ಪರಪ್ಪನ ಅಗ್ರಹಾರದಿಂದ ಸ್ವತಂತ್ರ ಹಕ್ಕಿಗಳಾದ 24 ಕೈದಿಗಳು: ಆದೇಶ ಪತ್ರ ವಿತರಣೆ
x

ಪರಪ್ಪನ ಅಗ್ರಹಾರದಿಂದ ಸ್ವತಂತ್ರ ಹಕ್ಕಿಗಳಾದ 24 ಕೈದಿಗಳು: ಆದೇಶ ಪತ್ರ ವಿತರಣೆ

ಕಾರಾಗೃಹ ಇಲಾಖೆ ಕೈದಿಗಳ ಮನಪರಿವರ್ತನೆಯನ್ನು ಸೂಕ್ಷ್ಮವಾಗಿ ಗಮನಿಸಿ, ಕಾನೂನುಬದ್ಧವಾಗಿ ಪರಿಶೀಲನೆ ನಡೆಸಿತು. ಸನ್ನಡತೆಯ ಆಧಾರದ ಮೇಲೆ ಅವಧಿ ಪೂರ್ವ ಬಿಡುಗಡೆ ಮಾಡಲಾಯಿತು.


Click the Play button to hear this message in audio format

ಒಂದಾನೊಂದು ಕಾಲದಲ್ಲಿ ಮಾಡಿದ ತಪ್ಪಿಗಾಗಿ ಜೈಲಿನ ಕತ್ತಲ ಕೋಣೆಯಲ್ಲಿ ಸುದೀರ್ಘ ಕಾಲ ಶಿಕ್ಷೆ ಅನುಭವಿಸಿ, ಇದೀಗ ತಮ್ಮ ನಡವಳಿಕೆಯನ್ನು ತಿದ್ದಿಕೊಂಡು ಸಮಾಜದ ಮುಖ್ಯವಾಹಿನಿಗೆ ಮರಳಲು ಸಿದ್ಧರಾಗಿರುವ 24 ಜೀವಾವಧಿ ಕೈದಿಗಳಿಗೆ ಮರುಜನ್ಮ ದೊರೆತಿದೆ. ರಾಜ್ಯಪಾಲರ ಆದೇಶದ ಮೇರೆಗೆ, ಸನ್ನಡತೆಯ ಆಧಾರದ ಮೇಲೆ ಇವರನ್ನು ಅವಧಿಪೂರ್ವವಾಗಿ ಬಿಡುಗಡೆ ಮಾಡಲಾಗಿದ್ದು, ಬೆಂಗಳೂರಿನ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಭಾವುಕ ಕ್ಷಣಗಳಿಗೆ ಸಾಕ್ಷಿಯಾಯಿತು.

