
By-Election|ಚರಂತಿಮಠ ಮನೆಗೆ ʼಕೈʼನಾಯಕರ ಲಗ್ಗೆ; ಬಾಗಲಕೋಟೆಯಲ್ಲಿ ಗರಿಗೆದರಿದ ರಾಜಕೀಯ ಲೆಕ್ಕಾಚಾರ
ಬಾಗಲಕೋಟೆ ಪ್ರವಾಸ ಕೈಗೊಂಡಿದ್ದ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಬಾಗಲಕೋಟೆಯಲ್ಲಿ ಮಲ್ಲಿಕಾರ್ಜುನ ಚರಂತಿಮಠ ಅವರ ಮನೆಗೆ ಭೇಟಿ ನೀಡಿದ್ದು ರಾಜಕೀಯ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.
ದಿವಂಗತ ಶಾಸಕ ಎಚ್.ವೈ. ಮೇಟಿ ನಿಧನದಿಂದ ತೆರವಾಗಿರುವ ಬಾಗಲಕೋಟೆ ವಿಧಾನಸಭಾ ಕ್ಷೇತ್ರದ ಉಪಚುನಾವಣೆಗೆ ದಿನಾಂಕ ಘೋಷಣೆಯಾಗಿದೆ. ಆದರೆ, ಘೋಷಣೆಗೂ ಮುನ್ನ ದಿನವಾದ ಶನಿವಾರ (ಮಾ.14) ಕಾಂಗ್ರೆಸ್ ನಾಯಕರು ಬಿಜೆಪಿ ಸಂಭಾವ್ಯ ಅಭ್ಯರ್ಥಿ ವೀರಣ್ಣ ಚರಂತಿಮಠ ಅವರ ಸೋದರನ ಮನೆಯಲ್ಲಿ ಚಹಾಕೂಟ ನಡೆಸಿರುವುದು ರಾಜಕೀಯ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.
ದಿವಂಗತ ಶಾಸಕ ಎಚ್.ವೈ. ಮೇಟಿ ಅವರ ಸ್ಥಾನ ಉಳಿಸಿಕೊಳ್ಳಲು ಕಾರ್ಯತಂತ್ರ ಹೆಣೆದಿರುವ ಕಾಂಗ್ರೆಸ್ ನಾಯಕರು, ಮೇಟಿ ಅವರ ಕನಸಿನ ಯೋಜನೆಯಾದ ಸರ್ಕಾರಿ ಮೆಡಿಕಲ್ ಕಾಲೇಜು ಕಟ್ಟಡಕ್ಕೆ ಶಂಕುಸ್ಥಾಪನೆ ನೆರವೇರಿಸುವ ಮೂಲಕ ಮೊದಲ ದಾಳ ಉರುಳಿಸಿದ್ದಾರೆ. ಜತೆಗೆ ಚುನಾವಣಾ ನೀತಿ ಸಂಹಿತೆ ಜಾರಿಗೂ ಮುನ್ನವೇ ನಡೆದ ಈ ಕಾರ್ಯಕ್ರಮವು ಮತದಾರರ ಮನಸೆಳೆಯುವ ತಂತ್ರಗಾರಿಕೆಯಾಗಿದೆ ಎಂದು ವಿಶ್ಲೇಷಿಸಲಾಗುತ್ತಿದೆ.
ಎಚ್.ವೈ.ಮೇಟಿಯವರ ಉತ್ತರಾಧಿಕಾರಿಯಾಗಿ ಅವರ ಕುಟುಂಬದವರೇ ಆದ ಮಲ್ಲಿಕಾರ್ಜುನ, ಉಮೇಶ್ ಅಥವಾ ಮಾದೇವಿ ಮೇಟಿ ಅವರನ್ನು ಕಣಕ್ಕಿಳಿಯುವ ಸಾಧ್ಯತೆ ದಟ್ಟವಾಗಿದ್ದು, ಸರ್ಕಾರಿ ಮೆಡಿಕಲ್ ಕಾಲೇಜಿಗೆ ಶಂಕುಸ್ಥಾಪನೆ ನೆರವೇರಿಸಿರುವುದು ಚುನಾವಣಾ ಪ್ರಚಾರಕ್ಕೆ ದೊಡ್ಡ ಶಕ್ತಿ ನೀಡಿದಂತಾಗಿದೆ.
