
ನಾನು ಸಾಲದ ರಾಮಯ್ಯ ಅಲ್ಲ, ಅನ್ನದ ರಾಮಯ್ಯ: ಬಿಜೆಪಿಗೆ ಸಿಎಂ ಠಕ್ಕರ್
ರಾಜ್ಯಾದ್ಯಂತ ಗ್ಯಾರಂಟಿ ಯೋಜನೆಗಳಿಗಾಗಿ 1.43 ಲಕ್ಷ ಕೋಟಿ ರೂ. ಮೀಸಲಿಟ್ಟಿದ್ದೇವೆ. ಕೇವಲ ದಾವಣಗೆರೆ ಜಿಲ್ಲೆಗೇ 538 ಕೋಟಿ ರೂ. ಖರ್ಚು ಮಾಡಲಾಗಿದೆ ಎಂದು ಸಿಎಂ ತಿಳಿಸಿದ್ದಾರೆ.
ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕ್ಷೇತ್ರದ ವಿವಿಧ ಗ್ರಾಮಗಳಲ್ಲಿ ಬೃಹತ್ ರೋಡ್ ಶೋ ಮತ್ತು ಚುನಾವಣಾ ಪ್ರಚಾರ ನಡೆಸಿದರು. ನಾಗನೂರು, ಶರಮಗೊಂಡನಳ್ಳಿ, ತುರ್ಚಘಟ್ಟ ಮತ್ತು ಹದಡಿ ಸೇರಿದಂತೆ ಪ್ರಮುಖ ಗ್ರಾಮಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸಮರ್ಥ್ ಶಾಮನೂರು ಅವರ ಪರವಾಗಿ ಮತಯಾಚಿಸಿದರು.
ಪ್ರಚಾರದ ಉದ್ದಕ್ಕೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಮರ್ಥ್ ಶಾಮನೂರು ಗೆದ್ದರೆ ಅದು ಕೇವಲ ಒಬ್ಬ ಅಭ್ಯರ್ಥಿಯ ಗೆಲುವಲ್ಲ, ನನಗೆ ಸಿಗುವ ಶಕ್ತಿ. ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳು ಮತ್ತು ಜನಪರ ಕಾರ್ಯಕ್ರಮಗಳಿಗೆ ಜನ ಬೆಂಬಲ ವ್ಯಕ್ತಪಡಿಸಲು ಇದು ಒಂದು ಅವಕಾಶ ಎಂದು ಹೇಳಿದರು.
ಅನ್ನದ ರಾಮಯ್ಯ- ಸಾಲದ ರಾಮಯ್ಯ
ಬಿಜೆಪಿ ನಾಯಕರು ತನ್ನನ್ನು 'ಸಾಲದ ರಾಮಯ್ಯ' ಎಂದು ಕರೆಯುವುದಕ್ಕೆ ತಿರುಗೇಟು ನೀಡಿದ ಸಿದ್ದರಾಮಯ್ಯ, ನಾನು ಬಡವರ ಹೊಟ್ಟೆ ತುಂಬಿಸುವ ಅನ್ನದ ರಾಮಯ್ಯ. ಈ ಚುನಾವಣೆಯಲ್ಲಿ ಬಿಜೆಪಿಯನ್ನು ಸೋಲಿಸುವ ಮೂಲಕ ನಾನು 'ಅನ್ನದ ರಾಮಯ್ಯ' ಎನ್ನುವುದನ್ನು ತೋರಿಸಿಕೊಡಿ. ಸಾಲದ ವಿಚಾರಕ್ಕೆ ಬಂದರೆ, ನಾವು ಮಾಡಿರುವುದು 1.40 ಲಕ್ಷ ಕೋಟಿ ರೂ. ಸಾಲ, ಆದರೆ ಬಿಜೆಪಿ ಅಧಿಕಾರದಲ್ಲಿದ್ದಾಗ 5.30 ಲಕ್ಷ ಕೋಟಿಗೂ ಹೆಚ್ಚು ಸಾಲ ಮಾಡಿ ರಾಜ್ಯವನ್ನು ಆರ್ಥಿಕ ಸಂಕಷ್ಟಕ್ಕೆ ನೂಕಿತ್ತು ಎಂದು ಟೀಕಿಸಿದರು.
ಗ್ಯಾರಂಟಿ ಯೋಜನೆಗಳು, ಆರ್ಥಿಕ ಸುಧಾರಣೆ
ರಾಜ್ಯ ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳ ಕುರಿತು ಮಾತನಾಡಿದ ಮುಖ್ಯಮಂತ್ರಿ, ನಾವು ರಾಜ್ಯಾದ್ಯಂತ ಗ್ಯಾರಂಟಿ ಯೋಜನೆಗಳಿಗಾಗಿ 1.43 ಲಕ್ಷ ಕೋಟಿ ರೂ.ಗಳನ್ನು ಮೀಸಲಿಟ್ಟಿದ್ದೇವೆ. ಕೇವಲ ದಾವಣಗೆರೆ ಜಿಲ್ಲೆಯೊಂದಕ್ಕೇ 538 ಕೋಟಿ ರೂಪಾಯಿಗಳನ್ನು ಖರ್ಚು ಮಾಡಲಾಗಿದೆ. ಈ ಹಣ ಯಾವುದೇ ಮಧ್ಯವರ್ತಿಗಳ ಹಾವಳಿ ಇಲ್ಲದೆ ನೇರವಾಗಿ ಜನರ ಬ್ಯಾಂಕ್ ಖಾತೆಗಳಿಗೆ ತಲುಪುತ್ತಿದೆ. ಬಡವರ ಬದುಕನ್ನು ಹಸನು ಮಾಡಲು ನಾವು ಈ ಹಣವನ್ನು ನೀಡುತ್ತಿದ್ದೇವೆ. ಇದನ್ನು ಬಿಜೆಪಿಯವರು ವಿರೋಧಿಸುತ್ತಿರುವುದು ವಿಪರ್ಯಾಸ. ಜನರ ಹಣವನ್ನು ಜನರಿಗೆ ಮರಳಿ ನೀಡುವುದು ತಪ್ಪೇ? ಎಂದು ಆಕ್ರೋಶ ವ್ಯಕ್ತಪಡಿಸಿದರು.
