
ಬಿಜೆಪಿ ಶಾಸಕ ಬಿ. ಸುರೇಶ್‌ಗೌಡ
ಅಡ್ಡ ಮತದಾನ ಮಾಡಿದವರಿಗೆ ತಕ್ಕ ಶಾಸ್ತಿ, 175 ಸೀಟ್ ಗೆದ್ದು ಮೈತ್ರಿಕೂಟ ಅಧಿಕಾರಕ್ಕೆ: ಬಿ. ಸುರೇಶ್ ಗೌಡ ಭವಿಷ್ಯ!
ಇತ್ತೀಚಿನ ಪರಿಷತ್ ಚುನಾವಣೆಯಲ್ಲಿ ನಡೆದ ಅಡ್ಡ ಮತದಾನದ ಬಗ್ಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿ, ಪಕ್ಷದ ವಿಪ್ ಉಲ್ಲಂಘಿಸಿ ಅಡ್ಡ ಮತದಾನ ಮಾಡಿದವರನ್ನು ಒಂದು ಕ್ಷಣವೂ ಪಕ್ಷದಲ್ಲಿ ಇಟ್ಟುಕೊಳ್ಳಬಾರದು ಎಂದು ತಿಳಿಸಿದರು.
ರಾಜ್ಯ ಬಿಜೆಪಿಯ ಹಿರಿಯ ನಾಯಕ ಹಾಗೂ ತುಮಕೂರು ಗ್ರಾಮಾಂತರ ಕ್ಷೇತ್ರದ ಶಾಸಕ ಬಿ. ಸುರೇಶ್ ಗೌಡ ಅವರು ‘ದ ಫೆಡರಲ್ ಕರ್ನಾಟಕ’ಕ್ಕೆ ನೀಡಿದ ವಿಶೇಷ ಸಂದರ್ಶನದಲ್ಲಿ ರಾಜ್ಯ ರಾಜಕೀಯದ ಪ್ರಚಲಿತ ವಿದ್ಯಮಾನಗಳ ಕುರಿತು ಹಲವು ಸ್ಫೋಟಕ ಮಾಹಿತಿಗಳನ್ನು ಹಂಚಿಕೊಂಡಿದ್ದಾರೆ. ಬಿಜೆಪಿ-ಜೆಡಿಎಸ್ ಮೈತ್ರಿ, ಪಕ್ಷದೊಳಗಿನ ಆಂತರಿಕ ಕಚ್ಚಾಟ, ಮತದಾರರ ಪಟ್ಟಿ ಪರಿಷ್ಕರಣೆ ಹಾಗೂ ಹೇಮಾವತಿ ನಾಲೆಯ ವಿಷಯವಾಗಿ ಅವರು ಮುಕ್ತವಾಗಿ ಮಾತನಾಡಿದ್ದಾರೆ.
ಮೈತ್ರಿಯಿಂದ ಕಾಂಗ್ರೆಸ್ ಪತನ ನಿಶ್ಚಿತ
ರಾಜ್ಯದಲ್ಲಿ ಬಿಜೆಪಿ ಮತ್ತು ಜೆಡಿಎಸ್ ಮೈತ್ರಿ ಭದ್ರವಾಗಿರಬೇಕು ಎಂದು ಪ್ರತಿಪಾದಿಸಿದ ಸುರೇಶ್ ಗೌಡರು, "ಕೇಂದ್ರ ನಾಯಕರು ಎಚ್.ಡಿ. ದೇವೇಗೌಡರು ಮತ್ತು ಕುಮಾರಸ್ವಾಮಿ ಅವರನ್ನು ಗೌರವದಿಂದ ನಡೆಸಿಕೊಳ್ಳುತ್ತಿದ್ದಾರೆ. ಹಳೇ ಮೈಸೂರು ಭಾಗದಲ್ಲಿ ಈ ಮೈತ್ರಿ ಅತ್ಯಂತ ಅವಶ್ಯಕ. ಮುಂಬರುವ 2028ರ ವಿಧಾನಸಭಾ ಚುನಾವಣೆಯಲ್ಲಿ ಈ ಮೈತ್ರಿಕೂಟ 175 ಸ್ಥಾನಗಳನ್ನು ಗೆಲ್ಲಲಿದೆ. ಆ ಮೂಲಕ ಕಾಂಗ್ರೆಸ್ ಪಕ್ಷವನ್ನು ಅರಬ್ಬಿ ಸಮುದ್ರಕ್ಕೆ ಎಸೆಯಲಾಗುವುದು" ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಅಡ್ಡ ಮತದಾನ ಮಾಡಿದವರನ್ನು ಕಿತ್ತೊಗೆಯಿರಿ
ಇತ್ತೀಚಿನ ಪರಿಷತ್ ಚುನಾವಣೆಯಲ್ಲಿ ನಡೆದ ಅಡ್ಡ ಮತದಾನದ ಬಗ್ಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ ಅವರು, "ಪಕ್ಷದ ವಿಪ್ ಉಲ್ಲಂಘಿಸಿ ಅಡ್ಡ ಮತದಾನ ಮಾಡಿದವರನ್ನು ಒಂದು ಕ್ಷಣವೂ ಪಕ್ಷದಲ್ಲಿ ಇಟ್ಟುಕೊಳ್ಳಬಾರದು. ಅವರನ್ನು ತಕ್ಷಣವೇ ಉಚ್ಛಾಟಿಸಬೇಕು (ಕಿಕ್ ಔಟ್ ಮಾಡಬೇಕು). ಪಕ್ಷಕ್ಕೆ ದ್ರೋಹ ಬಗೆದವರಿಗೆ ಯಾವುದೇ ಕಾರಣಕ್ಕೂ ಕ್ಷಮೆ ಇರಬಾರದು. ಹೈಕಮಾಂಡ್ ಈಗಾಗಲೇ ರಾಜ್ಯದ ವಿದ್ಯಮಾನಗಳನ್ನು ಗಮನಿಸುತ್ತಿದ್ದು, ಶೀಘ್ರದಲ್ಲೇ ದೊಡ್ಡ ಮಟ್ಟದ ಸುಧಾರಣೆಗಳು ಆರಂಭವಾಗಲಿವೆ" ಎಂದರು.
