By-Election 2026| ಮೇಟಿ ಕುಟುಂಬ ಕಲಹ: ಬಾಯಕ್ಕನ ʼಕೈʼ ಎಳೆದ ತಂಗಿ ಮಹಾದೇವಿ, ಸೋದರನಿಗೆ ಜಾಕ್‌ಪಾಟ್‌!
x
ದಿವಂಗತ ಎಚ್‌.ವೈ.ಮೇಟಿ ಅವರ ಮಕ್ಕಳೊಂದಿಗೆ ಸಿಎಂ ಮಾತುಕತೆ ನಡೆಸಿದರು.

By-Election 2026| ಮೇಟಿ ಕುಟುಂಬ ಕಲಹ: ಬಾಯಕ್ಕನ ʼಕೈʼ ಎಳೆದ ತಂಗಿ ಮಹಾದೇವಿ, ಸೋದರನಿಗೆ ಜಾಕ್‌ಪಾಟ್‌!

ಎಚ್.ವೈ.ಮೇಟಿ ನಿಧನದಿಂದ ತೆರವಾದ ಸ್ಥಾನಕ್ಕೆ ನಡೆಯುವ ಉಪಚುನಾವಣೆ ಟಿಕೆಟ್‌ಗಾಗಿ ಮೇಟಿ ಮಕ್ಕಳಾದ ಬಾಯಕ್ಕ, ಮಲ್ಲಿಕಾರ್ಜುನ, ಉಮೇಶ್‌, ಮಹಾದೇವಿ ನಡುವೆಯೇ ಕಲಹ ಏರ್ಪಟ್ಟಿತ್ತು.


ಬಾಗಲಕೋಟೆ ಕ್ಷೇತ್ರದ ಉಪಚುನಾವಣೆಗೆ ಕಾಂಗ್ರೆಸ್‌ ಹೈಕಮಾಂಡ್‌ ಅಚ್ಚರಿಯ ಅಭ್ಯರ್ಥಿಯನ್ನಾಗಿ ಮಾಜಿ ಸಚಿವ ದಿವಂಗತ ಎಚ್‌.ವೈ. ಮೇಟಿ ಅವರ ಕಿರಿಯ ಪುತ್ರ ಉಮೇಶ್‌ ಮೇಟಿ ಹೆಸರನ್ನು ಘೋಷಿಸಿದೆ. ಆ ಮೂಲಕ ಪ್ರಬಲ ಟಿಕೆಟ್‌ ಆಕಾಂಕ್ಷಿಗಳಾಗಿದ್ದ ಮೇಟಿ ಅವರ ಹಿರಿಯ ಪುತ್ರಿ ಬಾಯಕ್ಕ ಹಾಗೂ ಪುತ್ರ ಮಲ್ಲಿಕಾರ್ಜುನ್‌ ಮೇಟಿಗೆ ದೊಡ್ಡ ಶಾಕ್‌ ಕೊಟ್ಟಿದೆ. ಬಾಯಕ್ಕ ಮೇಟಿ ಹಾಗೂ ಮಲ್ಲಿಕಾರ್ಜುನ ಮೇಟಿ ರಾಜಕೀಯ ಹಾದಿಗೆ ಸ್ವಂತ ಸೋದರಿಯೇ ಮುಳ್ಳಾದರು ಎಂಬ ಮಾತುಗಳು ರಾಜಕೀಯ ವಲಯದಲ್ಲಿ ಹರಿದಾಡುತ್ತಿವೆ.

