
ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ. ಶಿವಕುಮಾರ್ ಹಾಗೂ ಸಂಸದ ಬಸವರಾಜ ಬೊಮ್ಮಾಯಿ
ಸಾಲದ ವೀರ ಸಿದ್ದರಾಮಯ್ಯ! ಬೊಮ್ಮಾಯಿ ವ್ಯಂಗ್ಯ
ರಾಜ್ಯದ ಹಣೆ ಬರಹ ಬದಲಾವಣೆ ಮಾಡುವ ಚುನಾವಣೆ ಇದು. ಕಾಂಗ್ರೆಸ್ ಅಧಿಕಾರದ ಅಹಂಕಾರದಲ್ಲಿ ತೇಲಾಡುತ್ತಿದೆ. ಅವರಿಗೆ ಯಾರೂ ಕಣ್ಣಿಗೆ ಕಾಣಿಸುತ್ತಿಲ್ಲ ಎಂದು ಸಂಸದ ಬೊಮ್ಮಾಯಿ ಅಭಿಪ್ರಾಯಪಟ್ಟಿದ್ದಾರೆ.
ರಾಜ್ಯ ರಾಜಕಾರಣದಲ್ಲಿ ಬೂದಿ ಮುಚ್ಚಿದ ಕೆಂಡದಂತಿರುವ ಅಧಿಕಾರ ಹಂಚಿಕೆ ಇದೀಗ ದಾವಣಗೆರೆ ದಕ್ಷಿಣ ಉಪ ಚುನಾವಣೆಯಲ್ಲಿ ಮತ್ತೆ ಮುನ್ನೆಲೆಗೆ ಬಂದಿದೆ. ಮೇ ತಿಂಗಳಲ್ಲಿ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ. ಶಿವಕುಮಾರ್ ನಡುವೆ ಕುರ್ಚಿಗಾಗಿ ಜಂಗಿ ಕುಸ್ತಿ ನಡೆಯಲಿದೆ ಎಂದು ಸಂಸದ ಬಸವರಾಜ ಬೊಮ್ಮಾಯಿ ಭವಿಷ್ಯ ನುಡಿದಿದ್ದಾರೆ.
ಸರ್ಕಾರಕ್ಕೆ ಎರಡುವರೆ ವರ್ಷವಾದಗ ಆರಂಭಗೊಂಡ ಅಧಿಕಾರ ಹಂಚಿಕೆಯ ಚರ್ಚೆಗೆ ಉಪ ಚುನಾವಣೆ ಘೋಷಣೆಯಾಗಿರುವುದರಿಂದ ವಿರಾಮ ಸಿಕ್ಕಿದೆ. ಇಲ್ಲದಿದ್ದರೆ ಸಿಎಂ ಹಾಗೂ ಡಿಸಿಎಂ ಬೆಂಬಲಿಗರು ಭೋಜನಕೂಟದ ನೆಪದಲ್ಲಿ ಸಭೆಗಳನ್ನು ಸೇರಿ ಶಕ್ತಿ ಪ್ರದರ್ಶನ ಮಾಡುತ್ತಿದ್ದರು. ಉಪ ಚುನಾವಣಾ ಫಲಿತಾಂಶದ ನಂತರ ಮತ್ತೆ ಕಾಂಗ್ರೆಸ್‌ನಲ್ಲಿ ಕುರ್ಚಿ ಕಿತ್ತಾಟ ಆರಂಭವಾಗಲಿದೆ ಎಂಬ ಹೇಳಿಕೆ ರಾಜ್ಯ ರಾಜಕೀಯದಲ್ಲಿ ಸಾಕಷ್ಟು ಚರ್ಚೆಗೆ ಕಾರಣವಾಗಿದೆ.
