
ಪ್ರಧಾನಿ ಕರೆದ ಸಭೆಗೆ ಹಾಜರಾಗದೆ ಸಿಎಂ ಭಂಡತನ ಪ್ರದರ್ಶನ; ಮಾಜಿ ಸಿಎಂ ಬೊಮ್ಮಾಯಿ
ಕೃಷ್ಣಾ ಮೇಲ್ದಂಡೆ ಯೋಜನೆ 3 ನೇ ಹಂತದ ಭೂಸ್ವಾಧೀನಕ್ಕೆ ಅಗತ್ಯವಿರುವ ಸುಮಾರು 75 ಸಾವಿರ ಕೋಟಿ ರೂ. ಮುಂದಿನ ನಾಲ್ಕು ವರ್ಷ ಭರಿಸಲು ವಾರ್ಷಿಕ 18 ಸಾವಿರ ಕೋಟಿ ರೂ. ಒದಗಿಸಲು ಸಚಿವ ಸಂಪುಟದಲ್ಲಿ ಅನುಮೋದಿಸಲಾಗಿದೆ ಎಂದು ಹೇಳಿದ್ದರು.
ಕರ್ನಾಟಕದ ಆರ್ಥಿಕ ವ್ಯವಸ್ಥೆಯನ್ನು ಸಂಪೂರ್ಣ ಹಾಳು ಮಾಡಿದ ಅಪಖ್ಯಾತಿ ಸಿದ್ದರಾಮಯ್ಯ ಸರ್ಕಾರಕ್ಕೆ ಸಲ್ಲಲಿದೆ. ಕೃಷ್ಣಾ ಮೇಲ್ದಂಡೆ ಯೋಜನೆಗೆ ಕೇವಲ 3 ಸಾವಿರ ಕೋಟಿ ರೂ. ಮೀಸಲಿಡುವ ಮೂಲಕ ಉತ್ತರ ಕರ್ನಾಟಕದ ಜನರಿಗೆ ರಾಜ್ಯ ಸರ್ಕಾರ ದ್ರೋಹ ಎಸಗಿದೆ ಎಂದು ಮಾಜಿ ಸಿಎಂ, ಸಂಸದ ಬಸವರಾಜ ಬೊಮ್ಮಾಯಿ ಆರೋಪಿಸಿದರು.
ಬಾಗಲಕೋಟೆಯಲ್ಲಿ ಶನಿವಾರ ಮಾಧ್ಯಮಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, 2023 ರ ಚುನಾವಣೆಗೂ, ಈಗಿನ ಚುನಾವಣೆಗೂ ಬಹಳಷ್ಟು ರಾಜಕೀಯ ಬದಲಾವಣೆಗಳು ಆಗಿವೆ. ರಾಜ್ಯ ಸರ್ಕಾರದ ಆಡಳಿತದಿಂದ ಜನ ಭ್ರಮನಿರಸನಗೊಂಡಿದ್ದಾರೆ. ಅಷ್ಟೇ ಅಲ್ಲದೇ ಆರ್ಥಿಕ ವ್ಯವಸ್ಥೆ ಹಾಳಾಗಿದೆ. ಕೋವಿಡ್ ಅವಧಿಯಲ್ಲೂ ನಮ್ಮ ಸರ್ಕಾರವು ಆರ್ಥಿಕ ಸ್ಥಿತಿಯನ್ನು ನಿಯಂತ್ರಣದಲ್ಲಿ ಇಟ್ಟುಕೊಂಡಿತ್ತು. ಆದರೆ, ಈಗಿನ ಕಾಂಗ್ರೆಸ್ ಸರ್ಕಾರ ನಾಲ್ಕು ಲಕ್ಷ ಕೋಟಿ ಸಾಲ ಮಾಡಿದೆ. ಮುಂದಿನ ಬಜೆಟ್‌ಗಳಲ್ಲಿ ಸಾಲದ ಪ್ರಮಾಣವೇ ಆರರಿಂದ ಏಳು ಲಕ್ಷ ಕೋಟಿಗೆ ಏರುವ ಸಾಧ್ಯತೆ ಇರಲಿದೆ. ಹೀಗಿದ್ದರೂ ಸಿಎಂ ಸಿದ್ದರಾಮಯ್ಯ ಅವರು ಭಂಡತನದಿಂದ ಸಮರ್ಥನೆ ಮಾಡಿಕೊಳ್ಳುತ್ತಿರುವುದು ದುರ್ದೈವ ಎಂದು ಟೀಕಿಸಿದರು.
