Iran-Israel War|ಇರಾನ್‌ನಲ್ಲಿ ಸಿಲುಕಿದ್ದ ಚಿಕ್ಕಮಗಳೂರು ಯುವಕ ಸುರಕ್ಷಿತ
x

ಮರ್ಚೆಂಟ್ ನೇವಿ ಉದ್ಯೋಗಿ ನಿಶ್ಚಿತ್ ಕ್ಷೇಮ

Iran-Israel War|ಇರಾನ್‌ನಲ್ಲಿ ಸಿಲುಕಿದ್ದ ಚಿಕ್ಕಮಗಳೂರು ಯುವಕ ಸುರಕ್ಷಿತ

ಕಳೆದ ಆರು ತಿಂಗಳಿನಿಂದ ಇರಾನ್‌ನಲ್ಲಿ ಕೆಲಸ ಮಾಡುತ್ತಿದ್ದ ನಿಶ್ಚಿತ್, ಯುದ್ಧ ಆರಂಭವಾದ ನಂತರ ಸಂಪರ್ಕಕ್ಕೆ ಸಿಗದೆ ಇದ್ದದ್ದು ಕುಟುಂಬದವರ ನಿದ್ದೆ ಗೆಡಿಸಿತ್ತು.


Click the Play button to hear this message in audio format

ಪಶ್ಚಿಮ ಏಷ್ಯಾದಲ್ಲಿ ಇರಾನ್ ಮತ್ತು ಇಸ್ರೇಲ್-ಅಮೆರಿಕ ನಡುವೆ ಭೀಕರ ಸಂಘರ್ಷ ಏರ್ಪಟ್ಟಿರುವ ಬೆನ್ನಲ್ಲೇ, ಇರಾನ್‌ನಲ್ಲಿ ಕೆಲಸ ಮಾಡುತ್ತಿದ್ದ ಕರ್ನಾಟಕದ ಚಿಕ್ಕಮಗಳೂರು ಜಿಲ್ಲೆಯ ಯುವಕನೊಬ್ಬ ನಾಪತ್ತೆಯಾಗಿದ್ದು, ಇದೀಗ ಅವರು ಸುರಕ್ಷಿತರಾಗಿದ್ದಾರೆ ಎಂದು ತಿಳಿದುಬಂದಿದೆ.

ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲ್ಲೂಕಿನ ಹಿರೇಕೊಡಿಗೆ ನಿವಾಸಿಯಾದ ನಿಶ್ಚಿತ್ ಎಂಬ ಯುವಕ ಕಳೆದ ಆರು ತಿಂಗಳಿನಿಂದ ಇರಾನ್‌ನಲ್ಲಿ ಮರ್ಚೆಂಟ್ ನೇವಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದರು. ಯುದ್ಧ ಆರಂಭವಾದ ನಂತರ ಯಾವುದೇ ಫೋನ್ ಕರೆ ಬಾರದ ಹಿನ್ನೆಲೆಯಲ್ಲಿ ಪೋಷಕರು ತೀವ್ರ ಆತಂಕಕ್ಕೊಳಗಾಗಿದ್ದರು. ಈ ವಿಷಯ ಮಾಧ್ಯಮಗಳಲ್ಲಿ ವರದಿಯಾದ ಕೂಡಲೇ ಕಾರ್ಯಪ್ರವೃತ್ತರಾದ ಅನಿವಾಸಿ ಭಾರತೀಯ ಸಮಿತಿಯ ಮಾಜಿ ಉಪಾಧ್ಯಕ್ಷೆ ಡಾ. ಆರತಿ ಕೃಷ್ಣ ಅವರು ಇರಾನ್ ರಾಯಭಾರ ಕಚೇರಿಯನ್ನು ಸಂಪರ್ಕಿಸಿ ಮಾಹಿತಿ ಪಡೆದಿದ್ದಾರೆ.

ಪ್ರಸ್ತುತ ನಿಶ್ಚಿತ್ ಸುರಕ್ಷಿತವಾಗಿದ್ದಾರೆ ಎಂಬ ಅಧಿಕೃತ ಮಾಹಿತಿ ಲಭ್ಯವಾಗಿದ್ದು, ಮಗನ ಕ್ಷೇಮ ಸಮಾಚಾರ ತಿಳಿದು ಪೋಷಕರು ನಿಟ್ಟುಸಿರು ಬಿಟ್ಟಿದ್ದಾರೆ.

