New zoo for Kalyan Karnataka; Government steps to increase green belt
x

ಕಲಬುರಗಿಯ ನೂತನ ಮೃಗಾಲಯ 

ಕಲ್ಯಾಣ ಕರ್ನಾಟಕಕ್ಕೆ ಹೊಸ ಮೃಗಾಲಯ; ಹಸಿರು ವಲಯ ಹೆಚ್ಚಳಕ್ಕೆ ಸರ್ಕಾರ ಕ್ರಮ

ನೂತನ ಮೃಗಾಲಯದಲ್ಲಿ ಒಟ್ಟು 56 ವಿವಿಧ ಪ್ರಭೇದಗಳ ಪ್ರಾಣಿ-ಪಕ್ಷಿಗಳನ್ನು ತರಲು ಯೋಜಿಸಲಾಗಿದೆ. ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನದಿಂದ ಈಗಾಗಲೇ ಎರಡು ಹುಲಿಗಳನ್ನು ಇಲ್ಲಿಗೆ ತರಲಾಗಿದೆ.


Click the Play button to hear this message in audio format

ಕಲ್ಯಾಣ ಕರ್ನಾಟಕ ಭಾಗದಲ್ಲಿ ಹಸಿರು ಹೊದಿಕೆಯ ಕೊರತೆಯಿಂದಾಗಿ ಹವಾಮಾನ ವೈಪರಿತ್ಯಗಳು ಸಂಭವಿಸುತ್ತಿವೆ. ಈ ಹಿನ್ನೆಲೆಯಲ್ಲಿ ಪರಿಸರ ಸಂರಕ್ಷಣೆ ಕುರಿತು ವ್ಯಾಪಕ ಜಾಗೃತಿ ಮೂಡಿಸುವ ಅಗತ್ಯವಿದ್ದು, ಹಸಿರು ವಲಯ ವಿಸ್ತರಣೆಗೆ ಅಗತ್ಯ ಅನುದಾನ ಬಿಡುಗಡೆ ಮಾಡಲು ಕ್ರಮ ಕೈಗೊಳ್ಳಲಾಗುವುದು ಎಂದು ಅರಣ್ಯ ಸಚಿವ ಈಶ್ವರ ಖಂಡ್ರೆ ತಿಳಿಸಿದ್ದಾರೆ.

ಸೋಮವಾರ(ಮೇ 18) ಕಾಳಗಿ ತಾಲೂಕಿನ ಮಾಡಬೂಳ ಗ್ರಾಮದ ಬಳಿ ನೂತನವಾಗಿ ನಿರ್ಮಾಣವಾಗಿರುವ ಮೃಗಾಲಯವನ್ನು ಉದ್ಘಾಟಿಸಿದ ಮಾತನಾಡಿದ ಅವರು, "ಸುಮಾರು 42.33 ಎಕರೆ ವಿಸ್ತೀರ್ಣದಲ್ಲಿ, ಒಟ್ಟು 44 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗಿರುವ ಈ ನೂತನ ಮೃಗಾಲಯವು ಹಂಪಿಯ ನಂತರ ಕಲ್ಯಾಣ ಕರ್ನಾಟಕ ಭಾಗದ ಎರಡನೇ ಅತಿ ದೊಡ್ಡ ಮೃಗಾಲಯವಾಗಿದೆ. ಇದು ಎಲ್ಲಾ ವಯೋಮಾನದ ಜನರನ್ನು ಆಕರ್ಷಿಸುವ ಪ್ರಮುಖ ಪ್ರವಾಸಿ ತಾಣವಾಗಲಿದೆ" ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಮೃಗಾಲಯದ ಪ್ರಮುಖ ಆಕರ್ಷಣೆಗಳು

ನೂತನ ಮೃಗಾಲಯದಲ್ಲಿ ಒಟ್ಟು 56 ವಿವಿಧ ಪ್ರಭೇದಗಳ ಪ್ರಾಣಿ-ಪಕ್ಷಿಗಳನ್ನು ತರಲು ಯೋಜಿಸಲಾಗಿದೆ. ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನದಿಂದ ಈಗಾಗಲೇ ಎರಡು ಹುಲಿಗಳನ್ನು ಇಲ್ಲಿಗೆ ತರಲಾಗಿದ್ದು, ಸ್ಥಳೀಯ ಹವಾಮಾನಕ್ಕೆ ಹೊಂದಿಕೊಳ್ಳುವಂತೆ ಆಹಾರ ಮತ್ತು ಸೂಕ್ತ ರಕ್ಷಣೆ ನೀಡಲಾಗುತ್ತಿದೆ. ಪ್ರಸ್ತುತ ಮೊಸಳೆ, ನರಿ ಸೇರಿದಂತೆ ವಿವಿಧ ಪ್ರಾಣಿಗಳು ಸಾರ್ವಜನಿಕರ ವೀಕ್ಷಣೆಗೆ ಲಭ್ಯವಿದ್ದು, ಮೂರು ತಿಂಗಳೊಳಗೆ ಉಳಿದ ಎಲ್ಲ ಪ್ರಭೇದದ ಪ್ರಾಣಿ-ಪಕ್ಷಿಗಳನ್ನು ತರಿಸಲಾಗುವುದು.

