
ಸಂಸದ ಬಸವರಾಜ ಬೊಮ್ಮಾಯಿ
ರಾಜ್ಯದಲ್ಲಿ ಹದಗೆಟ್ಟ ಕಾನೂನು ಸುವ್ಯವಸ್ಥೆ, ಅಪರಾಧ ಪ್ರಮಾಣ ಹೆಚ್ಚಳ : ಸಂಸದ ಬೊಮ್ಮಾಯಿ
ಸಿದ್ದರಾಮಯ್ಯ ಸರ್ಕಾರದಲ್ಲಿ ಮಹಿಳೆಯರು ಭಯದಿಂದ ಬದುಕುತ್ತಿದ್ದಾರೆ. ನೇಹಾ ಹಿರೇಮಠ್ ಪ್ರಕರಣ ಮಾಸುವ ಮುನ್ನವೇ ಹುಬ್ಬಳ್ಳಿಯಲ್ಲಿ ಮತ್ತೊಂದು ಲವ್ ಜಿಹಾದ್ ನಡೆದಿದೆ ಎಂದು ಸಂಸದ ಬೊಮ್ಮಾಯಿ ಆರೋಪಿಸಿದರು.
ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಹದಗೆಟ್ಟಿದ್ದು ಅಪರಾಧ ಪ್ರಕರಣಗಳು ಹೆಚ್ಚಾಗುತ್ತಿವೆ. ಮಹಿಳೆಯರು ಭಯಮುಕ್ತವಾಗಿ ಸಂಚರಿಸುಲು ಸಾಧ್ಯವಾಗುತ್ತಿಲ್ಲ ಎಂದು ಸಂಸದ ಬಸವರಾಜ ಬೊಮ್ಮಾಯಿ ಕಾಂಗ್ರೆಸ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಶನಿವಾರ(ಏ.4) ಬಾಗಲಕೋಟೆಯ ಪಕ್ಷದ ಕಾರ್ಯಾಲಯದಲ್ಲಿ ಮಾತನಾಡಿದ ಅವರು, "ಸಿದ್ದರಾಮಯ್ಯ ಸರ್ಕಾರದಲ್ಲಿ ಮಹಿಳೆಯರು ಭಯದಿಂದ ಬದುಕುತ್ತಿದ್ದಾರೆ. ನೇಹಾ ಹಿರೇಮಠ್ ಪ್ರಕರಣ ಮಾಸುವ ಮುನ್ನವೇ ಹುಬ್ಬಳ್ಳಿಯಲ್ಲಿ ಮತ್ತೊಂದು ಲವ್ ಜಿಹಾದ್ ನಡೆದಿದೆ. ಎಲ್ಲಾ ತಾಯಂದಿರು ಭಯ ಮುಕ್ತವಾಗಿ ಬದುಕಬೇಕೆಂದರೆ ಕಾಂಗ್ರೆಸ್ ಸರ್ಕಾರವನ್ನು ಶೀಘ್ರ ಕಿತ್ತೊಗೆಯಬೇಕಿದೆ" ಎಂದರು.
ಚುನಾವಣೆಯ ಫಲಿತಾಂಶವನ್ನು ಪರಿವರ್ತನೆ ಮಾಡುವ ಶಕ್ತಿ ಮಹಿಳೆಯರಿಗಿದೆ. ಆ ಕೆಲಸ ನೀವು ಮಾಡಬೇಕು. ಕಾಂಗ್ರೆಸ್‌ನವರಿಗೆ ಹೆಣ್ಣುಮಕ್ಕಳ ಮೇಲೆ ನಂಬಿಕೆ ಇಲ್ಲ. ಅನ್ನಭಾಗ್ಯ, ಗೃಹಲಕ್ಷ್ಮೀ ಕೊಟ್ಟಿದ್ದೆವೆ ಅವರು ಮತ ಹಾಕುತ್ತಾರೆ ಎಂಬ ನಂಬಿಕೆಯಲ್ಲಿ ಸಿಎಂ ಇದ್ದಾರೆ. ದೇಶದಲ್ಲಿ ಒಂದು ಮನೆಯಲ್ಲಿ ಕನಿಷ್ಠ ಮೂರರಿಂದ ಐವರು ಮಹಿಳೆಯರಿದ್ದಾರೆ. ಈಗ ಗೃಹಲಕ್ಷ್ಮೀ ಹಣ ಕೊಟ್ಟಿದ್ದು ಒಬ್ಬರಿಗೆ ಉಳಿದವರಿಗೆ ಕೊಡದೇ, ಮನೆಯಲ್ಲಿ ಜಗಳ ಹಚ್ಚಿದ್ದಾರೆ. ಬಸ್‌ನಲ್ಲಿ ಮಹಿಳೆಯರು ಜಗಳವಾಡಲು ಸಿಎಂ ನೇರ ಕಾರಣ. ವಯಸ್ಸಾದವರು, ಅನಾರೋಗ್ಯಕ್ಕೆ ಒಳಗಾದವರಿಗೆ ಬಸ್ ಹತ್ತಲು ಅವಕಾಶ ಕೊಡುವುದಿಲ್ಲ. ಎಷ್ಟೋ ಕಡೆ ಕಂಡಕ್ಟರ್‌ಗಳನ್ನು ಒಳಗೆ ಬಿಟ್ಟಿಲ್ಲ ಎಂದು ಶಕ್ತಿ ಯೋಜನೆಯಿಂದಾಗುತ್ತಿರುವ ತೊಂದರೆಗಳ ಬಗ್ಗೆ ತಿಳಿಸಿದರು.
