GBA elections: JDS makes elaborate preparations, forms high-power committee!
x
ಜಿಬಿಎ ವ್ಯಾಪ್ತಿಯಲ್ಲಿ ಪಕ್ಷ ಸಂಘಟನೆಗಾಗಿ ಸಮಿತಿ ರಚಿಸಿರುವ ಜೆಡಿಎಸ್‌

ಜಿಬಿಎ ಚುನಾವಣೆ: ಜೆಡಿಎಸ್ ಭರ್ಜರಿ ತಯಾರಿ, ಹೈಪವರ್ ಕಮಿಟಿ ರಚನೆ

ಗ್ರೇಟರ್‌ ಬೆಂಗಳೂರು ಪ್ರಾಧಿಕಾರ ವ್ಯಾಪ್ತಿಯ ಪಾಲಿಕೆಗಳ ಚುನಾವಣೆಗೆ ಸಂಬಂಧಿಸಿದಂತೆ ಪಕ್ಷದ ಸಂಘಟನೆ, ಬಲವರ್ಧನೆ ಸಂಬಂಧ ಸರಿಯಾದ ಸಮಯಕ್ಕೆ ಸಭೆ ನಡೆಸಬೇಕು. ಸದೃಢಗೊಳಿಸಲು ಕ್ರಮ ವಹಿಸಬೇಕು ಎಂದು ಎಚ್‌.ಡಿ.ದೇವೇಗೌಡ ತಿಳಿಸಿದ್ದಾರೆ.


Click the Play button to hear this message in audio format

ಗ್ರೇಟರ್‌ ಬೆಂಗಳೂರು ಪ್ರಾಧಿಕಾರದ ವ್ಯಾಪ್ತಿಯ ಐದು ನಗರ ಪಾಲಿಕೆಗಳಲ್ಲಿ ಅಧಿಕಾರ ಹಿಡಿಯುವ ನಿಟ್ಟಿನಲ್ಲಿ ಜೆಡಿಎಸ್‌ ಸಿದ್ಧತೆ ಆರಂಭಿಸಿದೆ. ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಎಚ್‌.ಡಿ. ದೇವೇಗೌಡರು, ಶಾಸಕಾಂಗ ಪಕ್ಷದ ನಾಯಕ ಸಿ.ಬಿ. ಸುರೇಶ್‌ ಬಾಬು ಅವರ ಅಧ್ಯಕ್ಷತೆಯಲ್ಲಿ ಏಳು ಜನರ ಉನ್ನತ ಮಟ್ಟದ ಸಮಿತಿಯನ್ನು ರಚಿಸಿ ಆದೇಶಿಸಿದ್ದಾರೆ.

ಈ ಕುರಿತು ಸೋಮವಾರ (ಮಾ. 2) ಪ್ರಕಟಣೆ ಹೊರಡಿಸಿರುವ ಅವರು, "ಈ ಉನ್ನತ ಮಟ್ಟದ ಸಮಿತಿಯು ಗ್ರೇಟರ್‌ ಬೆಂಗಳೂರು ಪ್ರಾಧಿಕಾರ ವ್ಯಾಪ್ತಿಯ ಪಾಲಿಕೆಗಳ ಚುನಾವಣೆಗೆ ಸಂಬಂಧಿಸಿದಂತೆ ಪಕ್ಷದ ಸಂಘಟನೆ ಮತ್ತು ಬಲವರ್ಧನೆಗಾಗಿ ಕಾಲಕಾಲಕ್ಕೆ ಸಭೆ ನಡೆಸಬೇಕು ಹಾಗೂ ಪಕ್ಷವನ್ನು ಸದೃಢಗೊಳಿಸಲು ಅಗತ್ಯ ಕ್ರಮ ವಹಿಸಬೇಕು" ಎಂದು ತಿಳಿಸಿದ್ದಾರೆ.

ಜೆಡಿಎಸ್‌ ಆದೇಶಪತ್ರ

ಗ್ರೇಟರ್ ಬೆಂಗಳೂರು ವ್ಯಾಪ್ತಿಯ ಐದು ವಿಭಾಗಗಳ ಪಕ್ಷದ ಅಧ್ಯಕ್ಷರನ್ನು ಸಭೆಗಳಿಗೆ ಆಹ್ವಾನಿಸಬೇಕು. ಸಮಿತಿಯು ನಡೆಸುವ ಸಭೆಗಳ ಮಾಹಿತಿಯನ್ನು ಪಕ್ಷದ ರಾಜ್ಯಾಧ್ಯಕ್ಷರ ಗಮನಕ್ಕೆ ತರಬೇಕು ಮತ್ತು ಪಕ್ಷದ ಕಾರ್ಯಕರ್ತರ ಸಲಹೆ-ಸೂಚನೆಗಳನ್ನು ಪರಿಗಣಿಸಬೇಕು ಎಂದು ಸೂಚಿಸಿದ್ದಾರೆ.‌

ಸಮಿತಿಯಲ್ಲಿ ಯಾರಿದ್ದಾರೆ?

ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಎಚ್‌.ಡಿ. ದೇವೇಗೌಡರು ರಚಿಸಿರುವ ಸಮಿತಿಗೆ ಶಾಸಕಾಂಗ ಪಕ್ಷದ ನಾಯಕ ಸಿ.ಬಿ. ಸುರೇಶ್ ಬಾಬು ಅವರನ್ನು ಅಧ್ಯಕ್ಷರನ್ನಾಗಿ ನೇಮಿಸಲಾಗಿದೆ. ಸದಸ್ಯರಾಗಿ ಯುವ ಜನತಾದಳದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ, ಪಕ್ಷದ ರಾಜ್ಯ ಕೋರ್ ಕಮಿಟಿ ಸದಸ್ಯ ಎಂ. ಕೃಷ್ಣಾರೆಡ್ಡಿ, ವಿಧಾನ ಪರಿಷತ್ ಸದಸ್ಯರಾದ ಟಿ.ಎ. ಶರವಣ, ಟಿ.ಎಸ್. ಜವರಾಯಿಗೌಡ, ಮಾಜಿ ಶಾಸಕ ಕೆ.ಎ. ತಿಪ್ಪೆಸ್ವಾಮಿ ನೇಮಕಗೊಂಡಿದ್ದಾರೆ. ಮಾಜಿ ಶಾಸಕ ಎಚ್.ಎಂ. ರಮೇಶ ಗೌಡರನ್ನು ಸಂಚಾಲಕರನ್ನಾಗಿ ನೇಮಿಸಲಾಗಿದೆ.

ಆದೇಶ ಪತ್ರ

ಜಿಬಿಎ ವ್ಯಾಪ್ತಿಯ ಪಕ್ಷದ ನೂತನ ಅಧ್ಯಕ್ಷರ ಆಯ್ಕೆ

ರಾಜ್ಯ ಸರ್ಕಾರವು ಗ್ರೇಟರ್‌ ಬೆಂಗಳೂರು ಪ್ರಾಧಿಕಾರದ ಐದು ನಗರ ಪಾಲಿಕೆಗಳಿಗೆ ಶೀಘ್ರವೇ ಚುನಾವಣೆ ನಡೆಸುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ಜಿಬಿಎ ವ್ಯಾಪ್ತಿಯಲ್ಲಿ ಪಕ್ಷ ಸಂಘಟನೆ ಮಾಡುವ ಉದ್ದೇಶದಿಂದ ಜೆಡಿಎಸ್‌ ಮಾಜಿ ಶಾಸಕ ಎಚ್.ಎಂ. ರಮೇಶ ಗೌಡರನ್ನು ಅಧ್ಯಕ್ಷರನ್ನಾಗಿ ನೇಮಿಸಿ ಆದೇಶಿಸಿದೆ.

ಈ ಕುರಿತು ಆದೇಶ ಹೊರಡಿಸಿರುವ ಎಚ್‌.ಡಿ. ದೇವೇಗೌಡರು, "ಐದು ಪಾಲಿಕೆಗಳಲ್ಲಿ ಪಕ್ಷದ ಸಂಘಟನೆಯನ್ನು ವ್ಯವಸ್ಥಿತವಾಗಿ ಮುನ್ನಡೆಸುವಲ್ಲಿ ನಿಮ್ಮ ಜವಾಬ್ದಾರಿ ಹೆಚ್ಚಿದೆ. ಈ ಐದು ಕ್ಷೇತ್ರಗಳ ಅಧ್ಯಕ್ಷರ ಕರ್ತವ್ಯ ನಿರ್ವಹಣೆಯಲ್ಲಿ ಏನಾದರೂ ವ್ಯತ್ಯಯಗಳಾಗಿ ಪಕ್ಷಕ್ಕೆ ಹಾನಿಯಾಗುವ ಸಂದರ್ಭ ಎದುರಾದಲ್ಲಿ, ಅದನ್ನು ಸರಿಪಡಿಸುವ ಜವಾಬ್ದಾರಿ ನಿಮ್ಮ ಮೇಲಿದೆ" ಎಂದು ತಿಳಿಸಿದ್ದಾರೆ.

ಗ್ರೇಟರ್ ಬೆಂಗಳೂರು ಪ್ರಾಧಿಕಾರದ ವಿವಿಧ ಘಟಕಗಳ ಅಧ್ಯಕ್ಷರು ಹಾಗೂ ಪದಾಧಿಕಾರಿಗಳನ್ನು ನೇಮಕ ಮಾಡುವ ಅಧಿಕಾರವನ್ನು ರಮೇಶ ಗೌಡರಿಗೆ ನೀಡಲಾಗಿದ್ದು, ಈ ನೇಮಕಾತಿ ವಿಚಾರಗಳನ್ನು ಪಕ್ಷದ ರಾಷ್ಟ್ರೀಯ ಹಾಗೂ ರಾಜ್ಯಾಧ್ಯಕ್ಷರ ಗಮನಕ್ಕೆ ತರಲು ಸೂಚಿಸಲಾಗಿದೆ. ಶೀಘ್ರದಲ್ಲೇ ಜಿಬಿಎ ಚುನಾವಣೆ ನಡೆಯುವುದರಿಂದ ಐದು ವಿಭಾಗದ ಅಧ್ಯಕ್ಷರೊಂದಿಗೆ ಕನಿಷ್ಠ ಹತ್ತು ದಿನಗಳಿಗೊಮ್ಮೆ ಕಡ್ಡಾಯವಾಗಿ ಸಭೆ ನಡೆಸಿ, ಪಕ್ಷದ ಕಾರ್ಯಚಟುವಟಿಕೆಗಳ ಬಗ್ಗೆ ಚರ್ಚಿಸಬೇಕು ಎಂದು ನಿರ್ದೇಶನ ನೀಡಿದ್ದಾರೆ.

Read More
Next Story