ಖಾಕಿ ಇಲಾಖೆಯಲ್ಲಿ ಹೊಸ ಶಿಸ್ತು ಪರ್ವ: ಆಂತರಿಕ ಮಂಡಳಿಗೆ ಹೆಚ್ಚಿನ ಅಧಿಕಾರ
x

ಖಾಕಿ ಇಲಾಖೆಯಲ್ಲಿ ಹೊಸ ಶಿಸ್ತು ಪರ್ವ: ಆಂತರಿಕ ಮಂಡಳಿಗೆ ಹೆಚ್ಚಿನ ಅಧಿಕಾರ

ಪೊಲೀಸ್ ಇಲಾಖೆಯ ವರ್ಗಾವಣೆ ಪ್ರಕ್ರಿಯೆಯಲ್ಲಿ ರಾಜಕೀಯ ಹಸ್ತಕ್ಷೇಪವನ್ನು ಕಡಿಮೆ ಮಾಡುವುದು, ಉನ್ನತ ಅಧಿಕಾರಿಗಳಿಗೆ ಹೆಚ್ಚಿನ ಸ್ವಾತಂತ್ರ್ಯ ನೀಡುವುದು ಕರ್ನಾಟಕ ಪೊಲೀಸ್ (ತಿದ್ದುಪಡಿ) ವಿಧೇಯಕದ ಮೂಲ ಆಶಯವಾಗಿದೆ.


Click the Play button to hear this message in audio format

ಪೊಲೀಸ್ ಇಲಾಖೆಯಲ್ಲಿ ಶಿಸ್ತು ಮತ್ತು ಪಾರದರ್ಶಕತೆ ತರುವ ಉದ್ದೇಶದ 'ಕರ್ನಾಟಕ ಪೊಲೀಸ್ (ತಿದ್ದುಪಡಿ) ವಿಧೇಯಕ'ವನ್ನು ವಿಧಾನಸಭೆಯು ಅಂಗೀಕರಿಸಿದೆ. ಗೃಹ ಸಚಿವ ಡಾ. ಜಿ. ಪರಮೇಶ್ವರ್ ಮಂಡಿಸಿದ ಈ ವಿಧೇಯಕವು ಪೊಲೀಸ್ ಇಲಾಖೆಯಲ್ಲಿ ಕ್ರಾಂತಿಕಾರಿ ಬದಲಾವಣೆಯಾಗಿದೆ. ಪೊಲೀಸ್ ಇಲಾಖೆಯ ವರ್ಗಾವಣೆ ಪ್ರಕ್ರಿಯೆಯಲ್ಲಿ ರಾಜಕೀಯ ಹಸ್ತಕ್ಷೇಪವನ್ನು ಕಡಿಮೆ ಮಾಡುವುದು ಮತ್ತು ಉನ್ನತ ಅಧಿಕಾರಿಗಳಿಗೆ ಹೆಚ್ಚಿನ ಸ್ವಾತಂತ್ರ್ಯ ನೀಡುವುದು ಈ ವಿಧೇಯಕದ ಮೂಲ ಆಶಯವಾಗಿದೆ.

ಕರ್ನಾಟಕ ಪೊಲೀಸ್‌ (ತಿದ್ದುಪಡಿ) ವಿಧೇಯಕದ ಅತ್ಯಂತ ಗಮನಾರ್ಹ ಅಂಶವೆಂದರೆ ಪೊಲೀಸ್ ಆಂತರಿಕ ಮಂಡಳಿಗೆ (ಪಿಇಬಿ) ಹೆಚ್ಚಿನ ಅಧಿಕಾರ ನೀಡಲಾಗಿದೆ. ಈವರೆಗೆ ಡಿವೈಎಸ್ಪಿ ಶ್ರೇಣಿಯ ಅಧಿಕಾರಿಗಳ ವರ್ಗಾವಣೆಗೆ ಸರ್ಕಾರದ ಮಟ್ಟದಲ್ಲಿ ಸುದೀರ್ಘ ಪ್ರಕ್ರಿಯೆ ನಡೆಯಬೇಕಿತ್ತು. ಆದರೆ, ಹೊಸ ತಿದ್ದುಪಡಿಯ ಪ್ರಕಾರ, ಕರ್ತವ್ಯ ಲೋಪ ಅಥವಾ ಅಶಿಸ್ತು ತೋರುವ ಅಧಿಕಾರಿಗಳ ಮೇಲೆ ತಕ್ಷಣದ ಕ್ರಮ ಕೈಗೊಳ್ಳಲು ಪಿಇಬಿಗೆ ಸ್ವತಂತ್ರ ಅಧಿಕಾರ ನೀಡಲಾಗಿದೆ. ಸರ್ಕಾರದ ಪೂರ್ವಾನುಮತಿಗಾಗಿ ಕಾಯುವ ಅನಿವಾರ್ಯತೆ ಇಲ್ಲದಿರುವುದರಿಂದ, ತಪ್ಪು ಮಾಡಿದ ಅಧಿಕಾರಿಗಳ ವಿರುದ್ಧ ಕ್ಷಿಪ್ರವಾಗಿ ಶಿಸ್ತು ಕ್ರಮ ಜರುಗಿಸಲು ಸಾಧ್ಯವಾಗುತ್ತದೆ.