ಹಸಿರು ಹೊದಿಕೆ ಹೆಚ್ಚಿಸಲು ಯೋಜನೆ

ಕಲ್ಯಾಣ ಕರ್ನಾಟಕ ಭಾಗದಲ್ಲಿ ಪ್ರಸ್ತುತ ಕೇವಲ ಶೇ. 1 ರಿಂದ ಶೇ. 2 ರಷ್ಟು ಮಾತ್ರ ಹಸಿರು ಹೊದಿಕೆ ಇದೆ ಎಂದು ಕಳವಳ ವ್ಯಕ್ತಪಡಿಸಿದ ಸಚಿವರು, ಮುಂಬರುವ ದಿನಗಳಲ್ಲಿ ವ್ಯಾಪಕವಾಗಿ ಸಸಿಗಳನ್ನು ನೆಡುವ ಮೂಲಕ ಹಸಿರು ವಲಯವನ್ನು ಹೆಚ್ಚಿಸಲಾಗುವುದು. ಇದಕ್ಕಾಗಿ 2026-27ರ ಸಾಲಿನ ಕೆಕೆಆರ್‌ಡಿಬಿ ಸಭೆಯಲ್ಲಿ ವಿಶೇಷ ಅನುದಾನದ ಕುರಿತು ಚರ್ಚಿಸಲಾಗುವುದು ಎಂದರು.

ಮೂರು ವರ್ಷಗಳಲ್ಲಿ 11 ಲಕ್ಷ ಸಸಿಗಳ ನಾಟಿ

"ರಾಜ್ಯದಲ್ಲಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ 11 ಲಕ್ಷ ಸಸಿಗಳನ್ನು ನೆಡಲಾಗಿದ್ದು, ಅದರಲ್ಲಿ ಶೇ. 90 ರಷ್ಟು ಸಸಿಗಳು ಬದುಕುಳಿದಿವೆ. ಈ ಸಸಿಗಳಿಗೆ ಕನಿಷ್ಠ ಐದು ವರ್ಷಗಳ ಕಾಲ ನೀರು ಒದಗಿಸಿ, ರಕ್ಷಿಸುವಂತೆ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ." ಅರಣ್ಯ ಇಲಾಖೆಯಲ್ಲಿ ಪಶುವೈದ್ಯಕೀಯ ಸಿಬ್ಬಂದಿ ಕೊರತೆ ನೀಗಿಸಲು ಮುಖ್ಯಮಂತ್ರಿಗಳು ಅನುಮತಿ ನೀಡಿದ್ದು, ಶೀಘ್ರದಲ್ಲೇ ಅಗತ್ಯ ಸಿಬ್ಬಂದಿ ನೇಮಕಕ್ಕೆ ಕ್ರಮ ವಹಿಸಲಾಗುವುದು ಎಂದು ಮಾಹಿತಿ ನೀಡಿದರು.

ಒತ್ತುವರಿ ತೆರವು

ರಾಜ್ಯಾದ್ಯಂತ ಈಗಾಗಲೇ 10,000 ಎಕರೆ ಅರಣ್ಯ ಭೂಮಿಯನ್ನು ಒತ್ತುವರಿಯಿಂದ ಮುಕ್ತಗೊಳಿಸಲಾಗಿದೆ. ಇದರಲ್ಲಿ ಬೆಂಗಳೂರು ಒಂದರಲ್ಲೇ 200 ಎಕರೆ ತೆರವುಗೊಳಿಸಲಾಗಿದೆ. ಈ ವಿಚಾರದಲ್ಲಿ ಎಸ್‌ಐಟಿ ರಚಿಸುವಂತೆ ಸುಪ್ರೀಂ ಕೋರ್ಟ್ ಸೂಚನೆ ನೀಡಿದೆ. ಅರಣ್ಯ ಪ್ರದೇಶ ಅಥವಾ ಸರ್ಕಾರಿ ಜಾಗದಲ್ಲಿ ಅಕ್ರಮವಾಗಿ ಮರ ಕಡಿಯುವವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು. ಆದರೆ, ಖಾಸಗಿ ಜಾಗದಲ್ಲಿರುವ ಮರಗಳನ್ನು ಕಡಿಯಲು ವಿನಾಯಿತಿ ನೀಡಲಾಗಿದೆ ಎಂದರು.

Read More
Next Story