ಒಂದು ಕಾಲದಲ್ಲಿ ಅಪರಾಧದ ಹಾದಿಯಲ್ಲಿ ಸಾಗಿ, ಕಾನೂನಿನ ಸಂಕೋಲೆಗೆ ಸಿಲುಕಿ, ಸುದೀರ್ಘ ಕಾಲ ಜೈಲು ಜೀವನವನ್ನು ನಡೆಸಿದ ಇವರು, ಕಾರಾಗೃಹದಲ್ಲಿ ಕೇವಲ ಶಿಕ್ಷೆಯನ್ನು ಮಾತ್ರ ಅನುಭವಿಸಲಿಲ್ಲ, ಬದಲಾಗಿ ತಮ್ಮೊಳಗಿನ ಕತ್ತಲೆಯನ್ನು ಅಳಿಸಿ ಬೆಳಕಿನ ಕಡೆಗೆ ಸಾಗಲು ಪ್ರಯತ್ನಿಸಿದರು. ಜೈಲಿನ ಕಠಿಣ ನಿಯಮಾವಳಿಗಳನ್ನು ಪಾಲಿಸಿ, ಉತ್ತಮ ನಡವಳಿಕೆಯನ್ನು ರೂಢಿಸಿಕೊಂಡು, ಕೌಶಲ್ಯ ತರಬೇತಿಗಳಲ್ಲಿ ತೊಡಗಿಸಿಕೊಂಡು ತಮ್ಮಲ್ಲಿ ಸಕಾರಾತ್ಮಕ ಬದಲಾವಣೆಯನ್ನು ತಂದುಕೊಂಡರು. ರಾಜ್ಯ ಸರ್ಕಾರ ಮತ್ತು ಕಾರಾಗೃಹ ಇಲಾಖೆ ಇವರ ಮನಪರಿವರ್ತನೆಯನ್ನು ಸೂಕ್ಷ್ಮವಾಗಿ ಗಮನಿಸಿ, ಕಾನೂನುಬದ್ಧವಾಗಿ ಪರಿಶೀಲನೆ ನಡೆಸಿತು. ತಪ್ಪು ತಿದ್ದಿಕೊಂಡಿರುವ ಇವರಿಗೆ ಸಮಾಜದಲ್ಲಿ ಗೌರವಯುತವಾಗಿ ಬದುಕುವ ಮತ್ತೊಂದು ಅವಕಾಶ ನೀಡಬೇಕೆಂಬ ಉದ್ದೇಶದಿಂದ, ಸನ್ನಡತೆಯ ಆಧಾರದ ಮೇಲೆ ಅವಧಿ ಪೂರ್ವ ಬಿಡುಗಡೆಗೆ ರಾಜ್ಯಪಾಲರಿಗೆ ಶಿಫಾರಸು ಸಲ್ಲಿಸಲಾಗಿತ್ತು. ಇದಕ್ಕೆ ರಾಜ್ಯಪಾಲರು ಒಪ್ಪಿಗೆ ಸೂಚಿಸಿದ ಹಿನ್ನೆಲೆಯಲ್ಲಿ 24 ಮಂದಿ ಸ್ವತಂತ್ರ ಹಕ್ಕಿಗಳಾಗಿ ಜೈಲಿನಿಂದ ಹೊರಬಂದಿದ್ದಾರೆ.

ಕಾರಾಗೃಹದಲ್ಲಿ ನಡೆದ ವಿಶೇಷ ಸಮಾರಂಭ

ಬೆಂಗಳೂರಿನ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಆಯೋಜಿಸಲಾಗಿದ್ದ ಬಿಡುಗಡೆ ಕಾರ್ಯಕ್ರಮದಲ್ಲಿ ಭಾವನಾತ್ಮಕ ದೃಶ್ಯಗಳು ಕಂಡುಬಂದವು. ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಅವರು, ಬಿಡುಗಡೆ ಹೊಂದಿದ ಕೈದಿಗಳಿಗೆ ಬಿಡುಗಡೆಯ ಆದೇಶ ಪತ್ರಗಳನ್ನು ವಿತರಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಜೈಲು ಎಂಬುದು ಕೇವಲ ದಂಡನೆ ನೀಡುವ ತಾಣವಲ್ಲ, ಅದು ವ್ಯಕ್ತಿಯ ಮನಪರಿವರ್ತನೆ ಮಾಡುವ ತರಬೇತಿ ಕೇಂದ್ರವಾಗಬೇಕು. ಬಿಡುಗಡೆಯಾಗುತ್ತಿರುವವರು ಸಮಾಜದ ಜವಾಬ್ದಾರಿಯುತ ನಾಗರಿಕರಾಗಿ ಬದಲಾಗಿದ್ದಾರೆ ಎಂಬ ನಂಬಿಕೆ ನಮಗಿದೆ. ಇನ್ನು ಮುಂದಿನ ಬದುಕು ಸಾರ್ಥಕವಾಗಿರಲಿ, ಸಮಾಜದಲ್ಲಿ ಇತರರಿಗೆ ಮಾದರಿಯಾಗಿ ಬಾಳಿ ಎಂದು ಶುಭ ಹಾರೈಸಿದರು.