ಕೇಂದ್ರದಿಂದ ಹೆಚ್ಚು ಅನುದಾನ
ಯುಪಿಎ ಅವಧಿಯ 14 ನೇ ಹಣಕಾಸು ಆಯೋಗದಲ್ಲಿ ರಾಜ್ಯಕ್ಕೆ ನೀಡಿದ ಅನುದಾನಕ್ಕಿಂತ 15 ನೇ ಹಣಕಾಸು ಆಯೋಗದ ಅನುದಾನ ಹೆಚ್ಚಿದೆ. ರೈಲ್ವೆಗೆ ಅತಿ ಹೆಚ್ಚು ಹಣ ನೀಡಲಾಗಿದೆ. ಯುಪಿಎ ಅವಧಿಯಲ್ಲಿ ರಾಜ್ಯದ ರೈಲ್ವೆ ಯೋಜನೆಗಳಿಗೆ 700 ಕೋಟಿ ರೂ. ಬರುತ್ತಿತ್ತು. ಈಗ 7 ಸಾವಿರ ಕೋಟಿ ರೂ. ಬರುತ್ತಿದೆ. ಅತಿ ಹೆಚ್ಚು ರಾಷ್ಟ್ರೀಯ ಹೆದ್ದಾರಿ ಮಾಡಲಾಗಿದೆ. ಜಿಎಸ್ಟಿ ದರ ಇಳಿಕೆಯಿಂದ ಜನ ಸಾಮಾನ್ಯರಿಗೆ ಅನುಕೂಲವಾಗಿದೆ. ಜನರ ಆರ್ಥಿಕ ಭಾರ ಕಡಿಮೆ ಮಾಡಿ ಅಂತ ಮನವಿ ಮಾಡಿದ್ದರು. ನಾವು ಜನರ ಮೇಲಿನ ತೆರಿಗೆ ಕಡಿಮೆ ಮಾಡಿದರೆ, ರಾಜ್ಯಕ್ಕೆ ಅನ್ಯಾಯ ಮಾಡಿದ್ದಾರೆ ಎಂದರೆ ಇದ್ಯಾವ ನ್ಯಾಯ? ಎಂದು ಪ್ರಶ್ನಿಸಿದರು.
ಸಿಎಂ ಉದ್ದಟತನ ಸರಿಯಲ್ಲ
ರಾಜ್ಯದಲ್ಲಿ ಜಲ ಜೀವನ್ ಮಿಷನ್ ಯೋಜನೆ ಸರಿಯಾಗಿ ಜಾರಿಯಾಗಿಲ್ಲ. ಅನೇಕ ಯೋಜನೆಗಳಿಗೆ ರಾಜ್ಯದ ಪಾಲಿನ ಹಣವನ್ನೇ ನೀಡಿಲ್ಲ. ಕೇಂದ್ರ ಸರ್ಕಾರವು ಯುದ್ಧದ ಪರಿಣಾಮ ಅಬಕಾರಿ ತೆರಿಗೆ ಕಡಿಮೆ ಮಾಡಿದೆ. ಬೇರೆ ದೇಶಗಳಲ್ಲಿ ಆರ್ಥಿಕ ವ್ಯವಹಾರವೇ ನಿಂತು ಹೋಗಿದೆ. ಭಾರತದಲ್ಲಿ ಆ ರೀತಿಯ ತೊಂದರೆಯಾಗಿಲ್ಲ. ಎಲ್ಲರೂ ಸಹಕಾರ ನೀಡುವಂತೆ ಸಿಎಂಗಳ ಸಭೆ ಕರೆದರೆ ಸಿದ್ದರಾಮಯ್ಯ ಅವರು ಉದ್ದಟತನ ಪ್ರದರ್ಶಿಸಿದ್ದಾರೆ. ತಮಿಳುನಾಡು ಸಿಎಂ ಎಂ.ಕೆ. ಸ್ಟಾಲಿನ್, ಕೇರಳ ಸಿಎಂ ಹಾಗೂ ಪ್ರತಿಪಕ್ಷಗಳ ಸಿಎಂಗಳು ಪ್ರಧಾನಿ ಸಭೆಗೆ ಹೋಗಿದ್ದಾರೆ. ಸಿದ್ದರಾಮಯ್ಯ ಅವರು ನೀತಿ ಆಯೋಗದ ಸಭೆಗೂ ಹೋಗುವುದಿಲ್ಲ. ರಾಜ್ಯದ ಹಿತ ಕಾಯುವ ಜವಾಬ್ದಾರಿ ಇರುವವರು ನಮ್ಮ ವಿರುದ್ಧ ಇಲ್ಲಸಲ್ಲದ ಟೀಕೆ ಮಾಡುತ್ತಾರೆ ಎಂದು ವಾಗ್ದಾಳಿ ನಡೆಸಿದರು.
