿಸಿದೆ.
ಅಭ್ಯರ್ಥಿಗಳ ವಿವರ ಹೀಗೆ
ಬಾಗಲಕೋಟೆ ಕ್ಷೇತ್ರ: ಬಿಜೆಪಿ ಹಿರಿಯ ಮುಖಂಡ ಮತ್ತು ಮಾಜಿ ಶಾಸಕ ವೀರಭದ್ರಯ್ಯ ಚರಂತಿಮಠ್ ಅವರಿಗೆ ಮತ್ತೆ ಟಿಕೆಟ್ ನೀಡಲಾಗಿದೆ. ಈ ಕ್ಷೇತ್ರದಲ್ಲಿ ಚರಂತಿಮಠ ಅವರ ಪ್ರಭಾವ ಮತ್ತು ಹಿರಿತನವನ್ನು ಪರಿಗಣಿಸಿ ಹೈಕಮಾಂಡ್ ಈ ನಿರ್ಧಾರ ಕೈಗೊಂಡಿದೆ.
ದಾವಣಗೆರೆ ದಕ್ಷಿಣ ಕ್ಷೇತ್ರ: ಇಲ್ಲಿ ಹೊಸ ಮುಖಕ್ಕೆ ಮಣೆ ಹಾಕಲಾಗಿದ್ದು, ಶ್ರೀನಿವಾಸ್ ಟಿ. ದಾಸಕರಿಯಪ್ಪ ಅವರನ್ನು ಬಿಜೆಪಿ ಅಭ್ಯರ್ಥಿಯನ್ನಾಗಿ ಕಣಕ್ಕಿಳಿಸಲಾಗಿದೆ.
ಚುನಾವಣಾ ಕಣ ರಂಗು:
ಈ ಎರಡೂ ಕ್ಷೇತ್ರಗಳು ಬಿಜೆಪಿಗೆ ಪ್ರತಿಷ್ಠೆಯ ಕಣಗಳಾಗಿವೆ. ಬಾಗಲಕೋಟೆಯಲ್ಲಿ ಚರಂತಿಮಠ್ ಅವರು ತಮ್ಮ ಭದ್ರಕೋಟೆಯನ್ನು ಉಳಿಸಿಕೊಳ್ಳಲು ಪ್ರಯತ್ನಿಸಲಿದ್ದರೆ, ದಾವಣಗೆರೆ ದಕ್ಷಿಣದಲ್ಲಿ ಶ್ರೀನಿವಾಸ್ ದಾಸಕರಿಯಪ್ಪ ಅವರು ಕಾಂಗ್ರೆಸ್ ಭದ್ರಕೋಟೆಯನ್ನು ಭೇದಿಸುವ ಸವಾಲು ಎದುರಿಸಲಿದ್ದಾರೆ. ಅಭ್ಯರ್ಥಿಗಳ ಘೋಷಣೆಯಾಗುತ್ತಿದ್ದಂತೆಯೇ ಎರಡೂ ಕ್ಷೇತ್ರಗಳಲ್ಲಿ ಬಿಜೆಪಿ ಕಾರ್ಯಕರ್ತರು ಸಂಭ್ರಮಾಚರಣೆ ಆರಂಭಿಸಿದ್ದು, ಪ್ರಚಾರ ಕಾರ್ಯಕ್ಕೆ ಚಾಲನೆ ನೀಡಿದ್ದಾರೆ.
ವಿವಿಧ ರಾಜ್ಯಗಳ ಬಿಜೆಪಿ ಅಭ್ಯರ್ಥಿಗಳ ಪಟ್ಟಿ:
ರಾಜ್ಯ | ವಿಧಾನಸಭಾ ಕ್ಷೇತ್ರ | ಅಭ್ಯರ್ಥಿಯ ಹೆಸರು |
ಕರ್ನಾಟಕ | 24- ಬಾಗಲಕೋಟೆ | ವೀರಭದ್ರಯ್ಯ ಚರಂತಿಮಠ್ |
ಗೋವಾ | 21- ಪೋಂಡಾ | ರಿತೇಶ್ ರವಿ ನಾಯಕ್ |
ನಾಗಾಲ್ಯಾಂಡ್ | 28- ಕೊರಿದಾಂಗ್ (ST) | ದಾಒಚಿಯರ್ ಐ ಇಮ್ಚೆನ್ |
ತ್ರಿಪುರಾ | 56- ಧರ್ಮನಗರ | ಜಹರ್ ಚಕ್ರವರ್ತಿ |

