Minister M.B. Patil demands express train between Bengaluru-Vijayapura
x

ಸಾಂದರ್ಭಿಕ ಚಿತ್ರ

Express Train| ಬೆಂಗಳೂರು-ವಿಜಯಪುರ ಮಧ್ಯೆ ಎಕ್ಸ್‌ಪ್ರೆಸ್‌ ರೈಲಿಗೆ ಡಿಮ್ಯಾಂಡ್‌

ಗದಗ-ಹೊಟಗಿ ಹಳಿ ದ್ವಿಪಥೀಕರಣ ಯೋಜನೆಯಡಿ ಆಲಮಟ್ಟಿ-ವಂಡಾಳ್ ನಡುವಿನ 9.60 ಕಿ.ಮೀ. ಉದ್ದದ ಜೋಡಿಹಳಿ ಕಾಮಗಾರಿ ಮುಗಿದು, ಮಾರ್ಚ್ 25ರಿಂದ ಸಂಚಾರಕ್ಕೆ ಮುಕ್ತವಾಗಿದೆ.


Click the Play button to hear this message in audio format

ಉತ್ತರ ಕರ್ನಾಟಕದ ಜನರ ಬಹುಕಾಲದ ಬೇಡಿಕೆಯಾಗಿರುವ ವಿಜಯಪುರ-ಬೆಂಗಳೂರು ನಡುವೆ ಎಕ್ಸ್‌ಪ್ರೆಸ್‌ ರೈಲು ಆರಂಭಿಸಬೇಕೆಂಬ ಒತ್ತಾಯ ತೀವ್ರವಾಗಿದೆ. ಆಲಮಟ್ಟಿ ಮತ್ತು ವಂಡಾಳ್ ನಡುವಿನ ರೈಲ್ವೆ ಜೋಡಿಹಳಿ ಕಾಮಗಾರಿ ಪೂರ್ಣಗೊಂಡ ಹಿನ್ನೆಲೆ ತಕ್ಷಣವೇ ಎಕ್ಸ್‌ಪ್ರೆಸ್‌ ರೈಲು ಸೇವೆ ಆರಂಭಿಸಲು ಸ್ಥಳೀಯರು ಹಾಗೂ ರಾಜಕೀಯ ಪಕ್ಷಗಳು ಆಗ್ರಹಿಸಿವೆ.

ವಿಜಯಪುರ ಹಾಗೂ ಬೆಂಗಳೂರು ಮಧ್ಯೆ ಎಕ್ಸ್‌ಪ್ರೆಸ್‌ ರೈಲು ಓಡಿಸುವಂತೆ ರಾಜ್ಯ ಮೂಲಸೌಕರ್ಯ ಅಭಿವೃದ್ಧಿ ಸಚಿವ ಎಂ.ಬಿ. ಪಾಟೀಲ ಅವರು ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಹಾಗೂ ಕೇಂದ್ರ ರೈಲ್ವೆ ರಾಜ್ಯ ಸಚಿವ ವಿ. ಸೋಮಣ್ಣ ಅವರಿಗೆ ಮಾರ್ಚ್ 30ರಂದು ಸಚಿವರು ಪತ್ರ ಬರೆದಿದ್ದಾರೆ.

ಗದಗ-ಹೊಟಗಿ ಹಳಿ ದ್ವಿಪಥೀಕರಣ ಯೋಜನೆಯಡಿ ಆಲಮಟ್ಟಿ-ವಂಡಾಳ್ ನಡುವಿನ 9.60 ಕಿ.ಮೀ. ಉದ್ದದ ಜೋಡಿಹಳಿ ಕಾಮಗಾರಿ ಮುಗಿದು, ಮಾರ್ಚ್ 25ರಿಂದ ಸಂಚಾರಕ್ಕೆ ಮುಕ್ತವಾಗಿದೆ. "ಈ ಕಾಮಗಾರಿ ಮುಗಿದರೆ ಬೆಂಗಳೂರು-ವಿಜಯಪುರ ನಡುವೆ ಎಕ್ಸ್‌ಪ್ರೆಸ್‌ ರೈಲು ಆರಂಭಿಸುವುದಾಗಿ ಈ ಹಿಂದೆ ಭೇಟಿಯಾದಾಗ ಭರವಸೆ ನೀಡಿದ್ದಿರಿ, ಈಗ ಅದನ್ನು ಈಡೇರಿಸುವ ಸಮಯ ಬಂದಿದೆ" ಎಂದು ಪತ್ರದಲ್ಲಿ ಸಚಿವರು ನೆನಪಿಸಿದ್ದಾರೆ.

ರೈಲು ಪ್ರಯಾಣ 10 ಗಂಟೆಗಿಳಿಸಲು ಮನವಿ

ವಿಜಯಪುರ ಮತ್ತು ಬಾಗಲಕೋಟೆ ಜಿಲ್ಲೆಗಳಿಂದ ನಿತ್ಯವೂ ಶೈಕ್ಷಣಿಕ, ವೈದ್ಯಕೀಯ ಹಾಗೂ ವಾಣಿಜ್ಯ ಉದ್ದೇಶಗಳಿಗಾಗಿ ಬೆಂಗಳೂರಿಗೆ ಬರುವ ಸಾವಿರಾರು ಜನರಿಗೆ ಈ ರೈಲು ವರದಾನವಾಗಲಿದೆ. ಸದ್ಯ ಎರಡೂ ನಗರಗಳ ನಡುವೆ ರೈಲು ಪ್ರಯಾಣಕ್ಕೆ ಬರೋಬ್ಬರಿ 15 ಗಂಟೆಗಳ ಕಾಲ ಹಿಡಿಯುತ್ತಿದೆ. ಇದನ್ನು ಕನಿಷ್ಠ 10 ಗಂಟೆಗಳಿಗೆ ಇಳಿಸಬೇಕು ಎಂಬುದು ಪ್ರಮುಖ ಬೇಡಿಕೆಯಾಗಿದೆ ಎಂದಿದ್ದಾರೆ.

ಬೈಪಾಸ್‌ ಮಾರ್ಗದಲ್ಲಿ ರೈಲು ಸಂಚರಿಸಲಿ

ಬೆಂಗಳೂರಿನಿಂದ ಹೊರಡುವ ರೈಲುಗಳಿಗೆ ಹುಬ್ಬಳ್ಳಿಯ ತನಕ ನಿಗದಿತ ನಿಲುಗಡೆ ನೀಡಿ, ನಂತರ ಹುಬ್ಬಳ್ಳಿ ಮತ್ತು ಗದಗ ನಗರಗಳ ಒಳಗೆ ಹೋಗುವ ಬದಲಿಗೆ ಬೈಪಾಸ್ ಮಾರ್ಗಗಳ ಮೂಲಕ ರೈಲು ಓಡಿಸಬೇಕು. ಬೈಪಾಸ್ ಬಳಕೆಯಿಂದ ರೈಲು ಎಂಜಿನ್ ದಿಕ್ಕು ಬದಲಿಸುವ ಪ್ರಕ್ರಿಯೆ ತಪ್ಪಲಿದ್ದು, ಗಣನೀಯವಾಗಿ ಸಮಯ ಉಳಿತಾಯವಾಗಲಿದೆ ಎಂದು ಪತ್ರದ ಮೂಲಕ ಸಲಹೆ ನೀಡಿದ್ದಾರೆ.

Read More
Next Story