HDD suggests formation of Bengaluru-Mangalore Industrial Corridor, Jackfruit-Tamarind Board
x

ಹಲಸು ಹಾಗೂ ಹುಣಸೆ

ಬೆಂಗಳೂರು-ಮಂಗಳೂರು ಕೈಗಾರಿಕಾ ಕಾರಿಡಾರ್‌, ಹಲಸು-ಹುಣಸೆ ಮಂಡಳಿ ರಚನೆಗೆ ದೇವೇಗೌಡರ ಸಲಹೆ

ಬಜೆಟ್‌ನಲ್ಲಿ ಎಂಎಸ್‌ಎಂಇಗಳು, ಕೈಗಾರಿಕಾ ಮೂಲಸೌಕರ್ಯ ಮತ್ತು ರಫ್ತು ವಹಿವಾಟಿಗೆ ಉತ್ತೇಜನ ನೀಡುವುದು ಸೇರಿದಂತೆ ಅನಿಶ್ಚಿತತೆಯನ್ನು ಕಡಿಮೆ ಮಾಡುವ ಬಗ್ಗೆ ಒತ್ತಿ ಹೇಳಲಾಗಿದೆ ಎಂದು ಮಾಜಿ ಪ್ರಧಾನಿ ಹೆಚ್‌.ಡಿ. ದೇವೇಗೌಡ ಮೆಚ್ಚುಗೆ ವ್ಯಕ್ತಪಡಿಸಿದರು.


Click the Play button to hear this message in audio format

ಚೆನ್ನೈ, ಬೆಂಗಳೂರು ಮತ್ತು ಹೈದರಾಬಾದ್‌ ನಡುವೆ ಪ್ರಮುಖ ಬಂದರುಗಳನ್ನು ಹೊಂದಿರುವ ಕೈಗಾರಿಕಾ ಕಾರಿಡಾರ್ ಯೋಜನೆಗಳಿಗೆ ಕೇಂದ್ರ ಸರ್ಕಾರ ಅನುಮೋದನೆ ನೀಡಿದ್ದು, ಅದೇ ರೀತಿ ಬೆಂಗಳೂರಿನಿಂದ ಮಂಗಳೂರಿನವರೆಗೆ ಈ ಕೈಗಾರಿಕಾ ಕಾರಿಡಾರ್ ವಿಸ್ತರಿಸಿದರೆ ಅಭಿವೃದ್ಧಿಗೆ ಬಹಳಷ್ಟು ಅನುಕೂಲವಾಗುತ್ತದೆ.

ಈ ಬಗ್ಗೆ ಮಾಜಿ ಪ್ರಧಾನಿ ಹಾಗೂ ರಾಜ್ಯಸಭಾ ಸದಸ್ಯ ಎಚ್‌.ಡಿ. ದೇವೇಗೌಡ ಕೇಂದ್ರ ಸರ್ಕಾರದ ಗಮನಸೆಳೆದಿದ್ದಾರೆ. ಬುಧವಾರ(ಫೆ.11) ರಾಜ್ಯಸಭೆಯಲ್ಲಿ ಬಜೆಟ್‌ ಮೇಲಿನ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, " ದೇಶದ ಪ್ರಮುಖ ಬಂದರುಗಳಲ್ಲಿ ಮಂಗಳೂರು ಕೂಡ ಒಂದಾಗಿದ್ದು, ವಿಶಾಖಪಟ್ಟಣ ಹಾಗೂ ಚೆನ್ನೈ ಬಂದರುಗಳನ್ನು ಜೋಡಿಸಿದರೆ ರಾಷ್ಟ್ರದ ಕೈಗಾರಿಕಾಭಿವೃದ್ಧಿಗೆ ಪರಿವರ್ತನಾತ್ಮಕ ವೇಗ ಬರುತ್ತದೆ. 2026-2027ನೇ ಸಾಲಿನ ಕೇಂದ್ರದ ಆಯ-ವ್ಯಯವು ರಾಷ್ಟ್ರದ ಸರ್ವತೋಮುಖ ಅಭಿವೃದ್ಧಿಗೆ ಪೂರಕವಾಗಿದೆ ಎಂದು ಪ್ರತಿಪಾದಿಸಿದರು.

ಕೈಗಾರಿಕಾ ಕಾರಿಡಾರ್‌ (ಸಾಂದರ್ಭಿಕ ಚಿತ್ರ)

ಮಂಡಳಿ ರಚನೆಗೆ ಸಲಹೆ

ಕರ್ನಾಟಕವೂ ಸೇರಿ ತಮಿಳುನಾಡು, ಕೇರಳ ಮುಂತಾದ ರಾಜ್ಯಗಳಲ್ಲಿ ಬೆಳೆಯಲಾಗುವ ಹಲಸು, ಹುಣಸೆ, ನೇರಳೆಗೆ ಉತ್ತೇಜನ ನೀಡಲು ರಾಷ್ಟ್ರೀಯ ಮಖಾನ ಮಂಡಳಿಯಂತೆ ಪ್ರತ್ಯೇಕ ಮಂಡಳಿಯನ್ನು ರಚನೆ ಮಾಡಬೇಕು. ಈ ಮೂರು ಬೆಳೆಗಳು ಔಷಧೀಯ ಗುಣಗಳನ್ನು ಹೊಂದಿದ್ದು, ದಕ್ಷಿಣ ಭಾರತದಲ್ಲಿ ಭಾಗದಲ್ಲಿ ವ್ಯಾಪಕವಾಗಿ ಬೆಳೆಯಲಾಗುತ್ತಿದೆ. ಇವುಗಳಿಗೆ ಕಡಿಮೆ ಮಳೆ ಸಾಕಾಗುತ್ತದೆ. ಪ್ರಧಾನಿ ನರೇಂದ್ರ ಮೋದಿ ಹಾಗೂ ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಮಂಡಳಿ ರಚನೆ ಬಗ್ಗೆ ಕ್ರಮ ವಹಿಸುತ್ತಾರೆ ಎಂಬ ನಂಬಿಕೆ ಹೊಂದಿದ್ದೇನೆ ಎಂದು ದೇವೇಗೌಡರು ಹೇಳಿದ್ದಾರೆ.

