x

ರೈತರ ರಕ್ತದಲ್ಲೂ ಕ್ರಿಮಿನಾಶಕ ಅಂಶ ಪತ್ತೆ: ಧಾರವಾಡದ ತಜ್ಞರು ಹೇಳುವುದೇನು?

ದ ಫೆಡರಲ್​ ಕರ್ನಾಟಕ'ಕ್ಕೆ ನೀಡಿದ ವಿಶೇಷ ಸಂದರ್ಶನದಲ್ಲಿ ಮಾತನಾಡಿದ ಅವರು ಕ್ರಿಮಿನಾಶಕ ಸಿಂಪಡಿಸುವಾಗ ಮುಖಗವಸು, ಕಣ್ಣುಗವಸು, ಕೈಗವಸು ಸೇರಿದಂತೆ ಯಾವುದೇ ಸುರಕ್ಷತಾ ಸಾಧನಗಳನ್ನು ಬಳಸದೆ ಇರುವ ರೈತರ ಸಂಖ್ಯೆ ಹೆಚ್ಚಿನದಾಗಿತ್ತು ಎಂದು ಹೇಳಿದ್ದಾರೆ.


Click the Play button to hear this message in audio format

ಬೆಳೆಗಳಿಗೆ ಕ್ರಿಮಿನಾಶಕ ಸಿಂಪಡಿಸುವ ಸಂದರ್ಭದಲ್ಲಿ ಸೂಕ್ತ ಮುನ್ನೆಚ್ಚರಿಕೆ ವಹಿಸದಿರುವುದರಿಂದ ರೈತರ ದೇಹಕ್ಕೆ ಕ್ರಿಮಿನಾಶಕದ ಅಂಶ ಪ್ರವೇಶಿಸುತ್ತಿರುವ ಆತಂಕಕಾರಿ ಮಾಹಿತಿ ಧಾರವಾಡದಲ್ಲಿ ನಡೆದ ಪ್ರಾಥಮಿಕ ಅಧ್ಯಯನವೊಂದರಿಂದ ಬೆಳಕಿಗೆ ಬಂದಿದೆ. ಕರ್ನಾಟಕ ಮೆಡಿಕಲ್ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಯ ಬಹುಶಿಸ್ತೀಯ ಸಂಶೋಧನಾ ಘಟಕದ ತಂಡ ನಡೆಸಿದ ಪೈಲಟ್ ಅಧ್ಯಯನದಲ್ಲಿ 13 ರೈತರ ಪೈಕಿ ಎಂಟು ಮಂದಿಯ ರಕ್ತದಲ್ಲಿ ಕ್ರಿಮಿನಾಶಕದ ಅಂಶ ಪತ್ತೆಯಾಗಿದೆ ಎಂದು ಸಂಶೋಧನಾ ತಂಡದ ನೇತೃತ್ವ ವಹಿಸಿರುವ ಡಾ. ರಾಮ ಕೌಲಗುಡ್ಡ ತಿಳಿಸಿದ್ದಾರೆ.

'ದ ಫೆಡರಲ್​ ಕರ್ನಾಟಕ'ಕ್ಕೆ ನೀಡಿದ ವಿಶೇಷ ಸಂದರ್ಶನದಲ್ಲಿ ಮಾತನಾಡಿದ ಅವರು ಕ್ರಿಮಿನಾಶಕ ಸಿಂಪಡಿಸುವಾಗ ಮುಖಗವಸು, ಕಣ್ಣುಗವಸು, ಕೈಗವಸು ಸೇರಿದಂತೆ ಯಾವುದೇ ಸುರಕ್ಷತಾ ಸಾಧನಗಳನ್ನು ಬಳಸದೆ ಇರುವ ರೈತರ ಸಂಖ್ಯೆ ಹೆಚ್ಚಿನದಾಗಿತ್ತು ಎಂದು ಹೇಳಿದ್ದಾರೆ.

