By Election|ರಾಜ್ಯ ಸರ್ಕಾರದ ಬಳಿ ಸಂಬಳ ನೀಡಲೂ ಹಣವಿಲ್ಲ
x

ಬಾಗಲಕೋಟೆಯಲ್ಲಿ ಬಿಜೆಪಿ ಅಭ್ಯರ್ಥಿ ಪರವಾಗಿ ಬಿ.ವೈ. ವಿಜಯೇಂದ್ರ ಪ್ರಚಾರ ನಡೆಸಿದರು. 

By Election|"ರಾಜ್ಯ ಸರ್ಕಾರದ ಬಳಿ ಸಂಬಳ ನೀಡಲೂ ಹಣವಿಲ್ಲ"

Bagalkot By Election|ಬಾಗಲಕೋಟೆ ವಿಧಾನಸಭಾ ಕ್ಷೇತ್ರದ ಮತದಾರರ ಒಲವು ಬಿಜೆಪಿ ಪರವಾಗಿ ಹೆಚ್ಚಾಗುತ್ತಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ತಿಳಿಸಿದರು.


Click the Play button to hear this message in audio format

ದಾವಣಗೆರೆ ದಕ್ಷಿಣ ಹಾಗೂ ಬಾಗಲಕೋಟೆಯಲ್ಲಿನ ಉಪ ಚುನಾವಣೆಯ ಕಾವು ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ಈ ಚುನಾವಣೆ ರಾಜ್ಯದಲ್ಲಿ ಅಧಿಕಾರದಲ್ಲಿರುವ ಕಾಂಗ್ರೆಸ್‌ಗೆ ಪ್ರತಿಷ್ಠೆಯಾಗಿದ್ದರೆ, ಸರ್ಕಾರದ ವಿರುದ್ಧ ಆಡಳಿತ ವಿರೋಧಿ ಅಲೆಯಿದೆ ಎಂಬುದನ್ನು ರುಜುವಾತು ಮಾಡಲು ವಿಪಕ್ಷ ಬಿಜೆಪಿಗೆ ಇದೊಂದು ಸದಾವಕಾಶ. ಈ ಚುನಾವಣೆಯಲ್ಲಿ ಗೆಲುವು ಸಾಧಿಸಲೇ ಬೇಕು ಎಂದು ಹಠ ತೊಟ್ಟಿರುವ ಎರಡೂ ಪಕ್ಷಗಳ ಅಬ್ಬರದ ಪ್ರಚಾರದಲ್ಲಿ ತೊಡಗಿವೆ.

ಸೋಮವಾರ (ಮಾ.30) ಬಾಗಲಕೋಟೆಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಚುನಾವಣಾ ಪ್ರಚಾರ ಮಾಡಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಯಾರೇ ಇಲ್ಲಿ ಬಂದು ಬೀಡು ಬಿಟ್ಟರೂ ಮತದಾರರು ಬಿಜೆಪಿಗೆ ಆಶೀರ್ವಾದ ನೀಡಿ ಚರಂತಿಮಠ ಅವರನ್ನು ಗೆಲ್ಲಿಸಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಕಾಂಗ್ರೆಸ್‌ನ ತಂತ್ರ, ಕುತಂತ್ರ ಯಾವುದೂ ನಡೆಯುವುದಿಲ್ಲ. ಬಾಗಲಕೋಟೆ ವಿಧಾನಸಭಾ ಕ್ಷೇತ್ರದ ಮತದಾರರ ಒಲವು ಬಿಜೆಪಿ ಪರವಾಗಿ ಹೆಚ್ಚಾಗುತ್ತಿದೆ. ಕಾರ್ಯಕರ್ತರು ಉತ್ಸಾಹದಲ್ಲಿದ್ದಾರೆ. ನಮ್ಮ ಅಭ್ಯರ್ಥಿ ಬೆಳಿಗ್ಗೆ 7ರಿಂದ ಮತಯಾಚನೆ ಮಾಡುತ್ತಿದ್ದಾರೆ. ವಾತಾವರಣ ಬಿಜೆಪಿ ಪರವಾಗಿದೆ ಎಂದರು.

