
ಯುಕೆಪಿ ಸಂತ್ರಸ್ತರಿಗೆ ಒಂದೇ ಕಂತಿನಲ್ಲಿ ಪರಿಹಾರ; ಬಿಜೆಪಿ ಟೀಕೆಗೆ ಸಿಎಂ ಸಿದ್ದರಾಮಯ್ಯ ತಿರುಗೇಟು
ಗ್ಯಾರಂಟಿ ಹಾಗೂ ಅಭಿವೃದ್ಧಿ ಕಾರ್ಯಗಳಿಗೆ ಸಮಾನ ಆದ್ಯತೆ ನೀಡುತ್ತಿದ್ದೇವೆ ಎಂದು ಸ್ಪಷ್ಟಪಡಿಸಿದ ಸಿಎಂ ಸಿದ್ದರಾಮಯ್ಯ, ರಾಜ್ಯದ ನೀರಾವರಿ ಯೋಜನೆಗಳ ವಿಚಾರದಲ್ಲಿ ಕೇಂದ್ರ ಸರ್ಕಾರದ ಮಲತಾಯಿ ಧೋರಣೆ ವಿರುದ್ಧ ವಾಗ್ದಾಳಿ ನಡೆಸಿದರು.
ಉತ್ತರ ಕರ್ನಾಟಕದ ಪ್ರಾದೇಶಿಕ ಅಸಮಾನತೆ ನಿವಾರಿಸಲು ರಾಜ್ಯ ಸರ್ಕಾರ ಕಟಿಬದ್ಧವಾಗಿದ್ದು, ಕಾಂಗ್ರೆಸ್ ಸರ್ಕಾರವು ನುಡಿದಂತೆ ನಡೆಯುವ ಜನರ ಸರ್ಕಾರವಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟಪಡಿಸಿದರು.
ಬಾಗಲಕೋಟೆಯಲ್ಲಿ ವೈದ್ಯಕೀಯ ಮಹಾವಿದ್ಯಾಲಯ ಹಾಗೂ ಸಂಶೋಧನಾ ಸಂಸ್ಥೆಯ ಶಂಕುಸ್ಥಾಪನೆ, ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ ಹಾಗೂ ಕೃಷ್ಣಾ ಮೇಲ್ದಂಡೆ ಯೋಜನೆ (ಯುಕೆಪಿ) ಹಂತ-3ರ ಭೂಸ್ವಾಧೀನ ಪ್ರಕ್ರಿಯೆಗೆ ಒಳಪಡುವ ಜಮೀನುಗಳಿಗೆ ಪರಿಹಾರ ವಿತರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಈ ವೇಳೆ, ವಿರೋಧ ಪಕ್ಷಗಳ ಟೀಕೆಗಳಿಗೆ ತಿರುಗೇಟು ನೀಡಿದ ಅವರು, ತಮ್ಮ ಸರ್ಕಾರದ ಅಭಿವೃದ್ಧಿಪರ ನಿಲುವುಗಳನ್ನು ಬಿಚ್ಚಿಟ್ಟರು.
ಕಾರ್ಯಕ್ರಮದ ಆರಂಭದಲ್ಲಿ, ಈ ಭಾಗದ ಶಾಸಕರಾಗಿದ್ದ ದಿವಂಗತ ಹೆಚ್.ವೈ. ಮೇಟಿ ಅವರನ್ನು ಸ್ಮರಿಸಿದ ಮುಖ್ಯಮಂತ್ರಿಗಳು, ಅವರ ಆತ್ಮಕ್ಕೆ ಚಿರಶಾಂತಿ ಕೋರಿದರು. ಬಾಗಲಕೋಟೆಯಲ್ಲಿ ಸರ್ಕಾರಿ ಮೆಡಿಕಲ್ ಕಾಲೇಜು ತಲೆ ಎತ್ತುತ್ತಿರುವುದರ ಹಿಂದಿನ ರೂವಾರಿ ಮೇಟಿಯವರೇ ಆಗಿದ್ದಾರೆ. 2025 ರ ಬಜೆಟ್‌ನಲ್ಲಿಯೇ ಈ ಮೆಡಿಕಲ್ ಕಾಲೇಜು ಸ್ಥಾಪನೆಯ ಘೋಷಣೆ ಮಾಡಲಾಗಿತ್ತು. ಹಾಗಾಗಿ, ಇಂದು ನಡೆಯುತ್ತಿರುವ ಶಂಕುಸ್ಥಾಪನೆಯು ಮುಂಬರುವ ಉಪಚುನಾವಣೆಯ ಗಿಮಿಕ್ ಅಲ್ಲ ಎಂಬುದನ್ನು ಸಿಎಂ ಕಡ್ಡಿಮುರಿದಂತೆ ಸ್ಪಷ್ಟಪಡಿಸಿದರು.
ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗಿನಿಂದಲೂ ಅನೇಕ ಜಿಲ್ಲೆಗಳನ್ನು ಅಭಿವೃದ್ಧಿಯತ್ತ ಕೊಂಡೊಯ್ಯುವ ನಿಟ್ಟಿನಲ್ಲಿ ಹತ್ತಾರು ಯೋಜನೆಗಳಿಗೆ ಚಾಲನೆ ನೀಡಲಾಗಿದೆ. ಪ್ರತಿ ಜಿಲ್ಲೆಯಲ್ಲೂ ಮೆಡಿಕಲ್ ಕಾಲೇಜು ಹಾಗೂ ಟ್ರಾಮಾ ಸೆಂಟರ್ ಸ್ಥಾಪಿಸುವ ಗುರಿ ಹೊಂದಲಾಗಿದ್ದು, ಈಗಾಗಲೇ ಸುಮಾರು 25 ಜಿಲ್ಲೆಗಳಲ್ಲಿ ಈ ನಿಟ್ಟಿನಲ್ಲಿ ದಿಟ್ಟ ಹೆಜ್ಜೆ ಇಡಲಾಗಿದೆ. ಅಲ್ಲದೆ, ಮುಂದಿನ ವರ್ಷ ಬಾಗಲಕೋಟೆಯಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಸ್ಥಾಪಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂಬ ಭರವಸೆ ನೀಡಿದರು.
ಇದೇ ವೇಳೆ, ಗ್ಯಾರಂಟಿ ಯೋಜನೆಗಳಿಂದಾಗಿ ರಾಜ್ಯದ ಬೊಕ್ಕಸ ಬರಿದಾಗಿದ್ದು, ಅಭಿವೃದ್ಧಿ ಕಾರ್ಯಗಳಿಗೆ ಹಣವಿಲ್ಲ ಎಂಬ ಬಿಜೆಪಿಯ ಆರೋಪಗಳನ್ನು ಸಿದ್ದರಾಮಯ್ಯ ಅವರು ಸಾರಾಸಗಟಾಗಿ ತಳ್ಳಿಹಾಕಿದರು. ತಮ್ಮ ಸರ್ಕಾರವು ಜನಕಲ್ಯಾಣದ ಗ್ಯಾರಂಟಿ ಯೋಜನೆಗಳು ಹಾಗೂ ನಾಡಿನ ಅಭಿವೃದ್ಧಿ ಕಾರ್ಯಗಳಿಗೆ ಸಮಾನ ಆದ್ಯತೆ ನೀಡುತ್ತಿದೆ. ಪ್ರತಿ ವರ್ಷ ಗ್ಯಾರಂಟಿ ಯೋಜನೆಗಳಿಗಾಗಿಯೇ ಸುಮಾರು 50 ಸಾವಿರ ಕೋಟಿ ರೂ.ಗಳನ್ನು ಮೀಸಲಿಡಲಾಗುತ್ತಿದ್ದು, ಈ ವರೆಗೆ ಒಟ್ಟು 1 .22 ಲಕ್ಷ ಕೋಟಿ ರೂ.ಗಳನ್ನು ಜನಸಾಮಾನ್ಯರಿಗಾಗಿ ವೆಚ್ಚ ಮಾಡಲಾಗಿದೆ. ಸತತ ನಾಲ್ಕು ವರ್ಷಗಳ ಕಾಲ ಅಧಿಕಾರದಲ್ಲಿದ್ದರೂ ಬಾಗಲಕೋಟೆಗೆ ಒಂದು ಮೆಡಿಕಲ್ ಕಾಲೇಜನ್ನು ಮಂಜೂರು ಮಾಡದ ಬಿಜೆಪಿಯವರು, ಕೇವಲ ಜಾತಿ-ಧರ್ಮಗಳ ನಡುವೆ ವೈಮನಸ್ಯ ಬಿತ್ತುವ ದುರಾಲೋಚನೆ ಹೊಂದಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ಕೃಷ್ಣಾ ಮೇಲ್ದಂಡೆ ಯೋಜನೆ (ಯುಕೆಪಿ) ಸಂತ್ರಸ್ತರ ಬಹುಕಾಲದ ಬೇಡಿಕೆಗೂ ಮುಖ್ಯಮಂತ್ರಿಗಳು