ರಾಜ್ಯ ಸರ್ಕಾರ ಕಾರಾಗೃಹಗಳನ್ನು ಕೇವಲ ಶಿಕ್ಷೆ ಅನುಭವಿಸುವ ಸ್ಥಳಗಳನ್ನಾಗಿ ಅಲ್ಲ, ವ್ಯಕ್ತಿತ್ವ ಪರಿವರ್ತನೆ ಮತ್ತು ಪುನರ್ವಸತಿಯ ಕೇಂದ್ರಗಳನ್ನಾಗಿ ರೂಪಿಸಲು ಬದ್ಧವಾಗಿದೆ. ಖೈದಿಗಳಿಗೆ ಶಿಕ್ಷಣ, ಕೌಶಲಾಭಿವೃದ್ಧಿ, ಉದ್ಯೋಗ ತರಬೇತಿ ಹಾಗೂ ಮಾನಸಿಕ ಸದೃಢತೆಗೆ ಅಗತ್ಯವಾದ ಎಲ್ಲ ಅವಕಾಶಗಳನ್ನು ಒದಗಿಸಲಾಗುತ್ತಿದೆ. ಇದರಿಂದ ಬಿಡುಗಡೆಯಾದ ನಂತರ ಸ್ವಾವಲಂಬಿ ಜೀವನ ನಡೆಸಲು ಅನುಕೂಲವಾಗಲಿದೆ ಎಂದರು.

ಕಾರಾಗೃಹದ ವಿವಿಧ ವಿಭಾಗಗಳಿಗೆ ಭೇಟಿ

ಕಾರ್ಯಕ್ರಮದ ಬಳಿಕ ಸಚಿವ ಪ್ರಿಯಾಂಕ್‌ ಖರ್ಗೆ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದ ವಿವಿಧ ವಿಭಾಗಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಕಂಪ್ಯೂಟರ್ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಖೈದಿಗಳೊಂದಿಗೆ ಮಾತುಕತೆ ನಡೆಸಿ, ಅವರಿಗೆ ನೀಡಲಾಗುತ್ತಿರುವ ತರಬೇತಿ, ಉದ್ಯೋಗ ಕೌಶಲಾಭಿವೃದ್ಧಿ ಹಾಗೂ ಎದುರಾಗುತ್ತಿರುವ ಸಮಸ್ಯೆಗಳ ಬಗ್ಗೆ ಮಾಹಿತಿ ಪಡೆದು ಅಧಿಕಾರಿಗಳಿಗೆ ಅಗತ್ಯ ಸೂಚನೆಗಳನ್ನು ನೀಡಿದರು. ನಂತರ ಕಾರಾಗೃಹದ ಅಡುಗೆಮನೆಗೆ ಭೇಟಿ ನೀಡಿ ಖೈದಿಗಳಿಗೆ ತಯಾರಾಗುತ್ತಿದ್ದ ಆಹಾರದ ಗುಣಮಟ್ಟ ಹಾಗೂ ಸ್ವಚ್ಛತೆಯನ್ನು ಪರಿಶೀಲಿಸಿದರು. ಕೈದಿಗಳು ತಯಾರಿಸಿದ ವಿವಿಧ ಕರಕುಶಲ ವಸ್ತುಗಳನ್ನು ವೀಕ್ಷಿಸಿ ಅವರ ಕೌಶಲ್ಯವನ್ನು ಮೆಚ್ಚುಗೆ ವ್ಯಕ್ತಪಡಿಸಿದರು. ಇಂತಹ ಉತ್ಪನ್ನಗಳಿಗೆ ಉತ್ತಮ ಮಾರುಕಟ್ಟೆ ಕಲ್ಪಿಸುವ ಮೂಲಕ ಬಿಡುಗಡೆಯ ನಂತರವೂ ಕೈದಿಗಳು ಸ್ವಾವಲಂಬಿ ಬದುಕು ಕಟ್ಟಿಕೊಳ್ಳಲು ನೆರವಾಗುವ ಯೋಜನೆಗಳನ್ನು ರೂಪಿಸುವ ಅಗತ್ಯವಿದೆ ಎಂದು ಹೇಳಿದರು. ಅಲ್ಲದೆ, ಕಾರಾಗೃಹದಲ್ಲಿರುವ ಕೈದಿಗಳ ಮಕ್ಕಳಿಗಾಗಿ ಸ್ಥಾಪಿಸಲಾಗಿರುವ ಕಲಿಕಾ ಕೇಂದ್ರಕ್ಕೂ ಭೇಟಿ ನೀಡಿ ಮಕ್ಕಳೊಂದಿಗೆ ಆತ್ಮೀಯವಾಗಿ ಮಾತುಕತೆ ನಡೆಸಿದರು. ಮಕ್ಕಳ ಶಿಕ್ಷಣ ಮತ್ತು ಭವಿಷ್ಯ ಯಾವುದೇ ಕಾರಣಕ್ಕೂ ಹಿನ್ನಡೆಯಾಗಬಾರದು ಎಂಬುದು ಸರ್ಕಾರದ ಆದ್ಯತೆಯಾಗಿದ್ದು, ಅವರಿಗೆ ಅಗತ್ಯ ಸೌಲಭ್ಯಗಳನ್ನು ಒದಗಿಸಲು ಸರ್ಕಾರ ಬದ್ಧವಾಗಿದೆ ಎಂದು ತಿಳಿಸಿದರು.