ಎಚ್‌.ವಿ. ಮೇಟಿ ನಿಧನದಿಂದ ತೆರವಾದ ಸ್ಥಾನಕ್ಕೆ ಬಾಯಕ್ಕ ಮೇಟಿ ಅಥವಾ ಮಲ್ಲಿಕಾರ್ಜುನ ಮೇಟಿ ಅವರಿಗೇ ಟಿಕೆಟ್‌ ನೀಡಬಹುದೆಂಬ ನಿರೀಕ್ಷೆ ಮತದಾರರಲ್ಲಿತ್ತು. ಆದರೆ, ಕೊನೆ ಕ್ಷಣದಲ್ಲಿ ನಿರೀಕ್ಷೆ ಹುಸಿಯಾಗಿದೆ. ಅದಕ್ಕೆ ಕಾರಣ ಬಾಯಕ್ಕ ಅವರ ಸೋದರಿ ಮಹಾದೇವಿ ಮೇಟಿ. ಉಪಚುನಾವಣೆ ಟಿಕೆಟ್‌ಗಾಗಿ ಕುಟುಂಬ ಸದಸ್ಯರಲ್ಲೇ ಕಲಹ ಏರ್ಪಟ್ಟಿತ್ತು. ಬಾಯಕ್ಕ, ಮಲ್ಲಿಕಾರ್ಜುನ, ಉಮೇಶ್‌ ಹಾಗೂ ಮಹಾದೇವಿ ಅವರನ್ನು ಸಿಎಂ ಸಿದ್ದರಾಮಯ್ಯ ಅವರು ಬೆಂಗಳೂರಿಗೆ ಕರೆಸಿಕೊಂಡು ಮಾತುಕತೆ ನಡೆಸಿದ್ದರು. ಆಗ ಮೇಟಿ ಅವರ ಕೊನೆಯ ಮಗಳು ಮಹಾದೇವಿ ಉರುಳಿಸಿದ ದಾಳಕ್ಕೆ ಬಾಯಕ್ಕ ಹಾಗೂ ಮಲ್ಲಿಕಾರ್ಜುನ ಇಬ್ಬರಿಗೂ ಟಿಕೆಟ್‌ ಕೈ ತಪ್ಪುವಂತಾಯಿತು. ಅಕ್ಕನ ಆಸೆಗೆ ತಂಗಿಯೇ ತಣ್ಣೀರು ಎರಚಿದ್ದರಿಂದ ಹಾಗೂ ಸೋದರ ಉಮೇಶ್‌ ಮೇಟಿ ಅವರಿಗೇ ಟಿಕೆಟ್‌ ನೀಡಬೇಕೆಂದು ಪಟ್ಟು ಹಿಡಿದ ಪರಿಣಾಮ ಹೈಕಮಾಂಡ್‌ ಬೇರೆ ದಾರಿ ಕಾಣದೇ ಟಿಕೆಟ್‌ ಘೋಷಿಸಿದೆ.

ಹೊರಗಿನ ವ್ಯಕ್ತಿಗೆ ಟಿಕೆಟ್‌ ನೀಡುವ ಎಚ್ಚರಿಕೆ

ಬಾಗಲಕೋಟೆ ಕ್ಷೇತ್ರದಲ್ಲಿ ಟಿಕೆಟ್‌ಗಾಗಿ ಮೇಟಿ ಅವರ ಮಕ್ಕಳಲ್ಲೇ ಕಲಹ ಶುರುವಾದ ಹಿನ್ನೆಲೆ ಸಿಎಂ ಸಿದ್ದರಾಮಯ್ಯ ಅವರೇ ಖುದ್ದು ಅಖಾಡಕ್ಕಿಳಿದಿದ್ದರು. ಮೇಟಿ ಅವರ ಮಕ್ಕಳೊಂದಿಗೆ ಸಂಧಾನ ಮಾತುಕತೆ ನಡೆಸಿದ್ದರು. ಟಿಕೆಟ್‌ಗಾಗಿ ಕುಟುಂಬದವರೇ ಕಿತ್ತಾಡಿಕೊಂಡರೆ ಹೊರಗಿನ ವ್ಯಕ್ತಿಗೆ ಟಿಕೆಟ್‌ ನೀಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದರು.