ಚರಂತಿಮಠ ನಿವಾಸದಲ್ಲಿ ಟೀ ಪಾರ್ಟಿ ಚರ್ಚೆ
ಬಿಜೆಪಿ ಸಂಭಾವ್ಯ ಅಭ್ಯರ್ಥಿ ವೀರಣ್ಣ ಚರಂತಿಮಠ ಅವರ ಸಹೋದರ ಮಲ್ಲಿಕಾರ್ಜುನ ಚರಂತಿಮಠ ಅವರು 2023ರ ಚುನಾವಣೆಯಲ್ಲಿ ಪಕ್ಷೇತರವಾಗಿ ಸ್ಪರ್ಧಿಸಿ 10 ಸಾವಿರಕ್ಕೂ ಹೆಚ್ಚು ಮತಗಳನ್ನು ಪಡೆದಿದ್ದರು. ಆ ಮೂಲಕ ಬಿಜೆಪಿಯ ಗೆಲುವಿನ ಹಾದಿಗೆ ಮುಳ್ಳಾಗಿದ್ದರು. ಇತ್ತೀಚೆಗೆ ಅವರು ಮತ್ತೆ ಬಿಜೆಪಿ ಸೇರಲಿದ್ದಾರೆ ಎಂಬ ವದಂತಿಗಳ ನಡುವೆಯೇ ಕಾಂಗ್ರೆಸ್ ನಾಯಕರು ಅವರ ಮನೆಗೆ ಭೇಟಿ ನೀಡಿರುವುದು ಕೇಸರಿ ಪಾಳಯದಲ್ಲಿ ನಡುಕ ಹುಟ್ಟಿಸಿದೆ.
ಮಲ್ಲಿಕಾರ್ಜುನ ಚರಂತಿಮಠ ಅವರನ್ನು ಬಿಜೆಪಿಗೆ ಸೇರದಂತೆ ತಡೆದರೆ, ಬಿಜೆಪಿ ಅಭ್ಯರ್ಥಿ ವೀರಣ್ಣ ಚರಂತಿ ಮಠ ಅವರನ್ನು ಸುಲಭವಾಗಿ ಹಣಿಯಬಹುದು. ಜತೆಗೆ ಬಿಜೆಪಿ ಮತಗಳನ್ನು ಸೆಳೆಯಬಹುದು ಎಂಬುದು ಕಾಂಗ್ರೆಸ್ ನಾಯಕರ ಲೆಕ್ಕಾಚಾರವಾಗಿದೆ.
ಆಕಾಂಕ್ಷಿಗಳ ದಂಡು: ಬಂಡಾಯದ ಭೀತಿ?
ಮೇಟಿ ಕುಟುಂಬದವರಷ್ಟೇ ಅಲ್ಲದೆ ಮಾಜಿ ಸಚಿವ ಅಜಯ್ ಕುಮಾರ್ ಸರನಾಯಕ್, ಗೋವಿಂದ ಬಳ್ಳಾರಿ, ರಕ್ಷಿತಾ ಈಟಿ ಅವರಂತಹ ಪ್ರಬಲ ನಾಯಕರು ಕಾಂಗ್ರೆಸ್ ಟಿಕೆಟ್ ಮೇಲೆ ಕಣ್ಣಿಟ್ಟಿದ್ದು, ಬಂಡಾಯದ ಮುನ್ಸೂಚನೆ ಗೋಚರಿಸಿದೆ. ಬಂಡಾಯ ಶಮನಗೊಳಿಸಿ, ಬಿಜೆಪಿಯ ತಂತ್ರಗಳನ್ನು ಮೆಟ್ಟಿ ನಿಲ್ಲುವುದು ಸಿಎಂ ಸಿದ್ದರಾಮಯ್ಯ ಅವರಿಗೆ ಪ್ರತಿಷ್ಠೆಯ ವಿಷಯವಾಗಿದೆ.
ಬಿಜೆಪಿಯ ಮುಂದಿನ ನಡೆ ಏನು?
ಕಾಂಗ್ರೆಸ್ ನಾಯಕರ ಈ ದಿಢೀರ್ ಭೇಟಿಯಿಂದ ಬಿಜೆಪಿ ಪಾಳಯದಲ್ಲಿ ತಲ್ಲಣ ಶುರುವಾಗಿದೆ. ತನ್ನ ಸಂಭಾವ್ಯ ಅಭ್ಯರ್ಥಿಯ ಸೋದರನ ಮನೆಯಲ್ಲೇ ಕಾಂಗ್ರೆಸ್ ನಾಯಕರು ಚಹಾ ಸೇವಿಸಿರುವುದು ಬಿಜೆಪಿ ಸಂಘಟನೆಗೆ ಹಿನ್ನಡೆಯಾಗುವ ಸಾಧ್ಯತೆ ಇದೆ. ಏ.9ರಂದು ನಡೆಯಲಿರುವ ಈ ಉಪ ಚುನಾವಣೆ ಸಮರದಲ್ಲಿ ಯಾರ ತಂತ್ರ ಮೇಲುಗೈ ಸಾಧಿಸಲಿದೆ ಎಂಬುದು ಕುತೂಹಲ ಕೆರಳಿಸಿದೆ.