ಕಾರಾಗೃಹಗಳನ್ನು ತಾಂತ್ರಿಕವಾಗಿ ಹಾಗೂ ಉದ್ಯೋಗಪರವಾಗಿ ಇನ್ನಷ್ಟು ಸಬಲಗೊಳಿಸಲು ಸಮಗ್ರ ಕಾರ್ಯಕ್ರಮಗಳನ್ನು ರೂಪಿಸಲಾಗುವುದು. ಮಾಹಿತಿ ತಂತ್ರಜ್ಞಾನ, ಡಿಜಿಟಲ್ ಕೌಶಲ್ಯ, ವೃತ್ತಿಪರ ತರಬೇತಿ ಮತ್ತು ಉದ್ಯೋಗಮುಖಿ ಚಟುವಟಿಕೆಗಳನ್ನು ಮತ್ತಷ್ಟು ವಿಸ್ತರಿಸಿ, ಬಿಡುಗಡೆಯಾದ ನಂತರ ಕೈದಿಗಳು ಗೌರವಯುತ ಜೀವನ ನಡೆಸಲು ಅಗತ್ಯ ಸಾಮರ್ಥ್ಯವನ್ನು ಬೆಳೆಸುವ ದಿಸೆಯಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವರು ಹೇಳಿದರು.