ಮಹಾದೇವಿ ಅವರು ಉಮೇಶ್‌ಗೆ ಟಿಕೆಟ್‌ ನೀಡಿದರೆ ನನ್ನ ಅಭ್ಯಂತರವಿಲ್ಲ, ಒಂದು ವೇಳೆ ಮಲ್ಲಿಕಾರ್ಜುನ ಅಥವಾ ಬಾಯಕ್ಕಗೆ ಟಿಕೆಟ್‌ ಕೊಟ್ಟರೆ ಪಕ್ಷದ ವಿರುದ್ಧ ಬಂಡಾಯ ಸಾರುತ್ತೇನೆ ಎಂದು ಒತ್ತಡ ಎಚ್ಚರಿಕೆ ನೀಡಿದ್ದರು. ಆಗ ವಿಧಿಯಿಲ್ಲದೇ ಬಾಯಕ್ಕ ಹಾಗೂ ಮಲ್ಲಿಕಾರ್ಜುನ ಅವರು ಉಮೇಶ್‌ಗೆ ಟಿಕೆಟ್‌ ನೀಡಲು ಸಮ್ಮತಿಸಿದರು.

ಕ್ಷೇತ್ರದಲ್ಲಿ ಅನುಕಂಪದ ಅಲೆಯ ಮೇಲೆ ಈ ಚುನಾವಣೆ ನಡೆಯುತ್ತಿದೆ. ನಿಮ್ಮ ಕುಟುಂಬದವರೇ ಒಬ್ಬರು ಸ್ಪರ್ಧಿಸಲಿ, ಎಲ್ಲರೂ ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಳ್ಳಿ, ಮುಂದಿನ ದಿನಗಳಲ್ಲಿ ಎಲ್ಲರಿಗೂ ಅವಕಾಶ ಕಲ್ಪಿಸಲಾಗುವುದು ಎಂದು ಸಿಎಂ ಭರವಸೆ ನೀಡಿದ ಬಳಿಕ ಬಾಯಕ್ಕ ಹಾಗೂ ಮಲ್ಲಿಕಾರ್ಜುನ ಸುಮ್ಮನಾದರು ಎಂದು ಮೂಲಗಳು ತಿಳಿಸಿವೆ.

ಆಕಾಂಕ್ಷಿಯಾಗಿದ್ದ ವೀಣಾ ಕಾಶಪ್ಪನವರ್‌

ಮೇಟಿ ಕುಟುಂಬದ ಸದಸ್ಯರಲ್ಲಿ ಟಿಕೆಟ್‌ಗಾಗಿ ಕಚ್ಚಾಟ ತೀವ್ರಗೊಂಡಿದ್ದ ಬೆನ್ನಲ್ಲೇ ಶಾಸಕ ವಿಜಯಾನಂದ ಕಾಶಪ್ಪನವರ್‌ ಪತ್ನಿ ವೀಣಾ ಕಾಶಪ್ಪನವರ್‌ ಸ್ಪರ್ಧೆಯ ಇಂಗಿತ ವ್ಯಕ್ತಪಡಿಸಿದ್ದರು. ಮೇಟಿ ಕುಟುಂಬದ ಸದಸ್ಯರ ಸಂಧಾನದ ವೇಳೆ ಖುದ್ದು ಸಿಎಂ ಸಿದ್ದರಾಮಯ್ಯ ಅವರು ನೀವು ಕಚ್ಚಾಡಿಕೊಂಡಿದ್ದರೆ ವೀಣಾ ಕಾಶಪ್ಪನವರ್‌ ಅವರಿಗೆ ಟಿಕೆಟ್‌ ನೀಡಬೇಕಾಗುತ್ತದೆ ಎಂದು ಎಚ್ಚರಿಕೆ ಕೊಟ್ಟ ಬಳಿಕ ಕಲಹ ಇತ್ಯರ್ಥವಾಯಿತು ಎಂದು ಮೂಲಗಳು ತಿಳಿಸಿವೆ.