ಮುಳುಗಡೆ ಪ್ರದೇಶದ ಪುನರ್ವಸತಿ ಮತ್ತು ಪುನರ್ ನಿರ್ಮಾಣಕ್ಕಾಗಿ ಸುಮಾರು 400 ಕೋಟಿ ರೂ. ಹಂಚಿದ್ದೇವೆ ಎಂದು ಹೇಳಿಕೊಂಡಿದ್ದಾರೆ. ಇವರೇ ಮೂರು ತಿಂಗಳ ಹಿಂದೆ 9-10-2025 ರಂದು ಆದೇಶ ಮಾಡಿದ್ದರು. ಕೃಷ್ಣಾ ಮೇಲ್ದಂಡೆ ಯೋಜನೆ 3 ನೇ ಹಂತದ ಭೂಸ್ವಾಧೀನಕ್ಕೆ ಅಗತ್ಯವಿರುವ ಸುಮಾರು 75 ಸಾವಿರ ಕೋಟಿ ರೂ. ಮುಂದಿನ ನಾಲ್ಕು ವರ್ಷ ಭರಿಸಲು ವಾರ್ಷಿಕ 18 ಸಾವಿರ ಕೋಟಿ ರೂ. ಒದಗಿಸಲು ಸಚಿವ ಸಂಪುಟದಲ್ಲಿ ಅನುಮೋದಿಸಲಾಗಿದೆ ಎಂದು ಹೇಳಿದ್ದರು.
ಹೆಚ್ಚಿನ ಅನುದಾನ
ಬಾಗಲಕೋಟೆ ನವನಗರಕ್ಕೆ ಕಾಂಗ್ರೆಸ್ ಕಾಲದಲ್ಲಿ ಎಷ್ಟು ಕೊಟ್ಟಿದ್ದೀರಿ ಎಂದು ಸರ್ಕಾರವನ್ನು ಆಗ್ರಹಿಸಿದ್ದಾರೆ. ವೀರಣ್ಣ ಚರಂತಿಮಠ ಅವರು ಶಾಸಕರಾಗಿದ್ದಾಗ ಕಾರಜೋಳ ನೀರಾವರಿ ಮಂತ್ರಿಯಾಗಿದ್ದಾಗ ಸಿಎಂ ಆಗಿದ್ದೆ. ಬಾಗಲಕೋಟೆಗೆ ಹೆಚ್ಚಿನ ಅನುದಾನ ನೀಡಿದ್ದೇವೆ. ಈಗ ಮೇಟಿಯವರ ಕೊನೆಯ ಆಸೆಯಂತೆ ಮೆಡಿಕಲ್ ಕಾಲೇಜು ಮಾಡುತ್ತೇವೆ ಎಂದು ಹೇಳುತ್ತಾರೆ. ಅವರು ಜೀವಂತ ಇದ್ದಾಗ ಯಾಕೆ ಮಾಡಲಿಲ್ಲ. ನಾವಿದ್ದಾಗ ನಾಲ್ಕು ಮೆಡಿಕಲ್ ಕಾಲೇಜು ಮಾಡಿದ್ದೆವು. ಇವರ ಸರ್ಕಾರದ ಖಜಾನೆ ಸಂಪೂರ್ಣ ಖಾಲಿಯಾಗಿದೆ. ಈಗ ಚುನಾವಣೆ ಸಂದರ್ಭದಲ್ಲಿ ದುಡ್ಡು ಬಳಸಿ ಮೆಡಿಕಲ್ ಕಾಲೇಜು ಮಾಡುವುದಾಗಿ ಹೇಳುತ್ತಿದ್ದಾರೆ. 