ರೈತರು ಕ್ರಿಮಿನಾಶಕ ಸಿಂಪಡಿಸುವ ವೇಳೆ ಸುರಕ್ಷತಾ ಕ್ರಮಗಳನ್ನು ಅನುಸರಿಸುತ್ತಾರೆಯೇ ಎಂಬುದನ್ನು ತಿಳಿಯಲು ಧಾರವಾಡದಲ್ಲಿ ಪ್ರಾಥಮಿಕ ಅಧ್ಯಯನ ನಡೆಸಲಾಗಿತ್ತು. ಅಧ್ಯಯನಕ್ಕೆ ಒಳಪಟ್ಟ ಬಹುತೇಕ ರೈತರಿಗೆ ಯಾವ ಬೆಳೆಗೆ ಯಾವ ಕ್ರಿಮಿನಾಶಕ ಬಳಸಬೇಕು, ಅದರ ಪ್ರಮಾಣ ಎಷ್ಟು ಇರಬೇಕು ಮತ್ತು ಅದನ್ನು ಹೇಗೆ ದುರ್ಬಲಗೊಳಿಸಬೇಕು ಎಂಬ ಬಗ್ಗೆ ಸ್ಪಷ್ಟ ಮಾಹಿತಿ ಇರಲಿಲ್ಲ. ಕೆಲವರು ಶಿಫಾರಸು ಮಾಡಿದ್ದಕ್ಕಿಂತ ಹೆಚ್ಚಿನ ಸಾಂದ್ರತೆಯಲ್ಲಿ ಕ್ರಿಮಿನಾಶಕ ಬಳಸುತ್ತಿರುವುದು ಸಂಶೋಧಕರ ಗಮನಕ್ಕೆ ಬಂದಿದೆ.

ಕ್ರಿಮಿನಾಶಕ ಸಿಂಪಡಿಸುವಾಗ ಮುಖಗವಸು, ಕಣ್ಣುಗವಸು, ಕೈಗವಸು ಸೇರಿದಂತೆ ಯಾವುದೇ ಸುರಕ್ಷತಾ ಸಾಧನಗಳನ್ನು ಬಳಸದೆ ಇರುವ ರೈತರ ಸಂಖ್ಯೆ ಹೆಚ್ಚಿನದಾಗಿತ್ತು. ಅಧ್ಯಯನದಲ್ಲಿ ಸುಮಾರು ಐದು ಮಂದಿಯಲ್ಲಿ ಕೈಕಾಲುಗಳ ನರ ದೌರ್ಬಲ್ಯಕ್ಕೆ ಸಂಬಂಧಿಸಿದ ‘ಪೆರಿಫರಲ್ ನ್ಯೂರೋಪತಿ’ ಕಂಡುಬಂದಿತ್ತು. ಆದರೆ ಈ ಸಮಸ್ಯೆಗೆ ಕ್ರಿಮಿನಾಶಕವೇ ನೇರ ಕಾರಣ ಎಂದು ಈ ಅಧ್ಯಯನದಿಂದ ಖಚಿತವಾಗಿ ಹೇಳಲು ಸಾಧ್ಯವಿಲ್ಲ ಎಂದು ವೈದ್ಯರು ಸ್ಪಷ್ಟಪಡಿಸಿದ್ದಾರೆ.

ಎಂಡೋಸಲ್ಫಾನ್ ಬಳಕೆಯೂ ಪತ್ತೆ

ಅಧ್ಯಯನದಲ್ಲಿ ಕೆಲ ರೈತರು ಈಗಾಗಲೇ ನಿಷೇಧಗೊಂಡಿರುವ ಎಂಡೋಸಲ್ಫಾನ್ ಅನ್ನು ಬಳಸುತ್ತಿರುವುದು ಕೂಡ ಪತ್ತೆಯಾಗಿದೆ. ಆರ್ಗನೋಫಾಸ್ಫರಸ್ ಸೇರಿದಂತೆ ಅಪಾಯಕಾರಿ ಕ್ರಿಮಿನಾಶಕಗಳ ಬಳಕೆಯಿಂದ ದೇಹದ ವಿವಿಧ ಅಂಗಾಂಗಗಳ ಮೇಲೆ ದುಷ್ಪರಿಣಾಮ ಉಂಟಾಗುವ ಸಾಧ್ಯತೆಯಿದೆ ಎಂದು ಡಾ. ರಾಮ ಕೌಲಗುಡ್ಡ ಹೇಳಿದ್ದಾರೆ. ನರಗಳ ಮೇಲೆ ಪರಿಣಾಮ ಬೀರಿದರೆ ದೌರ್ಬಲ್ಯ, ನೆನಪಿನ ಸಮಸ್ಯೆ, ನಡೆಯುವಾಗ ಸಮತೋಲನ ತಪ್ಪುವುದು ಸೇರಿದಂತೆ ಹಲವು ತೊಂದರೆಗಳು ಉಂಟಾಗಬಹುದು.

