Bidadi Township conflict: CM DK vs Union Minister HDK - a history of political rivalry!
x

ಕೇಂದ್ರ ಸಚಿವ ಹೆಚ್‌.ಡಿ. ಕುಮಾರಸ್ವಾಮಿ ಹಾಗೂ ಸಿಎಂ ಡಿ.ಕೆ. ಶಿವಕುಮಾರ್‌

ಬಿಡದಿ ಟೌನ್‌ಶಿಪ್ ಸಂಘರ್ಷ: ಸಿಎಂ ಡಿಕೆಶಿ vs ಕೇಂದ್ರ ಸಚಿವ ಹೆಚ್‌ಡಿಕೆ ರಾಜಕೀಯ ಜಿದ್ದಾಜಿದ್ದಿನ ಇತಿಹಾಸ!

ರಾಜಕೀಯ ಸಮರವು ಹಲವು ಬಾರಿ ವೈಯಕ್ತಿಕ ಮಟ್ಟಕ್ಕೂ ಇಳಿದಿದೆ. ಡಿ.ಕೆ. ಶಿವಕುಮಾರ್ ಅವರ ತಾಯಿ ಗೌರಮ್ಮ ಅವರ ಕುರಿತಾದ ವಿವಾದಾತ್ಮಕ ಹೇಳಿಕೆಗಳು ಮತ್ತು ನಂತರದ ಪ್ರತಿಭಟನೆಗಳು ಇದಕ್ಕೆ ಸಾಕ್ಷಿ.


Click the Play button to hear this message in audio format

ಕರ್ನಾಟಕ ರಾಜಕೀಯದ ಇಬ್ಬರು ದೈತ್ಯ ಶಕ್ತಿಗಳಾದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹಾಗೂ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ನಡುವೆ ಈಗ 'ಬಿಡದಿ ಟೌನ್‌ಶಿಪ್' ಸಂಘರ್ಷ ತಾರಕಕ್ಕೇರಿದೆ. ಈ ವಿವಾದವು ಕೇವಲ ಒಂದು ಅಭಿವೃದ್ಧಿ ಯೋಜನೆಯ ಭೂಸ್ವಾಧೀನದ ಸುತ್ತಲ ಚರ್ಚೆಯಾಗಿ ಉಳಿಯದೆ, ಕಳೆದ ಎರಡು ದಶಕಗಳಿಂದ ನಡೆಯುತ್ತಿರುವ ಇಬ್ಬರು ಪ್ರಬಲ ಒಕ್ಕಲಿಗ ನಾಯಕರ ರಾಜಕೀಯ ಪೈಪೋಟಿಯ ಮತ್ತೊಂದು ಅಧ್ಯಾಯವಾಗಿ ಮಾರ್ಪಟ್ಟಿದೆ.

ಸವಾಲು-ಪ್ರತಿಸವಾಲು

ಬಿಡದಿ ಟೌನ್‌ಶಿಪ್ ಯೋಜನೆಯ ಕುರಿತು ಬಹಿರಂಗ ಚರ್ಚೆ ನಡೆಸಲು ಡಿ.ಕೆ. ಶಿವಕುಮಾರ್ ಅವರು ಜೂ. 26ರಂದು ವಿಧಾನಸೌಧಕ್ಕೆ ಬರುವಂತೆ ಕುಮಾರಸ್ವಾಮಿ ಅವರಿಗೆ ಪತ್ರದ ಮೂಲಕ ಆಹ್ವಾನ ನೀಡಿದ್ದರು. ಇದಕ್ಕೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿರುವ ಹೆಚ್‌ಡಿಕೆ, "ನಾನು ವಿಧಾನಸೌಧಕ್ಕೆ ಬರುವುದಿಲ್ಲ, ಬದಲಾಗಿ ಭೂಮಿ ಕಳೆದುಕೊಳ್ಳುತ್ತಿರುವ ರೈತರಿರುವ ಭೈರಮಂಗಲಕ್ಕೇ ಬರುತ್ತೇನೆ. ಅಲ್ಲಿಯೇ ರೈತರ ಎದುರು ಮುಖಾಮುಖಿ ಚರ್ಚೆ ನಡೆಸೋಣ" ಎಂದು ಪ್ರತಿ ಸವಾಲು ಹಾಕಿದ್ದಾರೆ. ಈ ಪತ್ರ ಸಮರವು ರಾಜ್ಯ ರಾಜಕೀಯದಲ್ಲಿ ಸಂಚಲನ ಮೂಡಿಸಿದೆ.

ಎರಡು ದಶಕಗಳ ಹಗೆತನದ ಹಿನ್ನೆಲೆ

ಡಿ.ಕೆ.ಶಿವಕುಮಾರ್‌ ಮತ್ತು ಹೆಚ್‌.ಡಿ. ಕುಮಾರಸ್ವಾಮಿ ನಡುವಿನ ಈ ರಾಜಕೀಯ ಜಿದ್ದಾಜಿದ್ದಿಗೆ ಸುಮಾರು 20 ವರ್ಷಗಳ ಇತಿಹಾಸವಿದೆ. 2004ರಲ್ಲಿ ಕನಕಪುರ ಲೋಕಸಭಾ ಕ್ಷೇತ್ರದಲ್ಲಿ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರ ವಿರುದ್ಧ ತೇಜಸ್ವಿನಿ ಗೌಡ ಅವರನ್ನು ಕಣಕ್ಕಿಳಿಸಿ, ದೇವೇಗೌಡರ ಸೋಲಿಗೆ ಡಿ.ಕೆ. ಶಿವಕುಮಾರ್ ಕಾರಣರಾಗಿದ್ದರು. ಅಂದಿನಿಂದ ಆರಂಭವಾದ ಈ ಸಂಘರ್ಷ, 2006ರಲ್ಲಿ ಕನಕಪುರದ ವೇದಿಕೆಯೊಂದರಲ್ಲಿ ನಡೆದ ಬಹಿರಂಗ ವಾಕ್ಸಮರದ ಮೂಲಕ ಮತ್ತಷ್ಟು ತೀವ್ರಗೊಂಡಿತ್ತು.

