
Petrol Diesel Price| "ಪೆಟ್ರೋಲ್, ಡೀಸೆಲ್ ಮೇಲಿನ ಸುಂಕ ಇಳಿಕೆ- ಜನ ಸಾಮಾನ್ಯರಿಗೆ ರಿಲೀಫ್"
ಕೇಂದ್ರ ಸರ್ಕಾರದ ಈ ನಿರ್ಧಾರದಿಂದ ಸಾರಿಗೆ ವೆಚ್ಚ ಕಡಿಮೆಯಾಗಲಿದ್ದು, ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ತತ್ತರಿಸಿದ್ದ ಜನಸಾಮಾನ್ಯರಿಗೆ ದೊಡ್ಡ ಮಟ್ಟದ ಸಮಾಧಾನ ಸಿಗಲಿದೆ ಎಂದು ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ತಿಳಿಸಿದ್ದಾರೆ.
ಪಶ್ಚಿಮ ಏಷ್ಯಾದಲ್ಲಿ ಉಂಟಾಗಿರುವ ಭೌಗೋಳಿಕ ರಾಜಕೀಯ ಉದ್ವಿಗ್ನತೆ ಹಾಗೂ ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ ಏರಿಕೆಯಾಗುತ್ತಿರುವ ಬೆನ್ನಲ್ಲೇ, ಕೇಂದ್ರ ಸರ್ಕಾರವು ದೇಶದ ಜನತೆಗೆ ಸಿಹಿ ಸುದ್ದಿ ನೀಡಿದೆ. ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದಲ್ಲಿ ಕೇಂದ್ರ ಸರ್ಕಾರವು ಇಂಧನ ದರವನ್ನು ಗಣನೀಯವಾಗಿ ಕಡಿತಗೊಳಿಸುವ ಮಹತ್ವದ ನಿರ್ಧಾರ ಕೈಗೊಂಡಿದೆ ಎಂದು ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ತಿಳಿಸಿದ್ದಾರೆ.
ಈ ಕುರಿತು ಶುಕ್ರವಾರ(ಮಾ.27) ತಮ್ಮ ಸಾಮಾಜಿಕ ಜಾಲತಾಣದಲ್ಲಿ ಸಂದೇಶ ಹಂಚಿಕೊಂಡಿರುವ ಅವರು, "ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ವಿಶೇಷ ಹೆಚ್ಚುವರಿ ಅಬಕಾರಿ ಸುಂಕವನ್ನು ಪ್ರತಿ ಲೀಟರ್‌ಗೆ 10 ರೂ. ಇಳಿಕೆ ಮಾಡಲಾಗಿದೆ. ದೇಶೀಯ ಮಾರುಕಟ್ಟೆಯಲ್ಲಿ ತೈಲ ಲಭ್ಯತೆಯನ್ನು ಖಚಿತಪಡಿಸಿಕೊಳ್ಳಲು ಡೀಸೆಲ್ ರಫ್ತಿನ ಮೇಲೆ ಲೀಟರ್‌ಗೆ 21.5 ರೂ. ಮತ್ತು ವಿಮಾನಯಾನ ಇಂಧನದ (ATF) ಮೇಲೆ ಲೀಟರ್‌ಗೆ 29.5 ರೂ. ರಫ್ತು ಸುಂಕವನ್ನು ವಿಧಿಸಲಾಗಿದೆ" ಎಂದಿದ್ದಾರೆ.