ಇದೇ ವೇದಿಕೆಯಲ್ಲಿ ಸ್ಪಂದಿಸಿದರು. ಹಿಂದಿನ ಬಿಜೆಪಿ ಸರ್ಕಾರವು ಯುಕೆಪಿ ಯೋಜನೆಗೆ ಪರಿಹಾರ ನೀಡುವಲ್ಲಿ ಸಂಪೂರ್ಣ ನಿರ್ಲಕ್ಷ್ಯ ವಹಿಸಿತ್ತು. ಇದರಿಂದಾಗಿ ಬೇಸತ್ತಿದ್ದ ರೈತರು ಯೋಜನೆಗೆ ಭೂಮಿ ನೀಡಲು ಹಿಂದೇಟು ಹಾಕುತ್ತಿದ್ದರು. ಆದರೆ, ರೈತರ ಹಿತದೃಷ್ಟಿಯಿಂದ ಈಗಿನ ಸರ್ಕಾರವು ಭೂ ಪರಿಹಾರವನ್ನು ಒಂದೇ ಕಂತಿನಲ್ಲಿ ಪಾವತಿಸಲು ಐತಿಹಾಸಿಕ ನಿರ್ಣಯ ಕೈಗೊಂಡಿದೆ. ಸ್ವಯಂಪ್ರೇರಣೆಯಿಂದ ಭೂಮಿ ಬಿಟ್ಟುಕೊಡುವ ರೈತರಿಗೆ ನೀರಾವರಿ ಜಮೀನಿಗೆ 40 ಲಕ್ಷ ರೂ. ಹಾಗೂ ಖುಷ್ಕಿ ಜಮೀನಿಗೆ 30 ಲಕ್ಷ ರೂ.ಗಳ ಪರಿಹಾರ ನೀಡಲು ಸರ್ಕಾರ ಮುಂದಾಗಿದೆ. ಇದರ ಮೊದಲ ಹಂತವಾಗಿ, ಯುಕೆಪಿ ಯೋಜನಾ ವ್ಯಾಪ್ತಿಯ 8 ಗ್ರಾಮಗಳ 99 ಎಕರೆ ಜಮೀನಿಗೆ ಬರೋಬ್ಬರಿ ೪೪೬ ಕೋಟಿ ರೂ.ಗಳ ಪರಿಹಾರವನ್ನು ವಿತರಿಸಲಾಗುತ್ತಿದೆ. ಈ ಬಾರಿಯ ಬಜೆಟ್‌ನಲ್ಲೂ ಈ ಯೋಜನೆಗೆ ಅನುದಾನ ಮೀಸಲಿಡಲಾಗಿದ್ದು, ಮುಂದಿನ ದಿನಗಳಲ್ಲೂ ಹೆಚ್ಚಿನ ಅನುದಾನ ಒದಗಿಸಲಾಗುವುದು ಎಂದು ಭರವಸೆ ನೀಡಿದರು.
ಇದೇ ವೇಳೆ ಕೇಂದ್ರ ಸರ್ಕಾರದ ಮಲತಾಯಿ ಧೋರಣೆಯ ವಿರುದ್ಧವೂ ಅಸಮಾಧಾನ ಹೊರಹಾಕಿದ ಮುಖ್ಯಮಂತ್ರಿಗಳು, ರಾಜ್ಯದ ನೀರಾವರಿ ಯೋಜನೆಗಳಿಗೆ ಕೇಂದ್ರದಿಂದ ನಿರೀಕ್ಷಿತ ಸ್ಪಂದನೆ ಸಿಗುತ್ತಿಲ್ಲ ಎಂದು ದೂರಿದರು. ಯುಕೆಪಿ, ಮಹಾದಾಯಿ ಸೇರಿದಂತೆ ನಾಡಿನ ಜೀವನಾಡಿಯಾಗಿರುವ ಹಲವು ನೀರಾವರಿ ಯೋಜನೆಗಳ ಅನುಷ್ಠಾನಕ್ಕೆ ಅಗತ್ಯವಿರುವ ಅನುಮತಿಗಳನ್ನು ನೀಡುವಂತೆ ಕೇಂದ್ರ ಸರ್ಕಾರಕ್ಕೆ ಹಲವು ಬಾರಿ ಮನವಿ ಸಲ್ಲಿಸಿದರೂ, ಈವರೆಗೆ ಯಾವುದೇ ಪ್ರಯೋಜನವಾಗಿಲ್ಲ. ಆದರೂ, ಉತ್ತರ ಕರ್ನಾಟಕದ ಜನತೆಗೆ ನ್ಯಾಯ ಒದಗಿಸುವ ನಿಟ್ಟಿನಲ್ಲಿ ತಮ್ಮ ಸರ್ಕಾರ ಸತತ ಪ್ರಯತ್ನ ಮುಂದುವರಿಸಲಿದೆ ಎಂದು ಸಿಎಂ ಸಿದ್ದರಾಮಯ್ಯ ಭರವಸೆ ನೀಡಿದರು.