ಬಾಯಕ್ಕನ ರಾಜಕೀಯ ಹಾದಿಗೆ ಮಹಾದೇವಿಯೇ ಕಂಟಕ

ಬಾಗಲಕೋಟೆ ರಾಜಕಾರಣದಲ್ಲಿ ದಿಢೀರನೇ ಕೇಳಿ ಬಂದ ಹೆಸರು ಮೇಟಿ ಅವರ ಕಿರಿಯ ಪುತ್ರಿ ಮಹಾದೇವಿ ಮೇಟಿ. ಯಾವುದೇ ರಾಜಕೀಯ ಒಡನಾಟ ಇರದ ಅವರು ಉಮೇಶ್‌ಗೆ ಟಿಕೆಟ್‌ ಕೊಡಿಸುವಲ್ಲಿ ಯಶಸ್ವಿಯಾದರು. ಸಿಎಂ ಜತೆಗಿನ ಮಾತುಕತೆ ವೇಳೆ ಹಿರಿಯ ಸಹೋದರ ಮಲ್ಲಿಕಾರ್ಜುನ ಮೇಟಿಗೆ ಟಿಕೆಟ್‌ ನೀಡಿದರೆ ಬಂಡಾಯ ಏಳುವುದಾಗಿ ಎಚ್ಚರಿಕೆ ನೀಡಿದ್ದರಿಂದ ಉಮೇಶ್‌ ಮೇಟಿಗೆ ಟಿಕೆಟ್‌ ಸಿಗುವಂತಾಯಿತು. ಅಂದ ಹಾಗೆ, ಮಲ್ಲಿಕಾರ್ಜುನ ಮೇಟಿ ಹಾಗೂ ಮಹಾದೇವಿ ಕುಟುಂಬದ ನಡುವೆ ವೈಯಕ್ತಿಕ ಕಲಹವೇ ಮಹಾದೇವಿಯವರ ಈ ನಡೆಗೆ ಕಾರಣ ಎಂದು ಮಾತುಗಳು ಕ್ಷೇತ್ರದಲ್ಲಿ ಹರಿದಾಡುತ್ತಿವೆ.

ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷೆ ಬಾಯಕ್ಕ ಮೇಟಿ ಅವರು ಕೂಡ ಅಂತಿಮವಾಗಿ ಇಬ್ಬರು ಸಹೋದರರಲ್ಲಿ ಯಾರಿಗೇ ಟಿಕೆಟ್ ನೀಡಿದರೂ ಕೆಲಸ ಮಾಡುವುದಾಗಿ ಒಪ್ಪಿಕೊಂಡಿದ್ದರಿಂದ ಹೈಕಮಾಂಡ್‌ ಉಮೇಶ್ ಮೇಟಿಗೆ ಟಿಕೆಟ್ ಘೋಷಿಸಿದೆ.

ಅಕ್ಕ-ತಂಗಿಯ ಜಟಾಪಟಿ

ಇನ್ನು ತಮ್ಮ ಸೋದರನಿಗೆ ಟಿಕೆಟ್‌ ಘೋಷಣೆಯಾದ ಬಗ್ಗೆ ಬಾಯಕ್ಕ ಅವರು ಕಣ್ಣೀರಿಡುತ್ತಲೇ ಪ್ರತಿಕ್ರಿಯಿಸಿದ್ದರು. ಇದಕ್ಕೆ ಭಾನುವಾರ ಸಾಮಾಜಿಕ ಜಾಲತಾಣದ ಮೂಲಕ ಕಿರಿಯ ಸಹೋದರಿ ಮಹಾದೇವಿ ತೀಕ್ಷ್ಣವಾಗಿ ತಿರುಗೇಟು ನೀಡಿದ್ದಾರೆ. ಈ ಬೆಳವಣಿಗೆಯು ಬಾಗಲಕೋಟೆ ರಾಜಕಾರಣದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ.

ಬಾಯಕ್ಕ ಮೇಟಿ ಅವರು ಕಣ್ಣೀರು ಹಾಕಿರುವುದನ್ನು 'ನಾಟಕ' ಎಂದು ತಂಗಿ ಮಹಾದೇವಿ ಜರಿದಿದ್ದಾರೆ. ಅಕ್ಕ-ತಂಗಿಯ ಈ ಜಟಾಪಟಿಯಿಂದ ಮೇಟಿ ಕುಟುಂಬದ ಕುಟುಂಬ ಕಲಹ ಇನ್ನಷ್ಟು ಜಗಜ್ಜಾಹೀರಾಗಿದೆ.

