ಬಳ್ಳಾರಿಯ ತೆಕ್ಕಲಕೋಟೆಯಲ್ಲಿ ಉತ್ಖನನ;  5ಸಾವಿರ ವರ್ಷಗಳ ಹಳೆಯ ಎರಡು ಅಸ್ಥಿಪಂಜರ ಪತ್ತೆ
x
ಬಳ್ಳಾರಿಯ ತೆಕ್ಕಲಕೋಟೆಯಲ್ಲಿ ಪತ್ತೆಯಾಗಿರುಗ ಅಸ್ಥಿಪಂಜರದ ಅವಶೇಷ

ಬಳ್ಳಾರಿಯ ತೆಕ್ಕಲಕೋಟೆಯಲ್ಲಿ ಉತ್ಖನನ; 5ಸಾವಿರ ವರ್ಷಗಳ ಹಳೆಯ ಎರಡು ಅಸ್ಥಿಪಂಜರ ಪತ್ತೆ

ಅಸ್ಥಿಪಂಜರಗಳು ಸುಮಾರು 3,000 ರಿಂದ 5,000 ವರ್ಷಗಳ ಹಳೆಯವು ಎಂದು ಹೇಳಲಾಗಿದ್ದು, ನಿಖರ ಕಾಲಮಾನ ನಿರ್ಧರಿಸಲು ಕಾರ್ಬನ್ ಡೇಟಿಂಗ್ ಪರೀಕ್ಷೆಗೆ ಒಳಪಡಿಸಲು ಅಧಿಕಾರಿಗಳು ನಿರ್ಧರಿಸಿದ್ದಾರೆ.


ಬಳ್ಳಾರಿ ಜಿಲ್ಲೆ ಸಿರಗುಪ್ಪ ತಾಲ್ಲೂಕಿನ ತೆಕ್ಕಲಕೋಟೆಯ ಗೌಡ್ರ ಮೂಲೆ ಬೆಟ್ಟದಲ್ಲಿ ನಡೆಯುತ್ತಿರುವ ಉತ್ಖನನದಲ್ಲಿ 5000 ವರ್ಷಗಳ ಹಿಂದಿನ ಪ್ರಾಗೈತಿಹಾಸಿಕ ಕಾಲಕ್ಕೆ ಸೇರಿದೆ ಎನ್ನಲಾದ ಎರಡು ಮಾನವನ ಅಸ್ಥಿಪಂಜರಗಳು, ಮಡಿಕೆ‌ ಚೂರುಗಳು ಪತ್ತೆಯಾಗಿವೆ.

ಅಮೆರಿಕಾದ ಹಾರ್ಟ್‌ವಿಕ್ ವಿಶ್ವವಿದ್ಯಾಲಯದ ಪ್ರಾಧ್ಯಾಪಕಿ ನಮಿತಾ ಎಸ್.ಸುಗಂಧಿ ನೇತೃತ್ವದ ತಂಡ ನಡೆಸುತ್ತಿರುವ ಉತ್ಖನನ ಕಾರ್ಯದಲ್ಲಿ ಈ ಮಹತ್ಬದ ಅವಶೇಷಗಳು ದೊರೆತಿದ್ದು, ಕೂತೂಹಲ ಮೂಡಿಸಿದೆ.

ಕಳೆದೊಂದು ವಾರದಿಂದ ಉತ್ಖನನ ಕಾರ್ಯ ನಡೆಯುತ್ತಿದ್ದು, ‌ಮೊದಲಿಗೆ ಮಣ್ಣು ಅಗೆದಾಗ ಮಾನವನ ಮೂಳೆಗಳು ಪತ್ತೆಯಾದವು. ಮತ್ತಷ್ಟು ಆಳವಾಗಿ ಭೂಮಿ ಅಗೆದಾಗ ಸುಮಾರು 5.5 ಅಡಿ ಉದ್ದದ ಎರಡು ಮಾನವನ ಅಸ್ಥಿಪಂಜರಗಳು ಒಂದರ ಪಕ್ಕದಲ್ಲಿ ಒಂದರಂತೆ ಪತ್ತೆಯಾಗಿವೆ.

ಅಸ್ಥಿಪಂಜರದ ಸುತ್ತಮುತ್ತ ಮಡಿಕೆ ಚೂರುಗಳು ಸಹ ಪತ್ತೆಯಾಗಿದ್ದು, ಪಳಿಯುಳಿಕೆಗಳು ಯಾವುದೇ ರೀತಿಯಲ್ಲಿ ಹಾಳಾಗದೇ ಉತ್ತಮ ಸ್ಥಿತಿಯಲ್ಲಿವೆ. ಮೃತದೇಹಗಳ ಮೇಲೆ ಕಲ್ಲು ಇಟ್ಟು ಶವಸಂಸ್ಕಾರ ಮಾಡಿರುವ ಪದ್ಧತಿಯ ಕುರುಹುಗಳು ಕಂಡುಬಂದಿವೆ.