ಮತದಾರರ ಪಟ್ಟಿ ಪರಿಷ್ಕರಣೆ ಮತ್ತು ಕಾಂಗ್ರೆಸ್ ಆತಂಕ
ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಕುರಿತು ಮಾತನಾಡಿದ ಅವರು, ಕಾಂಗ್ರೆಸ್ ಸುಳ್ಳು ಅಪಪ್ರಚಾರ ಮಾಡುತ್ತಿದೆ ಎಂದು ಕಿಡಿಕಾರಿದರು. "ಒಬ್ಬನೇ ಮತದಾರ ಎರಡು ಮೂರು ಕಡೆ ಮತ ಚಲಾಯಿಸುತ್ತಿರುವುದು ಈ ಪರಿಷ್ಕರಣೆ ವೇಳೆ ಪತ್ತೆಯಾಗಲಿದೆ. ಇದರಿಂದ ಪ್ರತಿ ಕ್ಷೇತ್ರದಲ್ಲಿ ಸುಮಾರು 5 ಸಾವಿರ ನಕಲಿ ಮತಗಳು ಕಡಿತವಾಗಲಿವೆ. ಇದರಲ್ಲಿ ಯಾವುದೇ ಸಮುದಾಯದ ಟಾರ್ಗೆಟ್ ಇಲ್ಲ, ಬದಲಾಗಿ ಪಾರದರ್ಶಕತೆ ತರುವುದು ಇದರ ಉದ್ದೇಶ" ಎಂದು ಸ್ಪಷ್ಟಪಡಿಸಿದರು.
ಹೇಮಾವತಿ ನೀರು: ರೈತರ ಹಿತವೇ ಮುಖ್ಯ
ಹೇಮಾವತಿ ಲಿಂಕ್ ಕೆನಾಲ್ ಯೋಜನೆಗೆ ಸಂಬಂಧಿಸಿದಂತೆ ಮಾತನಾಡಿದ ಸುರೇಶ್ ಗೌಡರು, "ನಾವು ಈ ಹಿಂದೆ ರೈತರ ಹಿತದೃಷ್ಟಿಯಿಂದ ಹೋರಾಟ ಮಾಡಿದ್ದೆವು. ಈಗಲೂ ನಮ್ಮ ಭಾಗದ ರೈತರಿಗೆ ಅನ್ಯಾಯವಾಗಲು ಬಿಡುವುದಿಲ್ಲ. ಡಿ.ಕೆ. ಶಿವಕುಮಾರ್ ಅವರಿಗೆ ಈಗಾಗಲೇ ಈ ಬಗ್ಗೆ ಮಾಹಿತಿ ನೀಡಿದ್ದೇನೆ. ಜಿಲ್ಲೆಯ ಎಲ್ಲಾ ಶಾಸಕರು ಮತ್ತು ರೈತರನ್ನು ವಿಶ್ವಾಸಕ್ಕೆ ಪಡೆಯದೆ ಯಾವುದೇ ನಿರ್ಧಾರ ಕೈಗೊಳ್ಳಬಾರದು. ಒಂದು ವೇಳೆ ಅನ್ಯಾಯವಾದರೆ ಪಕ್ಷಾತೀತವಾಗಿ ಹೋರಾಟ ನಡೆಸುತ್ತೇವೆ" ಎಂದು ಎಚ್ಚರಿಕೆ ನೀಡಿದರು.
ಕಾಂಗ್ರೆಸ್‌ನಲ್ಲಿ ಬಣ ರಾಜಕಾರಣ
ಕಾಂಗ್ರೆಸ್ ಪಕ್ಷದ ಆಂತರಿಕ ಸ್ಥಿತಿಯ ಬಗ್ಗೆ ಲೇವಡಿ ಮಾಡಿದ ಅವರು, ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್, ಪರಮೇಶ್ವರ್ ಹಾಗೂ ಎಂ.ಬಿ. ಪಾಟೀಲ್ ಅವರ ಬಣಗಳ ನಡುವೆ ತೀವ್ರ ಪೈಪೋಟಿ ಇದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬದಲಾವಣೆಯಾದ ಮರುಕ್ಷಣವೇ ಕಾಂಗ್ರೆಸ್ ಕೇವಲ 20 ಸ್ಥಾನಗಳಿಗೆ ಕುಸಿಯಲಿದೆ ಎಂದು ಭವಿಷ್ಯ ನುಡಿದರು.
ರಾಜ್ಯ ಬಿಜೆಪಿಯ ನಾಯಕತ್ವದ ಗೊಂದಲಗಳು ಮುಂದಿನ ಎರಡು ತಿಂಗಳಲ್ಲಿ ಬಗೆಹರಿಯಲಿದ್ದು, ಹೈಕಮಾಂಡ್ ಗಟ್ಟಿ ನಿರ್ಧಾರ ಕೈಗೊಳ್ಳಲಿದೆ ಎಂದು ಅವರು ಸಂದರ್ಶನದಲ್ಲಿ ತಿಳಿಸಿದ್ದಾರೆ.