ಜಿಲ್ಲಾ ಪಂಚಾಯ್ತಿ ಅಧ್ಯಕ್ಷೆಯಾಗಿ ಆಯ್ಕೆಯಾಗಿದ್ದ ಸಂದರ್ಭದಲ್ಲಿ ಬಾಯಕ್ಕ ಮೇಟಿ ಸಂಗ್ರಹ ಚಿತ್ರ

ನೇರ ರಾಜಕಾರಣಕ್ಕೆ ಎಂಟ್ರಿ ಕೊಟ್ಟ ಕೃಷಿಕ

ಉಮೇಶ್ ಮೇಟಿ ಅವರು ರಾಜ್ಯ ರಾಜಕೀಯಕ್ಕೆ ಹೊಸ ಮುಖವಾದರೂ ಚುನಾವಣಾ ತಂತ್ರಗಾರಿಕೆಯಲ್ಲಿ ಹಳಬರು. ಏಕೆಂದರೆ, 1994ರಿಂದಲೇ ತಂದೆಯ ಚುನಾವಣಾ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದರು. 1996ರಲ್ಲಿ ಎಚ್.ವೈ. ಮೇಟಿ ಅವರು ಬಾಗಲಕೋಟೆ ಕ್ಷೇತ್ರದಿಂದ ಸಂಸದರಾಗಿ ಆಯ್ಕೆಯಾಗುವಲ್ಲಿ ಉಮೇಶ್‌ ಮೇಟಿ ಅವರ ಪಾತ್ರ ಪ್ರಮುಖವಾಗಿತ್ತು. ಇಡೀ ಕ್ಷೇತ್ರದ ಜವಾಬ್ದಾರಿ ಯಶಸ್ವಿಯಾಗಿ ನಿಭಾಯಿಸಿದ್ದ ಉಮೇಶ್‌ ಅವರು, ಕಾರ್ಯಕರ್ತರೊಂದಿಗೆ ನೇರ ಸಂಪರ್ಕ ಇಟ್ಟುಕೊಂಡಿದ್ದರು.

ಬಾಗಲಕೋಟೆ ಕ್ಷೇತ್ರ ಪುನರ್ ವಿಂಗಡಣೆ ಬಳಿಕ ಗ್ರಾಮೀಣ ಭಾಗಗಳಲ್ಲಿ ಕಾಂಗ್ರೆಸ್ ಪಕ್ಷವನ್ನು ತಳಮಟ್ಟದಿಂದ ಸಂಘಟಿಸುವಲ್ಲಿ ಉಮೇಶ್ ಪ್ರಮುಖ ಪಾತ್ರ ವಹಿಸಿದ್ದರು. ತಂದೆಯಂತೆ ಸರಳ ಸಜ್ಜನಿಕೆಯ ವ್ಯಕ್ತಿತ್ವ ಹೊಂದಿರುವುದು ಜನರ ಹತ್ತಿರವಾಗಲು ಸಹಕಾರಿಯಾಗಿದೆ.

ನಗರ ಭಾಗದಲ್ಲಿ ಮಲ್ಲಿಕಾರ್ಜುನ ಪ್ರಾಬಲ್ಯ

ಉಮೇಶ್ ಅವರು ಗ್ರಾಮೀಣ ಭಾಗದಲ್ಲಿ ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಂಡರೆ, ಅವರ ಸೋದರ ಮಲ್ಲಿಕಾರ್ಜುನ ಮೇಟಿ ಅವರು ನಗರ ಭಾಗದಲ್ಲಿ ಉತ್ತಮ ಸಂಘಟನೆ ಮಾಡಿದ್ದರು. ಹಾಗಾಗಿ, ಉಪಚುನಾವಣೆ ಟಿಕೆಟ್ ಮೇಲೂ ಕಣ್ಣಿಟ್ಟಿದ್ದರು.