ಮೇದೋಜೀರಕ ಗ್ರಂಥಿ, ಹೃದಯ ಸೇರಿದಂತೆ ವಿವಿಧ ಅಂಗಾಂಗಗಳ ಮೇಲೂ ಕ್ರಿಮಿನಾಶಕಗಳ ಪರಿಣಾಮ ಬೀರುವ ಸಾಧ್ಯತೆಯಿದೆ ಎಂದು ವೈದ್ಯರು ತಿಳಿಸಿದ್ದಾರೆ. ವಿವರಿಸಲಾಗದ ಮೂತ್ರಪಿಂಡ ವೈಫಲ್ಯ ಮತ್ತು ಕೆಲವು ಕ್ಯಾನ್ಸರ್ ಪ್ರಕರಣಗಳಿಗೂ ಕ್ರಿಮಿನಾಶಕಗಳ ಸಂಪರ್ಕ ಇರುವ ಸಾಧ್ಯತೆಯನ್ನು ಅವರು ಉಲ್ಲೇಖಿಸಿದರೂ, ಈ ಪ್ರಾಥಮಿಕ ಅಧ್ಯಯನದ ಆಧಾರದ ಮೇಲೆ ಅಂತಹ ನೇರ ಸಂಬಂಧವನ್ನು ಖಚಿತಪಡಿಸಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ದೊಡ್ಡ ಪ್ರಮಾಣದ ಅಧ್ಯಯನ ಆರಂಭ

13 ರೈತರ ಮೇಲೆ ನಡೆಸಿದ ಅಧ್ಯಯನವನ್ನು ಪೈಲಟ್ ಅಧ್ಯಯನವಾಗಿ ಪರಿಗಣಿಸಲಾಗಿದ್ದು, ಮುಂದಿನ ಹಂತದಲ್ಲಿ ಹಲವು ಜಿಲ್ಲೆಗಳನ್ನು ಒಳಗೊಂಡ ಬಹುಕೇಂದ್ರ ಅಧ್ಯಯನ ಆರಂಭಿಸಲಾಗಿದೆ. ವಿವಿಧ ಜಿಲ್ಲೆಗಳ ಸಂಸ್ಥೆಗಳ ಸಹಯೋಗದೊಂದಿಗೆ ಹೆಚ್ಚಿನ ಸಂಖ್ಯೆಯ ರೈತರ ರಕ್ತದ ಮಾದರಿಗಳನ್ನು ಸಂಗ್ರಹಿಸಿ ಅಧ್ಯಯನ ನಡೆಸಲು ಸಂಶೋಧನಾ ತಂಡ ಯೋಜಿಸಿದೆ.

ಅಧ್ಯಯನದ ವರದಿಯನ್ನು ಜಿಲ್ಲಾಡಳಿತ, ಆರೋಗ್ಯ ಇಲಾಖೆ ಮತ್ತು ಕೃಷಿ ಇಲಾಖೆಗೆ ಸಲ್ಲಿಸಲಾಗಿದೆ. ಮುಂದಿನ ಕ್ರಮಗಳ ಕುರಿತು ತಜ್ಞರೊಂದಿಗೆ ಸಭೆ ನಡೆಸಿ ನಿರ್ಧಾರ ಕೈಗೊಳ್ಳಲಾಗುವುದು ಎಂದು ತಿಳಿಸಲಾಗಿದೆ. ರೈತರಲ್ಲಿ ಕ್ರಿಮಿನಾಶಕಗಳ ಸುರಕ್ಷಿತ ಬಳಕೆಯ ಕುರಿತು ಜಾಗೃತಿ ಮೂಡಿಸುವುದಕ್ಕೆ ಸಂಶೋಧನಾ ತಂಡ ಒತ್ತು ನೀಡುತ್ತಿದೆ.

ಸುರಕ್ಷತಾ ಕ್ರಮ ಕಡ್ಡಾಯವಾಗಲಿ

ಕ್ರಿಮಿನಾಶಕ ಸಿಂಪಡಿಸುವ ಸಂದರ್ಭದಲ್ಲಿ ಮುಖಗವಸು, ಕೈಗವಸು, ಏಪ್ರನ್ ಮತ್ತು ಶೂಗಳನ್ನು ಬಳಸಬೇಕು. ಸಿಂಪಡಣೆ ಮುಗಿದ ಬಳಿಕ ಕೈಗಳನ್ನು ಸಾಬೂನಿನಿಂದ ಚೆನ್ನಾಗಿ ತೊಳೆಯುವುದು ಮತ್ತು ಸ್ನಾನ ಮಾಡಿದ ಬಳಿಕವೇ ಇತರ ವಸ್ತುಗಳನ್ನು ಮುಟ್ಟುವುದು ಅಗತ್ಯ ಎಂದು ವೈದ್ಯರು ಸಲಹೆ ನೀಡಿದ್ದಾರೆ. ಕ್ರಿಮಿನಾಶಕ ದೇಹಕ್ಕೆ ಚರ್ಮ, ಬಾಯಿ ಮತ್ತು ಉಸಿರಾಟದ ಮೂಲಕವೂ ಪ್ರವೇಶಿಸುವ ಸಾಧ್ಯತೆಯಿರುವುದರಿಂದ ನೇರ ಸಂಪರ್ಕ ತಪ್ಪಿಸಬೇಕು. ಮಕ್ಕಳನ್ನು ಸಿಂಪಡಣೆ ನಡೆಯುವ ಪ್ರದೇಶದಿಂದ ದೂರವಿಡಬೇಕು ಎಂದು ಸೂಚಿಸಿದ್ದಾರೆ.