ಬುಧವಾರ (ಏ.1) ದಾವಣಗೆರೆ ದಕ್ಷಿಣದಲ್ಲಿ ಬಿಜೆಪಿ ಅಭ್ಯರ್ಥಿ ಶ್ರೀನಿವಾಸ ದಾಸಕರಿಯಪ್ಪ ಅವರ ಪರವಾಗಿ ಮತಯಾಚನೆ ಮಾಡಿ ಮಾತನಾಡಿದ ಅವರು, "ಆರ್ಯ ವೈಶ್ಯ ಸಮಾಜ ಲೆಕ್ಕಾಚಾರ ಹಾಕಿ ಈ ಭ್ರಷ್ಟ ಸರ್ಕಾರ ಕಿತ್ತು ಹಾಕಬೇಕು. ಮತ್ತೊಮ್ಮೆ ಜನಪರವಾದ ಬಿಜೆಪಿ ಅಧಿಕಾರಕ್ಕೆ ಬರಲು ಮತ ನೀಡಬೇಕು. ಆರ್ಯ ವೈಶ್ಯ ಸಮಾಜ ಒಂದು ಶಿಸ್ತಿನ ಸಮಾಜ, ಇಲ್ಲಿ ಬಿಜೆಪಿಗೆ 30 ವರ್ಷದಿಂದ ಅವಕಾಶ ಸಿಕ್ಕಿಲ್ಲ. ನಿಮ್ಮ ಲೆಕ್ಕಾಚಾರದಿಂದ ಜಯ ಸಿಗಲಿದೆ" ಎಂದರು.
ಹಿಂದುಳಿದ ವರ್ಗಗಳಿಗೆ ಮೋಸ
ರಾಜ್ಯದ ಹಣೆ ಬರಹ ಬದಲಾವಣೆ ಮಾಡುವ ಚುನಾವಣೆ ಇದು. ಕಾಂಗ್ರೆಸ್ ಅಧಿಕಾರದ ಅಹಂಕಾರದಲ್ಲಿ ತೇಲಾಡುತ್ತಿದೆ. ಅವರಿಗೆ ಯಾರೂ ಕಣ್ಣಿಗೆ ಕಾಣಿಸುತ್ತಿಲ್ಲ. ಯಾವ ಸಮಾಜದ ಬಗ್ಗೆಯೂ ಗೌರವ ಇಲ್ಲ. ಅಹಿಂದ ಸಮಾಜಕ್ಕೆ ಅವಮಾನ ಮಾಡಿದ್ದು ಕಾಂಗ್ರೆಸ್ ಪಕ್ಷ. ಕಳೆದ ವರ್ಷ 410 ಕೋಟಿ ರೂ. ಹಿಂದುಳಿದ ವರ್ಗಗಳ ಸಮಾಜದ ಅಭಿವೃದ್ಧಿಗೆ ಇಟ್ಟಿದ್ದರು. ಆ ಹಣವನ್ನು ಜಾತಿ ಗಣತಿಗೆ ನೀಡಿ, ಹಿಂದುಳಿದ ವರ್ಗಗಳ ನಿಗಮಗಳಿಗೆ ಶೂನ್ಯ ಅನುದಾನ ಕೊಟ್ಟ ನಾಯಕ ಸಿದ್ದರಾಮಯ್ಯ. ಚುನಾವಣೆ ಬಂದಾಗ ಅಹಿಂದ ವರ್ಗದವರು ನೀವು ಮುಂದೆ ಬನ್ನಿ ಅಂತಾರೆ, ಅಧಿಕಾರಕ್ಕೆ ಬಂದಾಗ ನೀವು ಹಿಂದೆ ಉಳಿಯಿರಿ ನಾವು ಮುಂದೆ ಹೋಗುತ್ತೇವೆ ಎನ್ನುತ್ತಾರೆ ಎಂದು ತಿಳಿಸಿದರು.