ಬಾಗಲಕೋಟೆ ವಿಧಾನಸಭಾ ಕ್ಷೇತ್ರದಲ್ಲಿ ಒಟ್ಟು 2,58,118 ಮತದಾರರಿದ್ದು, ಇದರಲ್ಲಿ 1,31,863 ಮಹಿಳಾ ಮತದಾರರು, 1,26,233 ಪುರುಷ ಮತದಾರರು ಇದ್ದಾರೆ. ನಗರ ವ್ಯಾಪ್ತಿಯ ಮತದಾರರ ನಾಡಿ ಮಿಡಿತ ಅರಿತಿದ್ದ ಮಲ್ಲಿಕಾರ್ಜುನ್‌ ಅವರು ಎರಡನೆಯವರು. ಮೇಟಿ ಮಕ್ಕಳಲ್ಲಿ ಮೊದಲನೆಯವರು ಬಾಯಕ್ಕ ಮೇಟಿ, ಎರಡನೆಯವರು ಮಲ್ಲಿಕಾರ್ಜುನ ಮೇಟಿ, ಮೂರನೇಯವರು ಉಮೇಶ್‌ ಮೇಟಿ ಹಾಗೂ ನಾಲ್ಕನೆಯವರು ಮಹಾದೇವಿ ಮೇಟಿ. ಬಾಯಕ್ಕ ಅವರು ಸಿಎಂ ಸಿದ್ದರಾಮಯ್ಯ ಅವರೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದರೂ ಟಿಕೆಟ್‌ ಆಕಾಂಕ್ಷಿಯಾಗಿರಲಿಲ್ಲ. ಕುಟುಂಬದ ಸದಸ್ಯರಿಗೆ ಟಿಕೆಟ್‌ ಹಂಚಿಕೆ ವಿಚಾರದಲ್ಲಿ ತಟಸ್ಥರಾಗಿದ್ದರು.

ಕುಟುಂಬ ರಾಜಕಾರಣಕ್ಕೆ ಸ್ಥಳೀಯರ ಬೇಸರ

ಬಾಗಲಕೋಟೆ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಹೊಸಬರಿಗೆ ಟಿಕೆಟ್‌ ಸಿಗುವ ವಿಶ್ವಾಸವಿತ್ತು. ಆದರೆ, ಕಾಂಗ್ರೆಸ್‌ ನಾಯಕರು ಮತ್ತದೇ ಕುಟುಂಬ ರಾಜಕಾರಣದ ಮೊರೆ ಹೋಗಿರುವುದು ಬೇಸರ ಮೂಡಿಸಿದೆ ಎಂದು ಸ್ಥಳೀಯರು ಅಸಮಾಧಾನ ಹೊರಹಾಕಿದ್ದಾರೆ.

ಬಾಯಕ್ಕ ಮೇಟಿ ಅವರು ಜಿಲ್ಲಾ ರಾಜಕಾರಣದಲ್ಲಿ ಚಿರಪರಿಚಿತರು, ಅಲ್ಲದೇ ಸಿಎಂ ಸಿದ್ದರಾಮಯ್ಯ ಅವರೊಂದಿ ಉತ್ತಮ ಬಾಂಧವ್ಯ ಹೊಂದಿದ್ದರು. ಮಹಾದೇವಿ ಮೇಟಿ ಅವರು ರಾಜಕೀಯದಿಂದ ಅಷ್ಟಕ್ಕಷ್ಟೇ ಎಂಬಂತಿದ್ದರು. ಈಗ ಅವರ ಮಾತಿಗೆ ಮಣಿದು ಕಾಂಗ್ರೆಸ್‌ ನಾಯಕರು ಉಮೇಶ್‌ ಮೇಟಿಗೆ ಟಿಕೆಟ್‌ ಘೋಷಿಸಿದ್ದಾರೆ. ಈ ಬಾರಿ ಹೊಸ ಮುಖವನ್ನು ಸ್ಪರ್ಧೆಗಿಳಿಸುವ ಆಶಾಭಾವನೆ ಹೊಂದಿದ್ದೆವು. ಕುಟುಂಬ ರಾಜಕಾರಣವನ್ನೇ ಮುಂದುವರಿಸಿಕೊಂಡು ಹೋದರೆ ಜನಸಾಮಾನ್ಯರು, ಪ್ರಜ್ಞಾವಂತರಿಗೆ ಮನ್ನಣೆ ಎಲ್ಲಿದೆ ಎಂದು ರೈತ ಮುಖಂಡ ಪಾಟೀಲ್‌ ಪ್ರಶ್ನಿಸಿದರು.

