
ಸಾಂದರ್ಭಿಕ ಚಿತ್ರ
G. Parameshwar|ದಯಾಮರಣ ಕೋರಿ ಕಾನ್‌ಸ್ಟೇಬಲ್‌ಗಳ ಪತ್ರ- ನಿಯಮಾನುಸಾರ ವರ್ಗಾವಣೆ ಎಂದ ಗೃಹ ಸಚಿವ
ವರ್ಗಾವಣೆಯ ನಿಯಮಾನುಸಾರ ಒಬ್ಬ ಸಿಬ್ಬಂದಿ ಕನಿಷ್ಠ ಏಳು ವರ್ಷಗಳ ಕಾಲ ಒಂದು ಜಿಲ್ಲೆಯಲ್ಲಿ ಸೇವೆ ಸಲ್ಲಿಸಿದ ನಂತರವಷ್ಟೇ ಅಂತರ್ ಜಿಲ್ಲಾ ವರ್ಗಾವಣೆಗೆ ಅರ್ಜಿ ಸಲ್ಲಿಸಲು ಅರ್ಹರಾಗುತ್ತಾರೆ ಎಂದು ಗೃಹ ಸಚಿವ ಡಾ.ಜಿ. ಪರಮೇಶ್ವರ್ ತಿಳಿಸಿದರು.
ರಾಜ್ಯ ಪೊಲೀಸ್ ಇಲಾಖೆಯಲ್ಲಿನ ಅಂತರ್ ಜಿಲ್ಲಾ ವರ್ಗಾವಣೆ (Inter-District Transfer) ಪ್ರಕ್ರಿಯೆಯ ವಿಳಂಬವು ಈಗ ದೊಡ್ಡ ಮಟ್ಟದ ವಿವಾದಕ್ಕೆ ಕಾರಣವಾಗಿದೆ. ವರ್ಗಾವಣೆ ಸಿಗದೆ ಕಂಗಾಲಾಗಿರುವ ಪೊಲೀಸ್ ಕಾನ್‌ಸ್ಟೇಬಲ್‌ಗಳು ನೇರವಾಗಿ ರಾಜ್ಯಪಾಲರಿಗೆ ಪತ್ರ ಬರೆದು 'ದಯಾಮರಣ' ಕೋರಿರುವುದು ಸರ್ಕಾರಕ್ಕೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ. ಈ ಸಂಚಲನ ಮೂಡಿಸಿರುವ ಬೆಳವಣಿಗೆಯ ಕುರಿತು ಗೃಹ ಸಚಿವ ಡಾ. ಜಿ. ಪರಮೇಶ್ವರ್ ಅವರು ಸ್ಪಷ್ಟನೆ ನೀಡಿದ್ದಾರೆ.
ರಾಜ್ಯಪಾಲರಿಗೆ ಪತ್ರ ಬರೆದಿರುವ ಬಗ್ಗೆ ಮಂಗಳವಾರ (ಏ.7) ಪ್ರತಿಕ್ರಿಯಿಸಿರುವ ಗೃಹ ಸಚಿವ ಡಾ.ಜಿ. ಪರಮೇಶ್ವರ್, ನಿಯಮದ ಪ್ರಕಾರ ಒಬ್ಬ ಸಿಬ್ಬಂದಿ ಕನಿಷ್ಠ ಏಳು ವರ್ಷಗಳ ಕಾಲ ಒಂದು ಜಿಲ್ಲೆಯಲ್ಲಿ ಸೇವೆ ಸಲ್ಲಿಸಿದ ನಂತರವಷ್ಟೇ ಅಂತರ್ ಜಿಲ್ಲಾ ವರ್ಗಾವಣೆಗೆ ಅರ್ಜಿ ಸಲ್ಲಿಸಲು ಅರ್ಹರಾಗುತ್ತಾರೆ. ಏಳು ವರ್ಷ ತುಂಬಿದ ತಕ್ಷಣ ವರ್ಗಾವಣೆ ಖಚಿತ ಎಂದಲ್ಲ. ಅರ್ಜಿದಾರರ ಹಿರಿತನ (Seniority) ಮತ್ತು ಆ ಜಿಲ್ಲೆಯಲ್ಲಿ ಲಭ್ಯವಿರುವ ಖಾಲಿ ಹುದ್ದೆಗಳನ್ನು ಪರಿಗಣಿಸಿ ಆದ್ಯತೆ ನೀಡಲಾಗುತ್ತದೆ. ನಿಯಮಾನುಸಾರವೇ ವರ್ಗಾವಣೆ ನಡೆಸಲಾಗುತ್ತಿದೆ ಎಂದು ಸ್ಪಷ್ಟಪಡಿಸಿದ್ದಾರೆ.