ಪಳೆಯುಳಿಕೆಗಳ ಸುತ್ತ ಮಡಿಕೆ ಚೂರುಗಳು, ಸೂಕ್ಷ್ಮ ಶಿಲಾಯುಗದ ಅವಶೇಷಗಳು ಹಾಗೂ ಮಾನವ ಆಯುಧ ಬಳಕೆಗೆ ಸಂಬಂಧಿಸಿದ ಸಾಕ್ಷ್ಯಗಳು ಪತ್ತೆಯಾಗಿವೆ. ಇದು ನವಶಿಲಾಯುಗ ಅಥವಾ ಪ್ರಾಗೈತಿಹಾಸಿಕ ಕಾಲದ ಪ್ರಮುಖ ಮಾನವ ನೆಲೆ ಆಗಿರಬಹುದೆಂದು ತಜ್ಞರು ವಿಶ್ಲೇಷಿಸಿದ್ದಾರೆ.

ಕಾರ್ಬನ್ ಡೇಟಿಂಗ್‌ಗೆ ನಿರ್ಧಾರ

ಅಸ್ಥಿಪಂಜರಗಳು ಸುಮಾರು 3,000 ರಿಂದ 5,000 ವರ್ಷಗಳ ಹಳೆಯವು ಎಂದು ಹೇಳಲಾಗಿದ್ದು, ನಿಖರ ಕಾಲಮಾನ ನಿರ್ಧರಿಸಲು ಕಾರ್ಬನ್ ಡೇಟಿಂಗ್ ಪರೀಕ್ಷೆಗೆ ಒಳಪಡಿಸಲು ಅಧಿಕಾರಿಗಳು ನಿರ್ಧರಿಸಿದ್ದಾರೆ. ಉತ್ಖನನ ಕಾರ್ಯದ ನಿರ್ದೇಶಕರಾದ ಪರಂಪರೆ ಇಲಾಖೆ ಉಪ ನಿರ್ದೇಶಕ ಆರ್. ಶೇಜೇಶ್ವರ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ತೆಕ್ಕಲಕೋಟೆ ಪ್ರದೇಶವನ್ನು ಸಂರಕ್ಷಿಸುವ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ಪ್ರೊ. ನಮಿತಾ ಎಸ್ ಸುಗಂಧಿ ಯಾರು?

ಅಮೆರಿಕದ ಹಾಟ್೯ ವಿಕ್ ವಿಶ್ವವಿದ್ಯಾಲಯ ಪ್ರೊ. ನಮಿತಾ ಎಸ್ ಸುಗಂಧಿ, 2019ರಲ್ಲಿ ಮೊದಲ ಬಾರಿಗೆ ತೆಕ್ಕಲಕೋಟೆಗೆ ಉತ್ಖನನಕ್ಕೆ ಬಂದಿದ್ದರು. ನಂತರ 2025 ರಲ್ಲಿ ಸಂಶೋಧನಾ ಪ್ರಬಂಧ ಸಿದ್ದಪಡಿಸಲು ಎರಡನೇ ಸಲ ಭೇಟಿ ನೀಡಿದ್ದರು. ಜೊತೆಗೆ "Man and Environment –Tekkalakote" ಪ್ರಬಂಧ ಮಂಡನೆ ಸಹ ಮಾಡಿದ್ದರು. ಪ್ರಸ್ತುತವಾಗಿ ಮೂರನೇ ಬಾರಿ ಭೇಟಿ ನೀಡಿರುವ ನಮಿತಾ, ಉತ್ಖನನ ಕಾರ್ಯದಲ್ಲಿ ನಿರತರಾಗಿದ್ದಾರೆ.

ತೆಕ್ಕಲಕೋಟೆ ಆಯ್ಕೆ ಮಾಡಿಕೊಂಡಿದ್ದು ಏಕೆ?

ಮೈಸೂರು ಪ್ರಾಶ್ಚವಸ್ತು ಇಲಾಖೆಯ ನಿರ್ದೇಶಕರಾಗಿ ಕಾರ್ಯ ನಿರ್ವಹಿಸಿದ್ದ ಎಂ.ಎಸ್. ನಾಗರಾಜ ರಾವ್, 1964 ರಲ್ಲಿ ಉತ್ಖನನ ಮಾಡಿ ತೆಕ್ಕಲಕೋಟೆ ಇತಿಹಾಸವನ್ನು ಮೊದಲ ಬಾರಿಗೆ ಜಗತ್ತಿಗೆ ಪರಿಚಯಿಸಿದ್ದರು. ಈ ಬಗ್ಗೆ "The stone age hill dwellers of ತೆಕ್ಕಲಕೋಟೆ" ಪುಸ್ತಕದಲ್ಲಿ ವಿವರಣೆ ಇತಿಹಾಸವನ್ನು ವಿವರಿಸಿದ್ದರು. ಈ ಪುಸ್ತಕ ಓದಿದ ನಮಿತಾ ಎಸ್ ಸುಗಂಧಿ ಅವರು ಕುತೂಹಲದಿಂದ ಸಂಶೋಧನೆಗೆ ತೆಕ್ಕಲಕೋಟೆಯನ್ನು ಆಯ್ಕೆ ಮಾಡಿಕೊಂಡಿದ್ದಾರೆ.

Read More
Next Story