ಬಿಜೆಪಿಯಿಂದ ಮಹಿಳೆಯರಿಗೆ ನ್ಯಾಯ
ಮಹಿಳೆಯರಿಗೆ ಶೇ.33 ರಷ್ಟು ಮೀಸಲಾತಿ ಕೊಡಬೇಕೆಂದು ಹಲವು ರಾಜಕೀಯ ನಾಯಕರು ನಲವತ್ತು ವರ್ಷದಿಂದ ಹೇಳುತ್ತಿದ್ದರು. 2004 - 2014ರವರೆಗೆ ಕಾಂಗ್ರೆಸ್‌ಗೆ ಅಧಿಕಾರವಿದ್ದರೂ ಮಾಜಿ ಸಂಸದೆ ಸೋನಿಯಾ ಗಾಂಧಿ ಮೀಸಲಾತಿ ಜಾರಿ ಮಾಡಲಿಲ್ಲ. ಆದರೆ ಪ್ರಧಾನಿ ನರೇಂದ್ರ ಮೋದಿ ಈ ನಿಟ್ಟಿನಲ್ಲಿ ಸೂಕ್ತ ನಿರ್ಧಾರ ಮಾಡಿದ್ದಾರೆ. ಮಹಿಳೆಯರಿಗೆ ಅನ್ಯಾಯವಾಗುತ್ತಿದೆ ಎಂದು ತ್ರಿವಳಿ ತಲಾಖ್ ರದ್ದುಪಡಿಸಿದ್ದರು. ಮಹಿಳೆಯರಿಗೆ ಸಂಜೀವಿನಿ ಯೋಜನೆ ಜಾರಿ ಮಾಡಿದರು. ನಾನು ಸಿಎಂ ಆಗಿದ್ದಾಗ ಸ್ತ್ರೀ ಸಾಮರ್ಥ್ಯ ಯೋಜನೆಯಡಿ ಪ್ರತಿ ಮಹಿಳಾ ಸಂಘಕ್ಕೆ 5 ಲಕ್ಷ ರೂ. ಕೊಡುತ್ತಿದ್ದೆ. ಮಹಿಳೆಯರ ಬಗ್ಗೆ ಬದ್ದತೆಯಿರುವುದು ಬಿಜೆಪಿ ಸರ್ಕಾರಕ್ಕೆ ಎಂದರು.
ಸಂಸತ್‌ನಲ್ಲಿ ಶೀಘ್ರವೇ ವಿಧೇಯಕ ಪಾಸ್
ಏ. 16, 17, 18 ರಂದು ಸಂಸತ್ತಿನಲ್ಲಿ ಮಹಿಳಾ ಮೀಸಲಾತಿ ವಿಧೇಯಕದ ಬಗ್ಗೆ ಚರ್ಚೆಯಾಗಿ ಜಾರಿಗೆ ಬರಲಿದೆ. ಇದರಿಂದ ಸುಮಾರು 80 ಮಹಿಳೆಯರು ರಾಜ್ಯ ವಿಧಾನಸಭೆಗೆ ಬರುತ್ತಾರೆ. ಬಾಗಲಕೋಟೆ ಜನರು ಬಿಜೆಪಿ ಅಭ್ಯರ್ಥಿ ವೀರಣ್ಣ ಚರಂತಿಮಠ ಅವರನ್ನು ಆರಿಸಿ ತಂದರೆ ಸಿದ್ದರಾಮಯ್ಯ ಸರ್ಕಾರದ ಕೌಂಟ್ ಡೌನ್ ಶುರುವಾಗುತ್ತದೆ. ಈ ಬಾರಿ ಬಾಗಲಕೋಟೆಯಲ್ಲಿ ಕಮಲ ಅರಳುತ್ತದೆ. ಮಹಿಳೆಯರು ನಾಲ್ಕು ದಿನ ಧಾರಾವಾಹಿ ನೋಡುವುದನ್ನು ಬಿಟ್ಟು ಮನೆ ಮನೆಗೆ ಹೋಗಿ ಜನರಿಗೆ ತಿಳಿಸಿ ಎಂದು ಮನವಿ ಮಾಡಿದರು.