ಯಾವುದೇ ಕ್ರಿಮಿನಾಶಕವನ್ನು ಬಳಸುವ ಮೊದಲು ತಜ್ಞರ ಸಲಹೆ ಪಡೆಯಬೇಕು ಮತ್ತು ಶಿಫಾರಸು ಮಾಡಿರುವ ಪ್ರಮಾಣದಲ್ಲೇ ಬಳಸಬೇಕು. ನಿಷೇಧಿತ ಕ್ರಿಮಿನಾಶಕಗಳನ್ನು ಬಳಸಬಾರದು. ಸುರಕ್ಷತಾ ಕ್ರಮಗಳು, ಸರಿಯಾದ ಕ್ರಿಮಿನಾಶಕದ ಆಯ್ಕೆ ಮತ್ತು ಸೂಕ್ತ ಪ್ರಮಾಣದ ಬಳಕೆಯ ಕುರಿತು ರೈತರಲ್ಲಿ ನಿರಂತರ ಜಾಗೃತಿ ಮೂಡಿಸಿದರೆ ಆರೋಗ್ಯದ ಅಪಾಯವನ್ನು ಗಣನೀಯವಾಗಿ ಕಡಿಮೆ ಮಾಡಬಹುದು ಎಂದು ವೈದ್ಯರು ಹೇಳಿದ್ದಾರೆ.

ತರಕಾರಿ ಮೂಲಕ ಗ್ರಾಹಕರಿಗೂ ಅಪಾಯ?

ಕ್ರಿಮಿನಾಶಕದ ಪರಿಣಾಮ ರೈತರಿಗೆ ಮಾತ್ರ ಸೀಮಿತವಾಗಿಲ್ಲ ಎಂಬುದನ್ನೂ ಸಂಶೋಧಕರು ಗಮನಸೆಳೆದಿದ್ದಾರೆ. ಹೆಚ್ಚಿನ ಪ್ರಮಾಣದಲ್ಲಿ ಕ್ರಿಮಿನಾಶಕ ಬಳಸಿ, ಕಡಿಮೆ ಅವಧಿಯಲ್ಲೇ ತರಕಾರಿಗಳನ್ನು ಮಾರುಕಟ್ಟೆಗೆ ಕಳುಹಿಸಿದರೆ ಅವುಗಳಲ್ಲಿನ ಕ್ರಿಮಿನಾಶಕದ ಅಂಶ ಗ್ರಾಹಕರ ದೇಹಕ್ಕೂ ಸೇರುವ ಸಾಧ್ಯತೆಯಿದೆ ಎಂದು ವೈದ್ಯರು ಹೇಳಿದ್ದಾರೆ. ತರಕಾರಿಗಳನ್ನು ತೊಳೆದು ಸೇವಿಸಿದರೂ ಅವುಗಳಲ್ಲಿ ಉಳಿದಿರುವ ಅಂಶದ ಬಗ್ಗೆ ಗ್ರಾಹಕರಿಗೆ ಮಾಹಿತಿ ಇರುವುದಿಲ್ಲ ಎಂಬ ಆತಂಕವನ್ನು ವ್ಯಕ್ತಪಡಿಸಿದ್ದಾರೆ.

ಈ ಹಿನ್ನೆಲೆಯಲ್ಲಿ ಸಂಶೋಧನೆಯನ್ನು ಧಾರವಾಡಕ್ಕೆ ಸೀಮಿತಗೊಳಿಸದೆ ಇತರ ಜಿಲ್ಲೆಗಳಿಗೂ ವಿಸ್ತರಿಸುವ ಯೋಜನೆ ರೂಪಿಸಲಾಗಿದೆ. ದೇಶದ ವಿವಿಧ ಭಾಗಗಳಲ್ಲಿರುವ ಸಂಸ್ಥೆಗಳ ಸಹಯೋಗದೊಂದಿಗೆ ದೊಡ್ಡ ಪ್ರಮಾಣದ ಅಧ್ಯಯನ ನಡೆಸಿ ರೈತರಿಗೆ ಹಾಗೂ ಸಾರ್ವಜನಿಕರಿಗೆ ಅಗತ್ಯ ಜಾಗೃತಿ ಮೂಡಿಸುವುದು ಸಂಶೋಧನಾ ತಂಡದ ಮುಂದಿನ ಉದ್ದೇಶವಾಗಿದೆ.

Read More
Next Story