ಕೈಗಾರಿಕಾ ಮೂಲಸೌಕರ್ಯಕ್ಕೆ ಉತ್ತೇಜನ

ಬಜೆಟ್‌ನಲ್ಲಿ ಎಂಎಸ್‌ಎಂಇಗಳು, ಕೈಗಾರಿಕಾ ಮೂಲಸೌಕರ್ಯ ಮತ್ತು ರಫ್ತು ವಹಿವಾಟಿಗೆ ಉತ್ತೇಜನ ನೀಡುವುದು ಸೇರಿದಂತೆ ಅನಿಶ್ಚಿತತೆಯನ್ನು ಕಡಿಮೆ ಮಾಡುವ ಮತ್ತು ದೀರ್ಘಾವಧಿಯ ಹೂಡಿಕೆಯನ್ನು ಆಕರ್ಷಿಸುವ ಉದ್ದೇಶವನ್ನು ಒತ್ತಿ ಹೇಳಲಾಗಿದೆ. ಇದು ಜಾಗತಿಕ ಮೌಲಿಕ ಸರಪಳಿಗಳಲ್ಲಿ ಭಾರತದ ಸ್ಥಾನವನ್ನು ಮತ್ತಷ್ಟು ಗಟ್ಟಿಗೊಳಿಸುತ್ತದೆ. ಕೇಂದ್ರ ಸರ್ಕಾರದ ಮೇಕ್ ಇನ್ ಇಂಡಿಯಾ ದೃಷ್ಟಿಕೋನವನ್ನು ದೃಢವಾಗಿ ಬೆಂಬಲಿಸುತ್ತದೆ ಎಂದು ಹೇಳಿದರು.

ಕೃಷಿಗೆ ಶೇ.5 ಅನುದಾನ ಅಗತ್ಯ

ಜನತೆಗೆ ಅನುಕೂಲ ಆಗುವಂತೆ ತೆರಿಗೆ ವ್ಯವಸ್ಥೆಯಲ್ಲಿ ಸರಳೀಕರಣ ಮಾಡಿರುವುದು ಸ್ವಾಗತಾರ್ಹ. ತೆರಿಗೆದಾರರ ವಿಶ್ವಾಸವು ಅಷ್ಟೇ ಮುಖ್ಯವಾಗಿದೆ. ಸರ್ಕಾರವು ಕರ್ನಾಟಕದ ಕರಾವಳಿ ಸೇರಿ ಇತರ ಪ್ರದೇಶಗಳಲ್ಲಿ ಯಥೇಚ್ಛವಾಗಿ ಬೆಳೆಯಲಾಗುವ ತೆಂಗಿನಕಾಯಿ, ಶ್ರೀಗಂಧ, ಕೋಕೋ ಮತ್ತು ಗೋಡಂಬಿಯಂತಹ ವಾಣಿಜ್ಯ ಬೆಳೆಗಳಿಗೆ ದೊಡ್ಡ ಪ್ರಮಾಣದಲ್ಲಿ ಉತ್ತೇಜನ ನೀಡಿರುವುದು ಉತ್ತಮವಾದ ಹೆಜ್ಜೆ. ತೆಂಗು 'ಕಲ್ಪವೃಕ್ಷ' ಎಂದು ಜನಪ್ರಿಯವಾಗಿದೆ. ಇದು ಎಲ್ಲಾ ವಯಸ್ಸಿನ ಜನರಿಗೆ ಬಹುವಿಧದಲ್ಲಿ ಆರೋಗ್ಯ ಪ್ರಯೋಜನಗಳೊಂದಿಗೆ ಪೋಷಣೆ ಒದಗಿಸುತ್ತದೆ. ಹೆಚ್ಚಿನ ಪ್ರದೇಶಗಳಲ್ಲಿ ತೆಂಗು ಜೀವನಾಡಿಯಾಗಿದೆ. ಕೃಷಿಗೆ ಉತ್ತಮ ಬೆಂಬಲ ಕೊಡಲಾಗಿದ್ದು, ಒಟ್ಟು ಬಜೆಟ್‌ನಲ್ಲಿ ಶೇ. 3 ರಷ್ಟು ಹಂಚಿಕೆ ಮಾಡಲಾಗಿದ್ದು, ಈ ಪ್ರಮಾಣವನ್ನು ಶೇ. 5 ಕ್ಕೆ ಹೆಚ್ಚಿಸುವುದು ಅಗತ್ಯವಾಗಿದೆ ಎಂದು ಗೌಡರು ಸಲಹೆ ನೀಡಿದರು.

Read More
Next Story