Iran War: ಕರ್ನಾಟಕದಲ್ಲಿ ಪೆಟ್ರೋಲ್ ಕೊರತೆ ಆತಂಕ;  ಡೀಲರ್ಸ್​​ ಅಸೋಸಿಯೇಷನ್ ಅಧ್ಯಕ್ಷ ಬಾಲಾಜಿ ರಾವ್ ಹೇಳುವುದೇನು?
x

ಸಾರ್ವಜನಿಕರು ಯಾವುದೇ ರೀತಿಯಲ್ಲೂ ಆತಂಕಪಡುವ ಅಗತ್ಯವಿಲ್ಲ ಹಾಗೂ ಸಾಕಷ್ಟು ಪ್ರಮಾಣದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ದಾಸ್ತಾನು ಲಭ್ಯವಿದೆ ಎಂದು ಬೆಂಗಳೂರು ಪೆಟ್ರೋಲ್ ಮತ್ತು ಡೀಸೆಲ್ ಡೀಲರ್ಸ್ ಅಸೋಸಿಯೇಷನ್ ಅಧ್ಯಕ್ಷ ಬಾಲಾಜಿರಾವ್ ಸ್ಪಷ್ಟಪಡಿಸಿದ್ದಾರೆ.

Iran War: ಕರ್ನಾಟಕದಲ್ಲಿ ಪೆಟ್ರೋಲ್ ಕೊರತೆ ಆತಂಕ; ಡೀಲರ್ಸ್​​ ಅಸೋಸಿಯೇಷನ್ ಅಧ್ಯಕ್ಷ ಬಾಲಾಜಿ ರಾವ್ ಹೇಳುವುದೇನು?

ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಹೆಚ್ಚಾಗಿರುವ ಪರಿಣಾಮವಾಗಿ, ದೇಶದಲ್ಲಿಯೂ ಪೆಟ್ರೋಲ್ ಮತ್ತು ಡೀಸೆಲ್ ದರ ಶೀಘ್ರದಲ್ಲೇ ಏರಿಕೆಯಾಗಬಹುದು ಎಂಬ ಮಾತುಗಳು ಕೇಳಿಬರುತ್ತಿವೆ.


Click the Play button to hear this message in audio format

ಇರಾನ್ ಮತ್ತು ಇಸ್ರೇಲ್ ನಡುವಿನ ಯುದ್ಧದ ಹಿನ್ನೆಲೆಯಲ್ಲಿ ಭವಿಷ್ಯದಲ್ಲಿ ತೈಲ ಕೊರತೆಯಾಗಬಹುದು ಎಂಬ ಆತಂಕದಿಂದ ಜನರು ಪೆಟ್ರೋಲ್ ಬಂಕ್‌ಗಳ ಮುಂದೆ ಸರದಿಯಲ್ಲಿ ನಿಲ್ಲುತ್ತಿರುವುದು ನಗರದಲ್ಲಿ ಕಂಡುಬಂದಿದೆ. ಆದರೆ, ಸಾರ್ವಜನಿಕರು ಯಾವುದೇ ರೀತಿಯಲ್ಲೂ ಆತಂಕಪಡುವ ಅಗತ್ಯವಿಲ್ಲ ಹಾಗೂ ಸಾಕಷ್ಟು ಪ್ರಮಾಣದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ದಾಸ್ತಾನು ಲಭ್ಯವಿದೆ ಎಂದು ಬೆಂಗಳೂರು ಪೆಟ್ರೋಲ್ ಮತ್ತು ಡೀಸೆಲ್ ಡೀಲರ್ಸ್ ಅಸೋಸಿಯೇಷನ್ ಅಧ್ಯಕ್ಷ ಬಾಲಾಜಿರಾವ್ ಸ್ಪಷ್ಟಪಡಿಸಿದ್ದಾರೆ. ಈ ಕುರಿತು 'ದ ಫೆಡರಲ್ ಕರ್ನಾಟಕ'ದೊಂದಿಗೆ ಮಾತನಾಡಿರುವ ಅವರು, ವಾಹನ ಸವಾರರಿಗೆ ಹಾಗೂ ಸಾರ್ವಜನಿಕರಿಗೆ ಅಭಯ ನೀಡಿದ್ದಾರೆ.