ಇತ್ತೀಚಿನ 402 ಪಿಎಸ್‌ಐ ಅಧಿಸೂಚನೆಯಲ್ಲಿ ಶೇ.80 ರಷ್ಟು ಅಭ್ಯರ್ಥಿಗಳು ಉತ್ತರ ಕರ್ನಾಟಕದವರಾಗಿದ್ದಾರೆ. ದಕ್ಷಿಣ ಕನ್ನಡ ಮತ್ತು ಕೊಡಗಿನಂತಹ ಜಿಲ್ಲೆಗಳಲ್ಲಿ ಸ್ಥಳೀಯ ಅಭ್ಯರ್ಥಿಗಳ ಆಯ್ಕೆ ಪ್ರಮಾಣ ಕೇವಲ ತಲಾ ಇಬ್ಬರಷ್ಟಿದೆ. ಹೀಗಾಗಿ, ಅನಿವಾರ್ಯವಾಗಿ ಉತ್ತರ ಕರ್ನಾಟಕದವರನ್ನು ಇತರ ಜಿಲ್ಲೆಗಳಿಗೆ ನಿಯೋಜಿಸಬೇಕಾಗುತ್ತದೆ. ಅವರು 7 ವರ್ಷಗಳ ಕಾಲ ಅಲ್ಲಿ ಸೇವೆ ಸಲ್ಲಿಸುವುದು ಅನಿವಾರ್ಯ. ಕಾನ್‌ಸ್ಟೇಬಲ್‌ಗಳು ಇಂತಹ ಹತಾಶೆಯ ನಿರ್ಧಾರಗಳನ್ನು ತೆಗೆದುಕೊಳ್ಳುವ ಅಗತ್ಯವಿಲ್ಲ. ಇಲಾಖೆ ಅವರ ಪರವಾಗಿದೆ. ನಿಯಮ ಉಲ್ಲಂಘಿಸಿ ಯಾರಿಗೂ ವರ್ಗಾವಣೆ ನೀಡಲು ಸಾಧ್ಯವಿಲ್ಲ, ಹಿರಿತನದ ಆಧಾರದಲ್ಲಿ ಎಲ್ಲವನ್ನೂ ಸರಿಪಡಿಸಲಾಗುವುದು. ಯಾರೋ ಸೃಷ್ಟಿಸಿದ ಗೊಂದಲಕ್ಕೆ ಸಿಬ್ಬಂದಿ ಬಲಿಯಾಗಬಾರದು ಎಂದು ತಿಳಿಸಿದರು.
ಗೃಹ ಇಲಾಖೆಯ ನಿಯಮಗಳೇನು ?
ಗೃಹ ಇಲಾಖೆಯ ವರ್ಗಾವಣೆಯ ಮಾನದಂಡಗಳ ಪ್ರಕಾರ ಒಬ್ಬ ಸಿಬ್ಬಂದಿ ಕನಿಷ್ಠ ಏಳು ವರ್ಷಗಳ ಕಾಲ ಒಂದು ಜಿಲ್ಲೆಯಲ್ಲಿ ಸೇವೆ ಸಲ್ಲಿಸಿದ ನಂತರವಷ್ಟೇ ಅಂತರ್ ಜಿಲ್ಲಾ ವರ್ಗಾವಣೆಗೆ ಅರ್ಜಿ ಸಲ್ಲಿಸಲು ಅರ್ಹರಾಗುತ್ತಾರೆ. ಏಳು ವರ್ಷ ತುಂಬಿದ ತಕ್ಷಣ ವರ್ಗಾವಣೆ ಖಚಿತ ಎಂದಲ್ಲ. ಅರ್ಜಿದಾರರ ಹಿರಿತನ ಮತ್ತು ಆ ಜಿಲ್ಲೆಯಲ್ಲಿ ಲಭ್ಯವಿರುವ ಖಾಲಿ ಹುದ್ದೆಗಳನ್ನು ಪರಿಗಣಿಸಿ ಆದ್ಯತೆ ನೀಡಲಾಗುತ್ತದೆ. ಪತಿ-ಪತ್ನಿ ಒಂದೇ ಜಿಲ್ಲೆಯಲ್ಲಿ ಕೆಲಸ ಮಾಡಲು ಬಯಸುವ ಪ್ರಕರಣಗಳಿಗೆ ವಿಶೇಷ ಆದ್ಯತೆ ನೀಡಲಾಗುವುದು ಎಂಬ ನಿಯಮಗಳ ಅನುಸಾರ ವರ್ಗಾವಣೆ ಪ್ರಕ್ರಿಯೆ ನಡೆಸಲಾಗುತ್ತದೆ.