ಸಮಾಜದ ಮುಖ್ಯವಾಹಿನಿಗೆ ಮರಳುವ ತುಡಿತ

ಜೈಲಿನಿಂದ ಹೊರಬಂದ ಖೈದಿಗಳ ಪೈಕಿ ಅನೇಕರು ದಶಕಗಳ ಕಾಲ ಜೈಲಿನಲ್ಲಿ ಕಳೆದಿದ್ದಾರೆ. ಹೊರಗೆ ಬಂದ ನಂತರ ತಮ್ಮ ಕುಟುಂಬಸ್ಥರನ್ನು ಕಂಡಾಗ ಅವರ ಕಣ್ಣಲ್ಲಿ ಆನಂದಭಾಷ್ಪ ಜಾರಿತು. ಜೈಲಿನ ಚೌಕಟ್ಟಿನಿಂದ ಹೊರಬಂದಾಗ ಜಗತ್ತು ಬದಲಾಗಿದೆ. ಆದರೆ, ತಾವು ಪಡೆದ ಜೀವನ ಪಾಠ ಮತ್ತು ಜೈಲಿನಲ್ಲಿ ಕಲಿತ ಕೌಶಲ್ಯಗಳನ್ನು ಬಳಸಿಕೊಂಡು ಬದುಕು ಕಟ್ಟಿಕೊಳ್ಳುವ ದೃಢ ನಿರ್ಧಾರವನ್ನು ಅವರು ವ್ಯಕ್ತಪಡಿಸಿದರು. ಜೈಲಿನ ದಿನಗಳು ನಮಗೆ ಪಾಠ ಕಲಿಸಿವೆ. ನಾವು ಮಾಡಿದ ತಪ್ಪಿಗಾಗಿ ಪಶ್ಚಾತ್ತಾಪ ಪಡುತ್ತಿದ್ದೇವೆ. ಇನ್ನುಮುಂದೆ ಕಾನೂನನ್ನು ಗೌರವಿಸುತ್ತಾ, ಸಮಾಜದಲ್ಲಿ ಒಳ್ಳೆಯ ವ್ಯಕ್ತಿಗಳಾಗಿ ಬದುಕುತ್ತೇವೆ ಎಂದು ಬಿಡುಗಡೆಯಾದ ಕೈದಿಗಳು ಭರವಸೆ ನೀಡಿದರು. ಇವರ ಕುಟುಂಬಸ್ಥರು ಕೂಡ ರಾಜ್ಯ ಸರ್ಕಾರ ಮತ್ತು ಕಾರಾಗೃಹ ಇಲಾಖೆಯ ಈ ಮಾನವೀಯ ನಿರ್ಧಾರವನ್ನು ಸ್ವಾಗತಿಸಿದ್ದು, ತಮ್ಮವರು ಮತ್ತೆ ಮನೆಗೆ ಮರಳುತ್ತಿರುವುದಕ್ಕೆ ಹರ್ಷ ವ್ಯಕ್ತಪಡಿಸಿದ್ದಾರೆ.

ಸುಧಾರಣಾ ಕ್ರಮಗಳಿಗೆ ಸಿಕ್ಕ ಮನ್ನಣೆ

ಕರ್ನಾಟಕ ಕಾರಾಗೃಹ ಇಲಾಖೆಯು ಇತ್ತೀಚಿನ ವರ್ಷಗಳಲ್ಲಿ ಖೈದಿಗಳ ಮನಪರಿವರ್ತನೆಗೆ ಹೆಚ್ಚಿನ ಒತ್ತು ನೀಡುತ್ತಿದೆ. ಯೋಗ, ಧ್ಯಾನ, ಶಿಕ್ಷಣ ಮತ್ತು ವೃತ್ತಿಪರ ತರಬೇತಿಗಳನ್ನು ನೀಡುವ ಮೂಲಕ ಖೈದಿಗಳ ಚಿಂತನಾಕ್ರಮವನ್ನು ಬದಲಾಯಿಸುವ ಪ್ರಯತ್ನವನ್ನು ಇಲಾಖೆ ನಡೆಸುತ್ತಿದೆ. ಈ ಬಿಡುಗಡೆಯು ಇಂತಹ ಸುಧಾರಣಾ ಕ್ರಮಗಳಿಗೆ ಸಂದ ಜಯವಾಗಿದೆ. ಅಪರಾಧವನ್ನು ದ್ವೇಷಿಸಬೇಕು, ಅಪರಾಧಿಯನ್ನು ಅಲ್ಲ ಎಂಬ ತತ್ವವನ್ನು ಪಾಲಿಸುವ ಮೂಲಕ, ಕಾನೂನಿನಡಿಯಲ್ಲಿ ಅವಕಾಶವಿರುವ ಸುಧಾರಣಾ ಪ್ರಕ್ರಿಯೆಗೆ ಕಾರ್ಯಕ್ರಮ ಸಾಕ್ಷಿಯಾಯಿತು. ರಾಜ್ಯದ ವಿವಿಧ ಜೈಲುಗಳಿಂದ ಬಿಡುಗಡೆಯಾದ ಈ 24 ಮಂದಿ, ಸಮಾಜದ ಕಣ್ಣಲ್ಲಿ ಅಪರಾಧಿಗಳಾಗಿ ಉಳಿಯದೆ, ಬದಲಾದ ಮನುಷ್ಯರಾಗಿ ಹೊಸ ಭರವಸೆಯೊಂದಿಗೆ ಹೆಜ್ಜೆ ಹಾಕಿದ್ದಾರೆ.

Read More
Next Story