ಕನಿಷ್ಠ ಅವಧಿಯ ನಿಯಮಕ್ಕೆ ವಿನಾಯಿತಿ

ಈ ಮೊದಲು ಸುಪ್ರೀಂ ಕೋರ್ಟ್‌ನ ನಿರ್ದೇಶನದಂತೆ ಪೊಲೀಸ್ ಅಧಿಕಾರಿಗಳಿಗೆ ಕನಿಷ್ಠ ಎರಡು ವರ್ಷಗಳ ಕಾಲಾವಧಿಯ ಸೇವಾ ಭದ್ರತೆ ಇತ್ತು. ಇದು ಕೆಲವು ಸಂದರ್ಭಗಳಲ್ಲಿ ಭ್ರಷ್ಟ ಅಥವಾ ಅಸಮರ್ಥ ಅಧಿಕಾರಿಗಳಿಗೆ ರಕ್ಷಣೆಯಾಗಿತ್ತು. 2026ರ ತಿದ್ದುಪಡಿಯು ಈ ನಿಯಮಕ್ಕೆ ವಿನಾಯಿತಿ ನೀಡಿದೆ. ಗಂಭೀರ ಲೋಪಗಳು, ಭ್ರಷ್ಟಾಚಾರದ ಆರೋಪಗಳು ಅಥವಾ ಸಾರ್ವಜನಿಕ ಹಿತಾಸಕ್ತಿಗೆ ಧಕ್ಕೆ ತರುವಂತಹ ಘಟನೆಗಳು ನಡೆದಾಗ, ಎರಡು ವರ್ಷಗಳ ಅವಧಿ ಮುಗಿಯುವ ಮೊದಲೇ ಅಂತಹ ಅಧಿಕಾರಿಗಳನ್ನು ವರ್ಗಾವಣೆ ಮಾಡಲು ಈ ವಿಧೇಯಕದಲ್ಲಿ ಅವಕಾಶ ಮಾಡಿಕೊಡಲಾಗಿದೆ.

ವಿಧೇಯಕ ಕುರಿತು ಮಾತನಾಡಿದ ಗೃಹ ಸಚಿವ ಡಾ.ಜಿ. ಪರಮೇಶ್ವರ್‌, ವರ್ಗಾವಣೆ ಪ್ರಕ್ರಿಯೆಯು ಇಲಾಖೆಯ ಆಂತರಿಕ ಮಂಡಳಿಯ ಸುಪರ್ದಿಗೆ ಬರುವುದರಿಂದ, ವರ್ಗಾವಣೆಗಾಗಿ ರಾಜಕಾರಣಿಗಳ ಮನೆ ಬಾಗಿಲು ತಟ್ಟುವ ಸಂಸ್ಕೃತಿಗೆ ಬ್ರೇಕ್ ಬೀಳಲಿದೆ. ಇದರಿಂದ ಪ್ರಾಮಾಣಿಕ ಅಧಿಕಾರಿಗಳಿಗೆ ಭಯಮುಕ್ತವಾಗಿ ಕೆಲಸ ಮಾಡಲು ವಾತಾವರಣ ನಿರ್ಮಾಣವಾಗುತ್ತದೆ ಮತ್ತು ಇಲಾಖೆಯ ನೈತಿಕ ಸ್ಥೈರ್ಯ ಹೆಚ್ಚುತ್ತದೆ ಎಂದು ಹೇಳಿದರು.

ಪೊಲೀಸ್ ಇಲಾಖೆಯು ಕೇವಲ ಕಾನೂನು ಸುವ್ಯವಸ್ಥೆ ಕಾಪಾಡುವುದಷ್ಟೇ ಅಲ್ಲದೆ, ಸಾರ್ವಜನಿಕ ಸ್ನೇಹಿಯಾಗಿರಬೇಕು. ಈ ತಿದ್ದುಪಡಿಯಿಂದಾಗಿ ಅಧಿಕಾರಿಗಳಲ್ಲಿ ಇಲಾಖೆಗೆ ಮತ್ತು ಸಾರ್ವಜನಿಕರಿಗೆ ಉತ್ತರದಾಯಿಗಳು ಎಂಬ ಭಾವನೆ ಮೂಡುತ್ತದೆ. ಕರ್ತವ್ಯದ ನಿರ್ಲಕ್ಷ್ಯ ತೋರಿದರೆ ತಕ್ಷಣದ ಶಿಕ್ಷೆ ಕಾದಿದೆ ಎಂಬ ಭಯವು ಕೆಲಸದಲ್ಲಿ ಹೆಚ್ಚಿನ ಜಾಗರೂಕತೆಯನ್ನು ತರುತ್ತದೆ ಎಂದರು.

Read More
Next Story