ಪೊಲೀಸ್, ಅತಿಥಿ ಉಪನ್ಯಾಸಕರ ಸಂಬಳ ವಿಳಂಬ

ಈ ಹಿಂದೆ ಬಿಜೆಪಿ ಸರ್ಕಾರ ಕೊಟ್ಟ ಕಾರ್ಯಕ್ರಮಗಳಿಗೆ ಇಂದಿಗೂ ಗುದ್ದಲಿ ಪೂಜೆಯಾಗುತ್ತಿದೆ. ಯಾವುದೇ ರೀತಿ ಅಭಿವೃದ್ಧಿಗೂ ರಾಜ್ಯ ಸರ್ಕಾರ ಹಣ ನೀಡಿಲ್ಲ. ಪೊಲೀಸ್ ಇಲಾಖೆಯ ಸಿಬ್ಬಂದಿ ಹಾಗೂ ಅಧಿಕಾರಿಗಳಿಗೆ ಪ್ರತಿ ತಿಂಗಳ ಮೊದಲ ದಿನವೇ ಸಂಬಳ ಕೊಡಬೇಕು. ರಾಜ್ಯದ ಇತಿಹಾಸದಲ್ಲಿ ಮೊಟ್ಟ ಮೊದಲ ಬಾರಿಗೆ ಸಂಬಳ ತಡವಾಗುತ್ತಿದೆ. ಶಿವಮೊಗ್ಗದ ಕುವೆಂಪು ವಿಶ್ವವಿದ್ಯಾನಿಲಯದ ಅತಿಥಿ ಉಪನ್ಯಾಸಕರಿಗೆ ಸಂಬಳ ಕೊಡದೆ ಎರಡು ತಿಂಗಳಾಗಿದೆ. ಬೇರೆ ಬೇರೆ ವಿವಿಗಳಲ್ಲೂ ಇದೇ ಪರಿಸ್ಥಿತಿ ಇದೆ. 17 ಬಜೆಟ್ ಮಂಡಿಸಿದ್ದಾಗಿ ಮುಖ್ಯಮಂತ್ರಿಗಳು ಹೇಳುತ್ತಾರೆ. ರಾಜ್ಯದ ಹಣಕಾಸು ಪರಿಸ್ಥಿತಿ ಬಗ್ಗೆ ಶ್ವೇತಪತ್ರಕ್ಕಾಗಿ ಹಲವು ಬಾರಿ ಒತ್ತಾಯಿಸಿದ್ದೇವೆ. ಆದರೆ, ಇದುವರೆಗೂ ಬಿಡುಗಡೆ ಮಾಡಿಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದರು.

ಸಿಎಂಗೆ ಪುನರ್ ಜನ್ಮ ಕೊಟ್ಟ ಜಿಲ್ಲೆ

ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಕಾಂಗ್ರೆಸ್‌ ನಾಯಕರು ಬಾಗಲಕೋಟೆ ಜಿಲ್ಲೆಯನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿದ್ದಾರೆ. ಅವರು ಇಲ್ಲಿ ಏನೇ ಭಾಷಣ ಮಾಡಿದರೂ ಜನರಿಗೆ ವಾಸ್ತವಿಕ ಸತ್ಯ ಅರ್ಥವಾಗಿದೆ. ವೀರಣ್ಣ ಚರಂತಿಮಠ್ ಅವರು ದೊಡ್ಡ ಅಂತರದಲ್ಲಿ ವಿಜಯಶಾಲಿಯಾಗುತ್ತಾರೆ. ಹಣಬಲ, ತೋಳ್ಬಲ ಬಳಸಿ ಅಧಿಕಾರ ದುರ್ಬಳಕೆ ಮಾಡಿಕೊಂಡು ದಬ್ಬಾಳಿಕೆ ಮಾಡಲು ಕಾಂಗ್ರೆಸ್ ಹುನ್ನಾರ ನಡೆಸುತ್ತಿದೆ. ಆದರೆ, ಇಲ್ಲಿನ ಪ್ರಜ್ಞಾವಂತ ಮತದಾರರು ಬಿಜೆಪಿ ಗೆಲ್ಲಿಸಲು ನಿರ್ಧರಿಸಿದ್ದಾರೆ ಎಂದು ತಿಳಿಸಿದರು.