2023ರ ಚುನಾವಣೆಗೂ 2026ರ ಚುನಾವಣೆಗೆ ಬಹಳ ವ್ಯತ್ಯಾಸ ಇದೆ. ಈ ಚುನಾವಣೆಯಲ್ಲಿ ಬಿಜೆಪಿ ಗೆಲ್ಲುತ್ತದೆ ಎನ್ನುವ ವಿಶ್ವಾಸ ಇದೆ. ಈಗ ರಾಜಶಕ್ತಿ ಪ್ರಜಾಶಕ್ತಿ ನಡುವೆ ಸಂಘರ್ಷ ನಡೆಯುತ್ತಿದೆ. ಇದರಲ್ಲಿ ಪಜಾಶಕ್ತಿ ಗೆಲ್ಲುತ್ತದೆ. ಈ ಚುನಾವಣೆಯನ್ನು ಜನ ಸಾಮಾನ್ಯರು, ನಮ್ಮ ಕಾರ್ಯಕರ್ತರೇ ಮಾಡುತ್ತಾರೆ ಎಂದು ಹೇಳೀದರು.
ಆಲಮಟ್ಟಿ ಡ್ಯಾಂ ಎತರ ಹೆಚ್ಚಳದ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಮೂರು ರಾಜ್ಯಗಳ ವ್ಯಾಜ್ಯ ಇದೆ. ಎರಡು ರಾಜ್ಯಗಳ ವಾದ ಮಂಡನೆಯಾಗಿದೆ. ಕೋರ್ಟ್ನಲ್ಲಿರುವ ಪ್ರಕ್ರಿಯೆಗೆ ಕರ್ನಾಟಕದ ವಕೀರಲು ಏನು ಮಾಡಿದ್ದಾರೆ. ಡ್ಯಾಮ್ ಎತ್ತರ 524 ಮೀಟರ್ ಎತ್ತರ ಮಾಡುವ ಕುರಿತು ಮಹಾರಾಷ್ಟ್ರದವರು ಸುಪ್ರೀಂ ಕೋರ್ಟ್ನಲ್ಲಿ ಅರ್ಜಿ ಹಾಕಿದ್ದರು. ಅದನ್ನು ನಾನು ಸದನದಲ್ಲಿ ಹೇಳಿದಾಗ ಇವರು ಅಫಿಡವಿಟ್ ಹಾಕಿದ್ದಾರೆ ಎಂದು ಹೇಳಿದರು.
ಗ್ಯಾರೆಂಟಿ ಯೋಜನೆಗಳ ಕುರಿತು ಕೇಳಿದ ಪ್ರಶ್ನೆಗೆ ಗ್ಯಾರೆಂಟಿ ಯೋಜನೆಗಳು ಸ್ವಂತ ಆರ್ಥಿಕ ಬಲವರ್ಧನೆ ಮಾಡಿ ಎಷ್ಟಾದರೂ ಕೊಡಲಿ, ಎಲ್ಲ ಅಭಿವೃದಿ ನಿಲ್ಲಿಸಿ ಸಾಲ ಮಾಡಿ ಯಾವುದೇ ರೀತಿಯ ಅಭಿವೃದ್ಧಿ ಮಾಡದ ಪರಿಸ್ಥಿತಿಗೆ ತಂದರೆ ಯಾವ ಗ್ಯಾರೆಂಟಿ ಬಂದರೇನು ಎಂದು ಪ್ರಶ್ನಿಸಿದರು.

