
ಬಾಗಲಕೋಟೆ ಉಪಚುನಾವಣೆ: ಹೊನ್ನಾಕಟ್ಟಿ ಚೆಕ್ ಪೋಸ್ಟ್‌ನಲ್ಲಿ 32.50 ಲಕ್ಷ ನಗದು ಜಪ್ತಿ
ಚುನಾವಣಾ ಸಂದರ್ಭದಲ್ಲಿ ಇಷ್ಟು ದೊಡ್ಡ ಮೊತ್ತದ ಹಣ ರಾಯಚೂರಿನಿಂದ ಬೆಳಗಾವಿ ಮಾರ್ಗವಾಗಿ ಸಾಗುತ್ತಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.
ರಾಜ್ಯ ರಾಜಕಾರಣದಲ್ಲಿ ತೀವ್ರ ಕುತೂಹಲ ಮೂಡಿಸಿರುವ ಬಾಗಲಕೋಟೆ ಉಪಚುನಾವಣೆಗೆ ಬಿಜೆಪಿ ಹಾಗೂ ಕಾಂಗ್ರೆಸ್ ತನ್ನ ಅಭ್ಯರ್ಥಿಗಳನ್ನು ಘೋಷಿಸಿ ಪ್ರಚಾರ ಆರಂಭಿಸಿರುವ ಬೆನ್ನಲ್ಲೇ ಹಣದ ಸದ್ದು ಜೋರಾಗಿದೆ. ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿದ್ದರೂ ಅಕ್ರಮ ಹಣ ಸಾಗಣೆ ನಿರಾತಂಕವಾಗಿದೆ.
ಚುನಾವಣೆ ಹಿನ್ನೆಲೆ ಹೊನ್ನಾಕಟ್ಟಿ ಚೆಕ್ ಪೋಸ್ಟ್‌ನಲ್ಲಿ ಭಾನುವಾರ ಪೊಲೀಸರು ನಡೆಸಿದ ಕಾರ್ಯಾಚರಣೆಯಲ್ಲಿ ಬರೋಬ್ಬರಿ 32.50 ಲಕ್ಷ ರೂಪಾಯಿ ನಗದು ವಶಪಡಿಸಿಕೊಂಡಿದ್ದಾರೆ.
ಘಟನೆಯ ಹಿನ್ನೆಲೆ
ರಾಯಚೂರಿನಿಂದ ಬೆಳಗಾವಿ ಕಡೆಗೆ ಸಂಚರಿಸುತ್ತಿದ್ದ ಮಾರುತಿ ಎರ್ಟಿಗಾ ಕಾರು ತಡೆದು ತಪಾಸಣೆ ನಡೆಸಿದ ಚುನಾವಣಾ ಸ್ಥಿರ ಕಣ್ಗಾವಲು ತಂಡವು ಯಾವುದೇ ದಾಖಲೆ ಇಲ್ಲದೇ ಸಾಗಣೆ ಮಾಡುತ್ತಿದ್ದ ಹಣವನ್ನು ಜಪ್ತಿ ಮಾಡದೆ. ಈ ಹಣವು ರಾಯಚೂರಿನ ಬಿ. ವೀರೇಶ್ ಬಾಬು ಎಂಬುವವರಿಗೆ ಸೇರಿದ್ದಾಗಿದೆ ಎಂಬುದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ.
ಚುನಾವಣಾ ಆಯೋಗದ ಹದ್ದಿನ ಕಣ್ಣು
ಬಾಗಲಕೋಟೆ ಮತ್ತು ದಾವಣಗೆರೆ ದಕ್ಷಿಣ ಕ್ಷೇತ್ರಗಳಿಗೆ ಉಪಚುನಾವಣೆ ಘೋಷಣೆಯಾಗಿರುವ ಹಿನ್ನೆಲೆಯಲ್ಲಿ ಚುನಾವಣಾ ಅಯೋಗವು ಕಟ್ಟುನಿಟ್ಟಿನ ಮಾದರಿ ನೀತಿ ಸಂಹಿತೆ ಜಾರಿಗೊಳಿಸಿದೆ.
ಜಿಲ್ಲೆಯ ಗಡಿಭಾಗಗಳಲ್ಲಿ ಮತ್ತು ಆಯಕಟ್ಟಿನ ಸ್ಥಳಗಳಲ್ಲಿ ಅಂತರ ಜಿಲ್ಲಾ ಚೆಕ್ ಪೋಸ್ಟ್‌ಗಳನ್ನು ಸ್ಥಾಪಿಸಿದೆ.
ಸಂಶಯಾಸ್ಪದ ವಾಹನಗಳ ಮೇಲೆ ಹದ್ದಿನ ಕಣ್ಣಿಡಲು ಹಗಲು ರಾತ್ರಿ ಫ್ಲೈಯಿಂಗ್ ಸ್ಕ್ವಾಡ್‌ಗಳು ಕಾರ್ಯನಿರ್ವಹಿಸುತ್ತಿವೆ. ಚುನಾವಣಾ ಪಾರದರ್ಶಕತೆಗೆ ಧಕ್ಕೆ ತರುವ ಯಾವುದೇ ಪ್ರಯತ್ನವನ್ನು ಸಹಿಸುವುದಿಲ್ಲ. ದಾಖಲೆ ರಹಿತ ಹಣದ ಮೂಲ ಮತ್ತು ಅದರ ಉದ್ದೇಶದ ಬಗ್ಗೆ ಸಮಗ್ರ ತನಿಖೆ ನಡೆಸಲಾಗುತ್ತಿದೆ ಎಂದು ಜಿಲ್ಲಾಡಳಿತ ಹೇಳಿದೆ.
ರಾಜಕೀಯ ವಲಯದಲ್ಲಿ ಚರ್ಚೆ
ಚುನಾವಣಾ ಸಂದರ್ಭದಲ್ಲಿ ಇಷ್ಟು ದೊಡ್ಡ ಮೊತ್ತದ ಹಣ ರಾಯಚೂರಿನಿಂದ ಬೆಳಗಾವಿ ಮಾರ್ಗವಾಗಿ ಸಾಗುತ್ತಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಈ ಹಣವು ಮತದಾರರಿಗೆ ಹಂಚಲು ಸಾಗಿಸಲಾಗುತ್ತಿತ್ತೇ ಅಥವಾ ವ್ಯಾಪಾರ ಉದ್ದೇಶದ್ದೇ ಎಂಬುದರ ಬಗ್ಗೆ ತನಿಖೆ ನಡೆಸಲಾಗುತ್ತಿದೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ಹಣವನ್ನು ಚುನಾವಣಾ ಆಯೋಗಕ್ಕೆ ಒಪ್ಪಿಸಿದ್ದಾರೆ.
ಮಾ.19 ರಂದು ನಯನೇಗಲಿ ಚೆಕ್‌ಪೋಸ್ಟ್‌ನಲ್ಲಿ ಯಾವುದೇ ದಾಖಲೆ ಇಲ್ಲದೇ ಸಾಗಿಸುತ್ತಿದ್ದ 15.50 ಲಕ್ಷ ರೂ.ನಗದನ್ನು ಅಧಿಕಾರಿಗಳು ವಶಪಡಿಸಿಕೊಂಡಿದ್ದರು.