ಏನಿದು ವರ್ಗಾವಣೆ ಗೊಂದಲ ?
ರದ್ದುಗೊಂಡಿದ್ದ ಅಂತರ ಜಿಲ್ಲಾ ವರ್ಗಾವಣೆಗೆ ರಾಜ್ಯ ಸರ್ಕಾರ 2022ರಲ್ಲಿ ಮತ್ತೆ ಅವಕಾಶ ಕಲ್ಪಿಸಿತ್ತು. 2023ರಲ್ಲಿ ಕೆಎಸ್‌ಪಿ ಪೋರ್ಟಲ್ ತೆರೆದು ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿತ್ತು. ವಯಸ್ಸಾದ ಪೋಷಕರ ಯೋಗಕ್ಷೇಮ ನೋಡಿಕೊಂಡು ಸ್ವಂತ ಊರುಗಳಲ್ಲಿಯೇ ಕೆಲಸ ಮಾಡಲು ಬಯಸಿ ನಗರದಲ್ಲಿ ಕೆಲಸ ಮಾಡುತ್ತಿರುವ ಬೆಳಗಾವಿ, ದಾವಣಗೆರೆ, ಯಾದಗಿರಿ, ಕಲಬುರಗಿ, ರಾಯಚೂರು, ಬೀದರ್, ಧಾರವಾಡ, ಗದಗ, ಹಾವೇರಿ, ಬೆಳಗಾವಿ ಸೇರಿ ವಿವಿಧ ಜಿಲ್ಲೆಗಳ ಸಿವಿಲ್ ಕಾನ್‌ಸ್ಟೆಬಲ್‌ಗಳು (ಸಾಮಾನ್ಯ ಪ್ರಕರಣ) ಅರ್ಜಿ ಸಲ್ಲಿಸಿದ್ದರು.
2 ಸಾವಿರಕ್ಕೂ ಹೆಚ್ಚು ಕಾನ್‌ಸ್ಟೆಬಲ್‌ಗಳು ಅರ್ಜಿ ಸಲ್ಲಿಸಿದ್ದರು. ಅದರಲ್ಲಿ ಕೆಲವರಿಗೆ ಹೆಡ್ ಕಾನ್‌ಸ್ಟೆಬಲ್‌ಗಳಾಗಿಮುಂಬಡ್ತಿ ಸಿಕ್ಕಿದೆ. ಅವರಿಗೆ ಈಗ ವರ್ಗಾವಣೆ ಕಷ್ಟ. ವರ್ಗಾವಣೆಗಾಗಿ ನಾವು ಮೂರು ಬಾರಿ ಮುಂಬಡ್ತಿ ಬಿಟ್ಟುಕೊಟ್ಟಿದ್ದೇವೆ. ಸೇವಾ ಅವಧಿ ಕಳೆದುಕೊಳ್ಳಲೂ ಸಿದ್ಧರಿದ್ದೇವೆ. ಆದರೂ, ಅಂತಿಮ ಆದೇಶ ಪತ್ರ ಸಿಗುತ್ತಿಲ್ಲ. ಅಲೆದಾಟ ನಡೆಸಿ ಸಾಕಾಗಿದೆ ಎಂದು ಮೂಲಗಳು ತಿಳಿಸಿವೆ.

