Transgender Reservation| ತೃತೀಯಲಿಂಗಿ ಮೀಸಲಾತಿ ಕುರಿತ ಹೈಕೋರ್ಟ್‌ ತೀರ್ಪಿನಲ್ಲಿ ಮಾರ್ಪಾಡು
x
ತೃತೀಯಲಿಂಗಿ ಮೀಸಲಾತಿ(ಸಂಗ್ರಹ ಚಿತ್ರ)

Transgender Reservation| ತೃತೀಯಲಿಂಗಿ ಮೀಸಲಾತಿ ಕುರಿತ ಹೈಕೋರ್ಟ್‌ ತೀರ್ಪಿನಲ್ಲಿ ಮಾರ್ಪಾಡು

ತೃತೀಯಲಿಂಗಿ ವ್ಯಕ್ತಿಗಳ (ಹಕ್ಕುಗಳ ರಕ್ಷಣೆ) ತಿದ್ದುಪಡಿ ಕಾಯ್ದೆ 2026ರ ಕುರಿತು ರಾಜಸ್ಥಾನ ಹೈಕೋರ್ಟ್ ನೀಡಿದ್ದ ವಿಮರ್ಶಾತ್ಮಕ ಅಭಿಪ್ರಾಯಗಳನ್ನು ಈಗ ಮಾರ್ಪಡಿಸಲಾಗಿದೆ.


ತೃತೀಯಲಿಂಗಿ ಸಮುದಾಯದ ಮೀಸಲಾತಿ ಮತ್ತು ಹಕ್ಕುಗಳಿಗೆ ಸಂಬಂಧಿಸಿದಂತೆ ರಾಜಸ್ಥಾನ ಹೈಕೋರ್ಟ್ ಮಹತ್ವದ ಹೆಜ್ಜೆಯನ್ನಿಟ್ಟಿದೆ. ಈ ಹಿಂದೆ ತೃತೀಯಲಿಂಗಿ ವ್ಯಕ್ತಿಗಳ (ಹಕ್ಕುಗಳ ರಕ್ಷಣೆ) ತಿದ್ದುಪಡಿ ಕಾಯ್ದೆ, 2026ರ ಕುರಿತು ನ್ಯಾಯಾಲಯ ನೀಡಿದ್ದ ಕೆಲವು ಕಠಿಣ ಮತ್ತು ವಿಮರ್ಶಾತ್ಮಕ ಅಭಿಪ್ರಾಯಗಳನ್ನು ಈಗ ಅಧಿಕೃತವಾಗಿ ಮಾರ್ಪಡಿಸಲಾಗಿದೆ. ಕೇಂದ್ರ ಸರ್ಕಾರದ ಹೊಸ ಕಾಯ್ದೆಯು ವ್ಯಕ್ತಿಯ 'ಸ್ವಯಂ ಲಿಂಗ ಗುರುತಿಸುವಿಕೆ'ಯ ಹಕ್ಕನ್ನು ಮೊಟಕುಗೊಳಿಸುತ್ತದೆ ಎಂದು ಈ ಮೊದಲು ಹೈಕೋರ್ಟ್ ಆತಂಕ ವ್ಯಕ್ತಪಡಿಸಿತ್ತು. ಆದರೆ, ಈಗಿನ ಪರಿಷ್ಕೃತ ಆದೇಶದಲ್ಲಿ ಆ ವಿವಾದಾತ್ಮಕ ಭಾಗಗಳನ್ನು 'ಅಚಾತುರ್ಯ' ಎಂದು ಕರೆದು ತೆಗೆದುಹಾಕಲಾಗಿದೆ.

ನ್ಯಾಯಮೂರ್ತಿಗಳಾದ ಅರುಣ್ ಮೊಂಗಾ ಮತ್ತು ಯೋಗೇಂದ್ರ ಕುಮಾರ್ ಪುರೋಹಿತ್ ಅವರಿದ್ದ ಪೀಠವು, ತೀರ್ಪಿನ ಕೊನೆಯ ಭಾಗದಲ್ಲಿದ್ದ (Epilogue) ಕೆಲವು ಅಂಶಗಳು ಅಚಾತುರ್ಯದಿಂದ ಸೇರ್ಪಡೆಯಾಗಿದ್ದು, ಅವುಗಳ ಅಗತ್ಯವಿರಲಿಲ್ಲ ಎಂದು ಒಪ್ಪಿಕೊಂಡು ಮಾರ್ಪಾಡು ಮಾಡಿದೆ.

ಹಿನ್ನೆಲೆ ಏನು?

ಮಾರ್ಚ್ 30, 2026 ರಂದು ಹೈಕೋರ್ಟ್ ಮಹತ್ವದ ತೀರ್ಪೊಂದನ್ನು ನೀಡಿತ್ತು. ತೃತೀಯಲಿಂಗಿಗಳನ್ನು ಪ್ರತ್ಯೇಕ ಮೀಸಲಾತಿ ನೀಡದೆ ನೇರವಾಗಿ ಹಿಂದುಳಿದ ವರ್ಗಗಳ (OBC) ಪಟ್ಟಿಗೆ ಸೇರಿಸಿದ್ದ 2023ರ ಸರ್ಕಾರದ ಅಧಿಸೂಚನೆಯನ್ನು ಪ್ರಶ್ನಿಸಿ ಈ ಅರ್ಜಿ ಸಲ್ಲಿಕೆಯಾಗಿತ್ತು.