ಹಣದುಬ್ಬರಕ್ಕೆ ಬ್ರೇಕ್
ಈ ನಿರ್ಧಾರದಿಂದ ಸಾರಿಗೆ ವೆಚ್ಚ ಕಡಿಮೆಯಾಗಲಿದ್ದು, ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ತತ್ತರಿಸಿದ್ದ ಜನಸಾಮಾನ್ಯರಿಗೆ ದೊಡ್ಡ ಮಟ್ಟದ ಸಮಾಧಾನ ಸಿಗಲಿದೆ. ಅಂತರಾಷ್ಟ್ರೀಯ ಮಾರುಕಟ್ಟೆಯ ಏರಿಳಿತಗಳಿಂದ ನಾಗರಿಕರನ್ನು ರಕ್ಷಿಸುವುದು ಮತ್ತು ದೇಶದ ಆರ್ಥಿಕತೆಯನ್ನು ಸ್ಥಿರವಾಗಿಡುವುದು ಈ ನಿರ್ಧಾರದ ಮುಖ್ಯ ಉದ್ದೇಶವಾಗಿದೆ ಎಂದು ಹೇಳಿದ್ಧಾರೆ.
ಏಕೆ ಈ ನಿರ್ಧಾರ?
ಜಾಗತಿಕವಾಗಿ ಕಚ್ಚಾ ತೈಲದ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗುವ ಆತಂಕವಿದ್ದರೂ, ಭಾರತೀಯ ಗ್ರಾಹಕರ ಮೇಲೆ ಹೊರೆಯಾಗದಂತೆ ತಡೆಯಲು ಸರ್ಕಾರ ಈ ಕ್ರಮಕ್ಕೆ ಮುಂದಾಗಿದೆ. ರಫ್ತು ಸುಂಕ ವಿಧಿಸುವ ಮೂಲಕ ದೇಶದ ಒಳಗಿನ ತೈಲ ಕಂಪನಿಗಳು ಮೊದಲು ದೇಶೀಯ ಪೂರೈಕೆಗೆ ಆದ್ಯತೆ ನೀಡುವಂತೆ ನೋಡಿಕೊಳ್ಳಲಾಗಿದೆ. ಈ ದರ ಕಡಿತವು ಶುಕ್ರವಾರದಿಂದಲೇ ಜಾರಿಗೆ ಬರಲಿದ್ದು, ಆರ್ಥಿಕತೆಯ ಮೇಲೆ ಸಕಾರಾತ್ಮಕ ಪರಿಣಾಮ ಬೀರಲಿದೆ ಎಂದು ತಜ್ಞರು ವಿಶ್ಲೇಷಿಸಿದ್ದಾರೆ.
ಅಬಕಾರಿ ಸುಂಕ ಎಷ್ಟಿತ್ತು ?
ಈ ಹಿಂದೆ ಪೆಟ್ರೋಲ್ ಮೇಲೆ ಅಬಕಾರಿ ಸುಂಕ 13 ರೂ. ಇದ್ದು, ಇದೀಗ 10 ರೂ. ಕಡಿತಗೊಳಿಸಿರುವುದರಿಂದ ಪ್ರಸ್ತುತ ಸುಂಕ 3 ರೂ. ಗೆ ತಲುಪಿದೆ. ಅದೇ ರೀತಿ ಡೀಸೆಲ್ ಮೇಲಿನ ಈ ಮೊದಲಿದ್ದ 10 ರೂ. ಸುಂಕವನ್ನು ಶೂನ್ಯಕ್ಕೆ ಇಳಿಸಲಾಗಿದೆ. ಕೇಂದ್ರ ಸರ್ಕಾರವು ಅಬಕಾರಿ ಸುಂಕವನ್ನು ಕಡಿತಗೊಳಿಸಿದ್ದರೂ, ತೈಲ ಕಂಪನಿಗಳು ಈಗಾಗಲೇ ನಷ್ಟದಲ್ಲಿದ್ದ ಕಾರಣ ಚಿಲ್ಲರೆ ಮಾರಾಟ ದರದಲ್ಲಿ ತಕ್ಷಣವೇ ದೊಡ್ಡ ಮಟ್ಟದ ಇಳಿಕೆ ಕಂಡುಬಂದಿಲ್ಲ. ಇದು ಮುಖ್ಯವಾಗಿ ಬೆಲೆ ಮತ್ತಷ್ಟು ಏರದಂತೆ ತಡೆಯಲು ಸಹಕಾರಿಯಾಗಿದೆ.