ದಾವಣಗೆರೆ ದಕ್ಷಿಣದಲ್ಲಿ ಬಿಜೆಪಿ ಅಭ್ಯರ್ಥಿ ಶ್ರೀನಿವಾಸ ದಾಸಕರಿಯಪ್ಪ ಅವರ ಪರವಾಗಿ ಪಕ್ಷದ ನಾಯಕರು ಮತಯಾಚನೆ ಮಾಡಿದರು.
ಲೂಟಿಗೆ ಪೈಪೋಟಿ
ಬಿಜೆಪಿ ಅವಧಿಯಲ್ಲಿ ಆರ್ಯ ವೈಶ್ಯ ನಿಗಮಕ್ಕೆ ಹಣ ಕೊಟ್ಟಾಗ ವಿಧಾನ ಪರಿಷತ್ ಸದಸ್ಯ ಅರುಣ್ ಸರಿಯಾಗಿ ಬಳಕೆ ಮಾಡಿ ಶೇ. 95 ರಷ್ಟು ಅನುದಾನವನ್ನು ಯಶಸ್ವಿಯಾಗಿ ಬಳಸಿದ್ದರು. ಆದರೆ, ಕಾಂಗ್ರೆಸ್ ಸರ್ಕಾರ ಕಳೆದ ಎರಡು ವರ್ಷದಲ್ಲಿ ಹಣ ನೀಡಲಿಲ್ಲ. ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ 40 ಸಾವಿರ ಕೋಟಿ ರೂ. ಹಣವನ್ನು ಗ್ಯಾರಂಟಿ ಯೋಜನೆಗೆ ನೀಡಿದ್ದಾರೆ. ಎಲ್ಲ ಕಡೆ ಭ್ರಷ್ಟಾಚಾರವಿದೆ. ಸರ್ಕಾರದಲ್ಲಿ ಯಾರು ಹೆಚ್ಚು ಲೂಟಿ ಮಾಡುತ್ತಾರೆ ಎನ್ನುವ ಪೈಪೋಟಿ ನಡೆಯುತ್ತಿದೆ ಎಂದು ವಾಗ್ದಾಳಿ ನಡೆಸಿದರು.
ಸಾಲ ಮಾಡುವುದರಲ್ಲಿ ಸಿಎಂ ವೀರ
ಮುಖ್ಯಮಂತ್ರಿ ಸಿದ್ದರಾಮಯ್ಯ ಸಾಲ ಮಾಡುವುದರಲ್ಲಿ ದಾಖಲೆಯ ವೀರ. ಯಾರ ಅವಧಿಯಲ್ಲಿ ಎಷ್ಟು ಸಾಲ ಮಾಡಲಾಗಿದೆ ಎನ್ನುವ ಎಲ್ಲಾ ದಾಖಲೆಗಳನ್ನು ಬಹಿರಂಗ ಮಾಡಲಿ. ವಾಸ್ತವಂಶವನ್ನು ಮರೆಮಾಚಿ ತಮ್ಮನ್ನು ಸಮರ್ಥಿಸಿಕೊಳ್ಳುವ ಪರಿಸ್ಥಿತಿ ಮುಖ್ಯಮಂತ್ರಿಗೆ ಬರಬಾರದಿತ್ತು. ನಮ್ಮ ಕಾಲದಲ್ಲಿ 50 ಸಾವಿರ ಕೋಟಿ ರೂ. ಸಾಲ ಮಾಡಿದ್ದರೆ, ಅವರ ಅವಧಿಯಲ್ಲಿ 1 ಲಕ್ಷ 40 ಸಾವಿರ ಕೋಟಿ ರೂ. ಸಾಲ ಮಾಡಿದ್ದು, ಅವರೇ ಬಜೆಟ್‌ನಲ್ಲಿ ಮಂಡಿಸಿದ್ದಾರೆ. ಈಗ ಉಪ ಚುನಾವಣೆ ಸಂದರ್ಭದಲ್ಲಿ ಸುಳ್ಳು ಹೇಳುತ್ತಿದ್ದಾರೆ ಎಂದು ಆಪಾದಿಸಿದರು.