ವೈಯಕ್ತಿಕ ಟೀಕೆ ಮತ್ತು ಭಾವನಾತ್ಮಕ ತಿರುವುಗಳು

ರಾಜಕೀಯ ಸಮರವು ಹಲವು ಬಾರಿ ವೈಯಕ್ತಿಕ ಮಟ್ಟಕ್ಕೂ ಇಳಿದಿದೆ. ಡಿ.ಕೆ. ಶಿವಕುಮಾರ್ ಅವರ ತಾಯಿ ಗೌರಮ್ಮ ಅವರ ಕುರಿತಾದ ವಿವಾದಾತ್ಮಕ ಹೇಳಿಕೆಗಳು ಮತ್ತು ನಂತರದ ಪ್ರತಿಭಟನೆಗಳು ಇದಕ್ಕೆ ಸಾಕ್ಷಿ. ಆದರೆ, 2019ರಲ್ಲಿ ಡಿ.ಕೆ. ಶಿವಕುಮಾರ್ ಅವರು ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಬಂಧನಕ್ಕೊಳಗಾದಾಗ, ಎಚ್.ಡಿ. ಕುಮಾರಸ್ವಾಮಿ ಅವರು ಗೌರಮ್ಮ ಅವರನ್ನು ಭೇಟಿಯಾಗಿ ಸಾಂತ್ವನ ಹೇಳುವ ಮೂಲಕ ಅಚ್ಚರಿ ಮೂಡಿಸಿದ್ದರು. ಇದು ಒಕ್ಕಲಿಗ ಸಮುದಾಯದ ಭಾವನೆಗಳನ್ನು ಸೆಳೆಯುವ ರಾಜಕೀಯ ತಂತ್ರವೆಂದೇ ವಿಶ್ಲೇಷಿಸಲಾಗಿತ್ತು.

ಆಸ್ತಿ ಸಮರ ಮತ್ತು ಟೌನ್‌ಶಿಪ್ ವಿವಾದ

2024ರ ಲೋಕಸಭಾ ಚುನಾವಣೆ ವೇಳೆ ಇಬ್ಬರು ನಾಯಕರ ನಡುವೆ ಆಸ್ತಿ ವಿಚಾರವಾಗಿ ದೊಡ್ಡ ಮಟ್ಟದ ವಾಕ್ಸಮರ ನಡೆದಿತ್ತು. ಸಾವಿರಾರು ಕೋಟಿ ರೂ. ಆಸ್ತಿಯ ಆರೋಪ-ಪ್ರತ್ಯಾರೋಪಗಳು ನಡೆದಿದ್ದವು. ಈಗ ಬಿಡದಿ ಟೌನ್‌ಶಿಪ್ ಯೋಜನೆ ಆ ಜಾಗವನ್ನು ಆಕ್ರಮಿಸಿಕೊಂಡಿದೆ. ಡಿ.ಕೆ. ಶಿವಕುಮಾರ್ ಅವರು ಇದನ್ನು 'ಎ-ಒನ್ ಸಿಟಿ' ಎಂಬ ಹೆಸರಿನಲ್ಲಿ ಬೆಂಗಳೂರಿನ ಒತ್ತಡ ಕಡಿಮೆ ಮಾಡುವ ಯೋಜನೆಯೆಂದು ಪ್ರತಿಪಾದಿಸುತ್ತಿದ್ದರೆ, ಕುಮಾರಸ್ವಾಮಿ ಅವರು ಇದನ್ನು ರೈತರ ಭೂಮಿ ಕಬಳಿಸುವ ತಂತ್ರ ಎಂದು ಟೀಕಿಸುತ್ತಿದ್ದಾರೆ.

ಹಳೇ ಮೈಸೂರು ಭಾಗದಲ್ಲಿ ತಮ್ಮ ರಾಜಕೀಯ ಪ್ರಭುತ್ವವನ್ನು ಉಳಿಸಿಕೊಳ್ಳಲು ಮತ್ತು ಒಕ್ಕಲಿಗ ಸಮುದಾಯದ ಅಪ್ರತಿಮ ನಾಯಕ ಎನಿಸಿಕೊಳ್ಳಲು ಈ ಇಬ್ಬರು ನಾಯಕರು ನಡೆಸುತ್ತಿರುವ ಈ ಹೋರಾಟ, ಬಿಡದಿ ಟೌನ್‌ಶಿಪ್ ನೆಪದಲ್ಲಿ ಮತ್ತೊಂದು ಹಂತಕ್ಕೆ ತಲುಪಿರುವುದು ಸ್ಪಷ್ಟವಾಗಿದೆ.

Read More
Next Story