x

ಹಳೇ ಮೈಸೂರಿನಲ್ಲಿ ರಾಜಕೀಯ ಅಧಿಪತ್ಯ ಸ್ಥಾಪನೆಗಾಗಿಯೇ ʼಗಣೇಶʼನ ಗಲಾಟೆ

ಮಂಡ್ಯ ಹಾಗೂ ಮೈಸೂರು ಜಿಲ್ಲೆಗಳಲ್ಲಿ ಗಣೇಶೋತ್ಸವ ಹಾಗೂ ಧಾರ್ಮಿಕ ಮೆರವಣಿಗೆಗಳು ಕೇವಲ ಸಾಂಪ್ರದಾಯಿಕ ಆಚರಣೆಗಳಾಗಿ ಉಳಿಯದೆ, ದೊಡ್ಡ ಮಟ್ಟದ ರಾಜಕೀಯ ಮತ್ತು ಕೋಮು ಸಂಘರ್ಷಗಳ ಕೇಂದ್ರವಾಗುತ್ತಿರುವುದು ಆತಂಕ ಮೂಡಿಸಿದೆ.


ಕರಾವಳಿ ಮತ್ತು ಉತ್ತರ ಕರ್ನಾಟಕಕ್ಕಷ್ಟೇ ಸೀಮಿತವಾಗಿದ್ದ ಧ್ರುವೀಕರಣ ರಾಜಕಾರಣ, ಈಗ ಒಕ್ಕಲಿಗರ ಪ್ರಾಬಲ್ಯವಿರುವ ಹಳೆ ಮೈಸೂರು ಪ್ರಾಂತ್ಯಕ್ಕೂ ಕಾಲಿಟ್ಟಿದೆ. ಇತ್ತೀಚಿನ ವರ್ಷಗಳಲ್ಲಿ ಮಂಡ್ಯ ಹಾಗೂ ಮೈಸೂರು ಜಿಲ್ಲೆಗಳಲ್ಲಿ ಗಣೇಶೋತ್ಸವ ಹಾಗೂ ಧಾರ್ಮಿಕ ಮೆರವಣಿಗೆಗಳು ಕೇವಲ ಸಾಂಪ್ರದಾಯಿಕ ಆಚರಣೆಗಳಾಗಿ ಉಳಿಯದೆ, ದೊಡ್ಡ ಮಟ್ಟದ ರಾಜಕೀಯ ಮತ್ತು ಕೋಮು ಸಂಘರ್ಷಗಳ ಕೇಂದ್ರವಾಗುತ್ತಿರುವುದು ಆತಂಕ ಮೂಡಿಸಿದೆ.

2024ರ ಜನವರಿಯಲ್ಲಿ ಮಂಡ್ಯ ಜಿಲ್ಲೆಯ ನಾಗಮಂಗಲ ತಾಲೂಕಿನ ಕೆರೆಗೋಡು ಗ್ರಾಮದಲ್ಲಿ ನಡೆದ ಹನುಮ ಧ್ವಜ ತೆರವು ಕಾರ್ಯಾಚರಣೆ ರಾಜ್ಯಾದ್ಯಂತ ದೊಡ್ಡ ರಾಜಕೀಯ ಬಿರುಗಾಳಿಯನ್ನೇ ಎಬ್ಬಿಸಿತ್ತು. ಇದರ ಬೆನ್ನಲ್ಲೇ 2025ರ ಸೆಪ್ಟೆಂಬರ್ನಲ್ಲಿ ಮದ್ದೂರಿನಲ್ಲಿ ಗಣೇಶ ವಿಸರ್ಜನಾ ಮೆರವಣಿಗೆ ವೇಳೆ ನಡೆದ ಕಲ್ಲುತೂರಾಟ ಮತ್ತು ಕೋಮುಗಲಭೆ ಇಡೀ ರಾಜ್ಯದ ಗಮನ ಸೆಳೆದಿತ್ತು.

ಈ ಘಟನೆಗೆ ಸಂಬಂಧಿಸಿದಂತೆ ಒಂದು ವರ್ಷದ ಬಳಿಕ ಪ್ರತಿಭಟನಾಕಾರರ ವಿರುದ್ಧ ಪೊಲೀಸರು ಸಮನ್ಸ್ ಜಾರಿಗೊಳಿಸಿರುವುದು ಮತ್ತೊಮ್ಮೆ ರಾಜಕೀಯ ಕಿಚ್ಚು ಹೊತ್ತಿಸಿದೆ. ಪ್ರಸ್ತುತ ಗಣೇಶೋತ್ಸವಕ್ಕೂ ಮುನ್ನವೇ ಟಿ.ನರಸೀಪುರ ಸೇರಿದಂತೆ ವಿವಿಧೆಡೆ ಪೊಲೀಸರು ವಿಧಿಸಿರುವ ಕಠಿಣ ನಿಯಮಗಳು ಹಾಗೂ ನಿರ್ಬಂಧಗಳು ವಿವಾದಕ್ಕೆ ಕಾರಣವಾಗಿವೆ.

ರಾಜಕೀಯ ಲೆಕ್ಕಾಚಾರವೇನು?

ಉತ್ತರ ಭಾರತದ ರಾಮಮಂದಿರ ರಾಜಕಾರಣದ ಮಾದರಿಯಂತೆ ಹಳೆ ಮೈಸೂರು ಭಾಗದಲ್ಲಿ ಗಣೇಶ ಮತ್ತು ಹನುಮಂತನ ಆಚರಣೆಗಳನ್ನು ಹಿಂದೂ ಮತಗಳ ಕ್ರೋಡೀಕರಣಕ್ಕೆ ಪ್ರಮುಖ ಅಸ್ತ್ರವನ್ನಾಗಿ ಬಿಜೆಪಿ ಬಳಸಿಕೊಳ್ಳುತ್ತಿದೆ ಎಂಬ ಟೀಕೆಗಳಿವೆ.

ಮತ್ತೊಂದೆಡೆ ಈ ಭಾಗದಲ್ಲಿ ತಮ್ಮ ನೆಲೆ ಮತ್ತು ಅಸ್ತಿತ್ವ ಉಳಿಸಿಕೊಳ್ಳಲು ಕಾಂಗ್ರೆಸ್ ಹಾಗೂ ಜೆಡಿಎಸ್-ಬಿಜೆಪಿ ಮೈತ್ರಿಕೂಟಗಳು ಕಸರತ್ತು ನಡೆಸುತ್ತಿವೆ. ಪ್ರಾದೇಶಿಕ ಅಸ್ಮಿತೆ, ಜಾತ್ಯತೀತತೆ ಮತ್ತು ರೈತ ಹೋರಾಟಗಳ ತವರಾಗಿರುವ ಹಳೆ ಮೈಸೂರು ಭಾಗದಲ್ಲಿ ಧರ್ಮಾಧರಿತ ವೋಟ್ ಬ್ಯಾಂಕ್ ರಾಜಕಾರಣವು ಚುನಾವಣಾ ರಣಕಣವನ್ನು ರಂಗೇರಿಸಿದೆ.

ಧರ್ಮ ಮತ್ತು ಸಾಂಸ್ಕೃತಿಕ ಆಚರಣೆಗಳು ಸೌಹಾರ್ದತೆಯ ಪ್ರತೀಕವಾಗಿರಬೇಕೇ ಹೊರತು, ಚುನಾವಣಾ ರಾಜಕಾರಣದ ದಾಳಗಳಾಗಬಾರದು ಎಂಬುದು ಸಾರ್ವಜನಿಕರ ಅಭಿಪ್ರಾಯವಾಗಿದೆ.

Read More
Next Story