ಉಮೇಶ್ ಮುಂದಿರುವ ಸವಾಲುಗಳೇನು?

ಎಚ್.ವೈ. ಮೇಟಿ ಅವರ ಬಗ್ಗೆ ಜನರಿಗಿದ್ದ ಅನುಕಂಪ ಮತ್ತು ಅವರ ಅಭಿವೃದ್ಧಿ ಕೆಲಸಗಳು ಉಮೇಶ್ ಅವರಿಗೆ ಶ್ರೀರಕ್ಷೆಯಾಗಲಿವೆ ಎನ್ನಲಾಗಿದೆ. ಕೃಷಿ ಕಾಯಕದಿಂದಲೇ ಗುರುತಿಸಿಕೊಂಡಿರುವ ಇವರು ಗ್ರಾಮೀಣ ಮತದಾರರೊಂದಿಗೆ ಹೆಚ್ಚು ಸಂಪರ್ಕ ಹೊಂದಿರುವುದು ಇವರಿಗೆ ವರವಾಗಿ ಬದಲಾಗುವ ಸಾಧ್ಯತೆ ಇದೆ.

ಎಚ್‌.ವೈ.ಮೇಟಿ ಎದುರು ಹಲವು ಬಾರಿ ಪರಾಜಿತವಾಗಿರುವ ಬಿಜೆಪಿ ನಾಯಕ ವೀರಣ್ಣ ಚರಂತಿಮಠ ಹಾಗೂ ವಿಪಕ್ಷಗಳ ತಂತ್ರಗಾರಿಕೆ ಎದುರಿಸಿ ತಂದೆಯ ಪರಂಪರೆ ಮುಂದುವರಿಸುವುದು ಉಮೇಶ್ ಮುಂದಿರುವ ದೊಡ್ಡ ಸವಾಲಾಗಿದೆ. ಒಟ್ಟಾರೆ ಉಮೇಶ್ ಮೇಟಿ ಅವರು ಕೃಷಿಕರು ಮಾತ್ರವಲ್ಲದೇ ಸಂಘಟನಾ ಚತುರರಾಗಿ ಬಾಗಲಕೋಟೆ ರಾಜಕಾರಣದಲ್ಲಿ ಹೊಸ ಅಧ್ಯಾಯ ಬರೆಯಲು ಸಜ್ಜಾಗಿದ್ದಾರೆ.

ಉಮೇಶ್‌ ಪರಿಚಯ

ಎಚ್‌.ವೈ.ಮೇಟಿ ಅವರ ಎರಡನೇ ಪುತ್ರ ಉಮೇಶ್‌ ಮೇಟಿ235073 1972 ಜೂ.1 ರಂದು ಜನಿಸಿದರು. ಪಿಯುಸಿವರೆಗೆ ವ್ಯಾಸಂಗ ಮಾಡಿದ್ದು, ಕೃಷಿಯಲ್ಲೇ ಮುಂದುವರಿದ್ದರು. ಉಮೇಶ್‌ ಅವರ ಪುತ್ನಿ ರುಕ್ಮಿಣಿ. ಈ ದಂಪತಿಗೆ ಇಬ್ಬರು ಮಕ್ಕಳಿದ್ದು, ಪುತ್ರ ಹರ್ಷ ವೈದ್ಯಕೀಯ ಸ್ನಾತಕೋತ್ತರ ಪದವಿ ವ್ಯಾಸಂಗ ಮಾಡುತ್ತಿದ್ದಾರೆ. ಪುತ್ರಿ ನಮಿತಾ ಎಂಬಿಬಿಎಸ್‌ ವ್ಯಾಸಂಗ ಮಾಡುತ್ತಿದ್ದಾರೆ.

Read More
Next Story