ಆ ಸಂದರ್ಭದಲ್ಲಿ ನ್ಯಾಯಾಲಯವು, ಕೇಂದ್ರ ಸರ್ಕಾರದ 2026ರ ಹೊಸ ತಿದ್ದುಪಡಿ ಕಾಯ್ದೆಯು ಸುಪ್ರೀಂ ಕೋರ್ಟ್ ನೀಡಿದ್ದ 'ಸ್ವಯಂ ಲಿಂಗ ಗುರುತಿಸುವಿಕೆ'ಯ ಸಾಂವಿಧಾನಿಕ ತತ್ವಕ್ಕೆ ವಿರುದ್ಧವಾಗಿದೆ ಎಂದು ಕಳವಳ ವ್ಯಕ್ತಪಡಿಸಿತ್ತು. ಲಿಂಗ ಗುರುತಿಸುವಿಕೆಗೆ ಪ್ರಮಾಣಪತ್ರ ಅಥವಾ ಆಡಳಿತಾತ್ಮಕ ಪರಿಶೀಲನೆಯನ್ನು ಕಡ್ಡಾಯಗೊಳಿಸುವುದು ವ್ಯಕ್ತಿಯ ಘನತೆಗೆ ಧಕ್ಕೆ ತರುತ್ತದೆ ಎಂದು ನ್ಯಾಯಾಲಯ ಹೇಳಿತ್ತು.

ಮಾರ್ಪಡಿಸಲಾದ ಅಂಶಗಳು

ಪರಿಷ್ಕೃತ ಆದೇಶದಲ್ಲಿ ಹೈಕೋರ್ಟ್ ಕೆಲವೊಂದು ಬದಲಾವಣೆಗಳನ್ನು ಮಾಡಿದೆ. ಹೊಸ ಕಾಯ್ದೆಯ ಕುರಿತಾದ ಕಠಿಣ ಟೀಕೆಗಳನ್ನು ನ್ಯಾಯಾಲಯ ತೆಗೆದುಹಾಕಿದೆ. ಇವು ಪ್ರಕರಣದ ತೀರ್ಪಿಗೆ ಅಗತ್ಯವಿಲ್ಲದ ಅಂಶಗಳಾಗಿದ್ದವು ಎಂದು ಸ್ಪಷ್ಟಪಡಿಸಲಾಗಿದೆ. ಹೊಸ ತಿದ್ದುಪಡಿಯನ್ನು ಬದಲಾಗುತ್ತಿರುವ ಕಾನೂನು ಚೌಕಟ್ಟಿನ ಭಾಗ ಎಂದು ನ್ಯಾಯಾಲಯ ಈಗ ಬಣ್ಣಿಸಿದೆ.

ಆದರೆ, ತನ್ನ ಲಿಂಗವನ್ನು ಸ್ವಯಂ ಗುರುತಿಸಿಕೊಳ್ಳುವುದು ಸಂವಿಧಾನದ ವಿಧಿ 14, 15, 16 ಮತ್ತು 21ರ ಅಡಿಯಲ್ಲಿ ಘನತೆ ಮತ್ತು ವೈಯಕ್ತಿಕ ಸ್ವಾತಂತ್ರ್ಯದ ಅವಿಭಾಜ್ಯ ಅಂಗವಾಗಿದೆ ಎಂಬುದನ್ನು ನ್ಯಾಯಾಲಯ ಪುನರುಚ್ಚರಿಸಿದೆ.

ಮುಖ್ಯ ತೀರ್ಪಿನಲ್ಲಿ ಬದಲಾವಣೆ ಇಲ್ಲ

ನ್ಯಾಯಾಲಯವು ತನ್ನ ಅಭಿಪ್ರಾಯಗಳನ್ನು ಮಾರ್ಪಡಿಸಿದ್ದರೂ, ತೃತೀಯಲಿಂಗಿಗಳಿಗೆ ನೀಡಲಾದ ಪ್ರಮುಖ ನಿರ್ದೇಶನಗಳಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ. ಸಾರ್ವಜನಿಕ ಉದ್ಯೋಗ ಮತ್ತು ಶಿಕ್ಷಣ ಸಂಸ್ಥೆಗಳ ಪ್ರವೇಶಾತಿಯಲ್ಲಿ ತೃತೀಯಲಿಂಗಿ ಅಭ್ಯರ್ಥಿಗಳಿಗೆ ಶೇ. 3 ರಷ್ಟು ಹೆಚ್ಚುವರಿ ಅಂಕಗಳ ಸೌಲಭ್ಯ ಮುಂದುವರಿಯಲಿದೆ.

ತೃತೀಯಲಿಂಗಿಗಳ ಸಬಲೀಕರಣ ಮತ್ತು ಸೂಕ್ತ ಮೀಸಲಾತಿ ಚೌಕಟ್ಟನ್ನು ಶಿಫಾರಸು ಮಾಡಲು ಸಮಿತಿಯನ್ನು ರಚಿಸುವಂತೆ ರಾಜ್ಯ ಸರ್ಕಾರಕ್ಕೆ ನೀಡಿದ ಆದೇಶ ಹಾಗೆಯೇ ಇರಲಿದೆ. ತೃತೀಯಲಿಂಗಿ ವ್ಯಕ್ತಿಗಳ (ಹಕ್ಕುಗಳ ರಕ್ಷಣೆ) ತಿದ್ದುಪಡಿ ಮಸೂದೆ, 2026 ಅನ್ನು ಲೋಕಸಭೆಯು ಮಾರ್ಚ್ 24 ರಂದು ಮತ್ತು ರಾಜ್ಯಸಭೆಯು ಮಾರ್ಚ್ 25 ರಂದು ಅಂಗೀಕರಿಸಿತ್ತು. ಮಾರ್ಚ್ 30 ರಂದು ಇದಕ್ಕೆ ರಾಷ್ಟ್ರಪತಿಗಳ ಅಂಕಿತ ಬಿದ್ದಿತ್ತು.

Read More
Next Story