2013ರಲ್ಲಿ ನೀಡಿದ್ದ 165 ಭರವಸೆಗಳಲ್ಲಿ 158 ಅನ್ನು ಈಡೇರಿಸಿ 'ನುಡಿದಂತೆ ನಡೆದ ಸರ್ಕಾರ' ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದೇವೆ. ಆದರೆ 2018ರಲ್ಲಿ ಬಿಜೆಪಿ 600 ಭರವಸೆಗಳನ್ನು ನೀಡಿ ಅದರಲ್ಲಿ ಕನಿಷ್ಠ ಶೇ.10 ರಷ್ಟನ್ನೂ ಈಡೇರಿಸಲಿಲ್ಲ. ಈಗಲೂ ನಾವು ಐದು ಗ್ಯಾರಂಟಿಗಳನ್ನು ಘೋಷಿಸಿ, ಐದಕ್ಕೆ ಐದನ್ನೂ ಜಾರಿ ಮಾಡಿದ್ದೇವೆ. ಬಿಜೆಪಿ ಅಧಿಕಾರದಲ್ಲಿದ್ದಾಗ ಜನರ ಸಮಸ್ಯೆಗಳಿಗೆ ಸ್ಪಂದಿಸಲಿಲ್ಲ, ಆದರೆ ಈಗ ಟೀಕೆ ಮಾಡುವುದರಲ್ಲಿ ಕಾಲ ಕಳೆಯುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ಕುಟುಂಬ ರಾಜಕಾರಣದ ಆರೋಪಕ್ಕೆ ತಿರುಗೇಟು
ಕಾಂಗ್ರೆಸ್ ಪಕ್ಷದ ಮೇಲೆ ಬಿಜೆಪಿ ನಾಯಕರು ಪದೇ ಪದೇ ಮಾಡುತ್ತಿರುವ ಕುಟುಂಬ ರಾಜಕಾರಣದ ಆರೋಪವನ್ನು ಸಿದ್ದರಾಮಯ್ಯ ಕಟುವಾಗಿ ಟೀಕಿಸಿದರು. ನಮ್ಮಲ್ಲಿ ಕುಟುಂಬ ರಾಜಕಾರಣ ಎಂದು ಟೀಕಿಸುವ ಬಿಜೆಪಿಯವರು ತಮ್ಮ ಬೆನ್ನ ಕೆಳಗೆ ಏನಿದೆ ಎಂದು ನೋಡಿಕೊಳ್ಳಲಿ. ಮಾಜಿ ಮುಖ್ಯಮಂತ್ರಿಗಳಾದ ಬಿ.ಎಸ್. ಯಡಿಯೂರಪ್ಪ, ಬಸವರಾಜ ಬೊಮ್ಮಾಯಿ, ಎಚ್.ಡಿ. ಕುಮಾರಸ್ವಾಮಿ ಮತ್ತು ಎಚ್.ಡಿ.ದೇವೇಗೌಡರ ಮಕ್ಕಳು, ಮೊಮ್ಮಕ್ಕಳು ಚುನಾವಣೆಗೆ ಸ್ಪರ್ಧಿಸುತ್ತಿಲ್ಲವೇ? ಅವರದ್ದು ಕುಟುಂಬ ರಾಜಕಾರಣವಲ್ಲವೇ? ಎಂದು ಪ್ರಶ್ನಿಸುವ ಮೂಲಕ ಬಿಜೆಪಿಯ ಇಬ್ಬಗೆಯ ನೀತಿಯನ್ನು ಖಂಡಿಸಿದರು.
ಅಭ್ಯರ್ಥಿ ಸಮರ್ಥ್ ಕೇವಲ ರಾಜಕೀಯ ಕುಟುಂಬದ ಹಿನ್ನೆಲೆಯವರಲ್ಲ, ಬದಲಾಗಿ ಅತ್ಯಂತ ವಿದ್ಯಾವಂತ ಮತ್ತು ರಾಜಕಾರಣಕ್ಕೆ ಬೇಕಾದ ಎಲ್ಲಾ ಅರ್ಹತೆಗಳನ್ನು ಹೊಂದಿರುವ ಸಮರ್ಥ ವ್ಯಕ್ತಿ. ಸಮರ್ಥ್ ಅವರಲ್ಲಿ ಜನಪರ ಗುಣಗಳಿವೆ, ಅವರು ನಿಮ್ಮ ಕಷ್ಟ ಸುಖಗಳಿಗೆ ಸ್ಪಂದಿಸುವ ಜವಾಬ್ದಾರಿಯುತ ನಾಯಕರಾಗಿ ಬೆಳೆಯುತ್ತಾರೆ. ಶಾಮನೂರು ಕುಟುಂಬವು ದಾವಣಗೆರೆಗೆ ನೀಡಿರುವ ಕೊಡುಗೆ ಅಪಾರವಾಗಿದ್ದು, ಅದರ ಮುಂದುವರಿದ ಭಾಗವಾಗಿ ಸಮರ್ಥ್ ಕೆಲಸ ಮಾಡಲಿದ್ದಾರೆ ಎಂದು ಭರವಸೆ ನೀಡಿದರು.