ಕಳೆದ 20 ವರ್ಷಗಳಿಂದ ಬಿಜೆಪಿಯಲ್ಲಿ ಕೆಲಸ ಮಾಡುತ್ತಿದ್ದೇನೆ. ಬೆಂಗಳೂರು ಮಹಾನಗರ ಯುವ ಮೋರ್ಚಾ ಕಾರ್ಯದರ್ಶಿಯಾಗಿ, ರಾಜ್ಯ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿಯಾಗಿ, ರಾಜ್ಯ ಉಪಾಧ್ಯಕ್ಷನಾಗಿ ಕೆಲಸ ಮಾಡಿದ್ದೇನೆ. ಇದೀಗ ಪಕ್ಷದ ವರಿಷ್ಠರು ರಾಜ್ಯಾಧ್ಯಕ್ಷನ ಜವಾಬ್ದಾರಿ ಕೊಟ್ಟಿದ್ದಾರೆ. ಸಂಘಟನೆ ಕೆಲಸ ಹುಡುಗಾಟಿಕೆಯಲ್ಲ. ಪ್ರಾಮಾಣಿಕವಾಗಿ ಮಾಡುತ್ತಿದ್ದೇನೆ. ಕಾಂಗ್ರೆಸ್ಸಿನ ವಂಶ ರಾಜಕಾರಣವನ್ನು ಜನರು ನೋಡುತ್ತಿದ್ದಾರೆ ಎಂದರು.

ಕಾಂಗ್ರೆಸ್‌ನಿಂದ ಬಿಜೆಪಿ ಗೆಲುವಿಗೆ ಸಹಕಾರ

ಬಿಜೆಪಿ ಅಭ್ಯರ್ಥಿ ಚರಂತಿಮಠ ಜನಾನುರಾಗಿ. ಯಾರ ವಿರೋಧವನ್ನೂ ಕಟ್ಟಿಕೊಂಡವರಲ್ಲ. ಕಾಂಗ್ರೆಸ್ ಪಕ್ಷದವರೂ ಚರಂತಿಮಠ ಗೆಲ್ಲಬೇಕೆಂದು ಬಯಸುತ್ತಿದ್ದಾರೆ. ಬಾಗಲಕೋಟೆ - ದಾವಣಗೆರೆ ದಕ್ಷಿಣದಲ್ಲಿ ಕಾಂಗ್ರೆಸ್‌ನ ಕೆಲವು ಕಾರ್ಯಕರ್ತರು ನಮಗೆ ಸಹಕಾರ ನೀಡುತ್ತಿದ್ದಾರೆ. ಬಿಜೆಪಿ ಅಭ್ಯರ್ಥಿ ಗೆಲ್ಲಿಸಬೇಕೆಂದು ಯಾರೇ ಕೆಲಸ ಮಾಡಿದರೂ ಅದನ್ನು ಸ್ವಾಗತಿಸುವೆ. ಚುನಾವಣಾ ಫಲಿತಾಂಶ ಬಂದ ನಂತರ ಕಾಂಗ್ರೆಸ್‌ನಲ್ಲಿ ಎಷ್ಟು ಬಣಗಳಿವೆ, ಬಿಜೆಪಿಯಲ್ಲಿ ಎಷ್ಟು ಬಣಗಳಿವೆ ಎಂಬುದು ಗೊತ್ತಾಗಲಿದೆ ಎಂದು ಹೇಳಿದರು.

Read More
Next Story