ಕೇಂದ್ರ ಸರ್ಕಾರವು ಈಗಾಗಲೇ ಸ್ಪಷ್ಟಪಡಿಸಿರುವಂತೆ ದೇಶದಲ್ಲಿ ಮುಂದಿನ 74 ದಿನಗಳಿಗೆ ಆಗುವಷ್ಟು ತೈಲ ದಾಸ್ತಾನು ಭದ್ರವಾಗಿದೆ. ಬಂಕ್ ಮಾಲೀಕರು ತೈಲ ಪೂರೈಕೆಗಾಗಿ ಇಂಡೆಂಟ್ (ಬೇಡಿಕೆ) ನೀಡಿದ ತಕ್ಷಣವೇ ಯಾವುದೇ ವಿಳಂಬವಿಲ್ಲದೆ ತೈಲ ಕಂಪನಿಗಳು ಪೆಟ್ರೋಲ್ ಮತ್ತು ಡೀಸೆಲ್ ಅನ್ನು ಪೂರೈಸುತ್ತಿವೆ. ಹೀಗಾಗಿ ನಗರದ ಯಾವುದೇ ಬಂಕ್‌ಗಳಿಗೆ ತೈಲ ಪೂರೈಕೆಯಲ್ಲಿ ಸಣ್ಣಮಟ್ಟದ ಸಮಸ್ಯೆಯೂ ಎದುರಾಗಿಲ್ಲ ಎಂದು ಬಾಲಾಜಿರಾವ್ ಅವರು ಮಾಹಿತಿ ನೀಡಿದ್ದಾರೆ. ಸಾರ್ವಜನಿಕರು ಯಾವುದೇ ಆಧಾರರಹಿತ ವದಂತಿಗಳಿಗೆ ಕಿವಿಗೊಡಬಾರದು ಎಂದು ಅವರು ಇದೇ ವೇಳೆ ಮನವಿ ಮಾಡಿದ್ದಾರೆ.

ಗೊಂದಲದಿಂದ ಹೆಚ್ಚಾದ ಪೆಟ್ರೋಲ್ ಮಾರಾಟ

ಯುದ್ಧದ ಕಾರ್ಮೋಡದಿಂದಾಗಿ ಮುಂದಿನ ದಿನಗಳಲ್ಲಿ ತೈಲ ಸಿಗುವುದಿಲ್ಲ ಎಂಬ ಆತಂಕದಲ್ಲಿ ಜನರು ಕಳೆದ ಎರಡು ದಿನಗಳಿಂದ ಅನಗತ್ಯವಾಗಿ ಗೊಂದಲಕ್ಕೊಳಗಾಗಿದ್ದಾರೆ. ಇದರ ಪರಿಣಾಮವಾಗಿ ಮುನ್ನೆಚ್ಚರಿಕಾ ಕ್ರಮವಾಗಿ ತಮ್ಮ ವಾಹನಗಳ ಟ್ಯಾಂಕ್‌ಗಳನ್ನು ಪೂರ್ಣಗೊಳಿಸಿಕೊಳ್ಳುತ್ತಿರುವ ದೃಶ್ಯಗಳು ಬಂಕ್‌ಗಳಲ್ಲಿ ಸಾಮಾನ್ಯವಾಗಿವೆ. ಇದರಿಂದಾಗಿ ನಗರದ ಪ್ರತಿ ಬಂಕ್‌ಗಳಲ್ಲಿ ದೈನಂದಿನ ಸರಾಸರಿ ಮಾರಾಟಕ್ಕಿಂತ 500 ರಿಂದ 1,000 ಲೀಟರ್‌ಗಳಷ್ಟು ಹೆಚ್ಚಿನ ಪ್ರಮಾಣದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಮಾರಾಟವಾಗುತ್ತಿದೆ. ಇಷ್ಟಾದರೂ ನಗರದ ಯಾವುದೇ ಬಂಕ್‌ನಲ್ಲಿ ತೈಲ ಖಾಲಿಯಾಗಿರುವ ಘಟನೆಗಳು ಎಲ್ಲಿಯೂ ವರದಿಯಾಗಿಲ್ಲ..

ದರ ಏರಿಕೆಯ ಕುರಿತು ಯಾವುದೇ ಸುಳಿವಿಲ್ಲ

ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ (ಕ್ರೂಡ್ ಆಯಿಲ್) ಬೆಲೆ ಹೆಚ್ಚಾಗಿರುವ ಪರಿಣಾಮವಾಗಿ, ದೇಶದಲ್ಲಿಯೂ ಪೆಟ್ರೋಲ್ ಮತ್ತು ಡೀಸೆಲ್ ದರ ಶೀಘ್ರದಲ್ಲೇ ಏರಿಕೆಯಾಗಬಹುದು ಎಂಬ ಮಾತುಗಳು ಕೇಳಿಬರುತ್ತಿವೆ. ಆದರೆ, ಬೆಲೆ ಏರಿಕೆಗೆ ಸಂಬಂಧಿಸಿದಂತೆ ತೈಲ ಸರಬರಾಜು ಕಂಪನಿಗಳಿಂದ ಈವರೆಗೂ ಯಾವುದೇ ಅಧಿಕೃತ ಸಂದೇಶ ಅಥವಾ ಸೂಚನೆಗಳು ತಮಗೆ ಬಂದಿಲ್ಲ ಎಂದು ಅಸೋಸಿಯೇಷನ್ ಅಧ್ಯಕ್ಷರು ಸ್ಪಷ್ಟಪಡಿಸಿದ್ದಾರೆ.

Read More
Next Story