ಸರ್ಕಾರದಿಂದ ರಕ್ಷಣಾ ಕಾರ್ಯಾಚರಣೆಯ ಸಿದ್ಧತೆ

ಗಲ್ಫ್ ರಾಷ್ಟ್ರಗಳಲ್ಲಿ ಸಂಕಷ್ಟಕ್ಕೆ ಸಿಲುಕಿರುವ ಕನ್ನಡಿಗರನ್ನು ತಾಯ್ನಾಡಿಗೆ ಮರಳಿ ಕರೆತರಲು ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಜಂಟಿ ಕಾರ್ಯಾಚರಣೆಗೆ ಮುಂದಾಗಿವೆ. ರಾಜ್ಯ ವಿಪತ್ತು ನಿರ್ವಹಣಾ ಮುಖ್ಯಸ್ಥ ಮನೀಷ್ ಮೌದ್ಗಿಲ್ ಅವರು ಈಗಾಗಲೇ ಸುಮಾರು 200 ಕನ್ನಡಿಗರ ಪಟ್ಟಿಯನ್ನು ಸಿದ್ಧಪಡಿಸಿ ಕೇಂದ್ರ ಸರ್ಕಾರಕ್ಕೆ ರವಾನಿಸಿದ್ದಾರೆ. ಮೊದಲ ಹಂತದಲ್ಲಿ ಇವರನ್ನು ವಾಣಿಜ್ಯ ವಿಮಾನಗಳ ಮೂಲಕ ಕರೆತರಲು ಯೋಜಿಸಲಾಗಿದ್ದು, ಅಗತ್ಯ ಬಿದ್ದರೆ ವಿಶೇಷ ವಿಮಾನಗಳ ವ್ಯವಸ್ಥೆ ಮಾಡುವಂತೆಯೂ ಕೇಂದ್ರಕ್ಕೆ ಮನವಿ ಮಾಡಲಾಗಿದೆ.

ದುಬೈನಲ್ಲಿ ಬೀದರ್ ಮೂಲದವರ ಪರದಾಟ

ಇನ್ನೊಂದೆಡೆ, ಬೀದರ್ ಮೂಲದ ನಾಗನಾಥ್ ಬಸನಾಳೆ ಸೇರಿದಂತೆ ಒಟ್ಟು ಏಳು ಮಂದಿ ಕನ್ನಡಿಗರು ದುಬೈನಲ್ಲಿ ಸಿಲುಕಿ ತಾಯ್ನಾಡಿಗೆ ಬರಲಾಗದೆ ಸಂಕಷ್ಟ ಅನುಭವಿಸುತ್ತಿದ್ದಾರೆ. ಈ ವಿಷಯ ತಿಳಿದ ಸಂಸದ ಸಾಗರ್ ಖಂಡ್ರೆ ಅವರು ಸಂತ್ರಸ್ತರೊಂದಿಗೆ ದೂರವಾಣಿ ಮೂಲಕ ಮಾತನಾಡಿ ಧೈರ್ಯ ತುಂಬಿದ್ದಾರೆ. ಭಾರತೀಯ ರಾಯಭಾರ ಕಚೇರಿಯೊಂದಿಗೆ ನಿರಂತರ ಸಂಪರ್ಕದಲ್ಲಿರುವುದಾಗಿ ತಿಳಿಸಿರುವ ಅವರು, ಶೀಘ್ರದಲ್ಲೇ ಸುರಕ್ಷಿತವಾಗಿ ಕರೆತರುವ ಭರವಸೆ ನೀಡಿದ್ದಾರೆ.

ಸಂಘರ್ಷದ ಹಿನ್ನೆಲೆ

ದೀರ್ಘಕಾಲದ ಸಂಘರ್ಷದ ಬಳಿಕ ಫೆಬ್ರವರಿ 28 ರಿಂದ ಪಶ್ಚಿಮ ಏಷ್ಯಾದಲ್ಲಿ ಯುದ್ಧದ ಭೀತಿ ಹೆಚ್ಚಾಗಿದೆ. ಇರಾನ್ ಮೇಲೆ ನಡೆದ ದಾಳಿಗೆ ಪ್ರತಿಯಾಗಿ ತಹ್ರಾನ್ ಕೂಡ ಗಲ್ಫ್ ರಾಷ್ಟ್ರಗಳನ್ನು ಗುರಿಯಾಗಿ ದಾಳಿ ನಡೆಸುತ್ತಿದೆ. ಈ ವಿಕೋಪದ ನಡುವೆ ಸಾವಿರಾರು ಭಾರತೀಯರು ಆ ಪ್ರದೇಶದಲ್ಲಿ ಸಿಲುಕಿಕೊಂಡಿದ್ದಾರೆ.

Read More
Next Story